ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಜ್ಜನವೆಂಬ ಮಾರ್ಗದಲ್ಲಿ ಒಬ್ಬ ಬಾಲೆಯು ನಿಂದು ನಿಜವ ತೋರುತಿರ್ಪಳು ನೋಡಾ. ಆ ನಿಜವ ಈ ಜನಂಗಳೇನು ಬಲ್ಲರಯ್ಯ ? ಅಜ ಹರಿ ಸುರ ನಾರದ ಮೊದಲಾದವರಿಗೆ ಅಗೋಚರವೆನಿಸಿತ್ತು ನೋಡಾ. ಸ್ವಜ್ಞಾನಿಯಾದ ಶರಣನು ಆ ನಿಜವ ನೋಡಬಲ್ಲನಯ್ಯಾ. ಆ ಬಾಲೆಯ ಅಂಗವ ಕೂಡಬಲ್ಲನಯ್ಯ. ಆ ಸಜ್ಜನವೆಂಬ ಮಾರ್ಗವ ಹತ್ತಬಲ್ಲನಯ್ಯ. ಇಂತಪ್ಪ ಶರಣಂಗೆ ನಮೋ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸದಮಲದರುಹಿನಿಂದ ಸಾದ್ಥಿಸಿದಮಲಲಿಂಗವ ಕಂಡು ಭೇದಿಸಿ ನಿಜದಲ್ಲಿ ನಿಂದು, ಸ್ವಾನುಭವ ಸಿದ್ಧಾಂತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸ್ಥೂಲ ಸೂಕ್ಷ್ಮ ಕಾರಣ ಸಂಗದೊಳು ನಿಂದು ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬ ಭೇದವನರಿತು ನಿಶ್ಚಿಂತ ನಿರಾಕುಳಲಿಂಗದಲ್ಲಿ ನಿಂದು ನಿರ್ವಯಲಾದ ನಿಮ್ಮ ಶರಣ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಂಗನಬಸವಣ್ಣನೇ ಎನ್ನ ಗುರುವು. ಚನ್ನಬಸವಣ್ಣನೇ ಎನ್ನ ಲಿಂಗವು. ಅಲ್ಲಮಪ್ರಭುವೇ ಎನ್ನ ಜಂಗಮವು ಇದು ಕಾರಣ, ಈ ಗುರುಲಿಂಗಜಂಗಮವನರಿತು ನಾನು ಬದುಕಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸ್ಥೂಲವಾದರೇನಯ್ಯ ? ಆ ಸ್ಥೂಲಕ್ಕೆ ಕ್ರಿಯವ ನಟಿಸಬೇಕಯ್ಯ. ಸೂಕ್ಷ್ಮವಾದರೇನಯ್ಯ ? ಆ ಸೂಕ್ಷ್ಮಕ್ಕೆ ಮಂತ್ರವ ನಟಿಸಬೇಕಯ್ಯ. ಕಾರಣವಾದರೇನಯ್ಯ? ಆ ಕಾರಣಕ್ಕೆ ಸದಾಚಾರವ ನಟಿಸಬೇಕಯ್ಯ. ಮಹಾಕಾರಣವಾದರೇನಯ್ಯ? ಆ ಮಹಾಕಾರಣಕ್ಕೆ ಲಿಂಗಾಂಗಸಮರಸವÀ ನಟಿಸಬೇಕಯ್ಯ. ಪರಕಾರಣವಾದರೇನಯ್ಯ? ಆ ಪರಕಾರಣಕ್ಕೆ ನಿಃಶಬ್ದ ನಿರಾಳವ ನಟಿಸಬೇಕಯ್ಯ. ಜ್ಞಾನಕಾರಣವಾದರೇನಯ್ಯ? ಆ ಜ್ಞಾನಕಾರಣಕ್ಕೆ ಸ್ವಾನುಭವಸಿದ್ಭಾಂತವ ನಟಿಸಬೇಕಯ್ಯ. ಇಂತೀ ಷಡ್ವಿಧ ಅಂಗವನರಿತು ಆಚರಿಸಬಲ್ಲ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸುಜ್ಞಾನಪ್ರಭೆಯಲ್ಲಿ ನಿಂದು, ಮಹಾಲಿಂಗದ ಪ್ರಕಾಶವ ನೋಡಿ ನಿತ್ಯನಿಜವ ಕೂಡಿ, ನಿರ್ಮುಕ್ತ ನಿತ್ಯನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಂಗಸಂಯೋಗವೆಂಬ ಪಟ್ಟಣದಲ್ಲಿ ಒಂದು ಲಿಂಗದ ಗುಡಿಯ ಕಂಡೆನಯ್ಯ. ಆ ಗುಡಿಯೊಳಗೆ ಒಬ್ಬ ಪೂಜಿತ ರೂಪನ ಕಂಡೆನಯ್ಯ. ಆ ಪೂಜಿತನ ಪಂಚಮುಖದ ಸರ್ಪ ನುಂಗಿ, ಆ ಸರ್ಪನ ಕೋಳಿ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಾಂಗದೊಳಹೊರಗಿರ್ಪ ಲಿಂಗವು ಹಿಂಗಿ ತೋರುತಿದೆ ನೋಡಾ. ಆ ಲಿಂಗವು ನೋಡಹೋಗದ ಮುನ್ನ ಅದು ಎನ್ನ ನುಂಗಿತ್ತಯ್ಯಾ. ಆ ಲಿಂಗಕ್ಕೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಬ್ರಹ್ಮಾಂಡವ ಗರ್ಭೀಕರಿಸಿಕೊಂಡಿರ್ದ ಮೂರ್ತಿಗೆ ಭಕ್ತನೆ ಎಡದ ಪಾದ, ಮಹೇಶ್ವರನೆ ಬಲದ ಪಾದ, ಪ್ರಸಾದಿಯೆ ಎಡದ ಹಸ್ತ, ಪ್ರಾಣಲಿಂಗಿಯೆ ಬಲದ ಹಸ್ತ, ಶರಣನೆ ಎಡದ ಕಣ್ಣು, ಐಕ್ಯನೆ ಬಲದ ಕಣ್ಣು, ಓಂಕಾರವೆ ನಿಜಮುಖ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಂಗನಬಸವಣ್ಣನೆ ಅಂಗ, ಚನ್ನಬಸವಣ್ಣನೆ ಲಿಂಗ, ಅಲ್ಲಮಪ್ರಭುದೇವರೇ ಸಂಬಂಧ ನೋಡಾ. ಇದು ಕಾರಣ ಅಂಗಲಿಂಗಸಂಬಂಧವನರಿತು ಆಚರಿಸಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಾಂಗದೊಳಹೊರಗೆ ಪರಿಪೂರ್ಣವಾಗಿ ತುಂಬಿಕೊಂಡಿಪ್ಪ ಪರಬ್ರಹ್ಮಲಿಂಗವು. ಆ ಪರಬ್ರಹ್ಮಲಿಂಗದೊಳು ಕೂಡಿ ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಾಕಾರವಳಿದು ನಿರಾಕಾರವಾದ ಶರಣಂಗೆ ಲೋಕದ ಹಂಗುಂಟೇನಯ್ಯ? ಭ್ರಾಂತಿಸೂತಕ ಉಂಟೇನಯ್ಯ? ತನ್ನ ನಿಜವ ತಾನೇ ತಿಳಿದು, ನಿಃಪ್ರಿಯನಾಗಿ ಸ್ವಯಂಜ್ಞಾನವ ಆಚರಿಸುವ ಶರಣಂಗೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಕಲ ಜಗಂಗಳೆಲ್ಲ ನಿಃಕಲದ ಭೇದವ ಬಲ್ಲರೇನಯ್ಯ ? ಅಂತಪ್ಪ ನಿಃಕಲದ ಭೇದವ ಮಹಾಜ್ಞಾನದಿಂದ ತಿಳಿದು ಪರಿಪೂರ್ಣವಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಾಂಗಪಟ್ಟಣದೊಳಗೆ ಇರುತಿಪ್ಪ ಪರಮನ ಕಂಡೆನಯ್ಯ. ಊರೊಳಗಣ ನಾರಿ ಆರು ಸೋಪಾನಂಗಳನೇರಿ, ಮೂರು ಬಾಗಿಲ ಪೊಕ್ಕು, ಆ ಪರಮನ ಧ್ಯಾನವ ಮಾಡುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಬ್ರಹ್ಮಾಂಡವ ಒಬ್ಬ ದೇವ ನುಂಗಿಕೊಡಿಪ್ಪ ನೋಡಾ. ಆ ದೇವನ ನೆನಹಿನಿಂದ ಪರಶಿವನಾದ. ಆ ಪರಶಿವನ ಸಂಗದಿಂದ ಸದಾಶಿವನಾದ. ಆ ಸದಾಶಿವನ ಸಂಗದಿಂದ ಈಶ್ವರನಾದ. ಆ ಈಶ್ವರನ ಸಂಗದಿಂದ ರುದ್ರನಾದ. ಆ ರುದ್ರನ ಸಂಗದಿಂದ ವಿಷ್ಣುವಾದ. ಆ ವಿಷ್ಣುವಿನ ಸಂಗದಿಂದ ಬ್ರಹ್ಮನಾದ ಆ ಬ್ರಹ್ಮನ ಸಂಗದಿಂದ ಸಕಲ ಜಗಂಗಳು ಉತ್ಪತ್ತಿಯಾದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಮುದ್ರದೊಳಗೊಂದು ಮೊಸಳೆಯ ಕಂಡೆನಯ್ಯ. ಆ ಮೊಸಳಿಂಗೆ ಏಳು ಮೀನುಗಳು ವಿಶ್ವಾಸಮಂ ಮಾಡುತಿರ್ಪುವು ನೋಡಾ ! ಆಡುತಾಡುತ್ತ ತೆರೆ ಹಾಕಲು ಮೊಸಳೆ ಸತ್ತಿತು ನೋಡಾ. ಮೀನುಗಾರ ಬಂದು, ಮೀನ ಕೊಯ್ದು, ಸಮುದ್ರಕ್ಕೆ ಕಾವಲದಾರನಾದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಾಂಗದೊಳಹೊರಗಿಪ್ಪ ಪರಬ್ರಹ್ಮಲಿಂಗವು ಕರಕಮಲಕ್ಕೆ ಬಂದಿತು ನೋಡಾ. ಆ ಲಿಂಗವ ಸಾಧಿಸಿ ಭೇದಿಸಲರಿಯದೆ ಅನ್ಯದೈವಂಗಳಿಗೆ ಎರಗಿ ಭವಕ್ಕೆ ಗುರಿಯಾದರು ನೋಡಾ. ಇದು ಕಾರಣ, ಆ ಲಿಂಗವನರಿತು ಪರತತ್ವದಲ್ಲಿ ಕೂಡಿ ಪರಿಪೂರ್ಣವಾಗಬಲ್ಲಡೆ ಆತನೆ ನಿರ್ಮುಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸದಾಸನ್ನಹಿತವಾದ ಶರಣನು ನಿತ್ಯನಿಜದಾರಂಭಕೆ ಹೋಗಿ ಸಕಲಕರ್ಮಂಗಳಿಗೆ ವಿರಹಿತವಾಗಿಪ್ಪನಯ್ಯಾ. ಸಕಲದೋಷಂಗಳಿಗೆ ವಿರಹಿತನಾಗಿಪ್ಪನಯ್ಯಾ. ಸಕಲಪ್ರಪಂಚಗಳಿಗೆ ವಿರಹಿತನಾಗಿಪ್ಪನಯ್ಯಾ. ಸಕಲವಾಸನೆಗಳಿಗೆ ವಿರಹಿತನಾಗಿಪ್ಪನಯ್ಯಾ. ಸಕಲಭ್ರಮೆಯಂಗಳಿಗೆ ವಿರಹಿತನಾಗಿಪ್ಪನಯ್ಯಾ. ಸಕಲನಿಷ್ಕಲದಲ್ಲಿ ಎಯ್ದಿದ ಸದಾಸನ್ನಹಿತವಾದ ಶರಣನ ಅಂತರಂಗವ ಪೊಕ್ಕು ನಾನು ಬದುಕಿದೆನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ಪನ ತಲೆಯ ಮೇಲೆ ಒಂದು ರತ್ನವಿಪ್ಪುದು ನೋಡಾ. ಆ ರತ್ನವ ಕಪ್ಪೆ ನುಂಗಿ ಕೂಗುತಿದೆ ನೋಡಾ. ಆ ಕಪ್ಪೆಯ ಸರ್ಪ ನುಂಗಿ, ಆ ಸರ್ಪನ ಇರುವೆ ನುಂಗಿ, ಸಾವಿರ ಕಂಬದ ಮಂಟಪದೊಳಗೆ ಸುಳಿದಾಡುತಿಪ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಾಜವೆಂಬ ನಿಜಮಾರ್ಗದಲ್ಲಿ ವಾಜಿಯುಳ್ಳ ಸತಿಯಳು ನಿಂದು, ಬೀಜವ ತೋರುತಿಪ್ಪಳು ನೋಡಾ. ಆ ಬೀಜವ ಬಿತ್ತಿ, ಫಲವನುಂಬ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಾಂಗಪಟ್ಟಣದೊಳಗೆ ಐದು ಮೊದಲಗಿತ್ತೇರಿಗೆ ಒಬ್ಬಮದಲಿಂಗ ನೋಡಾ! ಬ್ರಹ್ಮ ವಿಷ್ಣು ರುದ್ರ ಈಶ್ವರರೆಂಬ ನಾಲ್ಕು ಕಂಬವ ನಿಲಿಸಿ ಆಕಾಶವೆಂಬ ಚಪ್ಪರವಂಗೈದು, ಕಾಮಕ್ರೋಧಲೋಭಮೋಹಮದಮತ್ಸರಗಳೆಂಬ ಆರು ತೊಂಡಲಂಗಳ ಕಟ್ಟಿ, ಜ್ಞಾನಶೃಂಗಾರವೆಂಬ ಹಾಲಗಂಬವ ನಿಲಿಸಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯ ತಳೆದು, ಆಚಾರಲಿಂಗದೇವರು ಗುರುಲಿಂಗದೇವರು ಶಿವಲಿಂಗದೇವರು ಜಂಗಮಲಿಂಗದೇವರು ಪ್ರಸಾದಲಿಂಗದೇವರು ಈ ಐವರು ಮದಲಿಂಗನ ಕೂಡ ಭೂಮಾಸವಿಯೂಟವ ಸವಿವುತಿರ್ಪರು ನೋಡಾ. ಐದು ಮೊದಲಗಿತ್ತೇರಿಗೂ ಮದಲಿಂಗಂಗೂ ಸೇಸೆಯನಿಕ್ಕಿ ನಮಃ ಶಿವಾಯವೆಂಬ ಪಂಚದೀಪವ ಬೆಳಗಿ ಓಂ ನಮಃಶಿವಾಯಯೆಂದು ಬರೆದಿದ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಾಂಗಲಿಂಗಮಯವಾದ ಶರಣನು ಒಳಹೊರಗೆ ಪರಿಪೂರ್ಣವಾಗಿ ತೋರುತಿಪ್ಪನು ನೋಡಾ. ಅಂತಪ್ಪ ಶರಣನ ಸಂಗದಿಂದ ನಿತ್ಯಮುಕ್ತನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸ್ಥೂಲ ಸೂಕ್ಷ್ಮ ಕಾರಣ ಅವಸ್ಥೆಯನರಿತು ಮಹಾಕಾರಣದೇಹಿಯಾಗಿ ನಿಶ್ಚಿಂತ ನಿರಾಕುಳದಲ್ಲಿ ನಿಂದು ನಿರ್ಭರಿತಲಿಂಗವನಾಚರಿಸಬಲ್ಲಾತನೆ ಸ್ವಯಜ್ಞಾನಸಂಬಂಧಿಯೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಹಸ್ರದಳಕಮಲಮಂಟಪದಲ್ಲಿ ಓಂಯೆಂಬ ತಾಯಿ ಒಬ್ಬ ಮಗನ ಹಡೆದು ಸಾಕಿ ಸಲುಹಿ ತನ್ನಂತೆ ಮಾಡಿಕೊಂಡು ತತ್ಪುರುಷಲೋಕದಲ್ಲಿರುವ ಈಶ್ವರನ ಮಗಳ ತಕ್ಕೊಂಡು, ನಿಟಿಲವೆಂಬ ಹಸೆಯಜಗುಲಿಯ ಮೇಲೆ ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ, ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬವ ನಿಲ್ಲಿಸಿ, ಮಹಾಜ್ಞಾನವೆಂಬ ಹಂದರವ ಹೊಂದಿಸಿ, ಪ್ರಾಣಾಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯಯೆಂಬ ಹತ್ತು ತೋರಣವ ಕಟ್ಟಿ, ಚಂದ್ರ ಸೂರ್ಯರೆಂಬ ದೀವಿಗೆಯ ಮುಟ್ಟಿಸಿ, ಪಾತಾಳಲೋಕದಲ್ಲಿರ್ಪ ಭಕ್ತನ ಕರೆಸಿ, ಮತ್ರ್ಯಲೋಕದಲ್ಲಿರ್ಪ ಮಹೇಶ್ವರನ ಕರೆಸಿ, ಸ್ವರ್ಗಲೋಕದಲ್ಲಿರ್ಪ ಪ್ರಸಾದಿಯ ಕರೆಸಿ, ತತ್ಪುರುಷಲೋಕದಲ್ಲಿರ್ಪ ಪ್ರಾಣಲಿಂಗಿಯ ಕರೆಸಿ, ಈಶಾನ್ಯಲೋಕದಲ್ಲಿರ್ಪ ಶರಣನ ಕರೆಸಿ, ಈ ಪಂಚಮೂರ್ತಿಗಳಂ ಮಜ್ಜನಂಗೈಸಿ ಕುಳ್ಳಿರ್ದರು ನೋಡಾ ! ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೀಣೆ, ರುದ್ರಂಗೆ ಮೃದಂಗ, ಈಶ್ವರಂಗೆ ಶಂಖ, ಸದಾಶಿವಂಗೆ ಘಂಟೆ, ಈ ಪಂಚಮೂರ್ತಿಗಳು ನಾದವಾಲಗವಂ ಮಾಡುತಿಪ್ಪರು ನೋಡಾ ! ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಈ ಐವರು ನಾಂಟ್ಯವನಾಡುತ್ತಿಪ್ಪರು ನೋಡಾ ! ನಿಷ್ಪತಿಯೆಂಬ ಬಸವಣ್ಣನ ಮೇಲೆ ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ, ಸೋಮಬೀದಿ ಸೂರ್ಯಬೀದಿಯಲ್ಲಿ ಮೆರವಣಿಗೆಯಂ ಮಾಡಿ, ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಫಾಶಕ್ತಿ ಆದಿಶಕ್ತಿ ಪರಾಶಕ್ತಿ ಈ ಐವರು ನವರತ್ನದ ಹರಿವಾಣಗಳಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಸಪ್ತದೀಪಂಗಳ ರಚಿಸಿ ಓಂ ನಮೋ ಓಂ ನಮೋ ಶಿವಾಯಯೆಂದು ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಾಗರದ ತೆರೆಯ ಮೇಲೆ ಮಂಡೂಕ ಕುಳಿತು ಕೂಗುತಿದೆ ನೋಡಾ. ಆ ಕೂಗ ಕೇಳಿ ಸಮಪಾತಳದಲ್ಲಿಪ್ಪ ಸರ್ಪನು ಐದು ಮುಖವ ತೋರಿ ಆ ಮಂಡೂಕನ ನುಂಗಿ, ತನ್ನ ಸುಳುವ ತಾನೇ ತೋರುತ್ತಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...