ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇದವನೋದಿದಡೇನು? ಶಾಸ್ತ್ರವ ಕಲಿತಡೇನು? ಮಾಘವ ಮಿಂದಡೇನು? ಮೂಗ ಹಿಡಿದಡೇನು? ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು? ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು? ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು? ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು? ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು? ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು? ಅವಕ್ಕೆ ಶಿವಗತಿ ಸಿಕ್ಕದು. ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು, ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ, ಶಿವಗತಿ ಸಿಕ್ಕುವುದು. ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ, ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ವಚನ ತನ್ನಂತಿರದು, ತಾನು ವಚನದಂತಿರ. ಅದೆಂತೆಂದಡೆ: ತನುಮನಧನವನೆಲ್ಲ ಹಿಂದಿಟ್ಟುಕೊಂಡು, ಮಾತಿನ ಬಣಬೆಯ ಮುಂದಿಟ್ಟುಕೊಂಡು, ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ, ಆ ತೆರನಾಯಿತೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ವ್ರತ ನೇಮ ಸಪ್ಪೆ ಒರತೆ ಮುಂತಾದ ನೀರ್ವಿಡಿಯ ನೇಮವಂ ತಾಳಿ, ಅಂಗನೆಯರ ಸಂಗಸುಖವ ಮೆಚ್ಚಿ, ಲಿಂಗವ ಕೊಂಡಾಡುವ ಬಾಯಲ್ಲಿ ಹೆಂಗಳ ಅಧರವಂ ಚುಂಬಿಸೆ, ಲಿಂಗಜಂಗಮದ ಪ್ರಸಾದ ಹೋಯಿತ್ತು. ಇಷ್ಟಲಿಂಗ ಹಿಡಿವ ಕೈಯಲ್ಲಿ ಬಟ್ಟಿತ್ತು ಕುಚವ ಹಿಡಿದು, ಉಚ್ಚೆಯ ಬಚ್ಚಲ ತೋಡುವ ಕಸ್ತುಕಾರರನೊಪ್ಪೆನೆಂದ. ಇಂತಪ್ಪವರ ಭಕ್ತರೆಂದಡೆ, ಮೆಟ್ಟುವ ನರಕದಲ್ಲಿ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ. ಶಾಸ್ತ್ರದಿಂದ ವೆಗ್ಗಳವಿಲ್ಲ]ವೆಂಬಿರಿ, ಶಾಸ್ತ್ರ ಶಿವನ ಕಂಡುದಿಲ್ಲ. ವೇದವೆಂಬುದು ವಿಪ್ರರ ಬೋಧೆ. ಶಾಸ್ತ್ರವೆಂಬುದು ಸಂತೆಯ ಗೋಷಿ*. ಅನುಭಾವದಿಂದ ತನ್ನೊಳಗಣ ತನುವ, ತಾನರಿತಂಥ ಭಕ್ತರಿಂದ ವೆಗ್ಗಳವಿಲ್ಲವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ವಿಷ್ಣು ದೇವರೆಂದು ಆರಾಧಿಸುವಿರಿ ವಿಷ್ಣು ದೇವರಾದಡೆ ತಾನೇರುವ ವಾಹನ ಗರುಡನಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಬ್ರಹ್ಮ ದೇವರೆಂದು ಆರಾಧಿಸುವಿರಿ, ಬ್ರಹ್ಮ ದೇವರಾದಡೆ ತಾನೇರುವ ವಾಹನ ಹಂಸೆಯಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಮೈಲಾರ ದೇವರೆಂದು ಆರಾಧಿಸುವಿರಿ, ಮೈಲಾರ ದೇವರಾದಡೆ ತಾನೇರುವ ವಾಹನ ಕುದುರೆಯಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಭೈರವನೆ ದೇವರೆಂದು ಆರಾಧಿಸುವಿರಿ, ಭೈರವನೆ ದೇವರಾದಡೆ ತಾನೇರುವ ವಾಹನ ಚೇಳಿನಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಇದು ಕಾರಣ, ನಾಗಲೋಕದ ನಾಗಗಣಂಗಳು ಕೊಂಬುದು, ಬಸವಣ್ಣನ ಪ್ರಸಾದ. ಮತ್ರ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ಇಂತೀ ನಮ್ಮ ಬಸವಣ್ಣನ ಪ್ರಸಾದ ಉಂಬುತ್ತ ಉಡುತ್ತ, ಕೊಂಬುತ್ತ ಕೊಡುತ್ತ, ಅನ್ಯದೈವಕ್ಕೆರಗಿ ಆರಾಧಿಸುವ ಕುನ್ನಿಗಳನೆನ್ನ ಮುಖಕ್ಕೆ ತೋರದಿರಯ್ಯಾ, ಕಲಿದೇವರದೇವಯ್ಯ ನಿಮ್ಮ ಧರ್ಮ.
