ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾತುಮಥನಗಳಿಲ್ಲದೆ, ಜಾತಿಸೂತಕವಿಲ್ಲದೆ, ಶಿವಾತ್ಮಜ್ಞಾನದಿಂದ ಪಂಚಮುಖವನರಿತು ಪರಬ್ರಹ್ಮಲಿಂಗವನಾಚರಿಸಿ, ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಹಾಘನ ಅಪರಂಪರ ಅಗಮ್ಯ ಅಗೋಚರ ಅಪ್ರಮಾಣ ನಿಶ್ಚಿಂತ ನಿರಾಕುಳ ನಿರ್ಭರಿತ ನಿರಂಜನ ನಿರಪೇಕ್ಷ ನಿರಾಮಯ ನಿಃಶೂನ್ಯ ನಿರಾಧಾರ ನಿಷ್ಪತಿ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಲೋಕದ ಮೇಲೆ ಒಂದು ಪಕ್ಷಿ ಕುಳಿತು ಐವರ ಸಂಗವ ಮಾಡಿ, ಸಾವಿರೆಸಳ ಮಂಟಪಕ್ಕೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನ ಬುದ್ಧಿ ಚಿತ್ತ ಅಹಂಕಾರವೆಂಬ ಕರಣಚತುಷ್ಟಯಂಗಳ ನಿವೃತ್ತಿಯಂ ಮಾಡಿ, ಸುಜ್ಞಾನದೊಳು ನಿಂದು, ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನ ಪವನಾದಿಗಳ ತ್ರಿಕೂಟದಲ್ಲಿ ತಂದು ಬ್ರಹ್ಮರಂಧ್ರವೆಂಬ ಪೌಳಿಯ ಪೊಕ್ಕು ಶಿಖಾಚಕ್ರದಲ್ಲಿಪ್ಪ ಪರಮಪ್ರಸಾದವ ಸ್ವೀಕರಿಸಿ ನಿರಂಜನದೇಶಕೆ ಹೋಗಿ ನಿರ್ವಯಲಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಲೋಕದ ಮೇಲೆ ಒಂದು ಎರಳೆಯ ಕಂಡೆನಯ್ಯ. ಒಬ್ಬ ತಳವಾರನು ಅರಿವು ಎಂಬ ಬಿಲ್ಲ ಹಿಡಿದು ಕುರುಹೆಂಬ ಅಂಬ ತಕ್ಕೊಂಡು ಎಸೆದ. ಬೇಂಟೆಕಾರನ ಆ ಎರಳೆ ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಮುಖದ ಭಾಮಿನಿಯು ಆರುಮುಖದ ಪುರುಷನ ಸಂಗವ ಮಾಡುತಿರ್ಪಳು ನೋಡಾ. ಬೇರೊಂದು ಸ್ಥಲದಲ್ಲಿ ಒಬ್ಬ ಸತಿಯಳು ಭೇರಿನಾದವ ಕೇಳಿ ಪರಕೆಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಮೇರುವೆಯ ಮೇಲೆ ಮೀರಿ ತೋರುತಿತ್ತಯ್ಯ ಒಂದು ಲಿಂಗ. ಆ ಲಿಂಗದಲ್ಲಿಯೆ ಒಬ್ಬ ಪುರುಷನು ಐವರ ಕೂಡಿಕೊಂಡು ಆ ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂಲಪ್ರಣವದಲ್ಲಿ ಅಮೃತಸಾರಲಿಂಗವ ಕಂಡೆನಯ್ಯ! ಆ ಲಿಂಗದಲ್ಲಿ ಪರಿಪೂರ್ಣವಾದ ಶರಣನು ಅಖಂಡ ತೇಜೋಮಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾತು ಇಲ್ಲದ ಮನೆಯಲ್ಲಿ ಒಬ್ಬ ಸತಿಯಳು ಕುಳಿತು ನೀತಿಯ ಹೇಳುತಿರ್ಪಳು ನೋಡಾ. ಆ ನೀತಿಯ ಜ್ಞಾನವೆಂಬ ಪುರುಷ ಕೇಳಿ ಮೌನವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನವೆಂಬ ಕೋಗಿಲೆಯ ಮೇಲೆ ಘನವೆಂಬ ನಿಜವ ತೋರಿ ಅನುಕರಣವಿಲ್ಲದೆ ತಾನು ತಾನಾಗಿ ನಿಃಪ್ರಿಯವಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೇರುವೆಯೊಳಗಣ ಪುರುಷನು ಊರೊಳಗಣ ನಾರಿಯ ಕೈವಿಡುದು, ಆರು ಕೇರಿಯ ದಾಂಟಿ, ಮೂರು ಗ್ರಾಮವ ಮೀರಿ, ಪರಕೆ ಪರವಾದ ಲಿಂಗವನಾಚರಿಸಿ ನಿಶ್ಮಿಂತ ನಿರಾಕುಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೇಲೆ ಭಾಮಿನಿಯೊಳಗೆ ಮೂರು ರತ್ನವ ಕಂಡೆನು. ಆವಾವಲ್ಲಿ ಕಂಡೆನೆಂದರೆ: ಒಂದು ರತ್ನ ನಾದದಲ್ಲಿ ಕಂಡೆನು. ಒಂದು ರತ್ನ ಬಿಂದುವಿನಲ್ಲಿ ಕಂಡೆನು. ಒಂದು ರತ್ನ ಕಳೆಯಲ್ಲಿ ಕಂಡೆನು. ಆ ಭಾಮಿನಿಯ ನಿರ್ವಯಲಲ್ಲಿ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ದಾರಿಯಲ್ಲಿ ಮಾರಣಿ ಕುಳಿತಿಪ್ಪಳು ನೋಡಾ. ಆ ಮಾರಣಿಯ ಕೋಡಗ ನುಂಗಿ, ಹತ್ತು ಕೇರಿಗಳಲ್ಲಿ ಹಾರಾಡುತಿಪ್ಪುದು ನೋಡಾ. ಆ ಕೋಡಗನ ಇರುವೆ ನುಂಗಿ, ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನದ ವಾಸನೆಗಳನಳಿದು, ಜ್ಞಾನದಲ್ಲಿ ಕೂಡಿ, ಸ್ವಾನುಭವ ಸಿದ್ಭಾಂತವಳವಟ್ಟಾತನೆ ಜಗದಯ್ಯ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ರತ್ನದ ಒಂದು ಲಿಂಗವ ಕಂಡೆನಯ್ಯ. ಆ ಲಿಂಗದ ಕಿರಣದೊಳಗೆ ಇಪ್ಪತ್ತೈದು ಕಂಬದ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಮನೋಹರನೆಂಬ ಪೂಜಾರಿಯು ಘನತರವೆಂಬ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರುಲೋಕದ ಮೇಲೆ ಒಂದು ಕೋಡಗ ಕುಳಿತಿರುವುದ ಕಂಡೆನಯ್ಯ. ಆ ಕೋಡಗದ ತಲೆಯ ಮೇಲೆ ಒಂದು ರತ್ನವಿಪ್ಪುದು ನೋಡಾ. ಆ ಕೋಡಗನ ಕೊಂದು ಆ ರತ್ನವ ನುಂಗಿದಲ್ಲದೆ ತಾನಾರು ಎಂಬ ಭೇದವು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಹಾಜ್ಞಾನಸಂಬಂಧದಿ ಅವಿರಳಸ್ವಾನುಭವಸಿದ್ಧಾಂತವನರಿತು ಒಳಹೊರಗೆ ಪರಿಪೂರ್ಣವಾಗಿ, ಅಖಂಡತೇಜೋಮಯಲಿಂಗದಲ್ಲಿ ಕೂಡಿ ತಾನು ತಾನಾಗಬಲ್ಲಡೆ ಸ್ವಯಜ್ಞಾನಸಂಬಂಧಿಯೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಮನೆಯ ಮೇಲೆ ಇಪ್ಪ ನಿರ್ವಾಣವ ಕಂಡೆನಯ್ಯ. ಊರೊಳಗಣ ಪುರುಷನು ಐವರ ಕೂಡಿಕೊಂಡು ನಿರ್ವಾಣಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಹಾಮೇರುವೆಂಬ ಪಟ್ಟಣದರಸಂಗೆ ಮೂರು ಪ್ರಧಾನಿಗಳು, ಆರು ಮಂದಿ ವಜೀರರು, ಮೂವತ್ತಾರು ಮಂದಿ ಸರದಾರರು, ಐವತ್ತೆರಡು ಮಂದಿ ಮಹಾಲದಾರರು ಕೂಡಿ ಕತ್ತಲ ಕಾಳಂಧವೆಂಬ ದೇಶವನು ಕಾಳಗವ ಮಾಡಿ ತಕ್ಕೊಂಬುವುದ ಕಂಡೆನಯ್ಯ. ಅದು ಹೇಗೆಂದಡೆ: ಹತ್ತುಲಕ್ಷ ರಾವುತರ ಹಿಡಿದು, ಎಂಟು ಸಾವಿರ ಕುದುರೆಗಳ ಹಿಡಿದು, ಅರವತ್ತು ಕೋಟಿ ಕಾಲಮಂದಿಯ ಸಂದಿಸಂದಿನಲ್ಲಿ ನಿಲಿಸಿ, ಸಪ್ತೇಳುಸಾಗರವ ದಾಂಟಿ, ಕತ್ತಲಕಾಳಂಧವೆಂಬ ದೇಶವನು, ಕೈಸೆರೆಯ ಮಾಡಿಕೊಂಡು, ಐದು ಠಾಣ್ಯವ ಬಲಿದು, ಕಡೆಯ ಠಾಣ್ಯದ ಮುಂದೆ ಚಾವಡಿಯ ರಚಿಸುವುದ ಕಂಡೆನಯ್ಯ. ಅದು ಹೇಗೆಂದಡೆ: ಅದಕೆ ಕಂಬ ಒಂದು, ತೊಲೆ ಮೂರು, ಆರು ಜಂತಿಗಳು, ಮೂವತ್ತಾರು ನೆಲೆಗಳ ಹೂಡಿ. ಒಂಬತ್ತು ಬಾಗಿಲಲ್ಲಿ ನವ ಬೊಂಬೆಗಳ ನಿಲಿಸಿ, ಅವಕ್ಕೆ ನವರತ್ನವ ಕೆತ್ತಿಸಿ, ಐದು ತೊಂಡಲಂಗಳ ಕಟ್ಟಿ, ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಆ ಅರಸನ ಮೂರ್ತಂಗೊಳಿಸಿ, ಸಪ್ತದ್ವೀಪಂಗಳಂ ರಚಿಸಿ, ಸೋಮವೀದಿ ಸೂರ್ಯವೀದಿಯ ಶೃಂಗಾರವ ಮಾಡಿ, ಆ ಅರಸಿಂಗೆ ಒಡ್ಡೋಲಗವಂ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ: ಪಾತಾಳಲೋಕವೆಂಬ ಠಾಣ್ಯದಲ್ಲಿ ತಾಳ, ಕಂಸಾಳ, ಘಂಟೆ, ಜಾಗಟೆ ಮೊದಲಾದ ಶಬ್ದಂಗಳು, ಮತ್ರ್ಯಲೋಕವೆಂಬ ಠಾಣ್ಯದಲ್ಲಿ ಕಿನ್ನರವೇಣು ತಂಬೂರವೇಣು ಕೈಲಾಸವೇಣುಗಳು ಮೊದಲಾದ ಶಬ್ದಗಳು, ಸ್ವರ್ಗಲೋಕವೆಂಬ ಠಾಣ್ಯದಲ್ಲಿ ಭೇರಿ ಡಮರು ತುಡುಮೆ ಡಿಂಡಿಮ ಮೊದಲಾದ ಶಬ್ದಂಗಳು, ತತ್ಪುರುಷವೆಂಬ ಲೋಕದಲ್ಲಿ, ಕೊಳಲು ನಾಗಸ್ವರ ಶಂಖ ಸನಾಯ ಬುರುಗು ನಪಿರಿ ಹೆಗ್ಗಾಳೆ ಚಿನಿಗಾಳೆ ಚಂದ್ರಗಾಳೆ ಮೊದಲಾದ ಶಬ್ದಂಗಳು, ಈಶಾನ್ಯಲೋಕವೆಂಬ ಠಾಣ್ಯದಲ್ಲಿ ಗೀತಪ್ರಬಂಧ ರಾಗಭೇದ ಮೊದಲಾದ ಶಬ್ದಂಗಳು, ಇಂತಿವು ಆ ಅರಸಿಂಗೆ ಒಡ್ಡೋಲಗವ ಮಾಡುವುದ ಕಂಡೆನಯ್ಯ. ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು, ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ- ಇಂತೀ ಐವರು ಆ ಅರಸಿಂಗೆ ಗಂಧರ್ವರಾಗಿರ್ಪರು ನೋಡಾ. ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಇಂತೈವರು ನಾಂಟ್ಯವನಾಡುತಿರ್ಪರು ನೋಡಾ. ಒಬ್ಬ ಸತಿಯಳು ಆ ಅರಸಿಂಗೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು, ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯ ತಳೆದು, ಆ ಅರಸಿಂಗೆ ನೈವೇದ್ಯವ ಮಾಡುತಿರ್ಪಳು ನೋಡಾ. ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಪಂಚದೀಪಂಗಳ ರಚಿಸಿ, ಆ ಅರಸಿಂಗೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಹಾಮೇರುವೆಯೊಳಗೆ ಪರಮಾನಂದಲಿಂಗವು ತೊಳಗಿ ಬೆಳಗುತಿಪ್ಪುದು ನೋಡಾ. ಆ ಬೆಳಗಿನ ಸುಳುವ ಒಬ್ಬ ಸತಿಯಳರಿದು ಐವರ ಕೂಡಿಕೊಂಡು, ಮಹಾಮೇರುವೆಯ ಹತ್ತಿ, ಪರಮಾನಂದ ಲಿಂಗಾರ್ಚನೆಯ ಮಾಡಿ ಪರವಶನಾದ ಸೋಜಿಗವ ನೋಡಾ ಝೇಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾತು ಮಥನಗಳಿಲ್ಲದಂದು, ನೋಟ ಬೇಟಗಳಿಲ್ಲದಂದು, ಶೂನ್ಯ ನಿಃಶೂನ್ಯವಿಲ್ಲದಂದು, ಬಯಲು ನಿರ್ವಯಲು ಇಲ್ಲದಂದು, ಏನೇನೂ ಇಲ್ಲದಂದು, ಅತ್ತಲೆ ತಾನು ತಾನಾಗಿದ್ದೆಯಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೊರಡಿಯ ಮೇಲೆ, ಹಾರುವ ಗರುಡನ ಕಂಡೆ ನೋಡಾ! ಆ ಗರುಡನ ಎಚ್ಚ ಬೇಂಟೆಕಾರನು ಮೊರಡಿಯ ಬಿಟ್ಟು, ಗರುಡನ ಹಿಡಿದು, ಶಿವಾಗಮಪಟ್ಟಣಕ್ಕೆ ಹೋಗಿ ನಿರ್ವಿಕಲ್ಪನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾತು ಮಥನಂಗಳಿಲ್ಲದಂದು, ನೀತಿ ನಿರ್ಮಲವಿಲ್ಲದಂದು, ಜಾತಿಸೂತಕವಿಲ್ಲದಂದು, ನಾಮ-ರೂಪ-ಕ್ರಿಯೆಗಳಿಲ್ಲದಂದು, ಏನೇನೂ ಇಲ್ಲದಂದು, ತಾನೇ ನಿಷ್ಪತಿಯಾಗಿರ್ದನಯ್ಯ. ತನ್ನ ಚಿದ್ವಿಲಾಸದಿಂದ ಓಂಕಾರವೆಂಬ ಪ್ರಣವವಾಯಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರಂಗಳಾದವು. ಆ ಅಕಾರ ಉಕಾರ ಮಕಾರಂಗಳೊಡನೆ ನಾದ-ಬಿಂದು-ಕಲೆಗಳಾದವು. ಆ ನಾದ ಬಿಂದು ಕಲೆಗಳೊಡನೆ ಷಡಾಧಾರಚಕ್ರಂಗಳಾದವು. ಆ ಷಡಾಧಾರಚಕ್ರಂಗಳಲ್ಲಿ ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯರೆಂಬ ಷಡ್ವಿಧಮೂರ್ತಿಗಳಾದರು ನೋಡಾ. ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗವಾಗಿ, ನಿಶ್ಚಿಂತ ನಿರಾಕುಳ ನಿರ್ಭರಿತ ಲಿಂಗವ ಅರಿಯಬಲ್ಲಡೆ ಆತನೆ ಪ್ರಾಣಲಿಂಗಸಂಬಂಧಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೂರು ಬಾಯುಳ್ಳ ಪಕ್ಷಿಂಗೆ ಆರು ಕಾಲುಗಳುಂಟು, ಬೇರೆ ಒಂದು ಮನೆಯ ಮಾಡಿಕೊಂಡು ತನ್ನ ಸುಳುವಿನ ಭೇದವ ತಾನೆ ಕಂಡು ನಿರ್ವಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...