ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುಂಗುರಿಗೆ ಸುಂಡಿಲು ಹುಟ್ಟಿದೆಡೆ ಆನೆಯಾಗಬಲ್ಲುದೆ ? ನೊಣವಿಂಗೆ ಪಕ್ಕ ಹುಟ್ಟಿದೆಡೆ ಶರಭನಾಗಬಲ್ಲುದೆ ? ಕಾಗೆ ಕೋಗಿಲೆಯು ಒಂದೆಯಾದೆಡೆ ಕೋಗಿಲೆಯಂತೆ ಸ್ವರಗೆಯ್ಯಬಲ್ಲುದೆ ? ಶ್ವಾನನ ನಡು ಸಣ್ಣನಾದಡೆ ಸಿಂಹನಾಗಬಲ್ಲುದೆ ? ಅಂಗದ ಮೇಲೆ ವಿಭೂತಿ ರುದ್ರಾಕ್ಷಿ ಶಿವಲಿಂಗವಿದ್ದಡೇನು ನಿಮ್ಮ ನಂಬಿದ ಸತ್ಯದಾಚಾರವುಳ್ಳ ಏಕಲಿಂಗನಿಷ್ಠಾವಂತರಿಗೆ ಸರಿಯೆನ್ನಬಹುದೆ ಅಯ್ಯಾ ? ಇಂಥ ಗುರುಲಿಂಗಜಂಗಮವ ನೆರೆ ನಂಬದೆ, ಪಾದತೀರ್ಥ ಪ್ರಸಾದದಿರವನರಿಯದೆ, ಬರಿದೆ ಭಕ್ತರೆಂದು ಬೊಗಳುವ ದುರಾಚಾರಿಯ ತೋರದಿರಯ್ಯಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲ ತಿಂಬ ತೆರನಂತೆ, ಗುರುವಿನಲ್ಲಿ ಉಪದೇಶ ಪಡೆದು ಪ್ರಸಾದಕ್ಕೆ ಸೂತಕವ ಮಾಡುವ ಪಂಚಮಹಾಪಾತಕರು ನೀವು ಕೇಳಿ ಭೋ. ಅಂಡದೊಳಗೆ ಹುಟ್ಟಿದ ಉತ್ಪತ್ತಿಯೆಲ್ಲವೂ ಗುರುವಿಂದಾಯಿತ್ತು. ಮತ್ತೆ ಮಿಂಡ ಮೈಲಾರ ಬೀರ ಭೈರವ ಯಕ್ಕನಾತಿ ಕುಕ್ಕನೂರ ಬಸದಿ ಕೇತಧೂಳನೆಂಬ ಕಾಳುದೈವಕ್ಕೆರಗಿ, ಶಿವಭಕ್ತನೆನಿಸಿಕೊಂಬ ಚಂಡಿನಾಯಿಗಳ ಕಂಡು, ಎನ್ನ ಮನ ಹೇಸಿತ್ತು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಗುರು ಸ್ವಾಯುತವಾಯಿತ್ತು, ಎಂಟುಭಾವ ಸ್ವಾಯುತವಾಯಿತ್ತು. ಹದಿನಾರುತೆರನ ಭಕ್ತಿ ಸ್ವಾಯುತವಾಯಿತ್ತು. ಅಷ್ಟವಿಧಾರ್ಚನೆ ಸ್ವಾಯುತವಾಯಿತ್ತು. ತ್ರಿವಿಧದ ಅರಿವು ಸ್ವಾಯುತವಾಯಿತ್ತು. ಮಹಾಲಿಂಗದ ನಿಲವು, ಮಹಾಜಂಗಮದ ನಿಜವು ಸ್ವಾಯುತವಾಯಿತ್ತು. ಶುದ್ಭ ಪ್ರಸಾದ ತನು