ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತ ಮಹೇಶ್ವರರು ಆರಾದರೂ ಆಗಲಿ ಶಿವಗಣಂಗಳಲ್ಲಿ ಕುಲವನರಸಿದರೆ ಅವರು ಕುಲಸೂತಕರೆಂದು ಶಿವನು ಯಮನ ಕೈಯಲ್ಲಿ ಕೊಟ್ಟು ಅಘೋರ ನರಕದೊಳು ಹಾಕೆಂದನು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭೂಚರ ಖೇಚರ ಅಗೋಚರ ಚರಾಚರ ಉನ್ಮನಿಯೆಂಬ ಪಂಚಮುದ್ರೆಗಳಿಂದತ್ತತ್ತ, ನಿಃಶೂನ್ಯ ನಿರಾಳ ನಿಃಕಲ ನಿರವಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಾವನಿಬ್ಬೆರಗಿನೊಳು ಐಕ್ಯವಾದ ಮಹಾಜ್ಞಾನಿಗಳ ಸಂಗದಿಂದ ವಾಙ್ಮನಕ್ಕೆ ಅಗೋಚರನಾದಂಥ ಮಹಾಲಿಂಗದಲ್ಲಿ ಪರಿಪೂರ್ಣವಾದ ಭೇದವ ನೀವೇ ಬಲ್ಲಿರಿ ಅಯ್ಯಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿಭಕ್ತಿ, ಚಿತ್‍ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತಗಣ, ಮಹೇಶ್ವರಗಣ, ಪ್ರಸಾದಿಗಣ, ಪ್ರಾಣಲಿಂಗಿಗಣ, ಶರಣಗಣ, ಐಕ್ಯಗಣ, ಮಹಾಗಣದೊಳು ಕೂಡಿ ಪರಿಪೂರ್ಣವನೈದಿದವರಿಗೆ ಶರಣು ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತ ಮಹೇಶ್ವರರಿಲ್ಲದಂದು, ಪ್ರಸಾದಿ ಪ್ರಾಣಲಿಂಗಿಯಿಲ್ಲದಂದು, ಶರಣ ಐಕ್ಯರಿಲ್ಲದಂದು, ಏನೇನೂ ಇಲ್ಲದಂದು, ತಾನೇ ನಿಃಶೂನ್ಯನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತ ಮಹೇಶ್ವರನಲ್ಲಿ ಅಡಗಿ ಪ್ರಸಾದಿಯಾದನಯ್ಯ. ಪ್ರಸಾದಿ ಪ್ರಾಣಲಿಂಗಿಯಲ್ಲಿ ಅಡಗಿ ಶರಣನಾದನಯ್ಯ. ಶರಣ ಐಕ್ಯನಲ್ಲಿ ಅಡಗಿ ನಿಃಕಲಪರಬ್ರಹ್ಮಲಿಂಗವನಾಚರಿಸುತಿರ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಾವಬತ್ತಲೆಯಲ್ಲಿ ನಿರಾಳಕೋಣನಿಪ್ಪುದು ನೋಡಾ ! ಅಲ್ಲಿ ಆತಿಂಥಿಣಿಗಣಂಗಳು ನೆಲೆಯಂಗೊಂಡಿಪ್ಪರು ನೋಡಾ ! ಆ ಕೋಣದ ಅಮೃತವ ತೆಗೆದು, ಮಹಾಗಣಂಗಳು ಸ್ವೀಕರಿಸಿ ಸರ್ವಾಂಗಲಿಂಗವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತಿ-ಜ್ಞಾನ-ವೈರಾಗ್ಯದಿಂದತ್ತತ್ತ ಅಗಮ್ಯಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಕೂಡಿ ಅವಿರಳ ಸ್ವಾನುಭಾವಸಿದ್ಭಾಂತನಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತ ಮಹೇಶ್ವರನಲ್ಲಿ ಅಡಗಿ, ಮಹೇಶ್ವರ ಪ್ರಸಾದಿಯಲ್ಲಿ ಅಡಗಿ, ಪ್ರಸಾದಿ ಪ್ರಾಣಲಿಂಗಿಯಲ್ಲಿ ಅಡಗಿ, ಪ್ರಾಣಲಿಂಗಿ ಶರಣನಲ್ಲಿ ಅಡಗಿ, ಶರಣ ಐಕ್ಯನಲ್ಲಿ ಅಡಗಿ, ಐಕ್ಯ ನಿರಂಜನದಲ್ಲಿ ಅಡಗಿ ಅತ್ತತ್ತ ನಿರಾಕಾರ ನಿರಾಕುಳ ನಿರಂಜನ ನಿಃಶೂನ್ಯ ನಿರವಯಲಿಂಗ ತಾನೇ ನೋಡಾ. ಮನೋಲಯವಾಯಿತ್ತು, ಜ್ಞಾನ ನಿಃಶೂನ್ಯವಾಯಿತ್ತು, ಭಾವ ನಿಷ್ಪತಿಯಾಯಿತ್ತು, ನೆನಹು ನಿರವಯವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭೂಮಿಯಿಲ್ಲದ ಪೃಥ್ವಿಯ ಕಂಡೆನಯ್ಯ. ನೀರು ಇಲ್ಲದ ಸಮುದ್ರವ ಕಂಡೆನಯ್ಯ. ಅಗ್ನಿಯಿಲ್ಲದ ಒಲೆಯ ಕಂಡೆನಯ್ಯ. ವಾಯುವಿಲ್ಲದ ಮರನ ಕಂಡೆನಯ್ಯ. ಆಕಾಶವಿಲ್ಲದ ಬಯಲ ಕಂಡೆನಯ್ಯ. ಆತ್ಮನಿಲ್ಲದ ಜ್ಞಾನವ ಕಂಡೆನಯ್ಯ. ಸೂರ್ಯನಿಲ್ಲದ ಪ್ರಕಾಶವ ಕಂಡೆನಯ್ಯ. ಚಂದ್ರನಿಲ್ಲದ ಚಿದ್ರೊಪವ ಕಂಡೆನಯ್ಯ. ನಾದವಿಲ್ಲದ ಸುನಾದವ ಕಂಡೆನಯ್ಯ. ಇದು ಕಾರಣ, ಬಯಲಿಂಗೆ ಬಯಲು ನಿರ್ವಯಲನೈದಿದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭೂತದೇಹಾದಿಗಳನಳಿದು, ತತ್ವಾದಿಗಳನೆಲ್ಲ ಲಿಂಗವ ಮಾಡಿ, ಚಿದಾತ್ಮದೊಳು ಕೂಡಿ ಪರಿಪೂರ್ಣವಾದ ಶರಣಂಗೆ, ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯ? ಇಹಪರವನೊಳಕೊಂಡು ತಾನು ತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರ ಮೇಲೆ ಅನಾದಿಯ ಜಂಗಮವ ಕಂಡೆನಯ್ಯ, ಆ ಜಂಗಮದ ಸಂಗದಿಂದ ಸಾಜಸಮಾಧಿಯ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತನಾದರೇನಯ್ಯ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ ತನ್ನ ಮನವ ಶುದ್ಧಮಾಡಿ, ಮಹಾಲಿಂಗದಲ್ಲಿ ಕೂಡಬಲ್ಲಾತನೇ ಅನಾದಿಭಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭೂತದೇಹಿಕವನಳಿದು ಚಿದಾತ್ಮಕನಾಗಿ, ನಿಃಕಲಪರಬ್ರಹ್ಮವ ಕೂಡಿ ತಾನು ತಾನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