ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಕಾರ ನಿರಾಕಾರವೆನುತ್ತಿಹರೆಲ್ಲರು. ಆಕಾರವೆನ್ನ, ನಿರಾಕಾರವೆನ್ನ. ಲಿಂಗಜಂಗಮಪ್ರಸಾದದಲ್ಲಿ ತದ್ಗತನಾದ ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಪರಾತ್ಪರವಸ್ತುವೆ ತನ್ನ ಚಿದ್ವಿಲಾಸದಿಂದ ತಾನೆ ಜಗತ್ಪಾವನಮೂರ್ತಿಯಾಗಿ, ತನ್ನಂತರಂಗ ಬಹಿರಂಗದಲ್ಲಿ ಭಕ್ತಿ ಜ್ಞಾನ ವೈರಾಗ್ಯ ಪಟ್ಸ್ಥಲಮಾರ್ಗವಿಡಿದು ಭಕ್ತಿಪ್ರಿಯರಾಗಿ, ತಮ್ಮಂತರಂಗದೊಳಗೆ ಷಡ್ವಿಧಸಕೀಲ ಛತ್ತೀಸಸಕೀಲ ನಾಲ್ವತ್ತೆಂಟುಸಕೀಲ ಐವತ್ತಾರುಸಕೀಲ ಅರುವತ್ತಾರುಸಕೀಲ ತೊಂಬತ್ತಾರುಸಕೀಲ ನೂರೆಂಟುಸಕೀಲ ಇನ್ನೂರ ಹದಿನಾರುಸಕೀಲ ಮೊದಲಾದ ಸಮಸ್ತಸಕೀಲಂಗಳನೊಳಕೊಂಡು, ಬೆಳಗುವ ಗುರು ಲಿಂಗ ಜಂಗಮವ ಕಂಗಳು ತುಂಬಿ, ಮನ ತುಂಬಿ ಭಾವ ತುಂಬಿ ಕರಣಂಗಳು ತುಂಬಿ, ತನು ತುಂಬಿ ಪ್ರಾಣ ತುಂಬಿ ಸರ್ವಾಂಗ ತುಂಬಿ, ಅರ್ಚಿಸಲರಿಯದೆ, ಹಲವನರಸಿ, ತೊಳಲುವ ಮೂಳರ ಕಂಡು ಬೆರಗಾದೆ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆದಿಯುಗದಲ್ಲೊಬ್ಬಳು ಮಾಯಾಂಗನೆ, ಹಲವು ಬಣ್ಣದ ವಸ್ತ್ರವನುಟ್ಟುಕೊಂಡು, ಹೆಡಿಗೆ ತುಂಬ ದೇವರ ಹೊತ್ತುಕೊಂಡು, ಓ ದೇವರ ಕೊಳ್ಳಿರಯ್ಯಾ, ಓ ದೇವರ ಕೊಳ್ಳಿರಯ್ಯಾ ಎಂದಳು. ಎಂದಡೆ ಆ ದೇವರನಾರೂ ಕೊಂಬವರಿಲ್ಲ. ನಾನು ಒಂದರಿವೆಯ ಕೊಟ್ಟು, ಆ ದೇವರ ಕೊಂಡು, ಎನ್ನ ಹೆತ್ತ ತಂದೆ ಬಸವಣ್ಣನ ಪ್ರಸಾದದಿಂದ ಬದುಕಿದೆನು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಆರುಜನ್ಮದವರೆಂಬರು ಬಸವಣ್ಣನ. ಈ ಗಾರುಮಾತ ಕೇಳಲಾಗದು. ಆರುಸ್ಥಲ ಆರುಪಥವ ತೋರಲು, ಪರಶಿವ ತಾ ಮೂರುಮೂರ್ತಿಯಾದ. ಆರಾರುತತ್ವಂಗಳ ಮೇಲಣಾತ ಆ ಬಸವಣ್ಣನೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆ ಜಾತಿ ಈ ಜಾತಿಯವರೆನಬೇಡ. ಹದಿನೆಂಟುಜಾತಿಯೊಳಗಾವ ಜಾತಿಯಾದಡೂ ಆಗಲಿ, ಗುರು ಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಪುನರ್ಜಾತರಾದ ಬಳಿಕ, ಭಕ್ತರಾಗಲಿ ಜಂಗಮವಾಗಲಿ, ಗುರುವಿನ ವೇಷವಿದ್ದವರ ಗುರುವೆಂದು ನಂಬಿ, ದಾಸೋಹವ ಮಾಡುವುದೆ ಸದಾಚಾರ. ಗುರುವನತಿಗಳೆದು, ಗುರುವಾಜ್ಞೆಯ ಮೀರಿ, ಗುರು ಕೊಟ್ಟ ಪಂಚಮುದ್ರೆಗಳ ಮೇಲೆ ಅನ್ಯಸಮಯ ಮುದ್ರೆಯ ಲಾಂಛನಾಂಕಿತರಾಗಿ, ಗುರುದ್ರೋಹಿಗಳಾಗಿ ಬಂದವರ ಜಂಗಮವೆಂದು ಕಂಡು, ನಮಸ್ಕರಿಸಿ ಆರಾಧಿಸಿ, ಪ್ರಸಾದವ ಕೊಂಡವಂಗೆ ನಾಯಕನರಕ ತಪ್ಪದೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಇಷ್ಟಪ್ರಾಣಭಾವವೆಂಬ ಲಿಂಗಗಳು ತಾವೆ, ಆ ಬಸವಣ್ಣನಿಂದಾದ ಕಾರಣ, ಕಲಿದೇವರಲ್ಲಿ ಅಹೋರಾತ್ರಿಯೊಳೆದ್ದು, ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಆಧಾರಕಾಲದಲ್ಲಿ ಅನಾದಿಯನಾಡುತಿಪ್ಪರು ದೇವಗಣಂಗಳು. ಸಿಂಹಾಸನಕಾಲದಲ್ಲಿ ಅತೀತನಾಡುತಿಪ್ಪರು ಮಹಾಪುರುಷರು. ಮಂದರಗಿರಿಯ ಕಾಲದಲ್ಲಿ ಶಂಕೆಯನಾಡುತಿಪ್ಪರು ಕಾಲಪುರುಷರು. ಆವ ಕಾಲದಲ್ಲಿಯೂ ನಂದಿಕೇಶ್ವರನ ಶಬ್ದವನಾಡುತಿಪ್ಪರು ನಂದಿಗಣಂಗಳು. ಕಲಿಕಾಲದಲ್ಲಿಯೂ ಉತ್ಪತ್ಯದ ಮಾತನಾಡುತಿರ್ಪರು ಪುರುಷಗಣಂಗಳು. ಪ್ರಜ್ವಲಿತಕಾಲದಲ್ಲಿ ಭವಂ ನಾಸ್ತಿಯೆನುತಿರ್ಪರು ಗುರುಕಾರುಣ್ಯವುಳ್ಳವರು. ದೇವಾಧಿದೇವನು ಕಾಲಾಧಿದೇವನು ಎಲ್ಲಾ ಕಾಲ ಸೂತ್ರವನಾಡಿಸುತ್ತಿಹನು. ಸದೃಶ ಕಾಲಾಧಿದೇವನು, ಎಲ್ಲಾ ವಿಸ್ತಾರಕನು, ಗುರು ವಿಸ್ತಾರಕನು, ಜಂಗಮಾಕಾರನು, ಪ್ರಸಾದಕಾಯನು ಜ್ಞಾನಸಿಂಹಾಸನದ ಮೇಲೆ ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವು.
