ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಧುರದ ಗುಣವ ಇರುಹೆ ಬಲ್ಲುದು. ವಾಯುವಿನ ಗುಣವ ಸರ್ಪ ಬಲ್ಲುದು. ಗೋತ್ರದ ಗುಣವ ಕಾಗೆ ಬಲ್ಲುದು. ವೇಳೆಯ ಗುಣವ ಕೋಳಿ ಬಲ್ಲುದು. ಇದು ಕಾರಣ, ಮನುಷ್ಯಜನ್ಮದಲ್ಲಿ ಬಂದು, ಶಿವಜ್ಞಾನಾನುಭವವನರಿಯದಿರ್ದಡೆ, ಆ ಕಾಗೆ ಕೋಳಿಗಿಂದ ಕರಕಷ್ಟ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮಾಡುವ ಭಕ್ತಂಗೆ, ಒಲಿದ ದೇವಂಗೆ ಭೇದವುಂಟೆ ಅಯ್ಯಾ ? ಕಾಯದೊಳಗೆ ಕಾಯವಾಗಿಪ್ಪ, ಪ್ರಾಣದೊಳಗೆ ಪ್ರಾಣವಾಗಿಪ್ಪ. ಅರಿದೆಹೆನೆಂದಡೆ ತಾನೆಯಾಗಿಪ್ಪ. ಅರಸಿ ಬಯಸಿದಡೆ ನಡೆದುಬಹನು. ಕಲಿದೇವರದೇವನ ಬರವನೀಗಳೆ ತೋರಿ ಕೊಟ್ಟಿಹೆನು ಕೇಳಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಮರಣವಿಲ್ಲದ ಮಹಿಮನ ನಿಲವ ತನ್ನಲ್ಲಿ ನೋಡಿ, ಶರಣೆಂಬುದಲ್ಲದೆ ಮರೆಯಬಹುದೆ, ತೆರಹಿಲ್ಲದ ನಿಲವು ? ಕಲಿದೇವರದೇವನು ಕರಸ್ಥಲದೊಳೈದಾನೆ ಕಾಣಾ, ಚೆನ್ನಬಸವಣ್ಣ.
--------------
ಮಡಿವಾಳ ಮಾಚಿದೇವ
ಮಲೆತು ಮೆಟ್ಟುತ್ತ, ತನುವನೊಲೆವುತ್ತ, ತಲೆದೂಗಿ ಮನವನಲ್ಲಾಡಿಸಿ ನೋಡಿದ. ಭುವನ ಭುವನೇಶ್ವರನ ಹಿಂದು ಮುಂದ ನೋಡಿ ನಗುತ್ತ, ಮುತ್ತಿನ ತೋರಣಕ್ಕೆ ಹಾರೈಸಿ, ಬಸವನರಮನೆಯ ಹೊಕ್ಕ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮೃಡನನೊಂದು ದೈವಕ್ಕೆ ಪಡಿಗಟ್ಟಿ ನುಡಿವನ ಬಾಯಲ್ಲಿ, ಬಿಡದೆ ನೆಟ್ಟುವೆನೈದಾರು ಗೆಜ್ಜೆಯ ಗೂಟಗಳನು. ಭೂಮಂಡಲದೊಳಗೆ ಕಲಿದೇವಂಗೆ ಹುಲುದೈವವ ಸರಿಯೆಂದು ನುಡಿವನ ಬಾಯ, ಎಡದ ಕಾಲ ಕೆರಹಿಂದ ಬಡಿಯೆಂದ, ಮಡಿವಾಳ ಮಾಚಯ್ಯ.
--------------
ಮಡಿವಾಳ ಮಾಚಿದೇವ
ಮರಹು ಬಂದುದೆಂದರಿದು ಅರಿವ ನೆಲೆ ಮಾಡಿ, ಅರಿವ ಕೊಟ್ಟ ಗುರುವಿನ ಕೈಯಲ್ಲಿ ಮಹವ ಕೊಂಡೆ ನಾನು. ಎನ್ನ ಅರಿವನಾಯತದಲ್ಲಿರಿಸಿ ನಿಲ್ಲಿಸಿ, ನಿಜಸ್ವಾಯತವ ಮಾಡಿದ ಕಾರಣ, ಅರಿವು ಅರಿವನಾರಡಿಗೊಂಡಿತ್ತು, ಮರಹು ಮರಹನಾರಡಿಗೊಂಡಿತ್ತು, ಮಾಯೆ ಮಾಯೆಯನಾರಡಿಗೊಂಡಿತ್ತು, ಕರ್ಮ ಕರ್ಮವನಾರಡಿಗೊಂಡಿತ್ತು, ಕಲಿದೇವಯ್ಯಾ, ನಿಮ್ಮ ಶರಣ ಬಸವಣ್ಣನ ಕೃಪೆಯಿಂದ.
