ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು, ಒಡವೆ ಆಭರಣಂಗಳ ಹಲ್ಲಣಿಸಿಕೊಂಡು ಬಂದು, ಸರ್ವರಿಗೆ ಶಾಸ್ತ್ರೋಪದೇಶವ ಹೇಳುವರು ವೇಷಧಾರಿಗಳು. ಸೂಳೆಯರಂತೆ ತಮ್ಮ ಉಪಾದ್ಥಿಕೆಗೆ ಒಡಲಾಸೆಗೆ ಹಿತವಚನ ನುಡಿವರು. ಇಂತಪ್ಪ ಪ್ರಪಂಚಿನ ವೇಷಡಂಭಕ ಧೂರ್ತಲಾಂಛನಧಾರಿಗಳಿಗೆ ಮಹಂತಿನ ದೇವರೆನ್ನಬಹುದೆ ? ಎನಲಾಗದು. ಅದೇನು ಕಾರಣವೆಂದಡೆ, ತಮ್ಮಾದಿಯ ನಿಲುವ ತಾವರಿಯರು. ಷಟ್‍ಸ್ಥಲದ ನಿರ್ಣಯವ ಏನೆಂದರಿಯರು. ಆಚಾರದನುಭಾವದಂತರಂಗದ ಮೂಲವ ಮುನ್ನವೇ ಅರಿಯರು. ಇಂತಿದನರಿಯದ ಪಶುಪ್ರಾಣಿಗಳಿಗೆ ಜಂಗಮವೆನ್ನಬಹುದೆ ? ಎನ್ನಲಾಗದಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹೋದ ದಿವಸ ವಿಷವೆಂದರಿವುದು ಮನದಲ್ಲಿ. ಬರುವ ದಿವಸ ಸುಧಾಸಮವೆಂದರಿವುದು ಸದ್ಭಾವದಲ್ಲಿ. ಹೋದಂತೆ ಹೋದಡೆ ಕಲಿದೇವರ ಕಾಂಬ ಪರಿಯೆಂತೊ, ಸಿದ್ಧರಾಮಯ್ಯಾ ?
--------------
ಮಡಿವಾಳ ಮಾಚಿದೇವ
ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ, ಲಿಂಗವ ಕೊಟ್ಟು ಲಿಂಗದ್ರೋಹಿಯಾದ. ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ. ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ. ಇಂತೀ ಹೊನ್ನ ಹಂದಿಯ ಕೊಂದು, ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹರ ಹರ ಶಿವ ಶಿವ ಗುರುವೆ ಕರಸ್ಥಲದ ಶಾಂತಲಿಂಗ, ಜಂಗಮ ಭಕ್ತ ಶರಣಗಣಂಗಳ ಚರಣವ ನೆನೆಯದೆ, ಧರೆಯ ಮೇಲೆ ನೆಲಸಿಪ್ಪ ಭವಿಶೈವದೈವಂಗಳ ನೆನೆವ ನರಕಿನಾಯಿಗಳನೇನೆಂಬೆನಯ್ಯಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಹಲಂಬರ ನಡುವೆ ಕುಳ್ಳಿರ್ದ ಗುರುವಿಂಗೆ ಶಿಷ್ಯನು ಸಾಷ್ಟಾಂಗವೆರಗಿ, ಶರಣೆಂದು ಪಾದವ ಹಿಡಿದುಕೊಂಡು ನನಗುಪದೇಶವ ಮಾಡಬೇಕೆಂದು ಬಿನ್ನಹಂ ಮಾಡಿದಡೆ, ನಾನುಪದೇಶವ ಮಾಡಲಮ್ಮೆನು. ನಿಮ್ಮನುಜ್ಞೆಯಿಂದುಪದೇಶವ ಮಾಡಲೇ ಎಂದು ಆ ಹಲರಿಗೆ ಬಿನ್ನಹಂ ಮಾಡಲಿಕೆ, ಆ ಹಲರಿಗೆ ಕೊಟ್ಟ ನಿರೂಪವಿಡಿದು, ಉಪದೇಶವ ಮಾಡುವ ಗುರು, ಹಲರ ಮನೆಯ ಬಾರಿಕನೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹಲಬರ ನಡುವೆ ಕುಳ್ಳಿರ್ದು, ಗುರುಲಿಂಗಜಂಗಮ ವಿಭೂತಿ ವೀಳ್ಯವ ಹರಿದು ಕೊಟ್ಟು, ಆ ಗುರುವಿನಲ್ಲಿ ಕಾರುಣ್ಯವೇಕೆಂದು ಎದ್ದಾಡುವ ಗುರು. ಹಲಬರ ಬಾರಿಕ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಹುಲಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ. ಕರಡಿಯ ಕೊಂದು, ಲಿಂಗಕ್ಕೆ ಬೋನವ ಮಾಡಿದಾತ ಬಸವಣ್ಣ. ಹಾವಿನ ಪರಿಯಾಣವ ಮಾಡಿಕೊಡಬಲ್ಲಾತ ಬಸವಣ್ಣ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು. ದ್ವಯಮುಖರು ಅದ್ವಯಮುಖರು ಸ್ವತಂತ್ರಮುಖರು ಸನ್ನಹಿತಮುಖರು ಉಗ್ರಮುಖರು ಉತ್ಪತ್ಯಕ್ಕೆ ಹೊರಗಾದ ಮುಖರು ಸ್ಥಿತಿಗತಿಯಿಂದರಿಯದ ಮುಖರು ಸರ್ವವಿಸ್ತೀರ್ಣದೊಳಗುಳ್ಳ ಮುಖರು ಅಷ್ಟತನುಮೂರ್ತಿ ಮೊದಲಾದ ಅನಂತಮೂರ್ತಿಗಳೆಲ್ಲ ದೇವಾರಾಧನೆ ಪೂಜಕರಾದರಲ್ಲದೆ ಭಕ್ತಮುಖರಲ್ಲ. ಸಂಸಾರ ಸಂಗದೊಳಗಿದ್ದವರಲ್ಲ. ಇಂಥ ಮುಖರೆಲ್ಲ ಅಂತಿರಲಿ. ಇಲ್ಲದ ನಿರವಯವ ಆಕಾರಕ್ಕೆ ತಂದು, ಜಂಗಮಲಿಂಗವೆನಿಸಿ ಸಾಹಿತ್ಯವ ಮಾಡಿದಾತ ಬಸವಣ್ಣನು. ಇದನರಿದು ಧನ್ಯನಾದೆನೆಂಬೀತ ಪರುಷದೊಳಗು. ಈ ಕ್ರಮವನರಿಯದೆ, ಅನಂತ ಮತವ ಹಿಡಿದು ಭೂಭಾರಕರಾದರು. ಅವರ ಮುಟ್ಟಿ, ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದವಾಗದೆಂದು ಜಂಗಮಕ್ಕೆ ಅರ್ಪಿಸಿದ ನಿತ್ಯಪ್ರಸಾದವೆನಗೆ ಬಸವಣ್ಣನ ಪ್ರಸಾದ. ಆ ಬಸವಣ್ಣನ ಪ್ರಸಾದವೆ ಎನಗೂ ನಿನಗೂ ವಿಸ್ತಾರವಾಗಿತ್ತು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಹೆಣ್ಣಿಗಾಗಿ ಸತ್ತಡೆ ಜನನ ಮರಣ. ಹೊನ್ನಿಗಾಗಿ ಸತ್ತಡೆ ಜನನ ಮರಣ. ಮಣ್ಣಿಗಾಗಿ ಸತ್ತಡೆ ಜನನ ಮರಣ. ಪರಧನ ಪರಸತಿಗಾಗಿ ಸತ್ತಡೆ ಜನನ ಮರಣ. ಶಿವಭಕ್ತನಾಗಿ ಏಕಲಿಂಗನಿಷಾ*ಸಂಪನ್ನನಾಗಿ, ಶಿವಾಚಾರಕ್ಕಾಗಿ ಸತ್ತಡೆ ಮುಕ್ತಿಯೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಹೊಗಬಾರದು ಕಲ್ಯಾಣವನಾರಿಗೆಯೂ ಹೊಕ್ಕಡೇನು ? ಕಲ್ಯಾಣದ ಸ್ಥಾನಮಾನಂಗಳ ನುಡಿಯಬಾರದು. ಈ ಕಲ್ಯಾಣದ ಕಡೆಯ ಕಾಣಬಾರದು. ಕಲ್ಯಾಣದೊಳಗೆ ಹೊಕ್ಕೆಹೆವೆಂದು ಕಲ್ಯಾಣ ಚರಿತ್ರರಾದೆಹೆವೆಂದು ದೇವ ದಾನವ ಮಾನವರೆಲ್ಲರೂ ಭಾವಿಸುತ್ತಿರ್ದುರು ನೋಡಯ್ಯಾ ಕಲ್ಯಾಣವನು. ಅನಂತಮೂರ್ತಿಗಳು ಅನಂತ ಸ್ಥೂಲಮೂರ್ತಿಗಳು ಅನಂತ ಸೂಕ್ಷ್ಮಮೂರ್ತಿಗಳು ಅನಂತ ಮಂತ್ರಧ್ಯಾನರೂಪರು ಪುಣ್ಯಕ್ಕೆ ಅಭಿಲಾಷೆಯ ಮಾಡುವವರು ಪೂಜಕರು ಯೋಗಿಗಳು ಭೋಗಿಗಳು ದ್ವೈತರು ಅದ್ವೈತರು ಕಾಮಿಗಳು ನಿಷ್ಕರ್ಮಿಗಳು ಅಶ್ರಿತರು ಅದೆಂತು ಹೊಗಬಹುದಯ್ಯಾ ಕಲ್ಯಾಣವನು ? ಲಿಂಗದೃಷ್ಟಂಗಲ್ಲದೆ ಲಿಂಗವೇದ್ಯಂಗಲ್ಲದೆ ಲಿಂಗಗಂಭೀರಂಗಲ್ಲದೆ ಪ್ರಸಾದ ಕುಳಾನ್ವಯಂಗಲ್ಲದೆ ಆಸೆಗೆಡೆಗುಡದಿಪ್ಪುದೆ ಕಲ್ಯಾಣ. ಸರ್ವಾಂಗ ವರ್ಣವಳಿದು ಕುಲಮದ ತಲೆದೋರದೆ ಭಕ್ತಿ ನಿತ್ಯವಾದುದೆ ಕಲ್ಯಾಣ. ಈ ಕಲ್ಯಾಣವೆಂಬ ಮಹಾಪುರದೊಳಗೆ ಬಸವಣ್ಣನೂ ನಾನೂ ಕೂಡಿ ಹದುಲಿರ್ದೆವು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಹೆತ್ತ ತಾಯಿ ತಂದೆ ಬಂಧು ಬಳಗ ಗತಿ ಸುತರಾದ ಸೋದರರುಗಳಲ್ಲಿ ಭವಿಯಾಗಿದ್ದವರ ಮೋಹ ಬಿಟ್ಟಲ್ಲದೆ ಶಿವಭಕ್ತಿಯ ನೆಲೆ ಸಿಕ್ಕದು. ಭಕ್ತಿಯ ಪಥವನರಿಯದೆ, ಯುಕ್ತಿಹೀನರು ತಮ್ಮ ಹೆತ್ತ ತಾಯಿ ತಂದೆಯ ಲೋಭಕ್ಕೆ ಸಾಹಿತ್ಯ ಸಂಬಂಧವ ಕೊಂಡು, ಮೃತ್ಯುಮಾರಿಯ ಎಂಜಲತಿಂಬ ನಾಯಿಯ ಹೊಲೆಸೂತಕ ಬಿಡದೆ ಹೋಯಿತ್ತು. ಕಟ್ಟಿದ ಕೂರಲಗಿನ ಮೊನೆಯಲ್ಲಿ ಸಿಕ್ಕಿಕೊಂಡು ಸತ್ತು ಹೋದವರ ಸಿಂಹದ ಹೋಲಿಕೆಗೆ ಮರನ ಚೋಹವ ಮಾಡಿ, ಹೊತ್ತುಕೊಂಡು [ಬೀ]ರಗೂಳನುಂಬ ದುಃಕರ್ಮಿಗಳ ಶಿವಭಕ್ತಂಗೆ ಸರಿಯೆಂದು ಬೊಗಳುವ ನಾಯಿಗೆ ಹತ್ತೆಂಟುಬಾರಿ ತಿರುಗುವ ನರಕ ತಪ್ಪದೆಂದ, ಕಲಿದೇವರದೇಯ್ಯ.