--------------
ಮಡಿವಾಳ ಮಾಚಿದೇವ
ಆಶಾಪಾಶವ ಬಿಟ್ಟಡೇನಯ್ಯಾ ರೋಷ ಪಾಶವ ಬಿಡದನ್ನಕ್ಕರ ? ರೋಷ ಪಾಶವ ಬಿಟ್ಟಡೇನಯ್ಯಾ ಮಾಯಾಪಾಶ ಬಿಡದನ್ನಕ್ಕರ ? ಇಂತೀ ತ್ರಿವಿಧಪಾಶವ ಹರಿದು ನಿಜನಿಂದ ಲಿಂಗೈಕ್ಯರ ತೋರಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಆದಿಲಿಂಗ ಅಸಂಭವ. ವೇದನಾಲ್ಕು ಪೊಗಳಲ್ಕೆ ಹೊಗಳಿದವು, ಅತ್ಯಂತ ಭಕ್ತರಲ್ಲಿ. ವೇದ ಪಶುವೇದ ಪಾಠಕರು ಭೇದ ಬೋಧೆಯ ಮಾಡಿಕೊಂಡು ಯಮಬಾಧೆಗೆ ಹೋದವರ ದೈವವೆಂದರಸಬೇಡ. ಈ ವೇದ ಬ್ರಹ್ಮ ನುಡಿಯ ಕೇಳಲಾಗದೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಆಳುದ್ದವ ತೋಡಿ, ನೀರ ಕೊಂಡು ಬಂದು, ಭವಿಗಳಾರೂ ಕಾಣದಂತೆ ಸ್ವಯಂ ಪಾಕವ ಮಾಡಿ, ಇವು ತಮ್ಮ ನೇಮವ್ರತವೆಂಬರು. ತೆಪ್ಪದಲ್ಲಿ ಸಿಕ್ಕಿದ ಜಂಬುಕನಂತೆ, ಇದೆತ್ತಣ ನೇಮ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣ. ಪ್ರಾಣ ನಿಃಪ್ರಾಣವಾಯಿತ್ತಲ್ಲಾ ಬಸವಣ್ಣ. ಅಂಗಜಂಗಮದ ಮಾಟ ಸಮಾಪ್ತಿಯಾಯಿತ್ತಲ್ಲಾ ಬಸವಣ್ಣ. ನಿಃಶಬ್ದವೇದ್ಯವಾದೆಯಲ್ಲಾ ಬಸವಣ್ಣ. ಕಲಿದೇವರದೇವನ ಹೃದಯಕಮಲವ ಹೊಕ್ಕು, ದೇವರಿಗೆ ದೇವನಾಗಿ ಹೋದೆಯಲ್ಲಾ ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಆತ್ಮ ತನುವನು ಮುಟ್ಟಿದ ಮೂಲವ ನಿಷಾ*ಪರದಲ್ಲಿ ಮುಟ್ಟಿರೊ. ಆ ಪರದಲ್ಲಿ ವಿದ್ಯೆಯೊಳಗಣ ಸಹಜವರಿದಂಗಲ್ಲದೆ ಲಿಂಗವೆನಬಾರದು, ಜಂಗಮವೆನಬಾರದು. [ಧಾರಾ]ಮಂಟಪದ ಸಹಜವನರಿಯದೆ ನರಕಕ್ಕೆ ಗುರಿಯಾದರು ಕಾಣಾ ಲಿಂಗಾರ್ಚಕರಾದವರು. ಜನನ ಮರಣ ತಪ್ಪದೆಂದಿವರನತಿಗಳೆದು, ಲಿಂಗಾರ್ಚನೆಯ ಮಾಡಿ ತೋರಿ, ತನ್ನವರ ನಿತ್ಯದೊಳಗಿರಿಸಿದಾತ ಬಸವಣ್ಣ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಆದಿಯಲ್ಲಿ ನಿಮ್ಮ, ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ? ಎಲ್ಲಿ ಸ್ಥಾವರವಲ್ಲಿ ನೋಡಲಾಗದು. ಮನದಲ್ಲಿ ನೆನೆಯಲಾಗದು. ಲಿಂಗಕಾದಡೆಯೂ ಜಂಗಮವೆ ಬೇಕು. ಜಂಗಮವಿಲ್ಲದೆ ಲಿಂಗವುಂಟೆ ? ಗುರುವಿಂಗಾದಡೆಯೂ ಜಂಗಮವೆ ಬೇಕು. ಜಂಗಮವಿಲ್ಲದೆ ಗುರುವುಂಟೆ? ಎಲ್ಲಿ ಜಂಗಮವಿರ್ದಡಲ್ಲಿಯೇ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಿಹಿತವಾಗಿಹುದು. ಇಂತೀ ಜಂಗಮವೇ ಲಿಂಗವೆಂಬುದ ಬಸವಣ್ಣ ಬಲ್ಲ. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿ ಶರಣೆಂದು ಶುದ್ಭನಾದೆ ಕಾಣಾ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಆದಿ ಅನಾದಿಯಿಂದತ್ತಣ ನಿತ್ಯಸಿಂಹಾಸನವೆಂಬ ಮಹಾಮೇರುಮಂದಿರದ ಮೇಲೆ ಇರ್ದಂತೆಯೆ ಆಧಾರಮೂರ್ತಿಗಳನು ನಿರ್ಮಿಸಿದಿರಿ. ನಮಗಾಶ್ರಯವಾವುದು ದೇವಾ ಎಂದು ಗಣಂಗಳು ಬಿನ್ನಹವಂ ಮಾಡಲು, ವಿಶ್ವತೋ ಪ್ರತಿಪಾಲಕ ವಿಶ್ವಾಧಾರಕ ಶಿವನು, ಸರ್ವಜೀವಜಾಲಂಗಳಿಗೆ ಶೈತ್ಯಕಾಲವಾಗಬೇಕೆಂದು ಅನಂತಮೂರ್ತಿಗಳಿಗೆ ಕಾರುಣ್ಯವ ಮಾಡಿದ ಕಂದನು. ತಮ್ಮ ತಮ್ಮ ಆಧಾರದಲ್ಲಿ ಒಮ್ಮಿಂದವು ಪಾದಘಾತದೊಳು ಅನಂತಸುಖವುತ್ಪತ್ಯದೊಳು ಶಿವ, ಶಿವಚೈತನ್ಯವನಾಗವೆ ನಿರ್ಮಿಸುವೆನೆಂದು ಪೃಥ್ವಿಗೆ ಕಾರುಣ್ಯವ ಮಾಡಿದ ಕಂದನು. ತೇಜಜ್ಞಾನದೊಳು ಶುದ್ಧತಿಗೆ ನಿಮ್ಮ ಮುಖದಲ್ಲಿಯೆಯೆಂದು ತೇಜಕ್ಕೆ ಕಾರುಣ್ಯವ ಮಾಡಿದ ಕಂದನು. ವಾಯು ಮನ ಪ್ರಾಣ ಗಂಧ ಪರಿಮಳದಲ್ಲಿ ಶೈತ್ಯದೊಳು ಸುಖವಿರು ಕಂಡಾ ಎಂದು ವಾಯುವಿಗೆ ಕಾರುಣ್ಯವ ಮಾಡಿದ ಕಂದನು. ಗಗನದ ಸರ್ವಕ್ಕಾಶ್ರಯವಾಗಿರು ಕಂಡಾ ಎಂದು ಆಕಾಶಕ್ಕೆ ಕಾರುಣ್ಯವ ಮಾಡಿದ ಕಂದನು. ಚಂದ್ರಸೂರ್ಯರು ಆತ್ಮರು ನಿಮ್ಮ ನಿಮ್ಮ ಸ್ಥಲಗಳಲ್ಲಿಯೆ ಒಬ್ಬೊಬ್ಬರು ಅಗಲದಿರಿಯೆಂದು, ಅಷ್ಟತನುಗಳಿಗೆ ಕಾರುಣ್ಯವ ಮಾಡಿದ ಕಂದನು. ಮಹಾಪ್ರತಿಪಾಲಕನು ಶರಣರ ಹೃದಯದ ಸಿಂಹಾಸನವನು ಎನ್ನ ಪ್ರಾಣವ ಪಾವನವ ಮಾಡಿದ ಕಂದನು. ವೇದ್ಯನೆ ಕಲಿದೇವ, ನಿಮ್ಮ ಶರಣ ಬಸವಣ್ಣಂಗೆ ಜಯತು ಜಯತು.
