ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನೊಳಿಹ ಮೂರು ಲೋಕವ ನುಂಗಿ ಮುಂದೆ ತೋರುತಿಹ ಪರಬ್ರಹ್ಮ ಕಿರಣವು ಆ ಕಿರಣದೊಳು ನೆನವನಡಗಿಸಿ ಸುಷುಪ್ತಿಯ ನಿಲವ ಕಾಣಬಲ್ಲಾತನೆ ಪರಮ ಲಿಂಗೈಕ್ಯ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತುಟ್ಟತುದಿಯಲೊಂದು ಬಟ್ಟಬಯಲಾದ ಹಣ್ಣ ಮುಟ್ಟಿ ನೋಡುವವರ ನಾನಾರನೂ ಕಾಣೆನಯ್ಯ. ವೇದ ಶಾಸ್ತ್ರ ಪುರಾಣದಲ್ಲೂ ಕಂಡ ಕಾಣಿಕೆಯಿಲ್ಲ, ಅದು ಶ್ರುತಜ್ಞಾನಸಮ್ಮತ. ಹೇಗೆಂದರೆ: ಗುರು ನಿರೂಪಣದಿಂದ ಕಂಡದುದೆ ಕಾಣಿಕೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಾನು ತಾನಾದ ಭೇದವ ಮಹಾಜ್ಞಾನದಿಂದ ತಿಳಿದು, ನಿರಂಜನಲಿಂಗದಲ್ಲಿ ಕೂಡಿ ನಿರ್ವಿಕಲ್ಪ ನಿತ್ಯನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಾಮಸಕೆ ಸಿಲ್ಕಿ ಭ್ರಮಿತನಾಗಬೇಡ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವನಳಿದು ಪರಬ್ರಹ್ಮಲಿಂಗದೊಳು ಕೂಡಿ ಉಪಮಾತೀತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನೊಳಗೆ ಮಹಾಲಿಂಗವಿಪ್ಪ ಸುಳುವಿನ ಭೇದವ ಸಮರಸಭಾವದಿಂದ ತಿಳಿದು, ನಿಶ್ಚಿಂತ ನಿರಾಕುಳದ ಮೇಲೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯ ಶಿಖರದ ಮೇಲೆ ತೊಳಗಿ ಬೆಳಗುತ್ತಿತ್ತಯ್ಯ ಪರಬ್ರಹ್ಮದ ಪ್ರಕಾಶವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಾಮಸ ತಮಂಧಗಳಿಲ್ಲದೆ, ನೇಮ ನಿತ್ಯಗಳಿಲ್ಲದೆ, ಕಾಮ ಮೋಹಾದಿಗಳಿಲ್ಲದೆ, ಸೀಮೆ ನಿಸ್ಸೀಮಗಳಿಲ್ಲದೆ, ನಾಮನಾಸ್ತಿಯಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಾಪತ್ರಯಂಗಳ ಕಳೆದು, ತತ್ವರೂಪಾದಿಗಳನರಿದು, ಮಹಾಜ್ಞಾನಾದಿಗಳಲ್ಲಿ ನಿಂದು ನಿರ್ವಯಲಿಂಗವನಾಚರಿಸಬಲ್ಲಾತನೆ ನಿರ್ಮುಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುಮನದ ಕೊನೆಯ ಮೇಲೆ ಮಹಾಘನಲಿಂಗವಿಪ್ಪುದು ನೋಡಾ. ಆ ಲಿಂಗದ ಕುಕ್ಷಿಯೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ. ಆ ಬೆಳಗ ನೋಡ ಹೋಗದ ಮುನ್ನ ಬೆಳಗು ತನ್ಮಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಾನು ತಾನಾದಲ್ಲಿ ಒಬ್ಬ ಸತಿಯಳು ನಿಶ್ಚಿಂತ ನಿರಾಕುಳನೆಂಬ ಲಿಂಗದಲ್ಲಿ ನಿಷ್ಪತಿಯಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುಮನದ ಕೊನೆಯ ಮೇಲೆ ಅಘಟಿತಲಿಂಗವಿಪ್ಪುದು ನೋಡಾ. ಆ ಲಿಂಗದ ಸಂತತಿಯಲ್ಲಿ ಒಬ್ಬ ಸತಿಯಳು ಐವರ ಸಂಗವ ಮಾಡಿ ನಿರವಯವೆಂಬ ಕರಸ್ಥಲದಲ್ಲಿ ನಿಂದು ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನೊಳಗಿಪ್ಪ ಲಿಂಗದ ಭೇದವನು ಮಹಾಜ್ಞಾನದಿಂದ ತಿಳಿದು, ಹೃದಯದಲ್ಲಿಪ್ಪ ಅಂಜನವ ತೆಗೆದು, ನಿರಂಜನವೆಂಬ ಜ್ಯೋತಿಯ ಮುಟ್ಟಿಸಲು ಆ ಜ್ಯೋತಿಯ ಬೆಳಗಿನೊಳಗೆ ಸುಳಿದಾಡುವ ಸುಳುವನರಿತ ಮಹಾತ್ಮರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತತ್ವಮಸಿ ವಾಕ್ಯದಿಂದ ಪರಂಜ್ಯೋತಿಲಿಂಗವ ಕಂಡು, ನಿತ್ಯ ನಿರಂಜನ ನಿರಾಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತ್ರಿಕೂಟದ ಶಿವಾಲಯದೊಳಗಿಪ್ಪ ಉಪಮಾತೀತ ಲಿಂಗವನು ಮಹಾಜ್ಞಾನದಿಂದ ತಿಳಿದು ನಿರವಯವೆಂಬ ಕರಸ್ಥಲದಲ್ಲಿ ನಿಂದು ಪರಕೆಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತತ್ವಮಸಿ ವಾಕ್ಯದಿಂದತ್ತತ್ತ ಸ್ವಯಂಜ್ಯೋತಿಲಿಂಗವಿಪ್ಪುದು ನೋಡಾ. ಆ ಲಿಂಗದ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ನಿತ್ಯನಿಜದಾರಂಭಕೆ ಹೋಗಿ ಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನೊಡನೆ ಒಬ್ಬ ಭಾಮಿನಿ ಪುಟ್ಟಿದಳು ನೋಡಾ. ಆ ಭಾಮಿನಿಯ ಅಂಗದೊಳಗೆ ಐದು ಗ್ರಾಮಂಗಳು ಹುಟ್ಟಿದವು ನೋಡಾ. ಆ ಗ್ರಾಮದೊಳಗೆ ಸುಳಿದಾಡುವ ಹಂಸನ ಕಂಡೆನಯ್ಯ. ಆ ಹಂಸನ ಹಿಡಿಯಲಾಗಿ ಆ ಹಂಸ ಹಾರಿ ಆ ಭಾಮಿನಿಯ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನೊಳಗೆ ತಾನು ತಾನಾದ ಬಳಿಕ ಭಿನ್ನಪ್ರಕೃತಿಗಳಿನ್ಯಾತಕಯ್ಯ. ಸನ್ಮಾರ್ಗದೊಳು ನಿಂದು, ಪರಕೆ ಪರವನಾಚರಿಸಬಲ್ಲಡೆ ಆತನೆ ಸ್ವಯಜ್ಞಾನಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಲೆ ಒಂದು, ಮುಖ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಒಂಬತ್ತು ಬಾಗಿಲ ಶಿವಾಲಯದೊಳಗೆ ಪೂಜೆಗೊಂಬ ಲಿಂಗವನು, ಏಕೋಮನೋಹರನೆಂಬ ಪೂಜಾರಿಯು ನವರತ್ನದ ತೊಂಡಲಂಗಳಂ ಕಟ್ಟಿ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುಮನದ ಕೊನೆಯ ಮೇಲೆ ಮಹಾಘನಲಿಂಗವಿಪ್ಪುದು ನೋಡಾ. ಆ ಘನಲಿಂಗದ ಸಂಗದಲ್ಲಿ ಒಬ್ಬ ಸತಿಯಳು ಐವರ ಕೂಡಿಕೊಂಡು ಆ ಲಿಂಗಾರ್ಚನೆಯಂ ಮಾಡಿ ಪರಕೆಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಂದೆಯೊಡನೆ ಒಬ್ಬ ಮಗ ಹುಟ್ಟಿ ಐದು ಕೇರಿಗಳೊಳಗೆ ಸುಳಿದಾಡುತಿರ್ಪನು ನೋಡಾ. ಆ ಕೇರಿಗಳಲ್ಲಿ ಭಕ್ತಾಂಗನೆ ಉದಯವಾದಳು ನೋಡಾ. ಭಕ್ತಾಂಗನೆಯ ಸಂಗದಿಂದ ಒಂಬತ್ತು ಸೋಪಾನಂಗಳನೇರಿ ಕಡೆಯ ಬಾಗಿಲಲ್ಲಿ ನಿಂದು, ತನ್ನ ಗಮನವ ತಾನೇ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುವಿನ ಗುಣಕ್ರಿಯಂಗಳಿಗೆ ಮುಖಗೊಡದೆ ಲಿಂಗಸಂಬಂಧಿಯಾಗಿ, ಪರಮಾನಂದಪ್ರಭೆಯಲ್ಲಿ ಕೂಡಿ, ಪರಕ್ಕೆ ಪರವನೈದಿದ ಮಹಾಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನಂತರಂಗದಲ್ಲಿ ಸಹಜ ಸಮ್ಯಕ್‍ಜ್ಞಾನವನರಿತು ನಿತ್ಯ ಪರತತ್ವದಲ್ಲಿ ಕೂಡಿ ಪರಿಪೂರ್ಣವಾದ ಶರಣನು ಅಖಂಡ ತೇಜೋಮಯಲಿಂಗ ತಾನೇ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುವಿನೊಳಗಿಪ್ಪ ಅನುಪಮ ಲಿಂಗವನು ಘನದಿಂದ ಲಿಂಗಾರ್ಚನೆಯಂ ಮಾಡಿ, ಚಿದ್ರೂಪಚಿನ್ಮಯನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನ ತಾನೇ ತಿಳಿದು, ಗನ್ನಘಾತಕವನಳಿದು, ಸನ್ನಹಿತನಾಗಿ ಅಘಟಿತಘಟಿತ ಪರಂಜ್ಯೋತಿಯ ಕಂಡು ನಿಃಪ್ರಿಯವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನಿಂದ ತಾನಾದವನು, ಉನ್ಮನಿಯ ಬಾಗಿಲ ಮುಂದೆ ನಿಂದು ಬತ್ತಲೆಯಾದ ಭಾಮಿನಿಯ ಕರೆದು, ಮಹಾಜ್ಞಾನವೆಂಬ ಹಸ್ತದಿಂದ ಹವಳ ನೀಲ ರತ್ನ ಪಚ್ಚೆ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಮಹಾಲಿಂಗವೆಂಬ ಮೂರ್ತಿಯ ನೆಲೆಯಂಗೊಳಿಸಿ ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾ ಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು ಪ್ರಾಣಲಿಂಗಿಯೆಂಬ ತುಪ್ಪವನೆರೆದು ಶರಣನೆಂಬ ಸಕ್ಕರೆಯ ತಳೆದು ಆ ಲಿಂಗಕ್ಕೆ ತೃಪ್ತಿಯನೆಯ್ದಿಸುತಿರ್ಪಳು ನೋಡಾ! ನವರತ್ನದ ಹರಿವಾಣದೊಳಗೆ ಸಪ್ತದ್ವೀಪಂಗಳ ರಚಿಸಿ ಓಂ ನಮೋ ಓಂ ನಮೋ, ಓಂ ನಮೋ ಶಿವಾಯಯೆಂದು ಬೆಳಗುತಿಪ್ಪಳು ನೋಡಾ. ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತಂದೆಯೊಡನೆ ಒಬ್ಬ ಮಗ ಹುಟ್ಟಿ ಐವರ ಸಂಗವ ಮಾಡುತ್ತಿರಲು, ಆಡುತಾಡುತ ಒಬ್ಬ ಗೊಲ್ಲತಿಯು ಕಂಡು, ಕುಂಟಿಣಿಗಿತ್ತಿಂಗೆ ಹೇಳಲು, ಆ ಕುಂಟಿಣಿಗಿತ್ತಿಯು ಆ ಮಗನ ಪಿಡಿಯಲು, ಈ ಐವರು ಹೆಂಡರಾದ ಬೆಡಗ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...