ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಓಂಕಾರವೆಂಬ ಉಲುಹಿನಲ್ಲಿ ಪ್ರಣವಸೋಹಂಕಾರವಿಡಿದು ಆಚರಿಸುತಿದ್ದನಯ್ಯ ಆ ಶರಣನು. ಆ ಶರಣಂಗೆ ಇಹಲೋಕವೆಂದಡೇನು? ಪರಲೋಕವೆಂದಡೇನು? ಇಹಪರವನೊಳಕೊಂಡು ತಾನು ತಾನಾದ ಭೇದವ ತಾನೇ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂ ನಮಃ ಶಿವಾಯವೆಂಬ ಷಡಕ್ಷರಮಂತ್ರವ ಮಹಾಜ್ಞಾನದಿಂದ ತಿಳಿದು, ನಿರಪೇಕ್ಷಲಿಂಗದೊಳು ಕೂಡಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು. ತಾನುತಾನೆಂಬುದು ಭಾವಕೆ ತೋರದಂದು. ಎಂತಿರ್ದ ಬ್ರಹ್ಮವು ತಾನೇ ನೋಡಾ ! ಆ ಬ್ರಹ್ಮದ ಚಿದ್ವಿಲಾಸದಿಂದ ಚಿದಾತ್ಮನಾದ. ಆ ಚಿದಾತ್ಮನ ಭಾವದಿಂದ ಜ್ಞಾನಾತ್ಮನಾದ. ಆ ಜ್ಞಾನಾತ್ಮನ ಭಾವದಿಂದ ಆಧ್ಯಾತ್ಮನಾದ. ಆ ಆಧ್ಯಾತ್ಮನ ಭಾವದಿಂದ ನಿರ್ಮಲಾತ್ಮನಾದ. ಆ ನಿರ್ಮಲಾತ್ಮನ ಭಾವದಿಂದ ಶುದ್ಧಾತ್ಮನಾದ. ಆ ಶುದ್ಧಾತ್ಮನ ಭಾವದಿಂದ ಬದ್ಧಾತ್ಮನಾದ. ಆ ಬದ್ಧಾತ್ಮನ ಭಾವಕೆ ಭಕ್ತನಾದ. ಆ ಶುದ್ಧಾತ್ಮನ ಭಾವಕೆ ಮಹೇಶ್ವರನಾದ. ಆ ನಿರ್ಮಲಾತ್ಮನ ಭಾವಕೆ ಪ್ರಸಾದಿಯಾದ ಆ ಆಧ್ಯಾತ್ಮನ ಭಾವಕೆ ಪ್ರಾಣಲಿಂಗಿಯಾದ. ಆ ಜ್ಞಾನಾತ್ಮನ ಭಾವಕೆ ಶರಣನಾದ. ಆ ಚಿದಾತ್ಮನ ಭಾವಕೆ ಐಕ್ಯನಾದ. ಆ ಐಕ್ಯನ ಕರಕಮಲಕೆ ಮಹಾಲಿಂಗನಾದ. ಆ ಶರಣನ ಕರಕಮಲಕೆ ಪ್ರಸಾದಲಿಂಗನಾದ. ಆ ಪ್ರಾಣಲಿಂಗಿಯ ಕರಕಮಲಕೆ ಜಂಗಮಲಿಂಗನಾದ. ಆ ಪ್ರಸಾದಿಯ ಕರಕಮಲಕೆ ಶಿವಲಿಂಗನಾದ. ಆ ಮಹೇಶ್ವರನ ಕರಕಮಲಕೆ ಗುರುಲಿಂಗನಾದ. ಆ ಭಕ್ತನ ಕರಕಮಲಕೆ ಆಚಾರಲಿಂಗನಾದ. ಆ ಆಚಾರಲಿಂಗಕೆ ಕ್ರಿಯಾಶಕ್ತಿ, ಆ ಗುರುಲಿಂಗಕೆ ಜ್ಞಾನಶಕ್ತಿ, ಆ ಶಿವಲಿಂಗಕೆ ಇಚ್ಫಾಶಕ್ತಿ, ಆ ಜಂಗಮಲಿಂಗಕೆ ಆದಿಶಕ್ತಿ, ಆ ಪ್ರಸಾದಲಿಂಗಕೆ ಪರಾಶಕ್ತಿ, ಆ ಮಹಾಲಿಂಗಕೆ ಚಿಚ್ಭಕ್ತಿ. ಆ ಚಿಚ್ಫಕ್ತಿಸಂಗದಿಂದ ಚಿದ್ಬ್ರಹ್ಮವ ಕೂಡಿ ಚಿದಾನಂದಸ್ವರೂಪವಾದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂಕಾರವೆಂಬ ಲಿಂಗದಲ್ಲಿ ನುಡಿದಾಡುವನಾರಯ್ಯ ? ನೋಡುವನಾರಯ್ಯ? ಕೊಂಬುವನಾರಯ್ಯ ? ಇಂತೀ ಭೇದವರಿತು ಸದಾಶಿವಲಿಂಗದಲ್ಲಿ ನೆಲೆಯಂಗೊಂಡು ಐದು ಅಂಗವ ಗರ್ಭೀಕರಿಸಿಕೊಂಡು ಈಶ್ವರನೆಂಬ ಮೆಟ್ಟಿಗೆಯ ಮೆಟ್ಟಿ ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು ಒಂಬತ್ತು ನೆಲೆಯ ಮೇಲೆ ನಡೆದು ಹೋಗುವ ಗಂಭೀರ ನಿರವಯನೆಂಬ[ನ] ಸತಿಯಳುವಿಡಿದು ಎಂತಿರ್ದಂತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಓಂ ಪ್ರಥಮದಲ್ಲಿ ಲಜ್ಜೆಗೆಟ್ಟು ಕಳ್ಳನು ಐವರ ಕೂಡಿಕೊಂಡು ಮಹಾಜ್ಞಾನವೆಂಬ ಕನ್ನಗಂಡಿಯ ಕೊರೆದು, ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯವ ಕದ್ದು, ಆರು ಕೇರಿಯ ದಾಂಟಿ, ಮೂರು ಗ್ರಾಮವ ವಿೂರಿ ಹೋದ ಕಳ್ಳನ ಏಕೋಭಾವವೆಂಬ ಕಂಬಕ್ಕೆ ಕಟ್ಟಿ, ಕಂಬ ಕರಗಿ, ಕಳ್ಳ ಅಡಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂಕಾರವೆಂಬ ಮೂಲಮಂತ್ರದಲ್ಲಿ ಲಿಂಗಸಂಗಿಯಾದ ಶರಣನು ಅನುಪಮ ಲಿಂಗೈಕ್ಯನು ನೋಡಾ. ಅಂತಪ್ಪ ಲಿಂಗೈಕ್ಯಂಗೆ ಓಂ ನಮೋ ಓಂ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಣಿಯೊಳಗೆ ಒಬ್ಬ ವಾಣಿಗಿತ್ತಿ ಕುಳಿತು ಕಾಣದೆ ಮೂರು ಲೋಕಂಗಳಲ್ಲಿ ನಡೆದಾಡುತಿಪ್ಪಳು ನೋಡಾ. ಆ ವಾಣಿಗಿತ್ತಿಯ ಕೊಂದು, ಮೂರು ಲೋಕವ ನುಂಗಿದಲ್ಲದೆ ಪ್ರಾಣಲಿಂಗಸಂಬಂಧವು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಣಿಯೊಳಗೆ ಒಬ್ಬ ಬಾಣತಿ ಕುಳಿತು ಏಳೆಂಟನೆಣಿಸುತಿರ್ಪಳು ನೋಡಾ! ಆದಿಯಲ್ಲಿ ಒಬ್ಬ ಮೂರ್ತಿ ಬಂದು, ಏಳೆಂಟು ಕೆಡಿಸಿ ಆ ಬಾಣತಿಯ ಒಡಲ ಸೀಳಿ, ಶಿಶುವ ತಕ್ಕೊಂಡು ಸಾಸಿರಕಂಬದ ಮನೆಯೊಳಗಿಟ್ಟು ತಾನುತಾನಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