--------------
ಮಡಿವಾಳ ಮಾಚಿದೇವ
ಮುನ್ನ ಶಿವ ಕೊಟ್ಟ ಆಯುಷ್ಯವುಂಟೆಂದು, ವ್ಯಾಘ್ರವ ಗುಹೆಯಿಂ ಇನ್ನು ತೆಗೆವರುಂಟೆ ? ಉನ್ನತ ಉತ್ಪತ್ಯವೆಲ್ಲಾ ಶಿವನಿಂದಾಯಿತ್ತು. ನಿನ್ನ ಧನವನುಂಡು, ತಮ್ಮ ಅಜ್ಞಾನದಿಂದ ತಾವರಿಯದೆ ಹೋಗಿ, ತನ್ನ ಕಾಡಿನ ಮೇಲೆ ಕಾಗೆಗೆ ಕಾಳ ಚಲ್ಲಿ, ಪಿತರುಂಡೆರೆಂದು ಕುನ್ನಿಗಳು ಮರುಳಾದರು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮೂರನೊಳಕೊಂಡು ಆರ ಮೀರಿ ನಿಂದ ಘನವನೇನೆಂಬೆನಯ್ಯಾ ? ನುಡಿವಡೆ ವಾಚಾತೀತ, ನೋಡುವಡೆ ಕಂಗಳೆರಡೆಯ್ದವಯ್ಯಾ. ಮಹದ ಬೆಳಗೆ ತಾನಾಗಿ ನಿಂದ, ಮರುಳ ಶಂಕರದೇವರ ನಿಲವ, ಬಸವಣ್ಣನಿಂದ ಕಂಡು ಬದುಕಿದೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮಾರಾರಿಯ ಬೆಸನದಿಂದ ಧಾರುಣಿಗವತರಿಸಿ, ಸಾರಾಯದ ಸದ್ಭಕ್ತಿಯ ತೋರಿದನು ಶಿವಶರಣರೆಲ್ಲರಿಗೆ. ಭಕ್ತಿಯ ಸಂಚವ, ಮುಕ್ತಿಯ ಭೇದವ, ಸತ್ಯಶರಣರಿಗೆಲ್ಲ ಉಪದೇಶವ ಮಾಡಿ, ನಿತ್ಯಲಿಂಗಾರ್ಚನೆಯೊಳಗೆನ್ನನಿರಿಸಿ ರಕ್ಷಿಸಿದಾತ, ಬಸವಣ್ಣ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮುನ್ನ ಗುರುವಿಂಗೆ ಜ್ಞಾನವಿಲ್ಲ. ಇನ್ನು ಶಿಷ್ಯಂಗೆ ಜ್ಞಾನವಿಲ್ಲ. ಇಂತವರ ಮಗನಹ ಕುನ್ನಿಗಳನೇನೆಂಬೆ. ಗುಹೇಶ್ವರಾ, ಅದು ಕಾರಣ ತನ್ನ ಗುರುವಲ್ಲದೆ, ಅನ್ಯಹಸ್ತ ಮಂಡೆಯ ಮೇಲೆ ಬಿದ್ದಡೆ, ಆ ಭಕ್ತಿ ಮುನ್ನವೆ ಹಾಳದುದು ಎಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಮಾಚಿತಂದೆಯ ಕೈಯಲಾಗದು. ಹೋಚಿತಂದೆಯ ಕೈಯಲಾಗದು. ಇಚ್ಫೆಗೆಟ್ಟಂತೆ ಇರಲಾಗದು. ಅಚ್ಚೊತ್ತಿದಂತೆ ಇರಬೇಕು ಅತಿ ಚೋದ್ಯವಾಗಿ. ಎಚ್ಚರಿಕೆಯ ಮುಚ್ಚುಮರಹಿಲ್ಲದೆ ಬೆಚ್ಚಂತಿರಬೇಕು. ಮಚ್ಚು ಪಲ್ಲಟವಾಗದೆ ಅಚ್ಚರಿಯ ಭಕ್ತಿಭರಿತನಾಗಿರಬೇಕು. ಕಲಿ ಕರುಳನೊತ್ತಿ ಮುಂದಕ್ಕೆ ನಡೆವನಲ್ಲದೆ, ಎಡೆಗೋಲನಾಸೆ ಮಾಡುವನೆ ಹೇಳಾ ? ಕಲಿದೇವರದೇವನ ಅಂಕೆಗೆ ಝಂಕೆಗೆ, ಬೆಚ್ಚಿ ಬೆದರಿ ಓಡದಿರು. ವೀರಕಂಕಣವ ಕಟ್ಟಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಮೂರುಸ್ಥಲದ ಮೂಲವನರಿಯರು. ಪುಣ್ಯಪಾಪವೆಂಬ ವಿವರವನರಿಯರು. ಇಹಪರವೆಂಬುದನರಿಯರು. ಇವರನೆಂತು ಮಹಂತಿನ ದೇವರೆಂಬೆನಯ್ಯಾ ? ಹೊನ್ನ ವಸ್ತ್ರದವನ ಬಾಗಿಲಕಾಯ್ವ ಪಶುಪ್ರಾಣಿಗಳ ದೇವರೆನ್ನಬಹುದೇನಯ್ಯಾ ? ಜಗದ ಕರ್ತನ ವೇಷವ ಧರಿಸಿಕೊಂಡು, ಸರ್ವರಿಗೆ ಬೇಡಿ ಕೊಟ್ಟಡೆ ಒಳ್ಳೆಯವ, ಕೊಡದಿರ್ದಡೆ ಕೆಟ್ಟವನು. ಪಾಪಿ ಚಾಂಡಾಲಿ ಅನಾಚಾರಿ ಎಂದು ದೂಷಿಸಿ, ಒಳಹೊರಗೆಂದು ಬೊಗಳುವ ಮೂಳಮಾನವರಿಗೆ ಮಹಂತಿನ ಆಚರಣೆ ಎಲ್ಲಿಯದೊ ? ಇಲ್ಲವೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮಡಿಯ ಹೇರಿದ ಕತ್ತೆ ಉಡುವೆತ್ತ ಬಲ್ಲುದು, ಉಡುವಾತ ಬಲ್ಲನಲ್ಲದೆ, ಕವಿಯ ಮಾತ ಕವಿ ಬಲ್ಲನು. ನಾಲಗೆ ಬಲ್ಲದು ರುಚಿಯ. ಭವದುಃಖಿಯೆತ್ತ ಬಲ್ಲನು ಲಿಂಗದ ಪರಿಯ. ಮಡಿವಾಳ ಮಡಿವಾಳ ಎಂದು ನುಡಿವುದು ಜಗವೆಲ್ಲ. ಹರಿಗೊಬ್ಬ ಮಡಿವಾಳನೆ ? ಮಡಿಯಿತು ಕಾಣಾ ಈರೇಳು ಭುವನವೆಲ್ಲ, ಮಡಿವಾಳ ಮಾಚಯ್ಯನ ಕೈಯಲ್ಲಿ. ಮುಂದೆ ಮಡಿದಾತ ಪ್ರಭುದೇವರು, ಹಿಂದೆ ಮಡಿದಾತ ಬಸವಣ್ಣ. ಇವರಿಬ್ಬರ ಕರುಣದ ಕಂದನು ನಾನು ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಮಾಡುವಾತ ಕಲಿದೇವ, ಮಾಡಿಸಿಕೊಂಬಾತ ಕಲಿದೇವ. ಮಾಡುವ ಮಾಡಿಸಿಕೊಂಬವೆರಡರ ಚೈತನ್ಯ, ಬಸವಣ್ಣ. ಸ್ಥೂಲವನು ಸೂಕ್ಷ್ಮವ ಮಾಡಿ ಅನುಕರಿಸಿ, ಕರಸ್ಥಲದಲ್ಲಿ ತೋರಿದ ಬಸವಣ್ಣ. ಆ ಬಸವಣ್ಣನ ಸಂಗದಿಂದ ಬದುಕಿದೆ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