ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗದ ಭೇದವನರಿಯದೆ ಪ್ರಾಣಲಿಂಗದ ಭೇದವ ಬಲ್ಲೆನೆಂಬ ಭ್ರಷ್ಟಾಚಾರಿಗಳು ನೀವು ಕೇಳಿರೋ. ಇಷ್ಟಲಿಂಗದ ಕಳಾಭೇದವನರಿತು, ಪ್ರಾಣಲಿಂಗಸಂಬಂದ್ಥಿಯಾಗಿ, ದೃಷ್ಟಲಿಂಗವ ಕಾಣಬಲ್ಲಾತನೆ ಅನಾದಿ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗವಿಡಿದು ಕಾಯ ಶುದ್ಧವಾಯಿತ್ತಯ್ಯ. ಪ್ರಾಣಲಿಂಗವಿಡಿದು ಮನ ಶುದ್ಧವಾಯಿತ್ತಯ್ಯ. ಭಾವಲಿಂಗವಿಡಿದು ಚಿತ್ತ ಶುದ್ಧವಾಯಿತ್ತಯ್ಯ. ಹೀಂಗೆ ಮುಮ್ಮಯ್ಯ ಸಿರಿವಂತನಾಗಿ ನಿಶ್ಚಿಂತ ನಿರಾಕುಳಲಿಂಗವನಾಚರಿಸುತಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ಕಂಬದ ಶಿವಾಲಯದೊಳಗೆ ಒಬ್ಬ ಅಂಗನೆ, ಹದಿನೆಂಟು ಕೇರಿಗಳಲ್ಲಿ ಸುಳಿದಾಡುತಿರ್ಪಳು ನೋಡಾ, ಮೇಲಣ ದಾರಿಯಲ್ಲಿ ಒಬ್ಬ ಕುಂಟಣಗಿತ್ತಿಯು ಬಂದು ಆ ಅಂಗನೆಯ ಕೈಹಿಡಿದು ಹದಿನೆಂಟು ಕೇರಿಗಳ ಕೆಡಿಸಿ ಇಪ್ಪತ್ತೈದು ಕಂಬದ ಶಿವಾಲಯವ ಮೀರಿ ನಿಶ್ಚಿಂತ ನಿರಾಳಲಿಂಗದಲ್ಲಿ ಬೆರೆದಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ನೆಲೆಯ ಮೇಲೆ ಸುಪ್ಪಾಣಿಯ ಕಂಡೆನಯ್ಯ. ಆ ಸುಪ್ಪಾಣಿಯ ಸಂಗದಿಂದ ಕೂಗುವ ಕಪ್ಪೆಯ ಕಂಡೆನಯ್ಯ. ಆ ಕೂಗುವ ಕಪ್ಪೆ ಸರ್ಪನ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇರುವೆಯ ಮಸ್ತಕದ ಮೇಲೆ ಇರುತಿಪ್ಪ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಅಘಟಿತಲಿಂಗವಿಪ್ಪುದು ನೋಡಾ. ಆ ಲಿಂಗದ ಕಿರಣದೊಳಗೆ ರಾಜಬೀದಿಯ ಕಂಡೆನಯ್ಯ. ಆ ರಾಜಬೀದಿಯಲ್ಲಿ ಒಬ್ಬ ಪುರುಷನು ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ, ಅಘಟಿತ ಲಿಂಗಾರ್ಚನೆಯ ಮಾಡುತಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇರುಳು ಹಗಲೆಂಬೆರಡು ಮಹಾಘನಲಿಂಗದೊಳಡಗಿ ಗರ್ಭಗತವಾಗಿಪ್ಪವು ನೋಡಾ. ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ಐವರ ಕೂಡಿಕೊಂಡು, ಚಿದುಲಿಂಗಾರ್ಚನೆಯಂ ಮಾಡಿ ಚಿದ್ಘನಸ್ವರೂಪವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ದೇಗುಲದ ಮೇಲೆ ಒಂದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಒಬ್ಬ ಪೂಜಕನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ. ಆ ಪೂಜಕನ ಹಿಡಿದು ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗದಲ್ಲಿ ಗುರುವಿಡಿದು, ಪ್ರಾಣಲಿಂಗದಲ್ಲಿ ಲಿಂಗವಿಡಿದು, ಭಾವಲಿಂಗದಲ್ಲಿ ಜಂಗಮವಿಡಿದು ಪರಮಪ್ರಸಾದವ ಸ್ವೀಕರಿಸಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ಶಿವಾಲಯದ ಮೇಲೆ ಸುತ್ತಿಕೊಂಡಿಪ್ಪ ಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಮೂವರು ಪೂಜಾರಿಗಳಿಪ್ಪರು ನೋಡಾ. ಆ ಪೂಜಾರಿಗಳು ಆರು ದೇಶವ ಪೊಕ್ಕು, ಭಕ್ತಾಂಗನೆಯ ಸಂಗವ ಮಾಡಿ, ಮುಕ್ತಿಸಾಮ್ರಾಜ್ಯಕೆ ಹೋಗಿ ನಿರ್ವಿಕಲ್ಪ ನಿತ್ಯಾತ್ಮಕರಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ಗ್ರಾಮದ ಮೇಲೆ ಸುಳಿದಾಡುವ ಪುಷ್ಪದತ್ತನ ಕಂಡೆನಯ್ಯ. ಆ ಪುಷ್ಪದತ್ತನ ಕರಕಮಲದಲ್ಲಿ ಸಾವಿರೆಸಳ ಪುಷ್ಪವಿಪ್ಪುದು ನೋಡಾ. ಆ ಪುಷ್ಪದ ಪರಿಮಳವ ಅರುಹುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ದೇಶದ ಮೇಲೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳು ಸಾವಿರೆಸಳ ಮಂಟಪವ ಪೊಕ್ಕು ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ. ಏಕೋಮನೋಹರನೆಂಬ ಪೂಜಾರಿಯು ಆ ಸತಿಯಳ ಕೈವಿಡಿದು ಆ ಲಿಂಗದಲ್ಲಿ ನಿಃಪ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗದಲ್ಲಿ ಶುದ್ಧವಾಗಿ, ಪ್ರಾಣಲಿಂಗದಲ್ಲಿ ಸಿದ್ಧವಾಗಿ, ಭಾವಲಿಂಗದಲ್ಲಿ ಪ್ರಸಿದ್ಧವಾಗಿ ಇರಬಲ್ಲಾತನೆ ನಿರ್ಮಲಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇರುಳು ಹಗಲುಗಳೆಂಬ ಸಂದೇಹಗಳನಳಿದು ನಿಂದು ನಿರುತನಿರಂಜನಲಿಂಗದೊಳು ಕೂಡಿ ಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇರುಳು ಹಗಲ ನುಂಗಿ, ಹಗಲು ಇರುಳ ನುಂಗಿ, ಇರುಳು ಹಗಲಿಲ್ಲದೆ ಪರವಶದಲ್ಲಿ ನಿಂದು ಪರಕ್ಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗವಿಡಿದು ಗುರುಪ್ರಸಾದವ ಕಂಡೆನಯ್ಯ. ಪ್ರಾಣಲಿಂಗವಿಡಿದು ಲಿಂಗಪ್ರಸಾದವ ಕಂಡೆನಯ್ಯ. ಭಾವಲಿಂಗವಿಡಿದು ಜಂಗಮಪ್ರಸಾದವ ಕಂಡೆನಯ್ಯ. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಂಗಳಲ್ಲಿ ಒಳಹೊರಗೆ ಪರಿಪೂರ್ಣವಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗವು ಪ್ರಾಣಲಿಂಗದಲ್ಲಿ ಅಡಗಿ ಭಾವಲಿಂಗವಾಯಿತ್ತಯ್ಯ. ಆ ಭಾವಲಿಂಗವು ಪರಬ್ರಹ್ಮದಲ್ಲಿ ಅಡಗಿ ನಿರ್ವಯಲಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗದ ಭೇದವನರಿತು ಪ್ರಾಣಲಿಂಗದಲ್ಲಿ ಕೂಡಿ ಭಾವಲಿಂಗದಲ್ಲಿ ನಿಂದು ಪರಕೆಪರವಾದ ಲಿಂಗವನಾಚರಿಸುತಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇರುವೆಯ ಒಡಲಲ್ಲಿ ಐವರು ಹುಟ್ಟಿದುದ ಕಂಡೆನಯ್ಯ. ಆ ಐವರು ಮೇರುವೆಯ ಗುಡಿಯ ಹತ್ತಿ ಇರುವೆಯ ಒಡಲ ಹರಿದು ನಿರವಯದಲ್ಲಿ ಅಡಗಿದ್ದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ತಲೆಯ ಮೇಲೆ ಸುಳಿದಾಡುತಿಪ್ಪ ನಿರ್ವಾಣಿಯ ಕಂಡೆನಯ್ಯ. ಆ ನಿರ್ವಾಣಿಯ ಕರಕಮಲದಲ್ಲಿ ನಿರಪೇಕ್ಷಲಿಂಗವಿಪ್ಪುದು ನೋಡಾ. ಆ ಲಿಂಗದಲ್ಲಿ ತನ್ನ ಮರೆದು, ನಿರವಯಸ್ಥಲವನೈದಬಲ್ಲಾತನೆ ನಿಮ್ಮ ನಿರಂಜನಗಣೇಶ್ವರ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು ಮಹಾಜ್ಞಾನದೃಷ್ಟಿಯೊಳು ನಿಂದು ಪರಕೆಪರವಾದ ಲಿಂಗವನಾಚರಿಸುವ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗದ ಕಳಾಭೇದವನರಿತು, ಪ್ರಾಣಲಿಂಗದಲ್ಲಿ ಕೂಡಿ, ಭಾವಲಿಂಗದಲ್ಲಿ ಬೆರಗಾಗಿ ಪರಬ್ರಹ್ಮವನಾಚರಿಸಬಲ್ಲಾತನೆ ನಿಮ್ಮ ಶರಣ ನೋಡಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು ಪರಬ್ರಹ್ಮಲಿಂಗವನಾಚರಿಸಬಲ್ಲಾತನೆ ನಿರ್ಮುಕ್ತಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ಗ್ರಾಮದ ಮುಂದೆ ಒಂದು ಗುಡಿಯ ಲಿಂಗವ ಕಂಡೆನಯ್ಯ. ಐವರು ಮುತ್ತೈದೆಯರು ಲಿಂಗಾರ್ಚನೆಯ ಮಾಡುತಿರ್ಪರು ನೋಡಾ ! ಮೇಲಿಂದ ಒಬ್ಬ ಪುರುಷನು ಐವರ ಕೂಡಿಕೊಂಡು ಆ ಪುರುಷನು ಲಿಂಗದೊಳಡಗಿ ನಿಃಪ್ರಿಯವಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು, ಇಷ್ಟಲಿಂಗಕ್ಕೆ ಗುರುವಾದನಯ್ಯ. ಪ್ರಾಣಲಿಂಗಕ್ಕೆ ಲಿಂಗವಾದನಯ್ಯ, ಭಾವಲಿಂಗಕ್ಕೆ ಜಂಗಮವಾದನಯ್ಯ. ನಿರ್ಭಾವಕ್ಕೆ ಪರಿಪೂರ್ಣವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