ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ ಮಹಾಲಿಂಗದ ಧ್ಯಾನವಂ ಮಾಡಿ, ಪರಿಪೂರ್ಣದೇಶಕೆ ಹೋಗಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಯಲ್ಲಿ ಒಬ್ಬ ದೇವನು ಮೂವರ ಕೂಡಿಕೊಂಡು ಆರು ಕೇರಿಗಳ ಪೊಕ್ಕು ನೋಡಲು ಆ ಕೇರಿಗಳಲ್ಲಿ ಆರು ಶಕ್ತಿಯರು ನಿಶಿಧ್ಯಾನವ ಮಾಡಿ ಒಳಹೊರಗೆ ಪರಿಪೂರ್ಣವಾಗಿಹರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಯಿಂದಲಾದ ಪುರುಷನು ಮೇದಿನಿಗೆ ಬಂದು, ಐವರ ಸಂಗವ ಮಾಡಿ, ಅನಾದಿಯೆಂಬ ಕರಸ್ಥಲದಲಿ ನಿಂದು, ಪರಕೆಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ. ಆ ಸೂಳೆಯ ಗೃಹದಲ್ಲಿ ಸಾಸಿರದಳ ಕಮಲಮಂಟಪವ ಕಂಡೆನಯ್ಯ. ಆದಿಯಲ್ಲಿ ಒಬ್ಬ ವಿಟನು, ಮೂವರು ಗೆಳೆಯರ ಕೂಡಿಕೊಂಡು, ಹೃದಯದಲ್ಲಿರ್ದ ರತ್ನವ ತೆಗೆದು, ಆ ಸೂಳೆಗೆ ಒತ್ತೆಯಂ ಕೊಟ್ಟು, ಸಂಗಸಂಯೋಗಮಂ ಮಾಡುವುದ ಮೂವರು ಗೆಳೆಯರು ಕಂಡು ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಚಾರ ಶುದ್ಧವಾದ ಭಕ್ತನ ಅಂತರಂಗದಲ್ಲಿ ಶಿವನಿಪ್ಪನು ನೋಡಾ. ಆ ಶಿವನ ಅಂತರಂಗದಲ್ಲಿ ಒಬ್ಬ ಸತಿಯಳು ಹುಟ್ಟಿ ಆರಾರು ಲಿಂಗಾರ್ಚನೆಯ ಮಾಡಿ ಮೂರು ಮೇರುವೆಯ ದಾಂಟಿ ಪರಕೆಪರವನಾಚರಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಯಲ್ಲಿ ಶಿವಾತ್ಮನು ಉದಯವಾದ ಕಾರಣ ಮಹಾಲಿಂಗದ ಬೆಳಗು ತೋರಿತಯ್ಯ. ಆ ಲಿಂಗದ ಬೆಳಗಿನೊಳಗೆ ತಾನು ತಾನೆಂಬುದ ಮರೆದು ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕಂಬದ ಮೇಲೆ ಮೂರು ದೇಗುಲವ ಕಂಡೆನಯ್ಯ. ಮೂರು ದೇಗುಲದ ಮೇಲೆ ಒಂದು ಶಿಖರವ ಕಂಡೆನಯ್ಯ. ಆ ಶಿಖರವನೊಂದು ವಸ್ತು ಒಳಗೊಂಡಿರ್ಪುದು ನೋಡಾ. ಆ ವಸ್ತುವಿನ ಕುರುಹ ನೀವಾರಾದರೆ ಹೇಳಿರಯ್ಯ; ನಾನೊಂದ ಅರಿಯೆನು. ತಾನಾಗಿ ಕಾಣಬಲ್ಲವರಿಂಗೆ ಕಾಣಬಂದಿತ್ತಯ್ಯ. ಕಾಣಲರಿಯದವರಿಂಗೆ ದೂರವಾಗಿತ್ತಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಯಲ್ಲಿ ಒಬ್ಬ ಪುರುಷನು ಎಳೆಯ ಗನ್ನಕಿಯ ಕೈವಿಡಿಯಲು ಆಕೆಯ ಬಸುರಲ್ಲಿ ಮೂವರು ಮಕ್ಕಳು ಹುಟ್ಟಿದರು ನೋಡಾ ! ಒಳಗಿನ ಆರು ಮಂದಿ ನೋಡಬಂದ ಬೆಡಗ ನೋಡಾ ! ಮೇಲಿಂದ ಒಬ್ಬ ಪುರುಷನು ಕೈ ಸೊನ್ನೆಯ ಮಾಡಲೊಡನೆ ಮೂವರ ಮಕ್ಕಳ ಕೂಡಿಕೊಂಡು ಬಂದಾರುಮಂದಿ ಹೆಂಡರಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕಂಬದ ಮನೆಯೊಳಗೆ ಮೂರು ಕೋಣೆಗಳಿಪ್ಪವು ನೋಡಾ. ಆ ಮೂರು ಕೋಣೆಗಳಿಂದತ್ತತ್ತ ಸಾವಿರೆಸಳ ಮಂಟಪವ ಕಂಡೆನಯ್ಯ. ಆ ಸಾವಿರೆಸಳ ಮಂಟಪದೊಳಗೆ ಒಬ್ಬ ಸತಿಯಳು ತನ್ನ ಗಮನವ ತಾನೇ ನೋಡುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕಂಬದ ಶಿವಾಲಯದ ಮೇಲೆ ಸಾಸಿರದಳದ ಮಂಟಪವ ಕಂಡೆನಯ್ಯ. ಆ ಮಂಟಪದೊಳಗೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳು ತನ್ನ ನಿಲವ ತಾನೆ ನೋಡಿ ನಿಃಪ್ರಿಯವಾದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಸ್ಥಲದಲ್ಲಿ ಆರು ಮೂರ್ತಿಗಳು ಆರು ಶಕ್ತಿಯರ ಸಂಗವ ಮಾಡಿ, ಮೂರು ದೇಶವ ಮೀರಿ, ಸಾವಿರೆಸಳಮಂಟಪವ ಪೊಕ್ಕು, ಸಾವಿರ ಲಿಂಗಾರ್ಚನೆಯ ಮಾಡುತಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಸ್ಥಲದಲ್ಲಿ ಆರು ಮೂರ್ತಿಗಳ ಕಂಡೆನಯ್ಯ. ಆರು ಮುಖಂಗಳಲ್ಲಿ ಆರು ಲಿಂಗವ ಕಂಡೆನಯ್ಯ. ಆರರಿಂದತ್ತ ಮೀರಿದ ಮಹಾಮಹಿಮನ ಕಂಡು ನಿಶ್ಚಿಂತ ನಿರಾವಾಶಿಗಳಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗದಲ್ಲಿ ಪರಿಪೂರ್ಣವಾದ ಶರಣನು, ಮನೋತೀತ ಅಗೋಚರ ಅಪ್ರಮಾಣ ನಿರ್ನಾಮ ನಿರ್ಗುಣ ನಿರಾಮಯ ನಿತ್ಯ ನಿರಂಜನಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆತ್ಮನೆಂಬ ಬೆಳಗಿನೊಳು ನಿರಾತ್ಮನೆಂಬ ಉದಯದೋರಿ ಅತ್ತತ್ತಲೆ ಘನಕೆ ಘನವ ತೋರಿ ನಿಂದಬಳಿಕಿನ್ನು ಎತ್ತ ಯೋಗ ಹೇಳಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರುತತ್ವದ ಮೇಲೆ ನಿತ್ಯತ್ವ ನಿಜಪರಬ್ರಹ್ಮಲಿಂಗವು ತಾನೇ ನೋಡಾ. ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ಆರು ಮೂರು ದೇಶವ ನೋಡಿ ನಿರ್ದೇಶದಲ್ಲಿ ನಿಂದು ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಕಾಶದ ಮೇಲೆ ಏಕಾಂತಮಂಟಪವ ಕಂಡೆನಯ್ಯ. ಆ ಮಂಟಪದೊಳಗೆ ಅನಾದಿಜಂಗಮವ ಕಂಡೆನಯ್ಯ. ಆ ಅನಾದಿ ಜಂಗಮದ ಪರಮಪ್ರಸಾದವ ನಾನು ಸ್ವೀಕರಿಸಿ ಬದುಕಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿ ಅಪಾನದಲ್ಲಿ ಸೋಪಾನವಿಡಿದು ನಿಂದು ತಾಪತ್ರಯಂಗಳನಳಿದು ಸೊಂಪಾಗಿ ಲಿಂಗದೊಳಗಿಪ್ಪ ಬಾಗಿಲ ದಾಂಟಿ ಗಪ್ಪಾದನು ನೋಡಾ ಸ್ವಯಂಜ್ಯೋತಿಲಿಂಗದಲ್ಲಿ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಚಕ್ರಂಗಳಲ್ಲಿ ಆರು ಮೂರ್ತಿಗಳು ಆರಾರ ಲಿಂಗಾರ್ಚನೆಯ ಮಾಡಿ, ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ನಿಶ್ಚಿಂತ ನಿರಾಕುಳ ನಿರ್ಭರಿತನಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕೇರಿಯ ಮುಂದೆ ಮೂರು ಗ್ರಾಮವ ಕಂಡೆನಯ್ಯ. ಮೂರು ಗ್ರಾಮದ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗವ ನೋಡ ಹೋಗದ ಮುನ್ನ ಆರು ಕೇರಿ ಅಳಿದು, ಮೂರು ಗ್ರಾಮ ಹೋಗಿ, ಮೀರಿ ಕಂಡೆನಯ್ಯ ಆ ಲಿಂಗವನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಬಣ್ಣದ ಪಟ್ಟಣದೊಳಗೆ ಮೂರು ಬಣ್ಣದ ಕೊತ್ತಳವ ಕಂಡೆನಯ್ಯ. ಮೂರು ಬಣ್ಣದ ಕೊತ್ತಳದಿಂದತ್ತತ್ತ ಸಾವಿರಕಂಬದ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಪರಮಾನಂದ ಲಿಂಗವು ತೊಳಗಿ ಬೆಳಗುತಿಪ್ಪುದು ನೋಡಾ. ಆ ಬೆಳಗಿನೊಳು ಕೂಡಿ ಪರಿಪೂರ್ಣವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕಂಬದ ಶಿವಾಲಯದ ಮೇಲೆ ಮೂರು ಮಂಟಪವ ಕಂಡೆನಯ್ಯ! ಆ ಮೂರು ಮಂಟಪದ ತುದಿಯಲ್ಲಿ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿರ್ಪುದು ನೋಡಾ! ಆ ಲಿಂಗವ ನೋಡ ಹೋಗದ ಮುನ್ನ ಅದು ಎನ್ನ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ!
--------------
ಜಕ್ಕಣಯ್ಯ
ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ! ಆ ಸೂಳೆಯ ಬಸುರಲಿ ಪಿಂಡಬ್ರಹ್ಮಾಂಡಗಳಿಪ್ಪವು ನೋಡಾ! ಆ ಪಿಂಡಬ್ರಹ್ಮಾಂಡಗಳೊಳಗೆ ಒಂದು ಹಂಸನಿರ್ಪುದ ಕಂಡೆನಯ್ಯ! ಆ ಹಂಸನು ಸಕಲ ಬಲೆಯಂಗಳ ಹರಿದು ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದಲ್ಲಿ ಇರುವುದು. ಹಂಸನ ಕಾಣಬಲ್ಲಾತನೆ ನಿರ್ಮುಕ್ತಗಣೇಶ್ವರ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕಂಬದ ದೇಗುಲದ ಮೇಲೆ ಮೂರು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಒಬ್ಬ ಭಾಮಿನಿಯ ಕಂಡೆನಯ್ಯ. ಆ ಭಾಮಿನಿಯು ಐವರ ಕೂಡಿಕೊಂಡು, ಪರಕೆ ಪರವಾದ ಲಿಂಗವನಾಚರಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...