ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರಬ್ರಹ್ಮವೆಂಬ ಲಿಂಗದಿಂದ ಭಾವಲಿಂಗ ಉದಯವಾಯಿತ್ತು. ಆ ಭಾವಲಿಂಗದಿಂದ ಪ್ರಾಣಲಿಂಗ ಉದಯವಾಯಿತ್ತು. ಆ ಪ್ರಾಣಲಿಂಗದಿಂದ ಇಷ್ಟಲಿಂಗ ಉದಯವಾಯಿತ್ತು. ಆ ಇಷ್ಟಲಿಂಗಕ್ಕೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಅರ್ಪಿಸಬಲ್ಲಾತನೆ ನಿಮ್ಮ ಸದ್ಭಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಂಚಮುಖದ ಸರ್ಪನ ತಲೆಯ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದ ಪ್ರಭೆಯಲ್ಲಿ ನಾನು ನೀನೆಂಬುದ ಮರೆದು ಸ್ವಾನುಭಾವ ಸಿದ್ಧಾಂತವನಳವಟ್ಟು ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು, ಆಕಾಶ ಆತ್ಮವಿಲ್ಲದಂದು, ರವಿ ಶಶಿಗಳಿಲ್ಲದಂದು, ಸಪ್ತೇಳುಸಾಗರವಿಲ್ಲದಂದು, ಅಷ್ಟಕುಲಪರ್ವತಂಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿಶ್ಚಿಂತ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಆಕಾಶದ ಮೇಲೆ ಏಕಾಂತಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಏಕೋಮನೋಹರನೆಂಬ ಪೂಜಾರಿಯು ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದುದ ಕಂಡೆ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಿಂಡ ಬ್ರಹ್ಮಾಂಡಕೆ ನಿವಾಸವಾದ ಅಪರಂಪರಲಿಂಗದಲ್ಲಿ ಮಹಾಸುಖಿಯಾಗಿರ್ದೆನು ನೋಡಾ ಝೇಂಕಾರ ನಿಜಲಿಂಗಪ್ರಭುವೆ. || 59 ||
--------------
ಜಕ್ಕಣಯ್ಯ
ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು, ಆಕಾಶ ಆತ್ಮನಿಲ್ಲದಂದು, ರವಿ ಶಶಿಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಓಂ ನಮಃ ಶಿವಾಯವೆಂಬ ಮಂತ್ರಗಳಿಲ್ಲದಂದು, ಅತ್ತತ್ತಲೆ, ನಿಃಶೂನ್ಯನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಥಮಕಾಲದಲ್ಲಿ ಅನಾದಿ ಜಂಗಮವು ಸಾವಿರೆಸಳಮಂಟಪದಲ್ಲಿ ನಿಂದು, ವಿಶ್ವತೋಮುಖವಾಗಿ ತೋರುತಿಪ್ಪನು ನೋಡಾ! ಆ ಜಂಗಮದ ಚಿದ್ವಿಲಾಸದಿಂದ, ಭಕ್ತಾಂಗನೆ ಉದಯವಾದಳು ನೋಡಾ! ಆ ಭಕ್ತಾಂಗನೆಯು ಒಂದಗಲನಿಡಲೊಡನೆ ಆ ಜಂಗಮ ಉಂಡು ಒಕ್ಕುದ ನಾನುಂಡು ಮಹಾಧನ್ಯನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಂಚತತ್ವದ ಮೇಲೆ ನಿತ್ಯಪರತತ್ವವ ಕಂಡು ನಿರ್ಲೇಪಕನಾದ ಶರಣನು ಕಾಲನ ಬಾಧೆಗಳ ನೀಗಿ, ಸೀಮೆಯ ದಾಂಟಿ, ನಿಸ್ಸೀಮನಾಗಿರ್ದು, ಕೇವಲ ಸ್ವಯಂಜ್ಯೋತಿಯಲ್ಲಿ ಕೂಡಿ ತಾನು ತಾನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಅಪು ತೇಜ ವಾಯು ಆಕಾಶದಿಂದತ್ತತ್ತ ಮಹಾಲಿಂಗದ ಬೆಳಗು. ಆ ಬೆಳಗಿನೊಳಗೆ ನಾನು ನೀನೆಂಬುದ ಮರೆದು, ಅವಿರಳ ಸ್ವಾನುಭಾವಸಿದ್ಧಾಂತವನರಿತು, ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮಗಳು ಇಲ್ಲದಂದು, ಅತ್ತತ್ತಲೆ ನಿರಾಮಯಲಿಂಗವು ತಾನೇ ನೋಡಾ. ಆ ಲಿಂಗವು ಮನೋತೀತ, ವಾಚಾತೀತ, ಭಾವಾತೀತ, ಉಪಮಾತೀತ, ನಿಃಕಲಾತೀತ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಂಚಮುಖದ ಮೇಲೆ ಮಿಂಚುವ ಶಿವಲಿಂಗವ ಕಂಡೆನಯ್ಯ. ಆ ಲಿಂಗದಂಚಿನ ಬೆಳಗಿನೊಳಗೆ ಸುಳಿದಾಡುವ ಸತಿಯಳು ತನ್ನ ಸುಳುವಿನ ಭೇದವ ತಾನೆ ನುಂಗಿ ನಿರ್ವಯಲಾದುದ ಕಂಡೆ ನೋಡಾ, ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಥಮಕಾಲದಲ್ಲಿ ನಿರವಯನೆಂಬ ಸತಿಯಳಂಗದಲ್ಲಿ ಒಬ್ಬ ಬಾಲಕ ಹುಟ್ಟಿ ಮೂವತ್ತಾರು ಕೇರಿಯ ನೋಡಿ, ಒಂಬತ್ತು ಬಾಗಿಲ ಸುತ್ತಿ, ಕಡೆಯ ಬಾಗಿಲಲ್ಲಿ ನಿಂದು ತನ್ನ ಸುಳುವ ತಾನೇ ನುಂಗಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿಯೊಳಗಣ ಬಾಲಿಂಗೆ ಇಪ್ಪತ್ತೈದು ಯುವತೇರು ವಿಶ್ವಾಸವಂ ಮಾಡುತಿಪ್ಪರು ನೋಡಾ ! ಅವರಿಂಗೆ ಹತ್ತೆಂಟು ಮುಖದೋರಿ ಈ ಜಗವನೆಲ್ಲಾ ಏಡಿಸ್ಯಾಡುತಿರ್ಪರು ನೋಡಾ ! ಆದಿಯಲ್ಲಿ ಒಬ್ಬ ದೇವ ಬಂದು, ಹತ್ತೆಂಟು ಮುಖವ ಕೊಯ್ಯಲು, ಇಪ್ಪತ್ತೈದು ಯುವತೇರು ಬಿಟ್ಟು ಹೋದರು ನೋಡಾ ! ಆ ಪೃಥ್ವಿಯೊಳಗಣ ಬಾಲೆಯ ಹಿಡಿದು ಪೃಥ್ವಿಂಗೆ ವರಿಸಿ ಭೂಮಂಡಲದೇವನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಿಂಡಬ್ರಹ್ಮಾಂಡವ ಗರ್ಭೀಕರಿಸಿಕೊಂಡು ಒಳಹೊರಗೆ ಪರಿಪೂರ್ಣವಾಗಿ, ಅಖಂಡತೇಜೋಮಯವಾಗಿಪ್ಪ ನೋಡಾ. ತನ್ನೊಡನೆ ಒಬ್ಬ ಭಾಮಿನಿಯು ಪುಟ್ಟಿದಳು. ಆ ಭಾಮಿನಿಯ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ, ಅವರ ಸಂಗವ ಮಾಡಿ, ನಿಶ್ಚಿಂತ ನಿರಾಕುಳದಲ್ಲಿ ನಿಂದು, ನಿರ್ವಯಲಲಿಂಗವನಾಚರಿಸುತಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಐದು ಮನೆಯಲ್ಲಿ ಒಬ್ಬ ಸತಿಯಳು ನಿಂದು, ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಅತ್ತತ್ತಲೆ ಪರಕೆಪರವಾಗಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಸಾದ ಪ್ರಸಾದವೆಂದು ಹೆಸರಿಟ್ಟುಕೊಂಡು ನುಡಿವಿರಿ, ಪ್ರಸಾದವಾವುದು ಹೇಳಿರೋ, ಅರಿಯದಿದ್ದರೆ ನೀವು ಕೇಳಿರೋ. ಅದು ಹೇಗೆಂದಡೆ: ಸಾವಿರ ಕಂಬದ ಮಂಟಪದಲ್ಲಿ ಅನಾದಿಯ ಜಂಗಮವಿಪ್ಪುದು ನೋಡಾ ಆ ಜಂಗಮದಲ್ಲಿ ಮನಪವನಾದಿಗಳ ನಿಲಿಸಿ ತಲೆವೋಡಿನಲ್ಲಿ ಹೊತ್ತಿಪ್ಪ ಪರಮಪ್ರಸಾದವ ಸ್ವೀಕರಿಸಬಲ್ಲಡೆ ಆತನೆ ನಿರಂಜನ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮರೆಂಬ ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ನಿಶ್ಚೈಸಬಲ್ಲಾತನೆ ನಿಮ್ಮ ಪ್ರಮಥನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಥಮ ಕಾಲದಲ್ಲಿ ಒಬ್ಬ ಶಿವಶರಣನಿಪ್ಪ ನೋಡಾ. ಆ ಶಿವಶರಣನ ಅಂತರಂಗದಲ್ಲಿ ಮೂವರು ಕಂಡಿಕಾರರು ಇಪ್ಪರು ನೋಡಾ. ಆರುಮಂದಿ ಪೂಜಾರಿಗಳು, ಆರುಲಿಂಗಾರ್ಚನೆಯ ಮಾಡುತಿಪ್ಪರು ನೋಡಾ. ಏಕೋಭಾಮಿನಿಯೆಂಬ ಸತಿಯಳು ನವರತ್ನದ ಹರಿವಾಣಂಗಳಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ, ಓಂ ನಮೋ ಓಂ ನಮೋ ಓಂ ನಮೋ ಎಂದು ಬೆಳಗುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೂರ್ವದಲ್ಲಿ ಓಂಕಾರವೆಂಬ ಲಿಂಗದ ಸಂಗದಿಂದ ಪ್ರಣವವೆ ಆದಿಯಾಯಿತ್ತು ನೋಡಾ. ಆ ಆದಿಯ ಸಂಗದಿಂದ ಒಬ್ಬ ಶಿವನಾದ. ಆ ಶಿವನ ಸಂಗದಿಂದ ಈಶ್ವರನಾದ. ಆ ಈಶ್ವರನ ಸಂಗದಿಂದ ರುದ್ರನಾದ. ಆ ರುದ್ರನ ಸಂಗದಿಂದ ವಿಷ್ಣುವಾದ. ಆ ವಿಷ್ಣುವಿನ ಸಂಗದಿಂದ ಬ್ರಹ್ಮನಾದ. ಬ್ರಹ್ಮಂಗೆ ಸರಸ್ವತಿಯಾದಳು, ವಿಷ್ಣುವಿಂಗೆ ಲಕ್ಷ್ಮಿಯಾದಳು, ರುದ್ರಂಗೆ ಕ್ರಿಯಾಶಕ್ತಿಯಾದಳು, ಈಶ್ವರಂಗೆ ಸ್ವಯಂಭೂಶಕ್ತಿಯಾದಳು, ಸದಾಶಿವಂಗೆ ಜ್ಞಾನಶಕ್ತಿಯಾದಳು. ಈ ಐವರ ಸಂಗದಿಂದ ನರರು ಸುರರು ದೇವಾದಿದೇವರ್ಕಳು