ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು, ಬಹಿರಂಗದಲ್ಲಿ ಹಳಿದಾಡುವರೇನಯ್ಯ ? ಬಹಿರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು ಅಂತರಂಗದಲ್ಲಿ ಹಳಿದಾಡುವರೇನಯ್ಯ ? ಅಂತರಂಗ ಬಹಿರಂಗದಲ್ಲಿ ಸಂಶಯವಿಲ್ಲದೆ ಬಹಿರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಇಷ್ಟಲಿಂಗಕ್ಕೆ ಅರ್ಪಿಸಿ, ಪ್ರಾಣಲಿಂಗದಲ್ಲಿ ಕೂಡಿದ್ದೇ ಭಕ್ತಿಯೆಂಬೆನಯ್ಯ. ಅಂತರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಭಾವಲಿಂಗದಲ್ಲಿ ಕೂಡಿದ್ದೇ ಸದ್ಭಕ್ತಿಯೆಂಬೆನಯ್ಯ. ಭಕ್ತಿ ಸದ್ಭಕ್ತಿಯೆಂಬ ಭೇದವನು ಅರಿತಾತನೇ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗ ಬಹಿರಂಗ ಶುದ್ಧನಾದ ಶರಣನ ದಿಟಪುಟವ ನೋಡಿರಯ್ಯ. ಅಂತಪ್ಪ ಶರಣನ ಕಂಡು ನಮೋ ನಮೋ ಎನುತಿರ್ದೆಯಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತಿರ್ದ ಬ್ರಹ್ಮದ ಅಂಗದಲ್ಲಿ ಜ್ಞಾನಚಿತ್ತು ಉದಯಿಸಿತ್ತು ನೋಡಾ. ಆ ಜ್ಞಾನಚಿತ್ತುವಿನಿಂದ ಪರಶಿವರು ಹುಟ್ಟಿದರು ನೋಡಾ. ಆ ಪರಶಿವರು ಹುಟ್ಟಿದಲ್ಲಿಗೆ ಸದಾಶಿವರು ಹುಟ್ಟಿದರು. ಆ ಸದಾಶಿವರು ಹುಟ್ಟಿದಲ್ಲಿಗೆ ಈಶ್ವರರು ಹುಟ್ಟಿದರು. ಆ ಈಶ್ವರರು ಹುಟ್ಟಿದಲ್ಲಿಗೆ ರುದ್ರರು ಹುಟ್ಟಿದರು. ಆ ರುದ್ರರು ಹುಟ್ಟಿದಲ್ಲಿಗೆ ವಿಷ್ಣುಗಳು ಹುಟ್ಟಿದರು. ಆ ವಿಷ್ಣುಗಳು ಹುಟ್ಟಿದಲ್ಲಿಗೆ ಬ್ರಹ್ಮರು ಹುಟ್ಟಿದರು. ಆ ಬ್ರಹ್ಮರು ಹುಟ್ಟಿದಲ್ಲಿಗೆ ಲೋಕಾದಿಲೋಕಂಗಳು ಸಚರಾಚರಂಗಳು ಹುಟ್ಟಿದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದೊಳಗೊಂದು ಮಂಗಳದ ಹಕ್ಕಿ ಕುಳಿತಿಪ್ಪುದ ಕಂಡೆನಯ್ಯ. ಆ ಹಕ್ಕಿಯ ಹಿಡಿದು ಹೋಗದ ಮುನ್ನ ಅದು ಗಗನಕ್ಕೆ ಹಾರಿತ್ತು ನೋಡಾ! ಹಕ್ಕಿ ಹೋಯಿತ್ತು ಲಿಂಗದ ಗುಡಿಗೆ. ಮತ್ತೆ ಕಂಡನು ಒಬ್ಬ ತಳವಾರನು. ಆ ತಳವಾರನು ಗದೆಯ ತಕ್ಕೊಂಡು ಇಡಲೊಡನೆ ಮಂಗಳನೆಂಬ ಹಕ್ಕಿ ಬಿತ್ತು ನೋಡಾ! ಇದ ನೀವಾರಾದಡೆ ಹೇಳಿರಯ್ಯ, ನಾನಾದರೆ ಅರಿಯೆನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದ ಬೆಳಗಿನೊಳು