--------------
ಮಡಿವಾಳ ಮಾಚಿದೇವ
ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು. ಪುರಾಣ ಪುಂಡರ ಗೋಷಿ*, ಆಗಮ ಅನೃತದ ನುಡಿ. ತರ್ಕ ವ್ಯಾಕರಣ ಕವಿತ್ವ ಪ್ರೌಡಿs. ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ. ಇದು ಕಾರಣ, ತನ್ನೊಳಗನರಿದ ಅನುಭಾವಿಯಿಂದ ಘನವಿಲ್ಲೆಂದ, ಕಲಿದೇವ.
--------------
ಮಡಿವಾಳ ಮಾಚಿದೇವ
ವಾಯದ ಮಾಯದ ಸಂಭ್ರಮದೊಳಗೆ ಸಿಲುಕಿತ್ತು ನೋಡಾ ಭುವನವೆಲ್ಲ. ಮಾಯಕ್ಕೆ ಹೊರಗಾದ ನಿರ್ಮಾಯನ ಕಂಡೆನು. ತಾನೆಂಬ ನುಡಿಗೆ ನಾಚಿ, ನಾನೆಂಬ ನುಡಿಗೆ ಹೇಸಿ, ತಾನು ತಾನಾದ ಘನಮಹಿಮನು. ಕಾಯದಲ್ಲಿ ಕುರುಹಿಲ್ಲ, ಭಾವದಲ್ಲಿ ಭ್ರಮೆಯಿಲ್ಲ. ಜ್ಞಾನ ತಾನೆಂಬ ಭೇದವಿಲ್ಲ. ಸಾವಯನಲ್ಲ ನಿರವಯನಲ್ಲ, ಕಲಿದೇವರದೇವಾ, ನಿಮ್ಮ ಶರಣ ಚೆನ್ನಬಸವಣ್ಣ.
--------------
ಮಡಿವಾಳ ಮಾಚಿದೇವ
ವೇಷವ ಹೊತ್ತವರ, ಬಿಟ್ಟಿಯ ಹೊತ್ತವರೆಂಬೆ. ಪಸರನಿಕ್ಕುವರ ಕಂಚಗಾರರೆಂಬೆ. ಲಿಂಗವ ತೋರಿ ಉಂಬವರ ಬಂಗಾರರೆಂಬೆ. ಡವಡಂಬಟ್ಟ ಬೆವಹಾರವ ಲಾಭವಾಗಿ ಬದುಕುವ, ಫಲದಾಯರೆಲ್ಲರೂ ಧರ್ಮ ಕಾಮ ಮೋಕ್ಷದಲ್ಲಿ ಸಿಕ್ಕಿದರೆಂಬೆ. ಅಲ್ಲಿಂದತ್ತ ನಿಮ್ಮ ಶ್ರೀಚರಣದ ಸೇವೆಯ ಮಾಡುವ, ಲಿಂಗನಿಷೆ* ನಿಜೈಕ್ಯರ ಕರೆದು ಎನಗೆ ತೋರಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ವಿಭೂತಿಯನಿಟ್ಟು, ರುದ್ರಾಕ್ಷಿಯಂ ಧರಿಸಿ, ಪಂಚಾಕ್ಷರಿಯಂ ಜಪಿಸಿ, ಕೃತಾರ್ಥರಾದೆವೆಂಬ ಪಂಚಮಹಾಪಾತಕರು ನೀವು ಕೇಳಿರೊ. ಅದೆಂತಂದಡೆ, ವಿಭೂತಿಯನಿಟ್ಟು ವಿಶ್ವಾಸವಿಲ್ಲವಾಗಿ, ರುದ್ರಾಕ್ಷಿಯ ಧರಿಸಿ ರುದ್ರಗಣಂಗಳನರಿಯರಾಗಿ, ಪಂಚಾಕ್ಷರಿಯ ಜಪಿಸಿ ಪಂಚಮಹಾಪಾತಕವ ಬಿಡರಾಗಿ, ಅವಾವೆಂದಡೆ: ಹುಸಿ ಕೊಲೆ ಕಳವು ಪಾರದ್ವಾರ ತಾಮಸ ಭಕ್ತಸಂಗ, ಇಂತಿವ ಬಿಡದನ್ನಕ್ಕರ ಶಿವಭಕ್ತನೆನಿಸಿಕೊಳಬಾರದು ನೋಡಾ, ಅದೆಂತೆಂದಡೆ: ಸರ್ವಾಚಾರ ಪರಿಭ್ರಷ್ಟಃ ಶಿವಾಚಾರಸ್ಯ ಮೇಲನಮ್ | ಶಿವಾಚಾರ ಪರಿಭ್ರಷ್ಟೋ ನರಕೇ ಕಾಲಮಕ್ಷಯಮ್ || ಎಂದುದಾಗಿ. ಕಸಗೊಂಡ ಭೂಮಿಯಲ್ಲಿ ಸಸಿ ಪಲ್ಲವಿಸುವುದೆ ? ಹುಸಿಯಿದ್ದಲ್ಲಿ ಶಿವಭಕ್ತಿ ನೆಲೆಗೊಂಬುದೆ ? ಬಸವಗತಿಯೆನುತ ಹಿರಿದಾಗಿ ಭಸಿತವ ಪೂಸಿಕೊಂಡಿರ್ದ ಕುನ್ನಿಗಳೆಲ್ಲರೂ ಸದ್ಭಕ್ತರಾಗಬಲ್ಲರೆ ? ಅಶನ ಭವಿಪಾಕ ತಿಂಬುದೆಲ್ಲವೂ ಅನ್ಯದ್ಯೆವದೆಂಜಲು. ಮತ್ತೆ ಮರಳಿ ವ್ಯಸನಕ್ಕೆ ದಾಸಿ ವೇಸಿ ಹೊಲತಿ ಮಾದಗಿತ್ತಿ ಡೊಂಬತಿ ಮೊದಲಾದವರಿಗೆ ಹೇಸದೆ ಆಶೆಯ ಮಾಡುವವರ ಭಕ್ತಿಯ ತೆರನೆಂತೆಂದಡೆ: ಸೂಕರನ ದೇಹವ ತೊಳೆದಡೆ, ಅದು ಕೂಡ ಅಶುದ್ಧದೊಳಗೆ ಹೊರಳಿದ ತೆರನಾಯಿತ್ತೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ವೇದವೆಂಬುದು ಮಾಯಿಕದ ಕೈಯವಿಕಾರದಲ್ಲಿ ಹುಟ್ಟಿತ್ತು. ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು. ಶಾಸ್ತ್ರವೆಂಬುದು ಮಾಯಿಕದ ವೇಷವಿಕಾರದಲ್ಲಿ ಹುಟ್ಟಿತ್ತು. ಪುರಾಣವೆಂಬುದು ಮಾಯಿಕದ ಕಾಲವಿಕಾರದಲ್ಲಿ ಹುಟ್ಟಿತ್ತು. ಇದು ಕಾರಣ, ಇವ ತೋರಿ ಕಳೆದು, ಮಹಾಸ್ಥಲದಲ್ಲಿ ನಿಂದವರುಗಳಲ್ಲದೆ, ಮಹಾಲಿಂಗ ಕಲಿದೇವರದೇವನೊಲ್ಲನು.
--------------
ಮಡಿವಾಳ ಮಾಚಿದೇವ
ವ್ರತಸ್ಥನರಿ[ದು] ವ್ರತಕ್ಕೆ ಗುರಿಯಹನಲ್ಲದೆ, ಗುರುವ ಕಾಣ, ಲಿಂಗವ ಕಾಣ, ಜಂಗಮವ ಕಾಣ. ಪಾದೋದಕ ಪ್ರಸಾದಕ್ಕೆ ಅವನಂದೇ ದೂರ. ಸಾವಿರನೋಂಪಿಯ ನೋಂತು, ಪಾರದ್ವಾರವ ಮಾಡಿದಂತಾಯಿತ್ತು, ಅವನ ವ್ರತ. ಬಂದ ಜಂಗಮದ ಕಪ್ಪರ ಕಮಂಡಲ, ತಮ್ಮ ಭಾಂಡ ಭಾಜನವ ಸೋಂಕಿಹವೆಂಬ ಮುತ್ತಮುದಿಹೊಲೆಯನ ಮುಖವ ನೋಡಲಾಗದು. ಅವನ ಮನೆಯಲುಂಡ ಜಂಗಮ, ಮೂವಟ್ಟಲು ಈರಿಲು ಮೂರುದಿನ ಸತ್ತ ಹಂದಿಯ ಕೂಳನುಂಡಂತೆ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