ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಪ್ರಕೃತಿಯನಳಿದು, ಲಿಂಗಧ್ಯಾನವ ಮಾಡಿ, ಮಂಗಳಮಯದಲ್ಲಿ ಕೂಡಿ, ನಿರ್ಮಲಜ್ಞಾನಿಯಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವಿಲ್ಲದ ನಾರಿಯ ಮನೆಯಲ್ಲಿ ಆರುಮೂರು ಶಿವಾಲಯವ ಕಂಡೆನಯ್ಯ. ಆರುಮೂರು ಶಿವಾಲಯದೊಳಗೆ ಆರುಮೂರು ಲಿಂಗವಿಪ್ಪುವು ನೋಡಾ. ಆರುಮೂರು ಲಿಂಗದ ಭೇದವನರಿತು ಅಂಗವಿಲ್ಲದ ನಾರಿಯ ನೆರೆದು, ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಲಿಂಗಸಮರಸವಾದ ಬಳಿಕ ಕರಣದ ಹಂಗಿನ್ನ್ಯಾತಕಯ್ಯ? ಮಹಾಜ್ಞಾನಸಂಬಂಧವಾದ ಬಳಿಕ ಮಾತಿನ ಹಂಗಿನ್ನ್ಯಾತಕಯ್ಯ? ಭಾವನಿರ್ಭಾವವಾದ ಬಳಿಕ ನಾದಬಿಂದುಕಲೆಯ ಹಂಗಿನ್ನ್ಯಾತಕಯ್ಯ? ನಿಷ್ಕಲಲಿಂಗದಲ್ಲಿ ತಾನುತಾನಾದ ಬಳಿಕ ಯಾತರ ಹಂಗಿನ್ನ್ಯಾತಕಯ್ಯ ಝೇಂಕಾರ ನಿಜಲಿಂಗಪ್ರಭುವೆ?
--------------
ಜಕ್ಕಣಯ್ಯ
ಅಂಗದ ಕಳವಳವ ಲಿಂಗದಲ್ಲಿ ಅಳಿದು, ಮನದ ಭ್ರಾಂತಿಯ ಭಾವದಲ್ಲಿ ಅಳಿದು, ಇದು ಕಾರಣ, ಶಿವಜ್ಞಾನಿಯಾದ ಶರಣನು ತನ್ನತಾನೇ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಜನಸ್ಥಾನಗಳಿಂದ ನಾಭಿಯ ಪವನವತ್ತಿ ನಾಶಿಕಾಗ್ರದಲ್ಲಿ ನಿಂದು, ರವಿ ಶಶಿಯ ಬೆಳಗನೊಳಕೊಂಡು, ಉನ್ಮನಿಯ ಸ್ಥಾನದಲ್ಲಿ ನಿಂದು, ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನಾದಿಯ ಜಂಗಮವು ಶಿವಭಕ್ತನ ಮಠಕೆ ಬಂದು 'ಭಿಕ್ಷೆ ಲಿಂಗಾರ್ಪಿತಾ' ಎನಲು ಆ ಭಕ್ತನು ಜಂಗಮಕ್ಕೆ ಎರಗಿ, ಸಿಂಹಾಸನದ ಗದ್ದುಗೆಯ ಮಾಡಿ, ಆ ಜಂಗಮವ ಮೂರ್ತಂಗೊಳಿಸಿ ತನ್ನಲ್ಲಿರ್ದ ಪರಮಪ್ರಸಾದವ ಎಡೆಮಾಡಿ ನೀಡಲೊಡನೆ, ಆ ಜಂಗಮವು ಸ್ವೀಕರಿಸಲು, ಆ ಭಕ್ತನ ಕರ್ಮದೋಷವೆಲ್ಲ ಹಿಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವಿಲ್ಲದ ಬಾಲೆಯು ಅಂಗಳದೊಳಗೆ ಕುಳಿತು ಮಂಗಳಾರತಿಯ ಅಂಗಲಿಂಗ ಸಂಯೋಗವೆಂಬ ಲಿಂಗಕ್ಕೆ ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವೆಂಬ ಶಿವಾಲಯದೊಳಗೆ ಆನಾದಿಲಿಂಗವು ಚತುರ್ದಶ ಭುವನಂಗಳ ನುಂಗಿಕೊಂಡು ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ. ಆ ಸುಳುವಿನ ಭೇದವನರಿತು