ನಿಂತಾತನೆ ನಿರ್ಮಳಜ್ಞಾನಿ ನೋಡಾ. ಆ ನಿರ್ಮಳಜ್ಞಾನಿಯ ಸಂಗದಿಂದ ಅಗಮ್ಯ ಅಗೋಚರ ಅಘಟಿತ ಅಪ್ರಮಾಣ ಲಿಂಗವು ತೋರಲುಪಟ್ಟಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದ ಸುಳುವಿನ ಭೇದವ ಚಿತ್ತವೆಂಬ ಹಸ್ತದಲ್ಲಿ ಹಿಡಿದು, ಈಡಾಪಿಂಗಳನಾಳದಲ್ಲಿ ಸುಷಮ್ನಸ್ವರವ ಬಲಿದು ಶಾಂತಿಸಜ್ಜನಿತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವೆಂಬ ಗದ್ದುಗೆಯ ಮೇಲೆ ಸಂಗಮೇಶ್ವರನೆಂಬ ಲಿಂಗವ ಕಂಡೆನಯ್ಯ. ಆ ಲಿಂಗದ ಸುಳುವಿನಲ್ಲಿ ಮೂವರ ಕಂಡೆನಯ್ಯ. ಒಬ್ಬ ಸತಿಯಳು ಇಪ್ಪತ್ತೈದು ಗ್ರಾಮಂಗಳ ಮೀರಿ ಸಂಗಮೇಶ್ವರನೆಂಬ ಲಿಂಗವ ಪೂಜಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಕ್ಕೆ ಆರುದಿನವೆಂಬುದ ನೀನು ಬಲ್ಲೆಯಯ್ಯಾ? ಲಿಂಗಕ್ಕೆ ಮೂರು ದಿನವೆಂಬುದ ನೀನು ಬಲ್ಲೆಯಯ್ಯಾ? ಸಂಬಂಧಕ್ಕೆ ಒಂದು ದಿನವೆಂಬುದ ನೀನು ಬಲ್ಲೆಯಯ್ಯಾ? ನಿನ್ನಿಂದ ಸಕಲ ಜಗಂಗಳು ಆದುದ ನೀನೇ ಬಲ್ಲೆಯಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವಿಲ್ಲದ ನಾರಿಯು ಸಂಗವಿಲ್ಲದ ಪುರುಷನ ನೆರೆದು ಸಕಲ ಜಗಂಗಳ ಗಬ್ರ್ಥೀಕರಿಸಿಕೊಂಡು, ಪರವಶದಲ್ಲಿ ನಿಂದು, ಪರಕೆಪರವಾದ ಸೋಜಿಗವ ನಾನೇನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದೊಳಹೊರಗಿಪ್ಪ ಲಿಂಗವನು ಅರಿತು ಆ ಲಿಂಗದಲ್ಲಿ ಅಂಗವನಳಿದು ಲಿಂಗಸಂಗಿಯಾಗಿ ಇರಬಲ್ಲಡೆ ಆತನೆ ನಿರಂಜನ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಲಿಂಗ ಸಮರಸವಾದಲ್ಲದೆ, ಸಂಗವ ಮಾಡನಯ್ಯ ನಿಮ್ಮ ಶರಣನು. ಶ್ರೋತ್ರಲಿಂಗ ಸಮರಸವಾದಲ್ಲದೆ, ಶಬ್ದಾದಿಗಳ ಕೇಳನಯ್ಯ ನಿಮ್ಮ ಶರಣನು. ತ್ವಕ್ಕುಲಿಂಗ ಸಮರಸವಾದಲ್ಲದೆ, ಸ್ಪರುಶನಾದಿಗಳ ಮಾಡನಯ್ಯ ನಿಮ್ಮ ಶರಣನು. ನೇತ್ರಲಿಂಗ ಸಮರಸವಾದಲ್ಲದೆ, ರೂಪಾದಿಗಳ ನೋಡನಯ್ಯ ನಿಮ್ಮ ಶರಣನು. ಜಿಹ್ವೆಲಿಂಗ ಸಮರಸವಾದಲ್ಲದೆ, ಷಡುರುಚಿಯ ಕೇಳನಯ್ಯ ನಿಮ್ಮ ಶರಣನು. ಪ್ರಾಣಲಿಂಗ ಸಮರಸವಾದಲ್ಲದೆ, ಗಂಧವ ಕೇಳನಯ್ಯ ನಿಮ್ಮ ಶರಣನು. ಇದು ಕಾರಣ, ಇಂತಪ್ಪ ಭೇದವನರಿತು, ಮಹಾಲಿಂಗದ ಬೆಳಗಿನೊಳು ಕೂಡಿ ಪರಿಪೂರ್ಣತ್ವದಿಂದ ಪರಾಪರಂ ನಾಸ್ತಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದಲ್ಲಿ ವಸ್ತುವ ಕಂಡೆನಯ್ಯ. ಬಹಿರಂಗದಲ್ಲಿ ಆಚಾರವಿರಬೇಕಯ್ಯ. ಆ ಆಚಾರವಿಡಿದು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಬೇಕಯ್ಯ. ಆ ಪಾದೋದಕ ಪ್ರಸಾದವನರಿತು ಆ ವಸ್ತುವಿನಲ್ಲಿ ಕೂಡಬಲ್ಲಾತನೆ ಒಳಗೆ ಲಿಂಗಮಯ, ಹೊರಗೆ ಲಿಂಗಮಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗನೆಯರು ಆರುಮಂದಿ, ಸಂಗಸಮರಸದಿಂದ ಹಿಂಗದೆ ಲಿಂಗಾರಾಧನೆಯಂ ಮಾಡಿ, ಮಂಗಳಪ್ರಭೆಯಲ್ಲಿ ನಿಂದು, ಅತ್ತತ್ತಲೆ ನಿಸ್ಸಂಗ ನಿರಾಳ ತಾನುತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಡಿಯ ರಾಜಬೀದಿಯಲ್ಲಿ ಶಿಶುವಿಪ್ಪುದ ಕಂಡೆನಯ್ಯ. ಆ ಶಿಶುವಿಂಗೆ ಮೂವರು ಮಕ್ಕಳು ಹುಟ್ಟಿದರು ನೋಡಾ ! ಈ ಮಕ್ಕಳ ಕೈ ಬಾಯೊಳಗೆ ಮೂರು ಲೋಕಂಗಳೆಲ್ಲ ನಚ್ಚುಮಚ್ಚಾಗಿಪ್ಪವು ನೋಡಾ ! ಅದು ಕಾರಣ, ಆದಿಯಲ್ಲಿ ಗುರುನಿರೂಪಣವಂ ಪಡೆದು ಚಿತ್ತಾಜ್ಞೆಪ್ರಭೆದೋರಲು ಮೂರು ನಚ್ಚುಮಚ್ಚುಗಳು ಕರಗಿ ಮೂರು ಮಕ್ಕಳು ಬಿಟ್ಟುಹೋದವು ನೋಡಾ ! ಆ ಶಿಶುವಿಂಗೆ ನಿರಾಳವೆಂಬ ದಾರಿಯ ತೋರಿ, ಊರಿಂಗೆ ಹೋಗಲೊಡನೆ ಅಲ್ಲಿ ಮಂಜಿನ ಕೊಡದ ಅಗ್ಗವಣಿಯ ಕಂಡು ಲಿಂಗಕೆ ಮಜ್ಜನವ ನೀಡಿ, ನಿರಾವಲಂಬಲಿಂಗದೊಳು ಬೆರೆದು ನಿಃಪ್ರಿಯವೆನಿಸಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಪಟ್ಟಣದೊಳಗೆ ಭೃಂಗನಾಟ್ಯವನಾಡಿ, ಸಂಗೀತ ಸ್ವರಂಗಳ ತಿಳಿದು, ಸಂಗಸುಖದೊಳುಳಿದು, ನಿಸ್ಸಂಗವಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಪ್ರಕೃತಿಯನಳಿದು, ಲಿಂಗಧ್ಯಾನವ ಮಾಡಿ, ಮಂಗಳಮಯದಲ್ಲಿ ಕೂಡಿ, ನಿರ್ಮಲಜ್ಞಾನಿಯಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವಿಲ್ಲದ ನಾರಿಯ ಮನೆಯಲ್ಲಿ ಆರುಮೂರು ಶಿವಾಲಯವ ಕಂಡೆನಯ್ಯ. ಆರುಮೂರು ಶಿವಾಲಯದೊಳಗೆ ಆರುಮೂರು ಲಿಂಗವಿಪ್ಪುವು ನೋಡಾ. ಆರುಮೂರು ಲಿಂಗದ ಭೇದವನರಿತು ಅಂಗವಿಲ್ಲದ ನಾರಿಯ ನೆರೆದು, ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಲಿಂಗಸಮರಸವಾದ ಬಳಿಕ ಕರಣದ ಹಂಗಿನ್ನ್ಯಾತಕಯ್ಯ? ಮಹಾಜ್ಞಾನಸಂಬಂಧವಾದ ಬಳಿಕ ಮಾತಿನ ಹಂಗಿನ್ನ್ಯಾತಕಯ್ಯ? ಭಾವನಿರ್ಭಾವವಾದ ಬಳಿಕ ನಾದಬಿಂದುಕಲೆಯ ಹಂಗಿನ್ನ್ಯಾತಕಯ್ಯ? ನಿಷ್ಕಲಲಿಂಗದಲ್ಲಿ ತಾನುತಾನಾದ ಬಳಿಕ ಯಾತರ ಹಂಗಿನ್ನ್ಯಾತಕಯ್ಯ ಝೇಂಕಾರ ನಿಜಲಿಂಗಪ್ರಭುವೆ?
