ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮರನನೇರಿ ಹಣ್ಣನರಸಹೋದಡೆ ಮರ ಮುರಿದುಬಿದ್ದ ಮರುಳುಮಾನವನಂತೆ, ಕೆಸರಿನೊಳಗಣ ಹುಲ್ಲ ಮೇಯಹೋದ ಪಶುವಿನಂತೆ, ಕೊಂಬೆ ಕೊಂಬೆಗೆ ಹಾರುವ ಕೋಡಗನಂತೆ, ಉಂಡ ಮನೆಯ ದೂರುವ ಒಡೆಕಾರನಂತೆ, ಹಳ್ಳ ಹಳ್ಳ ತಿಬ್ಬಳಿ ತಿರುಗುವ ಬಳ್ಳುವಿನಂತೆ, ಮಾತಿನಲ್ಲಿ ಬ್ರಹ್ಮವ ನುಡಿವ ವೇಷಧಾರಿಗಳ ಲಿಂಗಾಂಗಿಗಳೆಂದಡೆ ಮಾರಿಗೆತಂದ ಹಂದಿಯ ನಾಯಿ ನರಿ ತಿಂಬಂತೆ ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮೂಗಿಲ್ಲದವಂಗೆ ಕನ್ನಡಿಯ ತೋರಲೇಕೆ ? ಕೈಯಿಲ್ಲದವಂಗೆ ಕುದುರೆಯನೇರಲೇಕೆ ? ಕಾಲಿಲ್ಲದವಂಗೆ ನಿಚ್ಚಣಿಗೆಯನೇರಲೇಕೆ ? ಭಕ್ತಿ ಜ್ಞಾನ ವೈರಾಗ್ಯವಿಲ್ಲದವಂಗೆ ಇಷ್ಟಲಿಂಗವೇಕೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಮನಕ್ಕೆ ಬಂದಂತೆ ಹಲವುಪರಿಯ ವೇಷವ ತೊಟ್ಟು ಹರಿದಾಡುವ ಜಾತಿಕಾರರ ಈಶ್ವರನು ಮೆಚ್ಚನು; ಸದಾಶಿವನು ಸೈರಣೆಯ ಮಾಡನು. ಬಸವಾದಿ ಪ್ರಮಥರು ಬನ್ನಿ ಕುಳ್ಳಿರಿ ಎನ್ನರು. ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ಕಂಡಡೆ ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು.
--------------
ಅಮುಗೆ ರಾಯಮ್ಮ
ಮತ್ಯದಲ್ಲಿ ಹುಟ್ಟಿದವರೆಲ್ಲರೂ ಇಷ್ಟಲಿಂಗಸಂಬಂಧಿಗಳೆ ? ಗುರುವಿನಲ್ಲಿ ಉಪದೇಶವ ಪಡೆದವರೆಲ್ಲರೂ ವಿರಕ್ತರಾಗಬಲ್ಲರೆ ? ಭೂಮಿಯ ಮೇಲಣ ಕಾವಿಯ ಹೊದ್ದು ಕಾಯವಿಕಾರಕ್ಕೆ ತಿರುಗುವ ಗಾವಿಲರ ಲಾಂಛನಿಗಳೆಂದಡೆ ಅಮುಗೇಶ್ವರಲಿಂಗವು ನೋಡಿ ನೋಡಿ ನಗುತಿಪ್ಪುದು.
--------------
ಅಮುಗೆ ರಾಯಮ್ಮ
ಮಾಯಾಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು ಮಹಾಜ್ಞಾನಿಗಳಪ್ಪರೆ ? ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು ಅನಾದಿವಸ್ತುವನರಿವರೆ ? ಮಾತಿನಲ್ಲಿ ಮಹಾಜ್ಞಾನಿಗಳೆಂಬ ವೇಷಧಾರಿಗಳ ಕಂಡು ನಾಚುವೆ ಕಾಣಾ ಅಮುಗೇಶ್ವರಾ
--------------
ಅಮುಗೆ ರಾಯಮ್ಮ
ಮರುಜವಣಿಯ ಕಂಡವಂಗೆ ಮರಣದ ಹಂಗುಂಟೆ ? ಪರುಷವುಳ್ಳವಂಗೆ ಪಾಷಾಣದ ಹಂಗುಂಟೆ ? ಸರ್ವಾಂಗಲಿಂಗವಾದವಂಗೆ ಅನರ್ಪಿತವುಂಟೆ ? ಜ್ಯೋತಿಯ ಬೆಳಗಿನಲ್ಲಿದ್ದವಂಗೆ ಕತ್ತಲೆಯ ಹಂಗುಂಟೆ ? ಅಮುಗೇಶ್ವರಲಿಂಗವಾದವಂಗೆ ಲಿಂಗದ ಹಂಗುಂಟೆ ?
