ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗ ಜಂಗಮ, ಜಂಗಮ ಲಿಂಗವೆಂಬುದನಾರು ಬಲ್ಲರು ? ಬಸವಣ್ಣನಲ್ಲದೆ. ಲಿಂಗಕ್ಕೆ ಆಧಾರವಿಲ್ಲವೆಂದು ಮತ್ರ್ಯಲೋಕಕ್ಕೆ ಬಂದು, ಅವತರಿಸಿದನಯ್ಯಾ ಬಸವಣ್ಣನು. ಲಿಂಗಮುಖ ಜಂಗಮವೆಂದರಿದು, ತನ್ನನರ್ಪಿಸಿ, ಇದಿರ ತಪ್ಪಿಸಿ ಇರಬಲ್ಲನಯ್ಯಾ ಬಸವಣ್ಣನು. ಅಂಗಮುಖವೆಲ್ಲ ನಷ್ಟವಾಗಿ, ಭೃತ್ಯಾಚಾರವೆ ತನುವಾಗಿರಬಲ್ಲನಯ್ಯಾ ಬಸವಣ್ಣನು. ಪ್ರಾಣನ ಕಳೆಯರತು ಜಂಗಮವೇ ಪ್ರಾಣವಾಗಿರಬಲ್ಲನಯ್ಯಾ ಬಸವಣ್ಣನು. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಆಚಾರವೇ ಪ್ರಾಣವಾಗಿಪ್ಪ ಸಂಗನಬಸವಣ್ಣನೆ ನಿಮಗೆ ಭಕ್ತನಯ್ಯಾ ಪ್ರಭುವೆ.
--------------
ಸಂಗಮೇಶ್ವರದ ಅಪ್ಪಣ್ಣ
ಲಿಂಗ ಮುಟ್ಟಿ ಆಚಮನ ಮಾಡುವರು ಲಿಂಗಾಂಗಿಗಳಲ್ಲದವರು. ಮಾಡಿದಡೆಯೂ ಮಾಡಲಿ. ಲಿಂಗ ಪಾದೋದಕವ ಧರಿಸಿ, ಮರಳಿ ಅಪವಿತ್ರ ಶಂಕೆಯಿಂದ ಆಚಮನ ಮಾಡಿದಡೆ ಅಘೋರನರಕದಲ್ಲಿಕ್ಕುವದಯ್ಯಾ, ಆ ಪಾದೋದಕವೆ ವಿಷವಾಗಿ. ಅದೆಂತೆಂದಡೆ: ಶಂಭೋಃ ಪಾದೋದಕಂ ಪೀತ್ವಾ ಪಶ್ಚಾದಶುಚಿಶಂಕಯಾ | ಯ ಆಚಮತಿ ಮೋಹೇನ ತಂ ವಿದ್ಯಾದ್ಬ್ರಹ್ಮ ಘಾತಕಂ || ಇಂತೆಂಬ ವಚನವ ಕೇಳಿ ನಂಬುವದಯ್ಯಾ. ಪರಮಪಾವನವಪ್ಪ ಪಾದೋದಕವ ನಂಬದವರು, ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ ದೂರ.
--------------
ಸಂಗಮೇಶ್ವರದ ಅಪ್ಪಣ್ಣ
ಲಿಂಗ ಮುಂತಾದ ಭಕ್ತನ ಅಂಗದ ಮೇಲಣ ಲಿಂಗ ಹೋಯಿತ್ತೆಂದು ಸಂದೇಹವ ಮಾಡಿ, ಶೈಲ ವಾರಿ ಪಾಶ ಶಸ್ತ್ರ ಸಮಾಧಿ ಎಂಬಿವ ಕೊಳಲಾಗದು. ಅದೆಂತೆಂದಡೆ: ಭಕ್ತಸ್ಯ ಲಿಂಗದೇಹಸ್ಯ ತದೇಹಂ ಲಿಂಗವರ್ಜಿತಂ | ಶಸ್ತ್ರ ಶೈಲಂ ಜಲಂ ಪಾಶಂ ಸಮಾಧಿಶ್ಚ ವಿವರ್ಜಯೇತ್ || ಎಂದುದಾಗಿ, ಇದಕ್ಕೆ ಮುಕ್ತಿಯನೆಯುವ ಪಥವೆಂತೆಂದಡೆ: ನಿಶ್ಚಿತಂ ನಿರ್ಮಲಂ ಚೈವ ನಿಶ್ಚಲಂ ನಿರುಪಾಧಿಕಂ | ಭುಕ್ತಿಮುಕ್ತಿಪ್ರದಾತಾಹ ಇತ್ಯತ್ವಂ ಶಿವಮಂದಿರಂ || ಎಂದುದಾಗಿ, ಧ್ಯಾನ ಧಾರಣ ಸಮಾಧಿಯಲ್ಲಿಹುದು. ಅದೆಂತೆಂದಡೆ: ತಪೋ ಧ್ಯಾನಾಧಿಕಂ ಕುರ್ವನ್ ರುದ್ರಾಕ್ಷಂ ಧಾರಯನ್ ಸದಾ | ಶಿವಮಂತ್ರಜಪಂ ಶ್ಚೈವ ಶಿವಲೋಕೇ ಮಹೀಯತೇ || ಇಂತೆಂಬ ಶ್ರುತಿಯ ಮೀರಿ, ಅಂಗಕ್ಕೆ ಆಸೆಯ ಮಾಡಿ, ಲಿಂಗವ ಧರಿಸಿ ಪೂಜೆಯ ಮಾಡುವ ಶಿಷ್ಯ ಗುರುದ್ರೋಹಿ. ಹಣವಿಗಾಸೆ ಮಾಡಿ ಲಿಂಗಧಾರಣ ಮಾಡುವ ಗುರು ಶಿವದ್ರೋಹಿ. ಅದೆಂತೆಂದಡೆ: ಲಿಂಗಬಾಹ್ಯಕೃತಂ ದೃಷ್ಟ್ವಾ ಪುನರ್ಲಿಂಗಂತು ಧಾರಯೇತ್ | ಪೂಜಾಯಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ || ಎಂದುದಾಗಿ, ಇಂತು ಇವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ, ವಿಭೂತಿ ರುದ್ರಾಕ್ಷಿ ಪ್ರಣವ ಪಂಚಾಕ್ಷರಿ ಇಲ್ಲವಾಗಿ ಸತ್ಪಥಕ್ಕೆ ಸಲ್ಲರು ಕಾಣಿಭೋ. ಇವರು ಕಂಡಕಂಡವರೊಡನೆ ಹರಿವ ಚಾಂಡಾಲಗಿತ್ತಿಯಂತೆ. ಇವಂದಿರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