--------------
ಮಡಿವಾಳ ಮಾಚಿದೇವ
ಆದಿಯನಾದಿಯಿಂದತ್ತತ್ತ, ನಾದಬಿಂದುಕಳಾತೀತವಾದ ಘನಪರಂಜ್ಯೋತಿರ್ಮಯಲಿಂಗವು ತನ್ನ ಕರದೊಳಗಿರಲು, ಮೇದಿನಿಯ ಪ್ರತಿಷೆ*ಗೆರಗುವ ಮಾದಿಗರನೇನೆಂಬೆನಯ್ಯಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಆ ಮಹಾಲಿಂಗವಂತನೊಬ್ಬನುಂಡನೆನಬೇಡ. ಆತನ ದಂತಂಗಳೆಲ್ಲ ಪಂತಿಕಾರರು. ಆತನ ನಡುವಿಪ್ಪ ಕಾಂತಿರೂಪ ನೀನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಆಗಮದ ಹೊಲಬನರಿಯದ ಕುನ್ನಿಗಳು ಶ್ರೀಗುರುಲಿಂಗಜಂಗಮದ ನೆಲೆಯನರಿಯದೆ ಹೋಗಿ, ಬಾಗಿಲ ದಾಟುವ ಮರನ ದೇವರೆಂದು ಪೂಜಿಸಿ, ಬರುತ್ತ ಹೋಗುತ್ತ ಮರನ ಒದ್ದು ಹರಿಸಿಕೊಂಬರು. ಎಂಬತ್ತುನಾಲ್ಕುಲಕ್ಷ ಜೀವರಾಶಿಗೆ ಕಾಗೆ ಕನಿಷ*. ಆ ಕಾಗೆಯ ಬಾಯಲು ಮಾತಾಪಿತರುಂಡರೆಂದು ಓಗರವನಿಕ್ಕಿ, ಬಳಿಕ ಉಂಬವರ ಪಙÂ್ತಯಲ್ಲಿ ಶ್ರೀಗುರು ಕಾರುಣ್ಯವ ಪಡೆದ ಭಕ್ತನು, ಅಲ್ಲಿ ಹೋಗಿ ಲಿಂಗಾರ್ಪಣವ ಮಾಡಿದಡೆ ಅವನು ಕಾಗೆಗಿಂದ ಕರಕಷ್ಟವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಆದಿ ಅನಾದಿಯಿಲ್ಲದಂದು, ಸಾಧ್ಯ ಅಸಾಧ್ಯವಿಲ್ಲದಂದು, ಸ್ಥೂಲ ಸೂಕ್ಷ್ಮವೆಂಬ ಮೂರ್ತಿಗಳಿಲ್ಲದಂದು, ಸಾಕಾರ ನಿರಾಕಾರವೆಂಬ ವಾಕು ಹುಟ್ಟದಂದು, ಶಂಕರ ಶಶಿಧರ ಈಶ್ವರನೆಂಬ ಗಣಾಧೀಶ್ವರರಿಲ್ಲದಂದು, ಉಮೆಯ ಕಲ್ಯಾಣವಿಲ್ಲದಂದು, ಶಿವರತಿ ಮಹಾರತಿ ಬಸವಣ್ಣನಿಂದಾಯಿತ್ತು. ಸರ್ವವಿಸ್ತೀರ್ಣವ ನೀಕರಿಸಿ ಶಿವಲಿಂಗಾರ್ಚನೆಯ ತೋರಿದ. ನಿತ್ಯಲಿಂರ್ಗಾಚನೆಯಲ್ಲಿ ಪ್ರಸಾದಧ್ಯಾನ, ಜಂಗಮಾರ್ಚನೆಯಲ್ಲಿ ಪ್ರಸಾದಭೋಗ ಎಂಬುದನು ಸಂಗನಬಸವಣ್ಣನಲ್ಲದೆ ಮತ್ತಾರೂ ಅರಿಯರು. ಭಕ್ತಿಯ ಕುಳಸ್ಥಳವನೂ ಭಕ್ತಿಯ ಸಾರಾಯವನೂ ಮುನ್ನವೆ ಅತಿರಥ ಸಮರಥರೆಲ್ಲರೂ ಅರಿಯರು. ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆಕಾರ ನಿರಾಕಾರವೆಂಬುದೊಂದಾದ ಭಕ್ತನನು ಆಕಾರವೆನಲುಬಾರದು, ನಿರಾಕಾರವೆನಲುಬಾರದು. ಸೂಕ್ಷ್ಮ ನಿಜಪದ ಏಕವಾದ ಭಕ್ತನು, ಘನಸಂಗಸಾರಾಯ ಜಂಗಮಸಂಗಸಾರಾಯ ಪ್ರಸಾದಸಂಗಸಾರಾಯ ಜ್ಞಾನಸಂಗಸಾರಾಯ ಅನುಭವಸಂಘಸಾರಾಯ. ಅಂತಪ್ಪ ಭಕ್ತ ತಾನಾದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