--------------
ಅಮುಗೆ ರಾಯಮ್ಮ
ಮುಂಡವ ಹೊತ್ತುಕೊಂಡು ತಿರುಗುವ ಮೂಕೊರೆಯರ ಮುಖವ ನೋಡೆ. ಸತ್ತಕರುವ ಹೊತ್ತುಕೊಂಡು ತಿರುಗುವ ಭವವಿಕಾರಿಗಳ ಮುಖವ ನೋಡೆ. ನಿತ್ಯನಾದ ಬಳಿಕ, ಅನಿತ್ಯರ ಕೂಡೆ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮುಂಡದಲ್ಲಿ ತಿರುಗುವವರು ಕೋಟ್ಯಾನುಕೋಟಿ; ತಲೆಯಲ್ಲಿ ತಿರುಗುವವರನಾರನೂ ಕಾಣೆ. ಅಂಗದಲ್ಲಿಪ್ಪ ಮಲಿನವ ಕಳೆವರು ಕೋಟ್ಯಾನುಕೋಟಿ; ಮನದಲ್ಲಿಪ್ಪ ಮಲಿನವ ಕಳೆವವರನಾರನೂ ಕಾಣೆ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮೊತ್ತದ ಮಾಮರ ಉರಿಯಿತ್ತ ಕಂಡೆ. ಉಪ್ಪರಿಗೆ ಬೆಂದು ಕರ್ಪೂರವಾದುದ ಕಂಡೆ. ಬೆಟ್ಟಸುಟ್ಟು ಸರ್ಪನ ಶಿರ ಹರಿದುದ ಕಂಡೆ. ನೋಡಿ ನೋಡಿ ನಿಮ್ಮ ಕೂಡಿಕೊಂಡೆನಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮಂಡೆಯ ಬೋಳಿಸಿಕೊಂಡು ತುಂಡುಗಂಬಳಿಯ ಹೊದ್ದವರ ಕಂಡಡೆ ನಂಬಲಾರೆ ನಚ್ಚಲಾರೆ. ಈ ವೇಷವ ನಾಚಿದೆ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಮುಂಡವ ಬಿಟ್ಟು ತಲೆಯಲ್ಲಿ ನಡೆವ ತತ್ವಜ್ಞಾನಿಗಳ ತೋರಿಸಯ್ಯಾ. ಬೀದಿಯಲ್ಲಿ ಸುಳಿಯುವ ಬಿಸಿಲಕುದುರೆಯ ಏರಬಲ್ಲಡೆ, ಕಡುಗಲಿ ಎಂಬೆನು. ಮೃಡನ ಅರಿಯಬಲ್ಲಡೆ, ಪೊಡವಿಗೆ ಒಡೆಯರೆಂಬೆನು; ಅಮುಗೇಶ್ವರಲಿಂಗಕ್ಕೆ ಅತ್ತಲಾದವರೆಂಬೆನು.
--------------
ಅಮುಗೆ ರಾಯಮ್ಮ
ಮಂಡೆಬೋಳಾಗಿ ತುಂಡುಗಂಬಳಿಹೊದ್ದಬಳಿಕ ಅಂದಚಂದಗಳೇಕೆ ? ಖಂಡಿತನೆ, ಕಂಡಕಂಡವರ ಮನಮೆಚ್ಚುವಂತೆ ಅಂದಚಂದಗಳೇಕೆ ? ಮಂಡೆಬೋಳಾದಡೆ ಮಹಾನುಭಾವಿಗಳು ಮೆಚ್ಚುವಂತೆ ಇರಬೇಕು ಕಾಣಾ, ಅಮುಗೇಶ್ವರಾ
--------------
ಅಮುಗೆ ರಾಯಮ್ಮ