ಸ್ವಾಯುತವಾಯಿತ್ತು. ಸಿದ್ಧಪ್ರಸಾದ ಚೈತನ್ಯ ಸ್ವಾಯುತವಾಯಿತ್ತು. ಪ್ರಸಿದ್ಧಪ್ರಸಾದ ಮನ ಸ್ವಾಯುತವಾಯಿತ್ತು. ವಾಮಭಾಗದಲ್ಲಿ ಮಹವು ಉದಯವಾಯಿತ್ತು. ನಿಜಸ್ಥಾನದಲ್ಲಿ ನಿಂದಿತ್ತು, ಕ್ಷೀರಸ್ಥಾನದಲ್ಲಿ ಸಾರಾಯವಾಯಿತ್ತು. ಅನುಭಾವದಲ್ಲಿ ಘನಾಗಮವೆನಿಸಿತ್ತು. ಸ್ವಾನುಭಾವದಲ್ಲಿ ನಿಮ್ಮ ಬಸವಣ್ಣಂಗೆ ಶರಣೆಂದಿತ್ತು. ನೆಮ್ಮುಗೆವಿಡಿದು ಬಸವಣ್ಣನ ಪ್ರಸಾದವ ಕೊಂಡಿತ್ತು. ನಿಮ್ಮ ಬಸವಣ್ಣನ ಪ್ರಸಾದದಿಂದ ಇಂತಹ ಘನ ಸ್ವಾಯುತವಾಯಿತ್ತು. ನೀವು ಬಸವಣ್ಣನಿಂದಾದಿರಾಗಿ, ಬಸವಣ್ಣಂಗೆ ನಮೋ ನಮೋ ಎನುತಿರ್ದೆನು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಗುರುವಾದಡೂ ಬಸವಣ್ಣನಿಲ್ಲದೆ ಗುರುವಿಲ್ಲ. ಲಿಂಗವಾದಡೂ ಬಸವಣ್ಣನಿಲ್ಲದೆ ಲಿಂಗವಿಲ್ಲ. ಜಂಗಮವಾದಡೂ ಬಸವಣ್ಣನಿಲ್ಲದೆ ಜಂಗಮವಿಲ್ಲ. ಪ್ರಸಾದವಾದಡೂ ಬಸವಣ್ಣನಿಲ್ಲದೆ ಪ್ರಸಾದವಿಲ್ಲ. ಅನುಭಾವವಾದಡೂ ಬಸವಣ್ಣನಿಲ್ಲದೆ ನುಡಿಯಲಾಗದು. ಇಂತು ಸಂಗಿಸುವಲ್ಲಿ, ನಿಜಸಂಗಿಸುವಲ್ಲಿ, ಸುಸಂಗಿಸುವಲ್ಲಿ, ಮಹಾಸಂಗಿಸುವಲ್ಲಿ, ಪ್ರಸಾದ ಸಂಗಿಸುವಲ್ಲಿ, ಕಲಿದೇವಾ ನಿಮ್ಮ ಶರಣ ಬಸವಣ್ಣನ ನಿಲುವು.
--------------
ಮಡಿವಾಳ ಮಾಚಿದೇವ
ಗುರುಮಾರ್ಗಾಚಾರ ಷಟ್ಸ್ಥಲಮಾರ್ಗವಿಡಿದ ಪ್ರಸಾದಿಗಳು ಲಘುಶಂಕೆಯ ಮಾಡಿದಡೂ ಸರಿಯೆ, ಭವಿಜನ್ಮಾತ್ಮರ ಕೂಡೆ ಮಾತನಾಡಿದಡೂ ಸರಿಯೆ, ಗುರುಪಾದೋದಕ[ದಿಂದಾದಡೂ ಸರಿಯೆ], ಲಿಂಗಪಾದೋದಕದಿಂದಾದಡೂ ಸರಿಯೆ, ಆರು ವೇಳೆ ಆಚಮನ ಮಾಡುವದು. ಇದ ಮೀರಿ, ಜಿಹ್ವೆಯಲ್ಲಿ ಬರುವ ಸತ್ಯೋದಕದ ಗುಟುಕ ಕೊಳಲಾಗದು. ಬಹಿರ್ಭೂಮಿಗೆ ಹೋದ ಬಳಿಕ, ಸ್ನಾನವಿಲ್ಲದೆ ಲಿಂಗಾರ್ಚನೆ, ಲಿಂಗಾರ್ಪಣಕ್ರಿಯೆಗಳನಾಚರಿಸಲಾಗದು. ಮೀರಿ ಮಾಡಿದಡೆ, ಭೂತಪ್ರಾಣಿಯೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಗುರುಭಕ್ತಿಯಲ್ಲಿಪ್ಪ, ಲಿಂಗಭಕ್ತಿಯಲ್ಲಿಪ್ಪ, ಜಂಗಮಭಕ್ತಿಯಲ್ಲಿಪ್ಪ, ಪ್ರಸಾದದಲ್ಲಿಪ್ಪ, ಜಂಗಮಕ್ಕೆ ಮಾಡುವಲ್ಲಿಪ್ಪ, ಮಾಡಿಸಿಕೊಂಬಲ್ಲಿಪ್ಪ, ತನು ಮನ ಧನ ಒಂದಾಗಿ ನಿವೇದಿಸುವಲ್ಲಿಪ್ಪ ಸಂಪೂರ್ಣಾತ್ಮನೆಂದು ನಿತ್ಯಂಗೆ ನೀವು ಕಾರುಣ್ಯವ ಮಾಡಿದಿರಿ. ನಿಮ್ಮ ಕಾರುಣ್ಯಕಟಾಕ್ಷದಲ್ಲಿ ಬಸವಮ್ಮನಲ್ಲದೆ ಮಾಡುವರಿಲ್ಲ. ಆ ಬಸವಣ್ಣ ಹೇಳಿತ್ತ ಮೀರೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದದಲ್ಲಿ ವಿಶ್ವಾಸ ಸಮನಿಸಿದ ಕಾರಣ, ಶಾಶ್ವತಪದವಿಯ ಪಡೆದರು ಪೂರ್ವಪುರಾತನರು. ಆ ಸದಾಚಾರದ ಹೊಲಬನರಿಯದೆ ದೂಷಕ ನಿಂದಕ ಪರವಾದಿಗಳು ನಾನು ಘನ, ತಾನು ಘನವೆಂದು ದಾಸಿ, ವೇಸಿ, ಹೊಲತಿ, ದೊಂಬತಿ, ಕಬ್ಬಿಲಿಗಿತಿ, ಅಗಸಗಿತಿ, ಬೇಡತಿಯರ ಅಧರರಸವ ಸೇವಿಸುವ ದುರಾಚಾರಿಯರು, ಗುರುಲಿಂಗಜಂಗಮಪ್ರಸಾದವನೆಂಜಲೆಂದು ಹೊಲೆದೈವದೆಂಜಲ ಭುಂಜಿಸಿ, ಮತ್ತೆ ತಮ್ಮ ಕುಲವ ಮೆರೆವ ಕುಜಾತಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುವಾಗಿ ಉಪದೇಶವ ತೋರಿದನೀತ. ಲಿಂಗವಾಗಿ ಮನವನಿಂಬುಗೊಂಡಾತನೀತ. ಜಂಗಮವಾಗಿ ಅರ್ಥಪ್ರಾಣ ಅಭಿಮಾನದ ದರ್ಪವ ಕೆಡಿಸಿದನೀತ. ಪ್ರಸಾದವಾಗಿ ಎನ್ನ ಸರ್ವಾಂಗವನವಗ್ರಹಿಸಿದಾತನೀತ. ಪಾದೋದಕವಾಗಿ ಎನ್ನ ಒಳಹೊರಗೆ ತೊಳದಾತನೀತ. ಕಲಿದೇವರದೇವಾ, ಬಸವಣ್ಣ ತೋರಿದನಾಗಿ ಪ್ರಭುವೆಂಬ ಮಹಿಮನ ಸಂಗದಿಂದ ಬದುಕಿದೆನು.
--------------
ಮಡಿವಾಳ ಮಾಚಿದೇವ
ಗುರುವಾದಡೂ ಲಿಂಗವ ಪೂಜಿಸಬೇಕು. ಲಿಂಗವಾದಡೂ ದೇವತ್ವವಿರಬೇಕು. ಜಂಗಮವಾದಡೂ ಲಿಂಗವಿಲ್ಲದೆ ಪ್ರಮಾಣವಲ್ಲ. ಆದಿಗೆ ಆಧಾರವಿಲ್ಲದೆ ಜಗವೇನೂ ಇಲ್ಲ. ಅರಿದೆನೆಂದಡೂ ಅಂಗವೇ ಲಿಂಗವಾಗಿರಬೇಕು. ಕಲಿದೇವರದೇವಯ್ಯನ ಅರಿವುದಕ್ಕೆ ಇದೇ ಮಾರ್ಗ, ಚಂದಯ್ಯ.
--------------
ಮಡಿವಾಳ ಮಾಚಿದೇವ
ಗುರುಶಿಷ್ಯ ಸಂಬಂಧದಿರವ ಇನ್ನಾರು ಬಲ್ಲರು ? ನೆರೆದ ನೆರವಿಗೆ ಹೇಳಲುಂಟೆ ಈ ಮಾತ ? ಸ್ತ್ರೀಪುರುಷರ ಸ್ನೇಹಕೂಟವ ಮತ್ತೊಬ್ಬರಿಗೆ ಅರುಹಬಾರದು. ಗುರುಶಿಷ್ಯ ಸಂಬಂಧವನಿನ್ನಾರು ಬಲ್ಲರು, ಕಲಿದೇವಯ್ಯ ?
--------------
ಮಡಿವಾಳ ಮಾಚಿದೇವ
ಗೋಳಕ ಮೂಲಕ ಮುಕ್ತಕ ದಾರುಕ ರುದ್ರಕ ಕರ್ಣಿಕ, ಈ ಷಟ್‍ಶಕ್ತಿಗಳು ಈ ಪಟ್ಟಣದ ಭಕ್ತೆಯರು. ಇವರ ಮನೆಯ ಜಂಗಮ ನಾನು. ಇವರ ಗಂಡನಿಗಾನು ಒಕ್ಕುದನಿಕ್ಕುವೆನು. ಇವರೆನಗೆ ತನು ಮನ ಧನವ ನಿವೇದಿಸುವರು. ಇರ್ದುದ ವಂಚಿಸದೆ ನಿವೇದಿಸುವರು. ನಾ ಸಹಿತ ಸರ್ವಲಿಂಗಾರ್ಚನೆಯ ಮಾಡುವರು. ನಾ ಹಿಡಿದುದನೆ ಹಿಡಿವರು, ನಾ ಬಿಟ್ಟುದನೆ ಬಿಡುವರು. ನಾ ಬಸವಣ್ಣನ ಮನೆಯ ಜಂಗಮವೆಂದು ಏನ ಹೇಳಿತ್ತ ಕೇಳುವರು. ನಾ ಮಹಾದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು. ಹಂಸದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು. ಪೂರ್ವದ್ವಾರ ಪಶ್ಚಿಮದ್ವಾರ ಉತ್ತರದ್ವಾರ ದಕ್ಷಿಣದ್ವಾರ ಇಂತಿವರೊಳಗೆ ಎನ್ನೊಡನೊಡನೆ ಬಂದರು. ಎನ್ನ ಪ್ರಸಾದವೆ ವಿಶ್ವಾಸವಾಗಿದ್ದರು. ನಾನಿವರ ಮನೆಯ ಜಂಗಮವು ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಗುರು ಮೂರು, ಲಿಂಗ ಆರು, ಜಂಗಮವಿಪ್ಪತ್ತೈದರ ಲಾವಣಿಗೆಗೆ ಸಂದು ಹಿಂದೇನಾಯಿತ್ತು ? ಮುಂದೆ ಹುಟ್ಟಿ, ಮೆಟ್ಟಿ ನಿಲ್ಲು. ಕಲಿದೇವಯ್ಯ ಕರುಣಿಸುವನು.
--------------
ಮಡಿವಾಳ ಮಾಚಿದೇವ
ಗುರುಕರಜಾತರಾಗಿ ಅಂಗದ ಮೇಲೆ ಲಿಂಗಸಾಹಿತ್ಯವಾದ ಸದ್ಭಕ್ತಂಗೆ, ಆ ಲಿಂಗವೆ ಪತಿ, ತಾನೆ ಸತಿಯಾಗಿರಲು ತನಗೆ ಬೇರೆ ಸತಿಯುಂಟೆ ? ಗುರುಕರದಲ್ಲಿ ಉದಯವಾಗಿ, ಅಂಗದ ಮೇಲೆ ಲಿಂಗವ ಧರಿಸಿದ ಲಿಂಗಾಂಗನೆಗೆ, ಆ ಲಿಂಗವೆ ಪತಿ, ತಾನೆ ಸತಿಯಾಗಿರಲು ಆಕೆಗೆ ಬೇರೆ ಪತಿಯುಂಟೆ ? ಇದು ಕಾರಣ, ಲಿಂಗವೆ ಪತಿ, ತಾವಿಬ್ಬರೂ ಭಕ್ತಿಸತಿಗಳಾಗಿ, ಲಿಂಗಸೇವೆಯ ಮಾಡಿ, ಜಂಗಮದಾಸೋಹಿಗಳಾಗಿ, ಲಿಂಗಜಂಗಮಪ್ರಸಾದಸುಖಿಗಳಾಗಿರಿಯೆಂದು ಶ್ರೀಗುರು ವಿಭೂತಿಯ ಪಟ್ಟವಂ ಕಟ್ಟಿ, ಉಭಯಮಂ ಕೈಗೂಡಿಸಿ, ಏಕಪ್ರಸಾದವನೂಡಿ, ಭಕ್ತಿ ವಿವಾಹವ ಮಾಡಿದ ನೋಡಾ. ಇಂತಪ್ಪ ಭಕ್ತಿ ವಿವಾಹದ ಕ್ರಮವನ್ನರಿಯದೆ, ಮತ್ತೆ ಬೇರೆ ಜಗದ್ವ್ಯವಹಾರವನುಳ್ಳ ಪಂಚಾಂಗಸೂತಕ ಪಾತಕದ ಮೊತ್ತದ ಮದುವೆಗೆ ಹರೆಯ ಹೊಯಿಸಿ, ಹಸೆಯಂ ಸೂಸಿ, ತೊಂಡಿಲು ಬಾಸಿಂಗವೆಂದು ಕಟ್ಟಿ, ಧಾರೆಯನೆರೆದು ಭೂಮವೆಂದುಣಿಸಿ, ಹೊಲೆಸೂತಕದ ಮದುವೆಯ ಮಾಡುವ ಪಾತಕರ ಒಡಗೂಡಿಕೊಂಡು ನಡೆವವರು, ಗುರಚರಭಕ್ತರಲ್ಲ. ಅವರಿಗೆ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಕ್ತಿಯಿಲ್ಲದವಂಗೆ ನರಕ ತಪ್ಪದು ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಗುರುವಿಡಿದು ಲಿಂಗವ ಕಂಡೆ. ಲಿಂಗವಿಡಿದು ಜಂಗಮವ ಕಂಡೆ. ಜಂಗಮವಿಡಿದು ಪಾದತೀರ್ಥ ಪ್ರಸಾದವ ಕಂಡೆ. ಪಾದತೀರ್ಥಪ್ರಸಾದವಿಡಿದು ಪರವ ಕಂಡೆ. ಇಂತಿವ ತೋರಿದ ಗುರುವಿನಾಜ್ಞೆಯ ಮೀರಿ ನಡೆವ ದುರಾಚಾರಿಗಳ ಮುಖವ ನೋಡಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗಣಂಗಳು, ನಿತ್ಯಲಿಂಗಾರ್ಚನೆ ಮಾಡುವ ಗಣಂಗಳು. ನಿಜಲಿಂಗಾರ್ಚನೆ ಮಾಡುವ ಗಣಂಗಳು. ಘನಲಿಂಗಾರ್ಚನೆ ಮಾಡುವ ಗಣಂಗಳು. ಸ್ವಯಲಿಂಗಾರ್ಚನೆ ಮಾಡುವ ಗಣಂಗಳು. ಇಂತಿವೆಲ್ಲ ಭಕ್ತಿಯನು ನಿತ್ಯಸಿಂಹಾಸನದ ಮೇಲೆ ಕುಳಿತು ಮಾಡುವಾಗ, ಅವರ ಪ್ರಸಾದದ ರುಚಿಯೊಳಗೋಲಾಡುತಿರ್ದೆನು ಕಾಣಾ ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಗುರು ಕೊಟ್ಟ ಲಿಂಗ ತನ್ನ ಕರಸ್ಥಲದಲ್ಲಿರುತಿರಲು, ಧರೆಯ ಮೇಲೆ ಪ್ರತಿಷಿ*ಸಿದ ಭವಿಶೈವದೈವ, ತೀರ್ಥಕ್ಷೇತ್ರಂಗಳಿಗೆ ಹರಿದುಹೋಗುವ ಪರವಾದಿಗಳಿಗೆ ಅಘೋರನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರೂಪದೇಶವ ಕೇಳದವನೆ ನರಕಿ. ಗುರುವ ಕಂಡು ಶಿರವೆರಗದವನೆ ನರಕಿ. ಗುರು ಮುಟ್ಟು ಹೊಲೆಜನ್ಮವ ಕಳೆಯದವನೆ ನರಕಿ. ಗುರುಪಾದದ ಪೂಜೆಯ ಮಾಡದವನೆ ನರಕಿ. ಗುರುಪ್ರಸಾದದ ರುಚಿಯನರಿಯದವನೆ ನರಕಿ. ಗುರುಲಿಂಗವ ಚರವೆನ್ನದವನೆ ನರಕಿ. ಗುರುನಿಂದೆ ಹರನಿಂದೆ ಚರನಿಂದೆಯಾಡುವ ದುರಾಚಾರಿಗಳ ಮನೆಯಲ್ಲಿ ಆಹಾರವ ಕೊಂಡಡೆ, ಅಘೋರನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ ಈ ತ್ರಿವಿಧ ಪ್ರಸಾದವ ಕೊಂಡು, ನಂಬದ ಸ್ವಯವಚನ ವಿರೋಧಿಗಳ ಮಾತು ಕೇಳಲಾಗದು. ಕೇಳುವರು ಮಹಾಪಾತಕರು. ಲಿಂಗವ ಮಾರಿಕೊಂಡುಂಬುವರು ನರಕವ ತಿಂಬುವದ ಮಾಣ್ಬರೆ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಗುರುಮಾರ್ಗಾಚಾರ ಸತ್ಕ್ರಿಯಾಭಕ್ತಿಜ್ಞಾನವೈರಾಗ್ಯ ಷಟ್ಸ್ಥಲಮಾರ್ಗವಿಡಿದು ಆಚರಿಸುವ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಸ್ವಯಚರಪರಮೂರ್ತಿಗಳು ಮೊದಲಾಗಿ ಲಿಂಗಾರ್ಚನೆಯ ವೇಳೆ ತ್ರಿಕಾಲಂಗಳಲ್ಲಿ ದಂತಪಙÂ್ತಚೇತನ ಪರಿಯಂತರ ಮಧುರ ಒಗರು ಖಾರ ಆಮ್ಲ ಕಹಿಯುಕ್ತವಾದ ಕಾಷ*ದೊಳಗೆ ಅರ್ಪಿತಕ್ಕೆ ಅಯೋಗ್ಯವಾದುದನುಳಿದು, ಯೋಗ್ಯವಾದ ಕಾಷ*ವ ದ್ವಾದಶಾಂಗುಲವಾದಡೂ ಸರಿಯೆ, ಅಷ್ಟಾಂಗುಲವಾದಡೂ ಸರಿಯೆ, ಮೀರಿದಡೆ ಷಡಂಗುಲದಿಂದಾಗಲಿ ದಂತಧಾವನ ಕ್ರಿಯೆಗಳ ಮಾಡುವದು. ದಂತಪಙÂ್ತಯ ಚೇತನ ತಪ್ಪಿದಲ್ಲಿ ಪರ್ಣದಿಂದಾಗಲಿ, ಗುರುಪಾದೊದಕಮಿಶ್ರವಾದ ವಿಭೂತಿಯಿಂದಲಾ[ಗಲಿ] ದಂತಪಙÂ್ತಯ ತೀಡಿ, ಮುಖಸ್ನಾನವ ಮಾಡಿ, ಲಿಂಗಾರ್ಚನೆ ಲಿಂಗಾರ್ಪಣವ ಮಾಡಬೇಕಲ್ಲದೆ ಇಂತು ಗುರುವಾಕ್ಯವ ಮೀರಿ, ಸಂಸಾರಲಂಪಟದಿಂದ ಹಾಂಗೆ ಭುಂಜಿಸುವಾತಂಗೆ ಪ್ರಸಾದಿಸ್ಥಲ ಮೊದಲು, ಪರಸ್ಥಲ ಕಡೆಯಾಗಿ ಪಿಂಡಾದಿ ಜ್ಞಾನಶೂನ್ಯಸ್ಥಲಕ್ಕೆ ಹೊರಗು ನೋಡ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಗುರುಪೂಜೆಯನರಿದೆನೆಂದು ಲಿಂಗಪೂಜೆಯ ಬಿಡಲಾಗದು. ಲಿಂಗಪೂಜೆಯನರಿದೆನೆಂದು ಜಂಗಮಪೂಜೆಯ ಮರೆಯಲಾಗದು. ಜಂಗಮಪೂಜೆಯನರಿದೆನೆಂದು ಶರಣಸಂಗವ ಮರೆಯಲಾಗದು. ಇದು ಕಾರಣ, ಶರಣಸಂಗದ ಸಮ್ಯಗ್‍ಜ್ಞಾನದಲಲ್ಲದೆ ಕಲಿದೇವಯ್ಯನ ಕೂಡುವ ಕೂಟ ಕಾಣಬಾರದು, ಹೋಹ ಬಾರಾ ಚಂದಯ್ಯಾ.
--------------
ಮಡಿವಾಳ ಮಾಚಿದೇವ
ಗೀತ ಪಾತ್ರ ಬೈರೂಪ ಸೂಳೆ ಡೊಂಬಿತಿ ತಾಳದಂಡಿಗಿ ಸೂಕ (?)ವೈಶಿಕದ ಆಳಾಪಕ್ಕೆ ಮರುಳಾಗಿ ತಲೆದೂಗುತಿರ್ಪರು, ಸರ್ಪನು ಸ್ವರವನು ತಾ ಕೇಳಿದಂತೆ. ಗೋಕ್ಷತ್ರಿಯಧಿಪ ಕಾಕ ಪುರಾಣ (?) ಪರಧನ ಪರಸತಿ ಗೌತಮ ದುರ್ಯೋಧನ ಕೀಚಕ ರಾವಳ ಮೊದಲಾಗಿ ಸತ್ತುಹೋದವರ ಸಂಗತಿಯ ಕೇಳಿದಡೆ, ಕೆಟ್ಟ ಮೈ ಸುವರ್ಣವಾಯಿತೆಂಬ ಭ್ರಷ್ಟನಾಯಿನುಡಿಯ ಕೇಳಿ ಕೃತಾರ್ಥರಾದೆವೆಂಬ ಮತಿಗೇಡಿ ನಾಯಿಗಳಿಗೆ ಶಿವಗತಿ, ಧರ್ಮಮಾರ್ಗ ಹೇಳಿದವರಿಗೆ ಸತ್ತ ಹೆಣದ ಮುಂದೆ ಪಂಚಮಹಾವಾದ್ಯವ ಬಾರಿಸಿದ ತೆರನಂತಾಯಿತ್ತು, ಕಲಿದೇವರದೇವಯ್ಯಾ
