ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹರಿತವರ್ಣದ ಮರಕ್ಕೆ ಶ್ವೇತವರ್ಣದ ಕೊಂಬೆಗಳು ಹುಟ್ಟಿದವು ನೋಡಾ! ಆ ಕೊಂಬೆಗೆ ಸ್ಫಟಿಕವರ್ಣದ ಕಡ್ಡಿಗಳಿಪ್ಪವು ನೋಡಾ ! ಅವಕ್ಕೆ ಸಾಸಿರದಳ ಎಲೆಗಳು ಹತ್ತಿಪ್ಪವು ನೋಡಾ ! ತುಟ್ಟತುದಿಯಲೊಂದು ಬಟ್ಟಬಯಲ ಹಣ್ಣಾಗಿಪ್ಪುದು ನೋಡಾ ! ಆ ಹಣ್ಣಿನ ಬೆಳಗಿನೊಳಗೆ ಐಕ್ಯಗಣಂಗಳು, ಶರಣಗಣಂಗಳು, ಪ್ರಾಣಲಿಂಗಿಗಣಂಗಳು, ಪ್ರಸಾದಿಗಣಂಗಳು, ಮಹೇಶ್ವರಗಣಂಗಳು, ಭಕ್ತಗಣಂಗಳು ತಿಂಥಿಣಿಯಾಗಿಪ್ಪರಯ್ಯ ಆ ಬೆಳಗಿನೊಳು ಕೂಡಿ ನಿಃಪ್ರಿಯವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃದಯದಲ್ಲಿಪ್ಪ ಪ್ರಾಣಲಿಂಗವನು ನಿಟಿಲಭ್ರೂಮಧ್ಯದಲ್ಲಿ ತಂದು, ನಾದ ಬಿಂದು ಕಲೆಯನೊಳಕೊಂಡು, ಪರಬ್ರಹ್ಮಲಿಂಗದಲ್ಲಿ ಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಮನವ ನಿಲಿಸಬಲ್ಲ ಶರಣನ ಅಂತರಂಗದಲ್ಲಿ ಪರಬ್ರಹ್ಮಲಿಂಗವಿರ್ಪುದು ನೋಡಾ. ಆ ಲಿಂಗದಲ್ಲಿ ತನ್ನ ಮರೆದು ಇರಬಲ್ಲ ಹಿರಿಯರ ಎನಗೊಮ್ಮೆ ತೋರಿಸಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃದಯದಲ್ಲಿಪ್ಪ ಅಂಜನವ ತೆಗೆದು ನಿರಂಜನವೆಂಬ ಜ್ಯೋತಿಯ ಮುಟ್ಟಿಸಲು ಆ ಜ್ಯೋತಿಯ ಬೆಳಗಿನೊಳಗೆ ಸರ್ವ ಬ್ರಹ್ಮಾಂಡಂಗಳಡಗಿಪ್ಪ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹುಟ್ಟುವ ಕರಣಂಗಳ ಮುರಿದು, ತಟ್ಟುಮುಟ್ಟುಗಳಿಗೆ ಸಿಲ್ಕದೆ, ಬಟ್ಟಬಯಲ ಘಟ್ಟಿಗೊಳಿಸಿದ ಶರಣಂಗೆ ಇಹಲೋಕವೆಂದಡೇನಯ್ಯ? ಪರಲೋಕವೆಂದಡೇನಯ್ಯ? ಇಹಪರಕೆ ಸಿಲ್ಕದೆ ನಿಶ್ಚಿಂತ ನಿರಾಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹತ್ತು ಮುಖದಲ್ಲಿ ಕಾಡುವ ದಶಯಿಂದ್ರಿಯಗಳಿಗೆ ಮುಖಗೊಡದೆ ನಿತ್ಯವಾದ ಲಿಂಗದಲ್ಲಿ ಕೂಡಿ, ನಾನು ನೀನೆಂಬುದ ಮರೆದು ತಾನು ತಾನಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃದಯಕಮಲದಲ್ಲಿಪ್ಪ ಲಿಂಗವ ಸುಮನಜ್ಞಾನದಿಂದ ತಿಳಿದು, ಅವಿರಳಸ್ವಾನುಭವಸಿದ್ಧಾಂತವನರಿತು, ಪ್ರಕಾಶಿಸಿಕೊಂಡು, ತಾನುತಾನಾಗಿರ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹತ್ತುಕಡೆಗೆ ಹರಿದಾಡುವ ಕರಣಂಗಳಿಗೆ ಮುಖಗೊಡದೆ ಚಿತ್ತದಿಂದ ಪ್ರಾಣಲಿಂಗಸಂಬಂಧಿಯಾಗಿ, ಸತ್‍ವಿಡಿದು ಮಹಾಲಿಂಗದೊಳು ಕೂಡಿ, ಅತ್ತತ್ತಲೆ ಪರಿಪೂರ್ಣನಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಕರಣಂಗಳಿಗೆ ಮುಖಗೊಡದೆ ಮೇಲುಗಿರಿಯ ಶಿಖರವ ಪೊಕ್ಕು ಲೋಲಾಡುವ ಮಹಾಶರಣನ ಕಂಡು, ಧನ್ಯನಾದೆ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃದಯದೊಳಗಿಪ್ಪ ಪ್ರಾಣಲಿಂಗವನು ತ್ರಿಕೂಟದಲ್ಲಿ ತಂದು, ಮಹಾಲಿಂಗದೊಳು ಸಮರಸವ ಮಾಡಿ ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೊಲೆಹದಿನೆಂಟುಜಾತಿ ನೂರೊಂದು ಕುಲದಲ್ಲಿ ಆರಾದರೂ ಆಗಲಿ ಗುರುವಿರ್ದು ಲಿಂಗವಿರ್ದು ಜಂಗಮವಿರ್ದು ಪಾದೋದಕ ಪ್ರಸಾದವಿರ್ದು ಶಿವಾಚಾರವಿರ್ದಲ್ಲಿ ಶಿವಾರ್ಪಣವ ಮಾಡಬಹುದಯ್ಯಾ. ದೇವರಾಗಲಿ ಭಕ್ತರಾಗಲಿ ಅವರ ಕುಲವನರಸಿ ಶಿವಾರ್ಪಣವ ಮಾಡಬಾರದೆಂದು ಸೂತಕವ ಮಾಡಿದರೆ ಅವರು ರೌರವ ನರಕದೊಳು ಬೀಳುವರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಗಲಾರುದಿನವೆಂಬುದ ನೀನೇ ಬಲ್ಲೆಯಯ್ಯಾ, ಇರುಳು ಮೂರುದಿನವೆಂಬುದ ನೀನೇ ಬಲ್ಲೆಯಯ್ಯಾ. ಹಗಲಾರುದಿನವಿಲ್ಲದೆ ಇರುಳು ಮೂರು ದಿನವಿಲ್ಲದೆ ಹಗಲಿರುಳನೊಳಕೊಂಡು, ತಾನು ತಾನಾಗಿರ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃದಯದೊಳಗಿಪ್ಪ ಪ್ರಾಣಲಿಂಗವನು ಸದಮಲ ಬೆಳಗಿನೊಳು ತಂದು ಅನಾದಿಯಲ್ಲಿ ನಿಂದು ಸಾಧಿಸಿ ಭೇದಿಸಿ ತಾನುತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃತ್ಕಮಲದಲ್ಲಿ ನೆಲೆಸಿಪ್ಪ ಪ್ರಾಣಲಿಂಗವನು ಸ್ವಯಜ್ಞಾನದಿಂದ ತಿಳಿದು, ಅವಿರಳ ಸ್ವಾನುಭಾವಸಿದ್ಧಾಂತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಬಣ್ಣದ ಪಕ್ಷಿಯ ಒಂದು ಮಂಡೂಕ ನುಂಗಿ ಕೂಗುತಿದೆ ನೋಡಾ. ಆ ಕೂಗಿನ ಶಬ್ದವ ಕೇಳಿ ಪಂಚಮುಖದ ಸರ್ಪನೆದ್ದು, ಆ ಮಂಡೂಕನ ನುಂಗಿ, ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃದಯದಲ್ಲಿಪ್ಪ ಪ್ರಾಣಕ್ಕೆ ವಾಯುವೇ ಆಧಾರ. ಆ ವಾಯುವಿಗೆ ಪ್ರಾಣವೇ ಆಧಾರ, ಈ ಪರಿಯಿಂದ ರೇಚಕ ಪೂರಕಂಗಳಿಂದ ನಡೆವುತಿಪ್ಪುದು ನೋಡಾ. ಆ ರೇಚಕ ಪೂರಕಂಗಳ ಸುಷುಮ್ನನಾಳಕೆ ತಂದು, ಪರಕೆಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೊನ್ನು ಹೆಣ್ಣು ಮಣ್ಣು ಬಿಟ್ಟು ಸರ್ವಸಂಗವ ಪರಿತ್ಯಾಗವಂ ಮಾಡಿ ನಿಂದ ನಿಃಕಲಂಗೆ ಪೂರ್ವಾಶ್ರಯ ಉಂಟೇನಯ್ಯ? ಆ ನಿಃಕಲತ್ವವನಳಿದು, ಮರಳಿ ಹೊನ್ನ ಹಿಡಿಯಲಾಗದು, ಮರಳಿ ಹೆಣ್ಣ ಹಿಡಿಯಲಾಗದು, ಮರಳಿ ಮಣ್ಣ ಹಿಡಿಯಲಾಗದು. ಇಂತೀ ತ್ರಿವಿಧಗುಣಗಳಿಗೆ ಸಿಲ್ಕಿ, ಬಯಲಾಶ್ರಯದಲ್ಲಿ ಬಯಲಾಟವ ಹೂಡಿ ಬಯಲನಿಬ್ಬೆರಗನೈದಿ ಹೋಗುವ ಮಹೇಶ್ವರನ ಪಾದೋದಕ ಪ್ರಸಾದವ ಭೇದಿಸಿ ಕೊಂಬ ಭಕ್ತನ ದೃಢವೆಂತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಮನವ ನಿಲಿಸಿ, ಪ್ರಾಣಲಿಂಗಸಂಬಂಧಿಯಾಗಿರ್ದನಯ್ಯ ನಿಮ್ಮ ಶರಣನು. ಆ ಶರಣನು ನಿರಾಕುಳಲಿಂಗವನಾಚರಿಸಿ ನಿರ್ಭರಿತನಾಗಿರ್ದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೊರಗೆ ನೋಡಿದರೆ ಬಯಲು, ಒಳಗೆ ನೋಡಿದರೆ ಬಯಲು, ಊರೊಳಗೆ ಆವು ಇಲ್ಲ, ಕೇರಿಯೊಳಗೆ ಕರುವು ಇಲ್ಲ. ಊರು ಕೇರಿಗಳ ನುಂಗಿತ್ತು ಒಂದು ಇರುಹೆ. ಇರುಹೆ ಹೋಯಿತ್ತು ತಾನು ತಾನಾದಲ್ಲಿಗೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃದಯದೊಳಗಿರ್ಪ ಪ್ರಾಣಲಿಂಗವನರಿತು, ತ್ರಿಕೂಟದಲ್ಲಿ ನಿಂದು, ಬ್ರಹ್ಮಚಕ್ರ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ನಿಂದು, ನಿರಂಜನಜ್ಯೋತಿಯ ಕೂಡಿ, ನಿಶ್ಚಿಂತ ನಿರಾಳಲಿಂಗವ ಬಯಸುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹೃತ್ಕಮಲದಲ್ಲಿಪ್ಪ ಜಂಗಮವು ನಿತ್ಯನಿಜದಲ್ಲಿ ನಿಂದು, ಅನಂತಕೋಟಿ ಸೋಮಸೂರ್ಯರ ಬೆಳಗನೊಳಕೊಂಡು ತಾನು ತಾನಾದುದ ತಾನೆ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಬಣ್ಣದಲ್ಲಿ ಒಬ್ಬ ಕಾಲಗಿತ್ತಿಯು ಸುತ್ತಿ ಸುತ್ತಿ ಬರುತಿಪ್ಪಳು ನೋಡಾ. ಇದು ಕಾರಣ, ಆ ಕಾಲಗಿತ್ತಿಯ ಹಿಡಿದು ಹಲವು ಬಣ್ಣವ ಕೆಡಿಸಿ, ಏಕಾಗ್ರದಲ್ಲಿ ನಿಂದು ಪರಕೆಪರವಶವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಮನವ ಏಕಾಗ್ರದಲ್ಲಿ ನಿಲಿಸಿ ಸಾಕಾರವಿಡಿದು ಪರಬ್ರಹ್ಮವ ಕೂಡಿ ನಿಃಪ್ರಿಯವಾದ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿವ ಮನವ ಚಿತ್ತದಲ್ಲಿ ನಿಲಿಸಿ, ಆ ಚಿತ್ತವ ನಿಶ್ಚಿಂತದಲ್ಲಿ ಕರಗಿಸಿ, ನಿರಾಕುಳಲಿಂಗವನಾಚರಿಸುವ ಸ್ವಯಜ್ಞಾನಿಗೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಹೊಲೆಮನವ ನಿಲಿಸಿ, ಏಕದಲ್ಲಿ ನಿಂದು, ಸದ್ಗುಣಸಂಪನ್ನನಾಗಿ, ನಿರ್ವಿಕಲ್ಪ ನಿತ್ಯನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...