ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಧಾರಚಕ್ರದಲ್ಲಿ ನಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಬ್ರಹ್ಮನು ಉತ್ತರಖಂಡಣೆಯೆಂಬ ವೇದವನುಚ್ಚರಿಸುತ್ತಿಹನು. ಸ್ವಾದ್ಥಿಷ್ಠಾನಚಕ್ರದಲ್ಲಿ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ವಿಷ್ಣು ಪ್ರೌಢಲಕ್ಷಿತವೆಂಬ ವೇದವನುಚ್ಚರಿಸುತ್ತಿಹನು. ಮಣಿಪೂರಕಚಕ್ರದಲ್ಲಿ ಶಿಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ರುದ್ರನು ಋಗ್ವೇದವನುಚ್ಚರಿಸುತ್ತಿಹನು. ಅನಾಹತಚಕ್ರದಲ್ಲಿ ವಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಈಶ್ವರನು ಯಜುರ್ವೇದವನುಚ್ಚರಿಸುತ್ತಿಹನು. ವಿಶುದ್ಧಿಚಕ್ರದಲ್ಲಿ ಯಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಸದಾಶಿವ ಸಾಮವೇದವನುಚ್ಚರಿಸುತ್ತಿಹನು. ಆಜ್ಞಾಚಕ್ರದಲ್ಲಿ ಒಂಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಉಪಮಾತೀತನು ಅಥರ್ವಣವೇದವನುಚ್ಚರಿಸುತ್ತಿಹನು. ಬ್ರಹ್ಮರಂಧ್ರದಲ್ಲಿ ಅಕಾರ ಉಕಾರ ಮಕಾರವೆಂಬ ಬೀಜಾಕ್ಷರವಿಹುದು, ಅಲ್ಲಿ ಪ್ರಕೃತಿ ವಿಕೃತಿಗಳು ಗಾಯತ್ರಿಯನುಚ್ಚರಿಸುತ್ತಿಹವು. ಇಂತಿವೆಲ್ಲವನರಿದು ಮರದು, ನಿಜಲಿಂಗ ನಿಜಮಂತ್ರಂಗಳಲ್ಲಿ ಪರವಶವಾಗಿರ್ದೆನು ಕಾಣಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಆದಿ ಅನಾದಿಯೆಂಬವು ಸಂಗಷ್ಟವಾಗಿರ್ದು, ವಿಭೇದವಾಗುವಲ್ಲಿ ಕುಂಡಲಿಯ ಶಕ್ತಿಯಲ್ಲಿ ಪ್ರಾಣವಾಯು ಪ್ರಣವಸ್ವರವನೊಡಗೂಡಿ ಬ್ರಹ್ಮಸ್ಥಾನದಲ್ಲಿ ಸ್ಥಾಪ್ಯ ಶಿವನಾಗಿ, ಭ್ರೂಮಧ್ಯಕಂಠಸ್ಥಾನದಲ್ಲಿ ನಿಃಕಲಸ್ವರೂಪನಾಗಿ, ಹೃದಯನಾಬ್ಥಿಯಲ್ಲಿ ಸಕಲನಿಃಕಲನಾಗಿ, ಸ್ವಾದ್ಥಿಷ್ಠಾನ ಆಧಾರದಲ್ಲಿ ಕೇವಲಸಖನಾಗಿ, ಆ ಸಕಲಕ್ಕೆ ಎರಡು ಪಾದವನಿತ್ತು, ಒಂದು ಪಾದಕ್ಕೆ ಕ್ರಿಯಾಶಕ್ತಿ, ಒಂದು ಪಾದಕ್ಕೆ ಜ್ಞಾನಶಕ್ತಿಯ ಮಾಡಿ ನಿಲ್ಲಿಸಿ, ಮೇಲಣ ಸಕಲ ನಿಃಕಲತತ್ತ್ವಕೈದಿ, ಅಲ್ಲಿಗೆ ಎರಡು ಹಸ್ತವನಿತ್ತು, ಒಂದು ಹಸ್ತಕ್ಕೆ ಆದಿಶಕ್ತಿ, ಒಂದು ಹಸ್ತಕ್ಕೆ ಇಚ್ಛಾಶಕ್ತಿಯನಾದಿ ಮಾಡಿ ನಿಲಿಸಿ, ಮೇಲಣ ನಿಃಕಲತತ್ತ್ವವನೈದಿ, ಅಲ್ಲಿಗೆ ನಾಲ್ಕು ಪಾದವನಿತ್ತು, ಅವು ಆವವು