ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು ? ಸರ್ವಮಂತ್ರತಂತ್ರಸಿದ್ಭಿ ಮರ್ಮವರಿತಡೇನು ? ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ; ನಿತ್ಯಪಾದೋದಕ ಪ್ರಸಾದ ಸೇವನೆಯಿಲ್ಲ. ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
ಸಾಧನೆಯ ಬಲ್ಲೆನೆಂದು ಹಾದಿಹೋಕರಕೂಡೆ ಹೋರದಿರಬೇಕು. ಬೀದಿಯಲ್ಲಿ ನಿಂದು ಬೀರದಿರಬೇಕು. ಬಲ್ಲೆಯಾ ಎಂದಡೆ ಬಲುಗೈಯನರಿಯೆನೆನಬೇಕು. ನೆಟ್ಟನೆ ನಿಂದು ಪಟ್ಟಕ್ಕೊಡೆಯರಾದವರೆಂಬೆ ಅಮುಗೇಶ್ವರಲಿಂಗಕ್ಕೆ ಅಧಿಕರೆಂಬೆ.
--------------
ಅಮುಗೆ ರಾಯಮ್ಮ
ಸಮಯದೊಡನೆ ಸುಳಿದಾಡುವೆನೆಂಬ ಭಾವದ ಭ್ರಮೆಯವನಲ್ಲ. ಆತ್ಮತೇಜಕ್ಕೆ ಹರಿದಾಡುವೆನೆಂಬ ಭ್ರಾಂತಿನ ಭ್ರಮೆಯವನಲ್ಲ. ಅಮುಗೇಶ್ವರನೆಂಬ ಲಿಂಗವನರಿದ ಬಳಿಕ ನನ್ನವರು ತನ್ನವರು ಎಂಬ ಭ್ರಾಂತಿನವನಲ್ಲ.
--------------
ಅಮುಗೆ ರಾಯಮ್ಮ
ಸುಳಿವ ಸುಳುಹು ಅಡಗಿತ್ತೆನಗೆ. ಎನ್ನ ಕಂಗಳ ಕಾಮ ಕಳೆಯಿತ್ತು. ಅರಿದೆನೆಂಬ ಮನ ಅಡಗಿದುದ ಕಂಡು ನನ್ನ ನಾನೆ ತಿಳಿದು ನೋಡಿ, ಕಟ್ಟಿದೆನು ಕಾಮನ ಮೇಲೆ ಬಿರಿದ. ಮಾಯಾಯೋನಿಗಳಲ್ಲಿ ಹುಟ್ಟಿದರೆಲ್ಲ, ನಿರ್ಮಾಯನೆಂಬ ಗಣೇಶ್ವರಗೆ ಸರಿಯಪ್ಪರೆ ? ಬ್ರಹ್ಮ ವಿಷ್ಣು ರುದ್ರರೆಲ್ಲರು ಮಾಯಾಕೋಳಾಹಳನೆಂಬ ಪ್ರಭುವಿಂಗೆ ಸರಿಯಲ್ಲವೆಂದು ಕಟ್ಟಿದೆ ಕೈದುವ. ಸರಿಯೆಂದು ನುಡಿವವರ ಪರಿಪರಿಯಲಿ ಮೆಟ್ಟಿ ಸೀಳುವೆನು ಕಾಣಾ. ಅಮುಗೇಶ್ವರಲಿಂಗಕ್ಕೆ ಅಧಿಕನಾದನಯ್ಯಾ ಪ್ರಭುದೇವರು.
