ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಮ್ಮ ತನು, ನಿಮ್ಮ ಧನ, ನಿಮ್ಮ ಮನ ನಿಮ್ಮದಲ್ಲದೆ ಅನ್ಯವೆಂದಣುಮಾತ್ರವಿಲ್ಲ ನೋಡಯ್ಯಾ. ಭಕ್ತನ ಮಠವೆ ತನ್ನ ಮಠವೆಂದು ಮುನ್ನವೆ ಅರಿದರಿದು ಬಂದು, ಮತ್ತೊಂದ ಮತ್ತೊಂದ ನೆನೆವರೆ ? ಬಸವಪ್ರಿಯ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ ಸ್ವತಂತ್ರಭಾವವುಳ್ಳಡೆ ನಿಮ್ಮ ಪಾದದಾಣೆ.
--------------
ಸಂಗಮೇಶ್ವರದ ಅಪ್ಪಣ್ಣ
ನೆಲನ ಹೊದ್ದದು, ಆಕಾಶವ ಮುಟ್ಟದು ಎಡೆಯಲೊಂದು ರೂಪಿಲ್ಲ. ಭಾವವೆ ಕಂಬ, ಜ್ಞಾನವೆ ನಿವಾಸ, ನಿರ್ಲೇಪವೆ ಭಿತ್ತಿ, ನಿರಂಹಕಾರವೆ ಶಿಖರಿ, ಮಹದಹಂಕಾರವೆ ಶೃಂಗಾರ ಕಳಶ, ಸಹಸ್ರಪತ್ರದ ನವಕಮಳ ಸಿಂಹಾಸನ, ನಿತ್ಯವೆ ಮಲಗು. ನಿಜವೆಂಬ ವಿಸ್ತರದಲ್ಲಿ ನಿತ್ಯನಿರಾಳವೆಂಬ ಮಹಾಘನವು ಬಂದು ಮೂರ್ತಿಗೊಳಲು, ಕಾಯದ ಕಂಗೆ ಕಾಣಬಾರದು, ಮನದ ಮುಂದೆ ಅಳವಡದು, ಭಾವದ ಬಗೆಗೆ ಮೇಲುದೋರದು. ಬಸವಪ್ರಿಯ ಕೂಡಲಚೆನ್ನಸಂಗನಲ್ಲಿ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂಬೆನು.
--------------
ಸಂಗಮೇಶ್ವರದ ಅಪ್ಪಣ್ಣ
ನಿರಾಕಾರದ ಶಕ್ತಿಯಲ್ಲಿ ನಿರಾಳವೆಂಬ ತನು, ನಿಃಶೂನ್ಯವೆಂಬ ಶೂನ್ಯಸಿಂಹಾನದ ಮೇಲೆ ಘನವಾಗಿ ತೊಳಗಿ ಬೆಳಗುತ್ತಿರ್ದನು. ದೆಸೆಯಲ್ಲಾ ಮುಖವಾಗಿ, ಮುಖವೆಲ್ಲಾ ಜಗವಾಗಿ, ಅಖಂಡಪರಿಪೂರ್ಣ ಪರಬ್ರಹ್ಮ ತಾನಾದನು. ಈ ಮಹಿಮನ ನೆನೆದಡೆ ಮನೋಮುಕ್ತಿ , ಕಂಡಡೆ ರೂಪುಮುಕ್ತಿ, ನುಡಿಸಿದಡೆ ಶಬ್ದಮುಕ್ತಿ , ಸಂಗವ ಮಾಡಿದಡೆ ಸರ್ವಾಂಗಲಿಂಗೈಕ್ಯ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ನಿಮ್ಮ ಪ್ರಭುವಿನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು.
--------------
ಸಂಗಮೇಶ್ವರದ ಅಪ್ಪಣ್ಣ
ನಾನೊಂದೂರಿಗೆ ಹಾದಿಯ ಕೇಳಿಕೊಂಡು ಹೋಗುತ್ತಿರಲಾಗಿ, ಮುಂದೆ ಅರಣ್ಯದೊಳಗೆ ಮೂರುಬಟ್ಟೆಯಾಯಿತ್ತು. ಎರಡು ಪಥವ ಬಿಟ್ಟು, ಒಂದು ಪಥವ ಹಿಡಿದು ಬರಲಾಗಿ, ಮುಂದೆ ಮೂರು ಬಟ್ಟೆಯೂ ಒಂದಾದವು. ಆ ಮೂರು ಬಟ್ಟೆ ಕೂಡಿದ ಬಳಿಯಲೊಂದು ಬೆಟ್ಟ ಹುಟ್ಟಿತ್ತು. ಆ ಬೆಟ್ಟವ ಏರಬಾರದು, ಇಳಿಯಬಾರದು. ಆ ಬೆಟ್ಟವ ಬಿಟ್ಟು ಹೋದಡೆ ಎನಗೆ ಪಥವಿಲ್ಲಾಯೆಂದು ಸುತ್ತಿಸುತ್ತಿ ನೋಡುತ್ತಿರಲಾಗಿ, ಆರು ಮೆಟ್ಟಿನದೊಂದು ಏಣಿ ಹಾಕಿರುವುದ ಕಂಡೆ. ಆ ಏಣಿಯ ಮೆಟ್ಟಿ ಮೆಟ್ಟಿ, ಆ ಬೆಟ್ಟದ ತುಟ್ಟತುದಿಯನೇರಿ ನೋಡಲಾಗಿ, ಬಟ್ಟಬಯಲಾಗಿದ್ದಿತು. ಆ ಬಟ್ಟಬಯಲೊಳಗೆ ಹತ್ತಿ ಹೋಗುತ್ತಿರಲಾಗಿ, ನಾನೆತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ನಾಲಿಗೆಗೆ ಶಿವನ ಹೊಗಳುವುದೇ ವಿಧಿಯೆಂದು ಹೇಳಿತ್ತು ವೇದ. ಮತ್ತೆಯೂ ಶಿವನನೆ ಸ್ತುತಿಸುವುದೆ ವಿಧಿಯೆಂದು ಹೇಳಿತ್ತು ವೇದ. ಅನ್ಯದೈವವ ಹೊಗಳಲಾಗದೆಂದುದು, ಋಗ್ವೇದ. ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಬೀಮಮುಪಹತ್ನು ಮುಗ್ರಂ | ಮೃಡಾ ಜರಿತ್ರೇ ರುದ್ರಸ್ತವಾನೋ ಅನ್ಯಂತೇ ಅಸ್ಮಿನ್ನಿವ ಪಂತು ಸೇನಾಃ || ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ನಿನ್ನಳವಲ್ಲ, ಎನ್ನಳವಲ್ಲ, ಇದಾರಳವಲ್ಲದ ಘನವು ನೋಡಯ್ಯಾ ; ಕಾಬಡೆ ಕಂಗಳಿಗೆ ಅಸಾಧ್ಯ, ಮುಟ್ಟುವಡೆ ಸೋಂಕಿಂಗಸಾಧ್ಯ, ಮಾತನಾಡಿಸಿ ನೋಡಿದಡೆ ವಾಙ್ಮನಾತೀತ, ನಿಂದಡೆ ನೆಳಲಿಲ್ಲ, ಸುಳಿದಡೆ ಹೆಜ್ಜೆಯಿಲ್ಲ, ಪ್ರಭುದೇವರೆಂಬ ಭಾವ ತೋರುತ್ತದೆ. ಬಸವಪ್ರಿಯ ಕೂಡಲಚೆನ್ನಸಂಗನ ಶರಣರ ಚರಣವ ಪಿಡಿಯಲೇಳಾ ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