ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ ? ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ, ಜ್ಞಾನಿಗಳೆಂದರಿಯದೆ, ಬಾಯಿಗೆ ಬಂದಂತೆ ನುಡಿವ ತರಕಿಮೂಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಂಜನಸ್ಥಲದಲ್ಲಿ ನಿರಾವರಣವಾದ ಶರಣನು ನಿರಾಕುಳ ನಿರಾಮಯ ನಿಃಶೂನ್ಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಟಿಲತಟದಲ್ಲಿ ಮಠವ ಮಾಡಿಕೊಂಡು, ಘಟವ ಸಟೆಮಾಡಿ, ದಿಟವ ಪಿಡಿದು ನಟಿಸಿ ನಿರಂಜನಲಿಂಗದಲ್ಲಿ ಘಟೋತ್ತರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾದಲಕ್ಷವ ನೋಡಿದರೇನಯ್ಯ ? ಬಿಂದುಲಕ್ಷವ ನೋಡಿದರೇನಯ್ಯ ? ಕಲಾಲಕ್ಷವ ನೋಡಿದರೇನಯ್ಯ ? ಇಂತಿವನೊಳಗೊಂಡು ಪರಬ್ರಹ್ಮವೆಂಬ ಲಕ್ಷವ ನೋಡಬಲ್ಲಾತನೆ ನಿಮ್ಮ ಲಿಂಗೈಕ್ಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. ಆ ನಿರಕಾರದೊಡನೆ ಆಕಾರಲಿಂಗವಾಗಿ, ಮಂತ್ರಘೋಷವ ಘೋಷಿಸುತಿರ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು ನೋಡಾ. ನಾದಪ್ರಭೆಯು ಭಕ್ತ-ಮಹೇಶ್ವರ, ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, ಕಳಾಪ್ರಭೆಯು ಶರಣ-ಐಕ್ಯ. ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ. ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ, ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು. ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆ. ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು. ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ, ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ. ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ. ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾಲ್ಕು ಕಂಬದ ದೇಗುಲದೊಳಗೆ ಸುಳಿದಾಡುವ ಶಿಶುವ ಒಬ್ಬ ಸತಿಯಳು ಹಿಡಿದು, ಸಾವಿರ ಕಂಬದ ಮಂಟಪಕ್ಕೆ ಒಯ್ದು, ಚಿದ್ಘನದಿಂದ ನಿಃಪ್ರಿಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಃಕಲನ ಸಂಗದಿಂದ ಝೇಂಕಾರನಾದನಯ್ಯ. ಝೇಂಕಾರನ ಸಂಗದಿಂದ ನಿರಂಜನನಾದನಯ್ಯ. ನಿರಂಜನನ ಸಂಗದಿಂದ ಸ್ವಯಜ್ಞಾನಿಯಾದನಯ್ಯ. ಸ್ವಯಜ್ಞಾನಿಯ ಸಂಗದಿಂದ ಪರಮಜ್ಞಾನಿಯಾದನಯ್ಯ. ಪರಮಜ್ಞಾನಿಯ ಸಂಗದಿಂದ ಮಹಾಜ್ಞಾನಿಯಾದನಯ್ಯ. ಮಹಾಜ್ಞಾನಿಯ ಸಂಗದಿಂದ ಸುಜ್ಞಾನಿಯಾದನಯ್ಯ. ಸುಜ್ಞಾನಿಯ ಸಂಗದಿಂದ ಮನಜ್ಞಾನಿಯಾದನಯ್ಯ. ಮನಜ್ಞಾನಿಯ ಸಂಗದಿಂದ ನಿರ್ಮಲಜ್ಞಾನಿಯಾದನಯ್ಯ. ನಿರ್ಮಲಜ್ಞಾನಿಯ ಸಂಗದಿಂದ ಬದ್ಧಜ್ಞಾನಿಯಾದನಯ್ಯ. ಬದ್ಧಜ್ಞಾನಿಯ ಸಂಗದಿಂದ ಶುದ್ಧಜ್ಞಾನಿಯಾದನಯ್ಯ. ಶುದ್ಧಜ್ಞಾನಿಯೇ ಭಕ್ತ, ಬದ್ಧಜ್ಞಾನಿಯೇ ಮಹೇಶ್ವರ, ನಿರ್ಮಲಜ್ಞಾನಿಯೇ ಪ್ರಸಾದಿ, ಮನಜ್ಞಾನಿಯೇ ಪ್ರಾಣಲಿಂಗಿ, ಸುಜ್ಞಾನಿಯೇ ಶರಣ, ಪರಮಜ್ಞಾನಿಯೇ ಐಕ್ಯ, ಮಹಾಜ್ಞಾನಿಯೇ ಪರಬ್ರಹ್ಮ, ಸ್ವಯಜ್ಞಾನಿಯೇ ಚಿದ್ಘನ, ನಿರಂಜನವೇ ಚಿನ್ಮಯ, ಝೇಂಕಾರವೇ ಅಣುಮಯ, ನಿಃಕಲವೇ ತಾನು ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಡುವಿಲ್ಲದ ಬಾಲೆಯು ಕಣ್ಣಿಲ್ಲದ ಅಂಧಕನ ಕೂಡಿಕೊಂಡು ನೀರಿಲ್ಲದ ಬಾವಿಗೆ ಹೋಗಿ ನೀರನೆ ಮೊಗೆದು ಕಣ್ಣಿಲ್ಲದ ಅಂಧಕ ಬಿದ್ದ, ನಡುವಿಲ್ಲದ ಬಾಲೆಯು ಅಡಗಿಪ್ಪಳಯ್ಯ. ಇದೇನು ವಿಚಿತ್ರವೆಂದು ಝೇಂಕಾರಪ್ರಭು ಬಂದು ವಿಚಾರಿಸಲು ಮಕ್ಕಳಿಲ್ಲದಾಕಿ ಬಂದು, ಕಣ್ಣು ಇಲ್ಲದ ಅಂಧಕನ ಕೂಡಿಕೊಂಡು, ನಡುವಿಲ್ಲದ ಬಾಲೆಯ ಕರೆದು ಅವರಿಬ್ಬರನು ಮಹಾಲಿಂಗಕ್ಕೆ ಒಪ್ಪಿಸುತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿತ್ಯವನರಿತು, ಪಾತಕವ ಕಳೆದು, ಜ್ಞಾನಸ್ವಯವನರಿತು, ತ್ರಿಕೂಟದಲ್ಲಿ ನಿಂದು, ಪರಕೆಪರವನಾಚರಿಸಿ, ಲಿಂಗಪರಿಣಾಮಿಯಾಗಿರ್ದನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾದಲಕ್ಷವ ನೋಡಿದೆನೆಂದು, ಬಿಂದುಲಕ್ಷವ ಕಂಡೆನೆಂದು, ಕಲಾಲಕ್ಷವ ಕಂಡೆನೆಂದು, ಆತ್ಮದಳವನುಂಟುಮಾಡಿಕೊಂಡು ಪೂಜ್ಯರಾದೆವೆಂದು ನುಡಿದಾಡುವಿರಿ. ಇದು ಅಲ್ಲ ಬಿಡಿರೊ. ನಾದಬಿಂದುಕಲಾತೀತವೆಂಬ ಲಿಂಗದಲ್ಲಿ ಕೂಡಿ ಪೂಜ್ಯನಾಗಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಂಜನಲಿಂಗದಲ್ಲಿ ನಿರಪೇಕ್ಷವಾದ ಶರಣನು, ಅನಂತಕೋಟಿ ಸೋಮಸೂರ್ಯರ ಬೆಳಗನೊಳಕೊಂಡು ವಿಶ್ವಂಭರಿತನಾದನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನೊಸಲಕಣ್ಣು, ಪಂಚಮುಖ, ದಶಭುಜ, ತನುವೇಕ, ದ್ವೀಪಾದ, ಸ್ಫುಟಿಕವರ್ಣ, ಈರೇಳುಭುವನ ಹದಿನಾಲ್ಕುಲೋಕಂಗಳ ಹೊತ್ತವನಯ್ಯ. ರವಿ ಶಶಿಯ ಬೆಳಗನೊಳಕೊಂಡು ಆಕಾಶ ನಿರಾಕಾಶವೆಂಬ ನಿರ್ವಯಲಲ್ಲಿ ನಿಂದು ತೊಳಗಿಬೆಳಗುತಿಪ್ಪನು ನೋಡಾ ! ಆತಂಗೆ ಅತಳಾಧಾರವಿಲ್ಲ, ವಿತಳಾಧಾರವಿಲ್ಲ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿರವಯಲಿಂಗ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನವಸಾಗರದ ಮುಂದೆ ಕಪ್ಪೆ ಕೂಗುತಿದೆ ನೋಡಾ ! ಆ ಕೂಗ ಕೇಳಿ ನಾಗಲೋಕದಲ್ಲಿರ್ದ ಸರ್ಪನು ನವಸಾಗರವ ಹಾರಿ, ಆ ಕಪ್ಪೆಯನು ನುಂಗಿ, ತನ್ನ ಸುಳುಹ ತಾನೇ ತೋರುತ್ತಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾನು ನೀನೆಂಬುಭಯವನಳಿದು, ಸ್ವಾನುಭಾವ ಸಿದ್ಧಾಂತದಿಂದ ತಾನು ತಾನೆಂಬುದನರಿದು, ಅನಂತಕೋಟಿ ಬ್ರಹ್ಮಾಂಡವ ನುಂಗಿರ್ದ ಲಿಂಗಕೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನವನಾಳಮಧ್ಯದಲ್ಲಿ ಅಷ್ಟದಳಪಟವ ಮೆಟ್ಟಿ ನಿಂದೆನಯ್ಯ. ಹತ್ತು ವಾಜಿಯಂಗಳ ಏರಿ ಷೋಡಶ ಬಾಗಿಲ ದಾಂಟಿ ನಾಡೊಳಗೆ ಏಕಲಿಂಗವ ಕಂಡು, ಭೇರಿ ಮೃದಂಗವ ನುಡಿಸಿ, ನಿರಾಲಂಬಲಿಂಗದೊಳು ಬೆರದಿದ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾದಲಕ್ಷ ಬಿಂದುಲಕ್ಷ ಕಳಾಲಕ್ಷದ ಮೇಲೆ ನಿರ್ವಯ ಲಕ್ಷವ ಕಂಡೆನಯ್ಯ. ಆ ನಿರ್ವಯ ಲಕ್ಷದೊಳಗೆ ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿತ್ಯವಿಡಿದು ಮುಕ್ತನಾಗಿ, ಸತ್ತು ಚಿತ್ತಾನಂದ ನಿತ್ಯಪರಿಪೂರ್ಣನಾಗಿ ಅತ್ತತ್ತಲೆ ತಾನು ತಾನಾಗಿರ್ಪ ನೋಡಾ. ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಪೇಕ್ಷಲಿಂಗದಲ್ಲಿ ನಿರ್ಭರಿತವಾದ ಸತಿಯಳು ನಿರ್ಮಾಯವೆಂಬ ಪುರುಷನ ಸಂಗವ ಮಾಡಿ ನಿರವಯವೆಂಬ ದೇಶಕ್ಕೆ ಹೋಗಿ ನಿಃಶೂನ್ಯನಿಷ್ಪತಿಯಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾದಬಿಂದುಕಲೆಗಳಿಂದತ್ತತ್ತ ಮಹಾಪುರುಷನ ಕಂಡೆನಯ್ಯ. ಆ ಪರುಷನ ಸಂಗದಿಂದ ಒಬ್ಬ ಸತಿಯಳು ಹುಟ್ಟಿದಳು ನೋಡಾ. ಆ ಸತಿಯಳ ಸಂಗದಲ್ಲಿ ಐವರು ಮಕ್ಕಳು ಹುಟ್ಟಿ, ಇಪ್ಪತ್ತೈದು ಗ್ರಾಮಗಳಲ್ಲಿ ಸುಳಿದಾಡುತಿಪ್ಪರು ನೋಡಾ. ಆ ಸುಳುವ ನಿಲವು ನುಂಗಿತು, ಆ ನಿಲವ ಇರುವೆ ನುಂಗಿತು, ಆ ಇರುವೆಯ ಧೂಮ್ರ ನುಂಗಿತು, ಆ ಧೂಮ್ರವ ನಿರ್ವಯಲು ನುಂಗಿತು, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಯನದ ಸಂಚಲವನಳಿದವರ ಅಂಗವ ತೋರಿಸಯ್ಯ. ಪ್ರಾಣದ ಪ್ರಕೃತಿಯ ಕಳೆದವರ ಲಿಂಗವ ತೋರಿಸಯ್ಯ. ಶಬ್ದದ ಮೂಲವ ಬಲ್ಲವರ ಸಂಬಂಧವ ತೋರಿಸಯ್ಯ. ಜಾತಿಯ ಆಶ್ರಯವನಳಿದವರ ಸಮರಸವ ತೋರಿಸಯ್ಯ. ಅಂಗದ ಸಕೀಲವ ಬಲ್ಲವರ ಮಹಾಜ್ಞಾನವ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನವದ್ವಾರಬೀದಿಗಳಲ್ಲಿ ಸುಳಿದಾಡುವ ಹಂಸನ ಕೊರಳಲ್ಲಿ ಇಪ್ಪತ್ತೈದು ಗ್ರಾಮಗಳ ಕಟ್ಟಿ ತೂಗುತದೆ ನೋಡಾ ! ಸಮುದ್ರವೆಂಬ ಘೋಷದಲ್ಲಿ ಒಂದು ಕಪ್ಪೆ ಕುಳಿತು ಆ ಹಂಸನ ನುಂಗಿ ಕೂಗುತಿದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಕಾರ ಮಕಾರಗಳಿಲ್ಲದಂದು, ಶಿಕಾರ ವಕಾರಗಳಿಲ್ಲದಂದು, ಯಕಾರ ಓಂಕಾರಗಳಿಲ್ಲದಂದು, ಪ್ರಣವ ನಿಃಪ್ರಣವಂಗಳಿಲ್ಲದಂದು, ಇವೇನೇನೂ ಇಲ್ಲದಂದು, ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರುತನಿಜಸ್ವರೂಪದಲ್ಲಿ ಪರಮಾನಂದ ಲಿಂಗವಿಪ್ಪುದು ನೋಡಾ. ಆ ಲಿಂಗದಲ್ಲಿ ಕೂಡಿ, ಪರಿಪೂರ್ಣವಾದ ಶರಣನ ಅಂತರಂಗವ ಕಂಡು ಆನು ಬದುಕಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿತ್ಯವಾದ ಶರಣನು ಐವರ ಕೂಡಿಕೊಂಡು ಪರಕೆ ಪರವಾದ ಲಿಂಗಾರ್ಚನೆಯಂ ಮಾಡಿ ನಿರ್ವಿಕಲ್ಪ ನಿರಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಾಳ ಝೇಂಕಾರ ನಿಜಲಿಂಗಪ್ರಭು ನುಡಿಸಿದರೆ ನುಡಿದೆನಲ್ಲದೆ, ನಾನಾದರೆ ನುಡಿಯಲರಿಯೆನಯ್ಯ. ಇದು ಕಾರಣ, ಎನ್ನಂತರಂಗದಲ್ಲಿ ಶಿವಾತ್ಮಜ್ಞಾನ ಉಕ್ಕಿ ಹಾಡಿಸಿದರೆ ಹಾಡಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...