ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೈವವೆನಿಸಿಕೊಂಬ ಎಲ್ಲ ದೈವಂಗಳ ಬಿಟ್ಟು, ಶಿವನನೊಬ್ಬನೆ ಹಿಡಿಯೆಂದುದಥರ್ವಣ ವೇದ. ಶಿವನ ಪೂಜಿಸಿ, ಶಿವನ ನೆನೆದು, ಶಿವನ ಸ್ತುತಿಸುವುದೆಂದುದಥರ್ವಣ ವೇದ. `ಈಶೋವಾ ಶಿವ ಏಕೋಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್' ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ದೇವ ದೇವ ಮಹಾಪ್ರಸಾದ: ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯಾ. ತನುಮನಧನವ ಹಿಂದಿಕ್ಕಿಕೊಂಡಿಪ್ಪ ವಂಚಕ ನಾನಯ್ಯಾ. ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೆ ? `ಚಕಿತಮಬ್ಥಿದತ್ತೇ ಶ್ರುತಿರಪಿ' ಎನಲು, ಎನ್ನ ನುಡಿ ನಿಮ್ಮ ಶರಣರ ತಾಗಬಲ್ಲುದೆ ? ಹಣೆಯ ಹೊಣೆಯ ತೋರಿ ಉದರವ ಹೊರೆವಂತೆ, ನಿಮ್ಮ ಮರೆಯಲಡಗಿರ್ಪ ಹಡಪಿಗ ನಾನಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗನ ಶರಣರು ಎನ್ನ ಮಾತಿಗೆ ಬಾರರು, ನೀವೆ ಹೋಗಿ ಬಿಜಯಂಗೈಸಿಕೊಂಡು ಬಾರಾ, ಸಂಗನಬಸವಣ್ಣಾ .
--------------
ಸಂಗಮೇಶ್ವರದ ಅಪ್ಪಣ್ಣ
ದೇವಾ ನಿಮ್ಮ ಪರಿಹಾಸ ಪರಿ ಪರಸಮಯಿಗಳ ಮನೆಯಲಿಪ್ಪರೆ. ದೇವಾ ದೇವಾ ನಿಮ್ಮ ಪರಿಹಾಸ ಪರಿಹರಿಸರಿಯೆಂಬ ಮಾತ ಹುಟ್ಟಿಸುವರೆ ಜಗದಿ. ದೇವಾ ನೀವು ಮಾಡಿದ ಮಾಯೆ ಅಲ್ಲದಿರ್ದಡೆ ನೊರಜುಗಳ ಸರಿಯೆಂಬರೆ ಹೇಳಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
--------------
ಸಂಗಮೇಶ್ವರದ ಅಪ್ಪಣ್ಣ
ದೇವ ದೇವ ಮಹಾಪ್ರಸಾದ: ಕಂಗಳಲ್ಲಿ ಕರುಳಿಲ್ಲ, ಕಾಯದಲ್ಲಿ ಹೊರೆಯಿಲ್ಲ, ನುಡಿಯಲ್ಲಿ ಕಡೆಯಿಲ್ಲ, ನಡೆಯಲ್ಲಿ ಗತಿಯಿಲ್ಲ. ಇದೆಂತಹ ಸುಳುಹೆಂದರಿಯೆ, ಇದೆಂತಹ ನಿಲುವೆಂದು ತಿಳಿಯಬಾರದು. ಮರುಳಿಲ್ಲದ ಮರುಳು, ಅರಿವಿಲ್ಲದ ಅರಿವು. ಬಸವಪ್ರಿಯ ಕೂಡಲಚೆನ್ನಸಂಗನ ಶರಣರ ಬರವು ಕೌತುಕವಾಯಿತ್ತು, ಚಿತ್ತೈಸಯ್ಯಾ ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ
ದ್ವಿಜರೊಮ್ಮೆ ಮರೆದು ನೀಳಬೊಟ್ಟನಿಟ್ಟರಾದಡೆ, ಅದರ ಪರಿಯಲೆ ಅಸಿಯ ಗರಗಸವ ಮಾಡಿ, ಯಮಕಿಂಕರರು ಸೀಳುವರೆಂದುದು ನೋಡಾ. ಸ್ಕಾಂದೇ: ಊಧ್ರ್ವಪುಂಡ್ರಂ ದ್ವಿಜಂ ಕುರ್ಯಾತ್ ಲೀಲಯಾಪಿ ಕದಾಚನ | ತಥಾ ಕಾಲೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈಃ || ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಂಚಂದ್ರಕಮ್ | ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ || ಇದನರಿದಿನ್ನು ದ್ವಿಜರು ನಂಬಿ, ಬೇಗ ವಿಭೂತಿಯನಿಟ್ಟು ಬದುಕಿ, ಬಸವಪ್ರಿಯ ಕೂಡಲಚೆನ್ನಸಂಗನನೊಲಿಸುವಡೆ.
--------------
ಸಂಗಮೇಶ್ವರದ ಅಪ್ಪಣ್ಣ