--------------
ಜಕ್ಕಣಯ್ಯ
ಅಂಗದ ಕಳವಳವ ಲಿಂಗದಲ್ಲಿ ಅಳಿದು, ಮನದ ಭ್ರಾಂತಿಯ ಭಾವದಲ್ಲಿ ಅಳಿದು, ಇದು ಕಾರಣ, ಶಿವಜ್ಞಾನಿಯಾದ ಶರಣನು ತನ್ನತಾನೇ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವಿಲ್ಲದ ಬಾಲೆಯು ಅಂಗಳದೊಳಗೆ ಕುಳಿತು ಮಂಗಳಾರತಿಯ ಅಂಗಲಿಂಗ ಸಂಯೋಗವೆಂಬ ಲಿಂಗಕ್ಕೆ ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವೆಂಬ ಶಿವಾಲಯದೊಳಗೆ ಆನಾದಿಲಿಂಗವು ಚತುರ್ದಶ ಭುವನಂಗಳ ನುಂಗಿಕೊಂಡು ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ. ಆ ಸುಳುವಿನ ಭೇದವನರಿತು ಲಿಂಗಾರ್ಚನೆಯಂ ಮಾಡಿ ಕೂಡಿ ಸಮರಸವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದ ಗುಣಾದಿಗಳನಳಿದು, ಭಾವ ಬೆಳಗಿನೊಳು ಕೂಡಿ, ತ್ರಿಕೂಟದಲ್ಲಿ ನಿಂದು, ಪರಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು, ಶಿಖಾಚಕ್ರವೆಂಬ ಮೇರುವೆಯಂ ಹತ್ತಿ, ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯ ನೋಡಿ ನಿರಾವಯವೆಂಬ ಕರಸ್ಥಲದ ಮೇಲೆ ನಿಃಶಬ್ದ ನಿರಾಳಲಿಂಗವಿಪ್ಪುದು ನೋಡಾ. ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದಲ್ಲಿ ಜ್ಞಾನಸಂಬಂಧವಾದ ಶರಣಂಗೆ ಅಜ್ಞಾನದ ಭಯವುಂಟೇನಯ್ಯ ? ಅಜ್ಞಾನಭಯವಳಿದು ನಿಶ್ಚಿಂತ ನಿರಾಕುಳಲಿಂಗದಲ್ಲಿ ಕೂಡಬಲ್ಲಾತನೆ ಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಬರದ ಮನೆಯೊಳಗೆ ಗಾಂಭೀರ್ಯತ್ವದ ಅಂಗನೆಯ ಕಂಡೆನಯ್ಯ. ಆಕೆಯ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವೆಂಬ ಭೂಮಿಯಲ್ಲಿ ಸಂಗಸಮರಸವೆಂಬ ಪುರುಷನು ಹಿಂಗದೆ ಪರಮಾನಂದ ಪ್ರಭೆಯಲ್ಲಿ ಕೂಡಿ ಮಂಗಳಮಯವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...