ಕಿನ್ನರಕಿಂಪುರುಷರು ಗರುಡಗಂಧರ್ವರು ಹುಟ್ಟಿದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಣವಪಂಚಾಕ್ಷರಿಯೆಂಬ ಕೊನೆಯ ಮೇಲೆ ಅಣಿಮಾಯಾಲಿಂಗವು ಸರ್ವ ಬ್ರಹ್ಮಾಂಡವ ಗರ್ಭೀಕರಿಸಿಕೊಂಡು ತನ್ನ ನಿಜವ ತಾನೇ ತೋರುತ್ತಿತ್ತು ನೋಡಾ ! ಆ ನಿಜವ ಈ ಲೋಕದವರು ಆರಾದಡೆಯು ಅರಿಯಬಲ್ಲರೇನಯ್ಯ ? ಬ್ರಹ್ಮ ವಿಷ್ಣು ರುದ್ರಾದಿಗಳಿಗೆ ಅಗೋಚರವೆನಿಸಿತ್ತು ನೋಡಾ. ಇದು ಕಾರಣ ಅಂಗಕರಣವನಳಿದು ಲಿಂಗಕಿರಣವಾದ ಶರಣನು ಆ ನೆನವನರಿಯಬಲ್ಲನಯ್ಯ; ಸರ್ವ ಬ್ರಹ್ಮಾಂಡವ ನೋಡಬಲ್ಲನಯ್ಯ; ಅಣಿಮಾಯಾಲಿಂಗವ ಕೂಡಬಲ್ಲನಯ್ಯ, ಝೇಂಕಾರ ನಿಜಲಿಂಗಪ್ರಭುವೆ, ನಿಮ್ಮ ಶಿವಶರಣನು.
--------------
ಜಕ್ಕಣಯ್ಯ
ಪರತತ್ವದಲ್ಲಿ ಬೆರಸಿಪ್ಪ ಭೇದವನು ಸಹಜ ಸಮ್ಯಕ್‍ಜ್ಞಾನದಿಂದ ತಿಳಿದು, ನಿರಂಜನದೇಶಕೆ ಹೋಗಿ, ನಿರಪೇಕ್ಷಲಿಂಗದಲ್ಲಿ ಕೂಡಿ ನಿಃಸಂಗ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪರಮಾನಂದಪ್ರಭೆಯೊಳಗೆ ಸುಜ್ಞಾನ ಮಹಾಜ್ಞಾನವೆಂಬ ಸತಿ ಪುರುಷರು ಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು ಶಿಖಾಚಕ್ರವೆಂಬ ಮೇಲುಪ್ಪುರಿಗೆಯಂ ತೆಗೆದು ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯಂ ಕೂಡಿ, ನಿರವಯವೆಂಬ ಕರಸ್ಥಲದ ಮೇಲೆ ಝೇಂಕಾರವೆಂಬ ಲಿಂಗವು ಪೂಜೆಗೊಂಬುವುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸೂರ್ಯ ಚಂದ್ರ ಆತ್ಮರೆಂಬ ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡು ಬಟ್ಟಬಯಲಲಿಂಗವನಾಚರಿಸುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪರಶಿವತತ್ವದಿಂದ ಪರಮಜ್ಞಾನಿಯಾಗಿ, ಆ ಪರಾಪರಜ್ಞಾನದಿಂದ ಅಗಮ್ಯ ಅಗೋಚರ ಅಪ್ರಮಾಣ ನಿಶ್ಚಿಂತ ನಿರಾಕುಳ ನಿರ್ಭರಿತನಾದ ಸೋಜಿಗವ ನೋಡಾ. ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಿಂದತ್ತತ್ತ ನಿರಾಲಂಬಲಿಂಗವಿಪ್ಪುದು ನೋಡಾ! ಆ ಲಿಂಗದಲ್ಲಿ ಕೂಡಿ, ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾದ ಶರಣನ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...