ಅಥವಾ
(5) (4) (1) (0) (1) (3) (0) (0) (2) (0) (0) (1) (1) (0) ಅಂ (1) ಅಃ (1) (7) (0) (0) (0) (0) (1) (0) (0) (0) (0) (1) (0) (0) (0) (0) (2) (0) (0) (1) (6) (6) (0) (5) (1) (5) (0) (0) (0) (0) (4) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾಸಿವೆಯ ಹಾಲು ಸಾಧಕಾಂಗರ ನಾಸಿಕದ ನೀರ ಬರಿಸಿತ್ತು. ಮೂಷಕನ ಮೀಸೆಯ ಬಿಂದು ಮೂರುಲೋಕವ ಮುಣುಗಿಸಿತ್ತು. ಕಾಸದ ನೀರು ಬಿಸಿಯಾಗಿ ಕುಡಿವರ ಮೀಸೆ ಸುಟ್ಟಿತ್ತು. ಸಾಸಿವೆಯ ಮೂಷಕನ ಮೀಸೆಯ ಬಿಸಿನೀರ ಕುಡಿವಾತನ, ಬಾಯೊತ್ತಿನ ಮೀಸೆಯಲ್ಲಿ ಹುಟ್ಟಿತ್ತು ಒಂದು ಹಾಸರೆಗಲ್ಲು. ಹಾಸರೆಗಲ್ಲಿನ ಮೇಲೆ ಕುಳಿತಿದಾತನ ಕೇಳಿಹರೆಂದು ಏತಕ್ಕಡಗಿದೆ, ಅಲೇಖಮಯ ಶೂನ್ಯ ಕಲ್ಲಿನ ಮನೆಯೊಳಗೆ.
--------------
ವಚನಭಂಡಾರಿ ಶಾಂತರಸ
ಸಿರಿಯ ಭೂಮಿಯ ಮಧ್ಯದಲ್ಲಿ ಉರಿಯ ಮಡು ಹುಟ್ಟಿತ್ತು. ಆ ಮಡುವಿನ ಮಧ್ಯದಲ್ಲಿ ಐದು ಸರಗೂಡಿದ ಬಾವಿ. ಆ ಬಾವಿಯೊಳಗೆ ಮೂರು ಮುಖದ ಹುಲಿ ಹುಟ್ಟಿತ್ತು. ಒಂದು ಕೊಂದು ತಿಂಬುದು, ಒಂದು ಕೊಲ್ಲದೆ ತಿಂಬುದು, ಒಂದು ಎಲ್ಲರ ನೋಡಿ ತಿಂಬುದು, ಅಲ್ಲಾ ಎಂಬುದು, ಹುಲಿಯ ಬಣ್ಣ ಮೊದಲು ಕಪ್ಪು, ನಡುವೆ ಭಾಸುರ, ತುದಿಯಲ್ಲಿ ಬಿಳಿದು. ಹಗೆವಣ್ಣ ಸಹಿತಾಗಿ ಹುಟ್ಟಿದ ಹುಲಿ, ಉರಿಯ ಮಡುವನೀಂಟಿ, ಸರಬಾವಿಯ ಕುಡಿದು, ತಿಂಬವೆರಡು ಮುಖ ತಿನ್ನದ ಮುಖದಲ್ಲಿ ಅಡಗಿ, ಕಡೆ ಕಪ್ಪು, ನಡುವಣ ಭಾಸುರ, ತುದಿಯ ಬಿಳುಪಿನಲ್ಲಿ ಅಡಗಿ ಒಡಗೂಡಿತ್ತು. ಅದರ ತೊಡಿಗೆಯ ಕೇಳಿಹರೆಂದಂಜಿ, ಅಡಗಿದೆಯಾ, ಅಲೇಖನಾದ ಶೂನ್ಯ ಕಲ್ಲಿನೊಳಗಾಗಿ ?
--------------
ವಚನಭಂಡಾರಿ ಶಾಂತರಸ
ಸ್ಥಳ ಕುಳವನರಿಯಬೇಕೆಂಬರು, ಭಕ್ತನಾಗಿ ಮಾಹೇಶ್ವರನಾಗಬೇಕೆಂಬರು. ಮಾಹೇಶ್ವರನಾಗಿ ಪ್ರಸಾದಿಯಾಗಬೇಕೆಂಬರು. ಪ್ರಸಾದಿಯಾಗಿ ಪ್ರಾಣಲಿಂಗಿಯಾಗಬೇಕೆಂಬರು. ಪ್ರಾಣಲಿಂಗಿಯಾಗಿ ಶರಣಾಗಬೇಕೆಂಬರು. ಶರಣನಾಗಿ ಐಕ್ಯನಾಗಬೇಕೆಂಬರು. ಐಕ್ಯ ಏತರಿಂದ ಕೂಟ ? ನಾನರಿಯೆ. ಒಳಗಣ ಮಾತು, ಹೊರಹೊಮ್ಮಿಯಲ್ಲದೆ ಎನಗೆ ಅರಿಯಬಾರದು. ಎನಗೆ ಐಕ್ಯನಾಗಿ ಶರಣಾಗಬೇಕು, ಶರಣನಾಗಿ ಪ್ರಾಣಲಿಂಗಿಯಾಗಬೇಕು. ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು, ಪ್ರಸಾದಿಯಾಗಿ ಮಾಹೇಶ್ವರನಾಗಬೇಕು. ಮಾಹೇಶ್ವರನಾಗಿ ಭಕ್ತನಾಗಬೇಕು, ಭಕ್ತನಾಗಿ ಸಕಲಯುಕ್ತಿಯಾಗಬೇಕು. ಯುಕ್ತಿ ನಿಶ್ಚಯವಾದಲ್ಲಿಯೆ, ಐಕ್ಯಸ್ಥಲ ಒಳಹೊರಗಾಯಿತ್ತು. ಅಲೇಖ ಲೇಖವಾಯಿತ್ತು, ಎನಗೆ ಕಾಣಬಂದಿತ್ತು. ಅಲೇಖನಾದ ಶೂನ್ಯ ಶಿಲೆಯ ಹೊರಹೊಮ್ಮಿ ಕಂಡೆ ನಿನ್ನನ್ನು.
--------------
ವಚನಭಂಡಾರಿ ಶಾಂತರಸ