--------------
ಮಡಿವಾಳ ಮಾಚಿದೇವ
ಗರಿಯ ಕಟ್ಟಿದ ಕೋಲು ಗುರಿಯ ತಾಗಬಲ್ಲುದೆ ? ಗುರುಲಿಂಗ ಜಂಗಮದ ಪಾದತೀರ್ಥ ಪ್ರಸಾದವನರಿಯದೆ, ಪರಮನ ಕಂಡೆನೆಂಬ ದುರಾಚಾರಿಗಳ ಮುಖವ ನೋಡಲಾಗದೆಂದಾತ, ನಮ್ಮ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಗಮನಾದಿಗಳಿಗೆ ಸ್ಥಾವರವುಂಟು. ಸ್ಥಾವರವುಳ್ಳಲ್ಲಿ ಭೋಗವುಂಟು. ಭೋಗವುಳ್ಳಲ್ಲಿ ಜನನವುಂಟು. ಜನನವುಳ್ಳಲ್ಲಿ ಮರಣವುಂಟು. ಲಿಂಗ ಸುಸಂಗಿಗಳು ಇದ ಕೇಳಲಾಗದು. ಸದ್ಗುರುಕಾರುಣ್ಯವುಳ್ಳಲ್ಲಿಯೆ ನಡೆವುದು. ಸದ್ಗುರುಕಾರುಣ್ಯವುಳ್ಳಲ್ಲಿಯೆ ಅನುಭಾವವ ಮಾಡುವುದು. ಅಂತಪ್ಪ ಮಹಾಭಕ್ತ ಬಸವಣ್ಣ ಕಾಣಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗುರುಪ್ರಸಾದಿಗಳಪೂರ್ವ, ಲಿಂಗಪ್ರಸಾದಿಗಳಪೂರ್ವ, ಜಂಗಮಪ್ರಸಾದಿಗಳಪೂರ್ವ. ಗುರುಪ್ರಸಾದಿಯಾದಡೆ ಗುರುವಿಟ್ಟ ತಿಟ್ಟದಲ್ಲಿರಬಲ್ಲಡೆ ಆತ ಗುರುಪ್ರಸಾದಿ. ಲಿಂಗಪ್ರಸಾದಿಯಾದಡೆ ಲಿಂಗಾರ್ಪಿತವಿಲ್ಲದೆ ಕೊಳ್ಳನಾಗಿ ಆತ ಲಿಂಗಪ್ರಸಾದಿ. ಜಂಗಮಪ್ರಸಾದಿಯಾದಡೆ ಮಗುಳ್ದರ್ಪಿಸಬೇಕು. ಇಂತೀ ತ್ರಿವಿಧಪ್ರಸಾದದ ಮೂಲವ ನಮ್ಮ ಬಸವಣ್ಣ ಕಲಿಸಿದನಾಗಿ, ನನಗೂ ನಿನಗೂ ಪ್ರಸಾದವೆ ಪ್ರಾಣವೆಂದು, ಪ್ರಸಾದವ ಹಾರುತ್ತಿರ್ದೆನಯ್ಯಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗಂಜಲದೊಳಗಣ ಪಂಡಿತಾರೂಢನು ಗಂಗೆಯ ಮಿಂದಡೆ ಹಿಂಗಿತೆ ಅದರ ಪೂರ್ವಾಶ್ರಯ? ಜಂಗುಳದೈವ ಜಾ[ತಿ]ಸೂತಕವಳಿಯಬೇಕೆಂದು, ಗುರು ತೋರಿದ ಅಷ್ಟವಿಧಾರ್ಚನೆ ಕ್ರಮಂಗಳ ಆದಿಯಲ್ಲಿ ಮನವು ಸುಸಂಗಿಯಾಗದಿರ್ದಡೆ, ಸೂಕರ ಗಂಗೆಯ ಮಿಂದಂತಾಯಿತ್ತೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