ಲಿಂಗಾರ್ಚನೆಯಂ ಮಾಡಿ ಕೂಡಿ ಸಮರಸವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರಿವು ಮರವ ನುಂಗಿತ್ತು ಅಯ್ಯಾ. ಮರವು ಅರಿವ ನುಂಗಿತ್ತು ಅಯ್ಯಾ. ಅರಿವು ಮರವನೊಳಕೊಂಡು ಪರಿಪೂರ್ಣವಾಗಿದ್ದೆನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದ ಗುಣಾದಿಗಳನಳಿದು, ಭಾವ ಬೆಳಗಿನೊಳು ಕೂಡಿ, ತ್ರಿಕೂಟದಲ್ಲಿ ನಿಂದು, ಪರಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು, ಶಿಖಾಚಕ್ರವೆಂಬ ಮೇರುವೆಯಂ ಹತ್ತಿ, ಪಶ್ಚಿಮದ್ವಾರವೆಂಬ ನಿರಂಜನಜ್ಯೋತಿಯ ನೋಡಿ ನಿರಾವಯವೆಂಬ ಕರಸ್ಥಲದ ಮೇಲೆ ನಿಃಶಬ್ದ ನಿರಾಳಲಿಂಗವಿಪ್ಪುದು ನೋಡಾ. ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದಲ್ಲಿ ಜ್ಞಾನಸಂಬಂಧವಾದ ಶರಣಂಗೆ ಅಜ್ಞಾನದ ಭಯವುಂಟೇನಯ್ಯ ? ಅಜ್ಞಾನಭಯವಳಿದು ನಿಶ್ಚಿಂತ ನಿರಾಕುಳಲಿಂಗದಲ್ಲಿ ಕೂಡಬಲ್ಲಾತನೆ ಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಷ್ಟಕುಲಪರ್ವತದ ಮೇಲೆ ದೃಷ್ಟಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಒಬ್ಬ ಪುರುಷನು ಕಷ್ಟಕರ್ಮವನಳಿದು, ಬಟ್ಟಬಯಲನೊಳಗೊಂಡು, ನಿಃಶಬ್ದವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಬರದ ಮನೆಯೊಳಗೆ ಗಾಂಭೀರ್ಯತ್ವದ ಅಂಗನೆಯ ಕಂಡೆನಯ್ಯ. ಆಕೆಯ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆ ಪರವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವೆಂಬ ಭೂಮಿಯಲ್ಲಿ ಸಂಗಸಮರಸವೆಂಬ ಪುರುಷನು ಹಿಂಗದೆ ಪರಮಾನಂದ ಪ್ರಭೆಯಲ್ಲಿ ಕೂಡಿ ಮಂಗಳಮಯವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಷ್ಟಮದಂಗಳ ಸುಟ್ಟು, ಕಷ್ಟಕರ್ಮವ ಹರಿದು, ಬಟ್ಟಬಯಲಲ್ಲಿ ದೃಷ್ಟಲಿಂಗವ ಕಂಡು, ಶ್ರೇಷ*ನಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಷ್ಟಕುಲಪರ್ವತದ ಮೇಲೆ ಮಹಾ ದೃಷ್ಟಲಿಂಗವ ಕಂಡೆನಯ್ಯ. ಆ ಲಿಂಗವ ನೋಡಹೋಗದ ಮುನ್ನ, ಅದು ಎನ್ನ ನುಂಗಿತು. ಅದಕ್ಕೆ ಮನಧ್ಯಾನ ಲಿಂಗಧ್ಯಾನ ಮಹಾಧ್ಯಾನ ಇಂತೀ ತ್ರಿವಿಧ ಧ್ಯಾನಗಳಿಂದತ್ತತ್ತ ತಾನು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದ ಮೇಲೆ ಶಿವಲಿಂಗವ ನೆಲೆಗೊಂಡು, ಲಲಾಟದಲ್ಲಿ ಶ್ರೀ ವಿಭೂತಿಯಂ ಧರಿಸಿ, ಗರಳದಲ್ಲಿ ರುದ್ರಾಕ್ಷಿಯ ಧರಿಸಿ, ಓಂ ನಮೋ ಶಿವಾಯವೆಂಬ ಮಂತ್ರ ಅಷ್ಟಾವರಣಯುಕ್ತನಾಗಿ ಇರಬಲ್ಲವನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಕೆ ಗುರುವಾದನಯ್ಯ, ಪ್ರಾಣಕೆ ಲಿಂಗವಾದನಯ್ಯ, ಭಾವಕೆ ಜಂಗಮವಾದನಯ್ಯ. ಆ ಜಂಗಮದ ಪರಮಪ್ರಸಾದವ ಸ್ವೀಕರಿಸಬಲ್ಲಾತನೆ ಅನಾದಿಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದೊಳಗಿಪ್ಪ ಲಿಂಗವನು ಸಹಜಸಮ್ಯಕ್‍ಜ್ಞಾನದಿಂದ ತಿಳಿದು, ಏಕೋಭಾವದಲ್ಲಿ ನಿಂದು, ನಿರ್ವಿಕಲ್ಪ ನಿತ್ಯಾತ್ಮಕವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗ ಬೆಳಗಿನ ಸುಳುವನರಿತು ಶಾಂತಲಿಂಗವ ಕೂಡಿ ನಾನು ನೀನೆಂಬ ಉಭಯವನಳಿದು ಲಿಂಗೈಕ್ಯದಲ್ಲಿ ನಿಂದ ನಿರ್ಮಳಜ್ಞಾನಿಯ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಜ್ಞಾನವೆಂಬ ಕರ್ಮಕೋಟಲೆಯ ಹರಿದು ಸುಜ್ಞಾನವೆಂಬ ಪಥದೊಳು ಕೂಡಿ ಘನಕೆಘನವಾದ ಲಿಂಗದೊಳು ಆಚರಿಸಬಲ್ಲಡೆ ಆತನೆ ನಿರ್ಮುಕ್ತ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಹಂಕಾರವೆಂಬ ಕೊಂಬ ಮುರಿದು ನಾನು ನೀನುಗಳೆಂಬ ಉಭಯಗಳನಳಿದು ನಿಂದು ಸ್ವಾನುಭಾವಸಿದ್ಧಾಂತದೊಳು ಮೈಮರೆದು ಆಚರಿಸಬಲ್ಲಾತನೆ ನಿಮ್ಮ ಸಂಬಂಧಿ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಬರದ ಮನೆಯೊಳಗೆ ತುಂಬಿತೋರುವ ಶಂಭುಲಿಂಗವ ಕಂಡೆನಯ್ಯ. ಆ ಲಿಂಗದ ಕಿರಣದೊಳಗೆ ಅನಂತಕೋಟಿ ಚಂದ್ರಸೂರ್ಯಾದಿಗಳು ಅಡಗಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಜಹರಿಸುರನಾರದರು ಮೊದಲಾದವರಿಂಗೆ ಶಿವಜ್ಞಾನ ಅಗೋಚರವೆನಿಸಿತ್ತು ನೋಡಾ. ಸ್ವಯಜ್ಞಾನ ಉದಯವಾದ ಶರಣಂಗೆ ಆ ಶಿವಜ್ಞಾನ ಘಟಿಸುವುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬದ ಗುಡಿಯ ಶಿಖರದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತಯ್ಯ. ಆ ಬೆಳಗಿನ ಸುಳುಹ ತಾನೇ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...