ಅಥವಾ
(13) (3) (3) (0) (5) (0) (0) (0) (4) (0) (0) (2) (0) (0) ಅಂ (4) ಅಃ (4) (20) (0) (5) (0) (0) (2) (0) (1) (0) (0) (0) (0) (0) (0) (0) (3) (0) (2) (1) (12) (2) (0) (4) (2) (12) (0) (0) (0) (0) (6) (2) (0) (9) (4) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದ್ವೈತವಾದ ಮತ್ತೆ ಪುನರಪಿ ಪುನರ್ದೀಕ್ಷೆಯುಂಟೆ ? ಗರುಡಿಯಲ್ಲಿ ಕೋಲಲ್ಲದೆ, ಕಾಳಗದಲ್ಲಿ ಉಂಟೆ ಕೋಲು ? ಭವಿಗೆ ಮೇಲುವ್ರತ ಪುನರ್ದೀಕ್ಷೆಯಲ್ಲದೆ, ಭಕ್ತರಿಗುಂಟೆ ? ವ್ರತತಪ್ಪಿ ಅನುಗ್ರಹವಿಡಿದ ನರಕಿಗಳಿಗೆ ಮುಕ್ತಿ ಇಲ್ಲ ಎಂದೆ ಅಮುಗೇಶ್ವರಲಿಂಗದಲ್ಲಿ.
--------------
ಅಮುಗೆ ರಾಯಮ್ಮ
ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು ! ಕಂಡ ಕನಸರಿಯರು ಅ ಮುಂದಣ ಸುದ್ದಿಯ ನುಡಿವರು. ನಿಜವನರಿಯದೆ ಲಿಂಗಸಂಗಿಗಳೆಂದಡೆ ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು.
--------------
ಅಮುಗೆ ರಾಯಮ್ಮ
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ ಭಂಡಭವಿಗಳನೇನೆಂಬೆನಯ್ಯಾ ? ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ ; ಹಿಡಿದ ಛಲದಲ್ಲಿ ಕಡುಗಲಿಗಳಲ್ಲ. ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ; ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಅಂಗದ ಮೇಲೆ ಲಿಂಗವಿಲ್ಲದವರಲ್ಲಿ ಲಿಂಗಾರ್ಪಿತವ ಬೇಡಲೇಕೆ ? ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ ಲಿಂಗಾರ್ಪಿತವ ಬಿಡಲೇತಕ್ಕೆ ? ಜಾತಿಗೋತ್ರವನೆತ್ತಿ ನುಡಿಯಲೇಕೆ ? ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು, ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು ಆಚಾರವುಳ್ಳವರು ಅನಾಚಾರಿಗಳು ಎಂದು ಬೇಡುವ ಭಿಕ್ಷವ ಬಿಡಲೇತಕ್ಕೆ ? ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು. ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು ಆಚಾರವುಳ್ಳವರೆಂಬೆನಯ್ಯಾ ; ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ.
--------------
ಅಮುಗೆ ರಾಯಮ್ಮ