--------------
ಮಡಿವಾಳ ಮಾಚಿದೇವ
ಹರನೊಡ್ಡಿದ ಮಾಯೆ, ಹರಿಯ ಹತ್ತು ಭವಕ್ಕೆ ತಂದಿತ್ತು. ಅರುಹನೆಂಬವನ ಬತ್ತಲೆ ಬರಿಸಿತ್ತು. ಪರವು ತಾನೆಂಬ ಬ್ರಹ್ಮನ ಶಿರವ ಹೋಗಾಡಿತ್ತು. ಗುರುಲಿಂಗಜಂಗಮದ ಹವಣನರಿಯಬೇಕೆಂದು ತಂದೆ ತಾಯಿ ಗುರುವೆಂದು ಹೊತ್ತು ತಿರುಗಿದ ಚೌಂಡಲಯ್ಯ ಒಂದೆ ಬಾಣದಲ್ಲಿ ಗುರಿಯಾಗಿ ಸತ್ತ ಕೇಡ ನೋಡಾ. ಇಂತಿದನರಿಯದೆ ಮರದ ನರಜೀವಿಗಳು ಸುರೆಯ ದೈವದ ಸೇವೆಯ ಮಾಡಿ, ಇತ್ತ ಹರನ ಹೊಗಳಿ, ವೇದ ಶಾಸ್ತ್ರ ಪುರಾಣಾಗಮಂಗಳನರಿತರಿತು, ಮರಳಿ ಅನ್ಯದೈವಕ್ಕೆರಗುವ ದುರಾತ್ಮರಿಗೆ ಇಹಪರವಿಲ್ಲವೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹೊರಗಿದ್ದಾನೆಂಬೆನೆ ಒಳಗು ತಾನೆ ನೋಡಾ. ಒಳಗಿದ್ದಾನೆಂಬೆನೆ ಹೊರಗು ತಾನೆ ನೋಡಾ. ಒಳಹೊರಗು ಸರ್ವಾಂಗ ಸನ್ನಹಿತವಾಗಿದ್ದ ಸಮರಸದ ಮಹಿಮನನು ತಿಳಿದು ನೋಡಾ. ಅಗಲಲಿಲ್ಲದ ಘನವ ಅಗಲಿದೆನೆಂಬ ಮಾತು, ಶಿವಶರಣರ ಮನಕೆ ಬಹುದೆ ? ಮರಣವಿಲ್ಲದ ಮಹಿಮನ ನಿಲವ ತನ್ನಲ್ಲಿ ನೋಡಿ ಶರಣೆಂಬುದಲ್ಲದೆ ಮರೆಯಬಹುದೆ ? ತೆರಹಿಲ್ಲದ ನಿಲವು. ಕಲಿದೇವರದೇವನು ಕರಸ್ಥಲದೊಳಗೆ ಅಯಿದಾನೆ ಕಾಣಾ, ಚನ್ನಬಸವಣ್ಣ.
--------------
ಮಡಿವಾಳ ಮಾಚಿದೇವ
ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ ? ಅಟ್ಟುಣ್ಣಬಾರದ ಮಡಕೆ ಇರ್ದಡೇನಯ್ಯಾ ಮನೆಯೊಳಗೆ ? ಶಿವ ನಿಮ್ಮ ಮುಟ್ಟದ ಮನವಿರ್ದಡೇನಯ್ಯಾ ತನುನಿನೊಳಗೆ ? ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ ? ಬಚ್ಚಲೊಳಗಣ ಬಾಲ್ಪುಳು ಬಲ್ಲುದೆ ನಿಚ್ಚಳದ ನೀರಸುಖವ ? ನಿಚ್ಚನಿಚ್ಚಲೋದುವ ಗಿಳಿ ಬಲ್ಲುದೆ ತನಗೆ ಬಹ ಬೆಕ್ಕಿನ ಬಾಧೆಯ ? ಹುಚ್ಚುಕೊಂಡ ನಾಯಿ ಬಲ್ಲುದೆ ತನ್ನ ಸಾಕಿದೊಡೆಯನ ? ಇದು ಕಾರಣ, ಒಡಲ ಪಡೆದಡೇನು ? ಮಡದಿಯ ನೆರಹಿದಡೇನು ? ಒಡವೆಯ ಗಳಿಸಿದಡೇನು ? ಶಿವನೆ ನಿಮ್ಮನರಿಯದ ಮನುಜನ ಒಡಲೆಂಬುದು, ಹೊಲೆಜೋಗಿಯ ಕೈಯ ಒಡೆದ ಸೋರೆಯಂತೆ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಹಲವುಕಾಲದ ಋಷಿಯರೆಲ್ಲರೂ ಶಿವಭಕ್ತಿಯ ನೆಲೆಯನರಿತು ಬ್ರಾಹ್ಮಣರೆನಿಸಿಕೊಂಡರು. ಇವರ ನೆಲೆಯನರಿಯದ ನಿಂದಕರು ಗೆಲವಿಂಗೆ ಹೆಣಗುವ ಪರಿಯ ನೋಡಾ. ಹಲವು ದೈವಂಗಳಿಗೆರಗಿ ಕುಲದಲ್ಲಿ ಶಿಷ್ಟರೆನಿಸಿಕೊಂಬರು. ಮೊದಲೆ ಹುಟ್ಟಿದ ರುದ್ರನ ಹೆಸರ ಹೇಳಿ, ಬ್ರಾಹ್ಮಣನಲ್ಲದ ಭುಜದಲ್ಲಿ ತೊಡೆಯಲ್ಲಿ ಅಂಗದಲ್ಲಿ ಹುಟ್ಟಿದ ಶೂದ್ರ ವೈಶ್ಯ ಕ್ಷತ್ರಿಯಂಗೆ ಹೊಡೆವಡುವ ಗುರುದ್ರೋಹಿಗಳು ತಮ್ಮ ಹೆಸರು ವೇದಬ್ರಾಹ್ಮಣರೆನಿಸಿಕೊಂಡು, ಗೋವನರ್ಚಿಸಿ ಪೂಜಿಸಿ ಅನಂತ ಪರಿಯಲ್ಲಿ ಶರಣೆಂಬರು. ಮರಳಿ ಗೋಹಿಂಸೆಯ ಮಾಡುವರು. ಗೋನಾಯಿಗಳು ನುಡಿದಂತೆ ನಡೆಯರು, ನುಡಿ ಹೊಲೆ ಹಿಂಗದು. ಇಂತಿವರ ವೇದಬ್ರಾಹ್ಮಣರೆಂದವರಿಗೆ ನಾಯಕನರಕ ತಪ್ಪದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹುಟ್ಟಿದ ಕಲ್ಲಿಗೆ, ನೆಟ್ಟ ಪ್ರತಿµ*ಗೆ ಕಟ್ಟಿದ ಲಿಂಗವಡಿಯಾಗಿ ಬೀಳುವ ಲೊಟ್ಟಿಗುಡಿಹಿಗಳನೇನೆಂಬೆನಯ್ಯಾ. ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹಸಿವು ತೃಷೆ ವ್ಯಸನಕ್ಕೆ ಕುದಿ ಕುದಿದು ಸಚರಾಚರದೊಳಗೆಲ್ಲ ಲಯವಾಗಿ ಹೋದರಲ್ಲ. ಉದರವ ಹೊರೆವ ಕೋಟಿವೇಷಧಾರಿಗಳೆಲ್ಲ ಜಂಗಮವಪ್ಪರೇ ? ಅಲ್ಲ. ಲಿಂಗಸ್ಥಲವನರಿಯರು, ಜಂಗಮಸ್ಥಲವನರಿಯರು, ಪ್ರಸಾದಿಸ್ಥಲವನರಿಯರು. ಇಂತೀ ತ್ರಿವಿಧಸ್ಥಲವನರಿಯದ ಕಾರಣಾ ಅವರ ಗಾವಿಲರ ಮಕ್ಕಳೆಂಬೆ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಹುಟ್ಟಿಸುವ ಹೊಂದಿಸುವ ಶಿವನ ನಿµ*ಯಿಲ್ಲದ ಸಾಹಿತ್ಯವ ಕೊಂಡು, ಕ್ರೀಯಿಲ್ಲದಿರ್ದಡೆ ಭಕ್ತರೆಂತೆಂಬೆನಯ್ಯ ? ಅಟ್ಟ ಕೂಳೆಲ್ಲವಂ ಅನ್ಯದೈವದ ಹೆಸರ ಹೇಳಿ ಭುಂಜಿಸುವ ಚೆಟ್ಟಿ ಮಾಳ ಅಕ್ಕತದಿಗಿಯೆಂದು ತಮ್ಮ ಗೋತ್ರಕ್ಕೆ ಬೊಟ್ಟನಿಡುವರು. ಮುಖ್ಯರಾಗಬೇಕೆಂದು ಅಟ್ಟ ಅಡಿಗೆ ಮೀಸಲವೆಂದು ಅಶುದ್ಧವ ತಿಂಬ ಕಾಗೆಗೆ ಕೂಳ ಚೆಲ್ಲಿ, ತಮ್ಮ ಪಿತರುಂಡರೆಂದು ಮಿಕ್ಕ ಕೂಳ ತಮ್ಮ ಲಿಂಗಕ್ಕೆ ತೋರಿ ಭುಂಜಿಸುವ ಭಕ್ತರೆನಿಸಿಕೊಂಬ ಭ್ರಷ್ಟಜಾತಿಗಳು ಕೆಟ್ಟಕೇಡಿಂಗೆ ಕಡೆಯಿಲ್ಲವೆಂದ, ನಮ್ಮ ಕಲಿದೇವರದೇವ.
--------------
ಮಡಿವಾಳ ಮಾಚಿದೇವ