ಎಂದಡೆ, ಜಿಹ್ವೆ ಘ್ರಾಣ ನೇತ್ರ ಶ್ರೋತ್ರವೆಂಬ ನಾಲ್ಕು ಪಾದ ವನಾದಿಮಾಡಿ ನಿಲ್ಲಿಸಿ, ನಾಲ್ಕು ಪಾದವಂ ನಿಲ್ಲಿಸಿದುದರಿಂದ ನಂದಿಯೆಂಬ ನಾಮವಾಯಿತ್ತು. ಆ ನಂದೀಶ್ವರಂಗೆ ಚಿತ್‍ಶಕ್ತಿಯೆ ಅಂಗ, ಪರಶಕ್ತಿಯೆ ಮುಖ. ಇಂತಪ್ಪ ನಂದೀಶ್ವರ ನಲಿದಾಡಿ ಅನಾದಿ ಪರಶಿವ ಅಖಿಳ ಬ್ರಹ್ಮಾಂಡವ ಹೊತ್ತಿಪ್ಪನಲಾಯೆಂದರಿದು, ಆದಿವಾಹನವಾದನು, ಅದೀಗ ಆದಿವೃಷಭನೆಂಬ ನಾಮವಾಯಿತ್ತು. ಆದಿವೃಷಭನ ಆದಿಯಲ್ಲಿ ಪರಶಿವನಿಪ್ಪನು, ಆ ಪರಶಿವನಾದಿಯಲ್ಲಿ ನಿಃಕಲವಿಪ್ಪುದು, ಆ ನಿಃಕಲದಾದಿಯಲ್ಲಿ ಸಕಲ ನಿಃಕಲವಿಪ್ಪುದು. ಆ ಸಕಲ ನಿಃಕಲದಾದಿಯಲ್ಲಿ ಕೇವಲ ಸಕಲವಿಪ್ಪುದು. ಆ ಸಕಲವೆಂದರೆ ಅನಂತತತ್ತ್ವ. ಬ್ರಹ್ಮಾಂಡ ಕೋಟ್ಯಾನುಕೋಟಿ ಲೋಕಾಲೋಕಂಗಳು ದೇವದಾನವ ಮಾನವರು ಸಚರಾಚರ ಎಂಬತ್ತನಾಲ್ಕು ಲಕ್ಷ ಜೀವಜಂತುಗಳುದ್ಭವಿಸಿದವು. ಆ ಪಿಂಡ ಬ್ರಹ್ಮಾಂಡದ ಹೊರೆಯಲ್ಲಿ ಸಕಲಪದಾರ್ಥಗಳುದ್ಭವಿಸಿದವು. ಸಕಲಪದಾರ್ಥಂಗಳ ಪುಣ್ಯಪಾಪದ ಸಾರವ ಕೈಕೊಂಬುದಕ್ಕೆ ದೇವನಾವನುಂಟೆಂದು ಆಹ್ವಾನಿಸಿ ನೋಡಲು, ಆ ನಿಃಕಲ ಮಹಾಲಿಂಗವೆ ಕ್ರಿಯಾಶಕ್ತಿಯ ಮುಖದಲ್ಲಿ ಇಷ್ಟಲಿಂಗವಾಗಿ ಬಂದು, ಜ್ಞಾನಶಕ್ತಿಮುಖದಲ್ಲಿ ಸಕಲಪದಾರ್ಥಂಗಳ ಕೈಕೊಂಬಲ್ಲಿ, ಪುಣ್ಯಪಾಪಂಗಳ ಸಾರವಳಿದು, ಲಿಂಗ ಸಾರವಾದ ರೂಪ ಇಷ್ಟಲಿಂಗಕ್ಕೆ ಕೊಟ್ಟು, ಆ ರುಚಿಪ್ರಸಾದವ ಜ್ಞಾನಶಕ್ತಿ ಆದಿಶಕ್ತಿ ಕೈಯಲ್ಲಿಪ್ಪ ಪ್ರಾಣಲಿಂಗಕ್ಕೆ ಇಚ್ಛಾಶಕ್ತಿಯ ಮುಖದಲ್ಲಿ ಕೊಡಲು, ಆ ರುಚಿ ಪ್ರಸಾದವ ಪ್ರಾಣಲಿಂಗವಾರೋಗಿಸಿ, ಪರಮ ಪರಿಣಾಮವನೈದಲು, ಆ ಪರಿಣಾಮ ಪ್ರಸಾದವ ಜ್ಞಾನಶಕ್ತಿಯು ನಂದೀಶ್ವರಂಗೆ ಕೊಡಲು, ಆ ಪರಮ ತೃಪ್ತಿಯ ಶೇಷ ನಂದೀಶ್ವರ ಆರೋಗಿಸಿ ಪರವಶವನೈದಲು, ಆ ಪರವಶದ ಶೇಷವ ಜ್ಞಾನಶಕ್ತಿ ಆರೋಗಿಸಿ, ಅಡಿಮುಡಿಗೆ ತಾನೆ ಆದಿಯಾಗಲು, ಅದೀಗ ಅಡಿಮುಡಿಯ ಶೇಷ ಹೊತ್ತಿಪ್ಪನೆಂದು ವೇದಾಗಮಶಾಸ್ತ್ರಪುರಾಣಪುರುಷರು ನುಡಿಯುತಿಪ್ಪರು. ಇಂತಪ್ಪ ಬಸವನ ಆದಿಮೂಲವ ಬಲ್ಲ ಶರಣನಾಯಿತ್ತು ತೊತ್ತು ಮುಕ್ಕುಳಿಸಿ ಉಗುಳುವ ಪಡುಗ, ಮೆಟ್ಟುವ ಚರ್ಮ ಹಾವುಗೆಯಾಗಿ ಬದುಕಿದೆನು ಕಾಣಾ, ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಸಂಗಮೇಶ್ವರದ ಅಪ್ಪಣ್ಣ
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