--------------
ಅಮುಗೆ ರಾಯಮ್ಮ
ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ ? ಎಲ್ಲೆಲ್ಲಿಯೂ ತನ್ನ ಪ್ರಭೆಯ ಬೀರುತಿಪ್ಪುದು. ಬಲ್ಲ ಘನಮಹಿಮನ ಎಲ್ಲರು ಜರಿದಡೇನು ಕಿಂಕಿಲನೆ ? ಸರ್ವಾಂಗವು ಲಿಂಗವಾದ ನಿರಾಲಂಬಿ ಕಾಬರ ಕಂಡು ತಾ ಕಾಬವನಲ್ಲ; ಅರಿವವರ ಕಂಡು ತಾನರಿವವನಲ್ಲ; ಬಿಡುವವರ ಕಂಡು ತಾ ಬಿಡುವವನಲ್ಲ; ಹಿಡಿದ ಛಲವ ತಾ ಬಿಡುವವನಲ್ಲ, ಅಮುಗೇಶ್ವರಲಿಂಗವನರಿದವನು.
--------------
ಅಮುಗೆ ರಾಯಮ್ಮ
ಸಪ್ತಸಮುದ್ರಂಗಳೆಲ್ಲ ಬತ್ತಿಹೋದವಯ್ಯಾ. ಸಪ್ತವ್ಯಸನಂಗಳೆಲ್ಲ ಅರತುಹೋದವಯ್ಯಾ. ನಿತ್ಯರಾದೆವೆಂಬವರೆಲ್ಲ ಅನಿತ್ಯರಾದರಯ್ಯಾ ಮುಕ್ತಿಯೆಂಬುದು ಇನ್ನೆತ್ತಣದಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
ಸಂತೆಗೆ ಬಂದವರೆಲ್ಲ ಸಾವಧಾನಿಯಾಗಬಲ್ಲರೆ ? ಪಸರವ ಹರಡುವರೆಲ್ಲ ರತ್ನದ ಬೆಲೆಯ ಬಲ್ಲರೆ ? ಕುದುರೆಯ ಹಿಡಿದವರೆಲ್ಲ ರಾವುತಿಕೆಯ ಮಾಡಬಲ್ಲರೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಸರ್ವಸಂಬಂಧಿಯಾಗಿ ಸಮ್ಯಕ್‍ಜ್ಞಾನಿಯಾಗಿ ಅರಿವೆನು ಶಿವನ ಆದಿಯ, ಅಷ್ಟಮದಂಗಳ ಒತ್ತಿದೆನಾಗಿ ನೆಟ್ಟನೆ ನಿಲ್ಲುವೆನು. ಎನ್ನ ಅಂತರಂಗ ಬಹಿರಂಗ ಸರ್ವಾಂಗದಲ್ಲಿ ಕಳಂಕ ಇಲ್ಲವಾಗಿ, ಮುಟ್ಟುವೆನು ಅಮುಗೇಶ್ವರಲಿಂಗವ.
--------------
ಅಮುಗೆ ರಾಯಮ್ಮ
ಸಿಂಹದಮರಿಯ ಸೀಳ್ನಾಯ ಸರಿ ಎನ್ನಬಹುದೆ ? ವರಹ ಕುಕ್ಕುಟನ ಸರಿ ಎನ್ನಬಹುದೆ ? ಹೊನ್ನು ಹೆಣ್ಣು ಮಣ್ಣ ಹಿಡಿದು ಲಿಂಗೈಕ್ಯರೆನಿಸಿಕೊಂಬ ಅಜ್ಞಾನಿಗಳೆಲ್ಲರು ಸೀಳ್ನಾಯಿಗಳೆಂಬೆನಯ್ಯಾ. ಸಮ್ಯಕ್‍ಜ್ಞಾನವ ಮುಂದುಗೊಂಡು ಸದಾಚಾರಿಯಾಗಿ ಭಕ್ತಿ ಭಿಕ್ಷವ ಬೇಡಬಲ್ಲಡೆ, ನಿತ್ಯಲಿಂಗೈಕ್ಯರೆಂಬೆ. ಅಮುಗೇಶ್ವರನೆಂಬ ಲಿಂಗಕ್ಕೆ ಅತ್ತತ್ತಲಾದ ಘನಮಹಿಮನೆಂಬೆನಯ್ಯಾ
--------------
ಅಮುಗೆ ರಾಯಮ್ಮ