ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪದ್ಮಾಸನದಲ್ಲಿ ಕುಳ್ಳಿರ್ದು ಲಿಂಗಾರ್ಚನೆಯ ಮಾಡುವರ ತೋರಾ ಎನಗೆ. ಸ್ವರೂಪಿನಲ್ಲಿ ನಿಂದು, ಜಂಗಮಕ್ಕೆ ಜಂಗಮದಾಸೋಹವ ಮಾಡುವರ ತೋರಾ ಎನಗೆ. ಮನ ನಿಜರೂಪಿನಲ್ಲಿ ಗುರುಸಿಂಹಾಸನವನೇರಿ ಪರಿಣಾಮವಳವಟ್ಟು, ಪ್ರಸಾದವ ಗ್ರಹಿಸುವರ ತೋರಾ ಎನಗೆ. ಇಂತಪ್ಪವರ ಸಂಗದಲ್ಲಿರಿಸು ಕಲಿದೇವಯ್ಯಾ, ನಾ ನಿನ್ನ ಬಲ್ಲೆ. ನನಗೆಯೂ ನಿನಗೆಯೂ ಇಂತಪ್ಪವರಪೂರ್ವ.
--------------
ಮಡಿವಾಳ ಮಾಚಿದೇವ
ಪರ್ವತಕ್ಕೆ ಕಂಬಿ ಕಾವಡಿಯ ಜೀಯರು ದ್ವಿಜರೊಯ್ವರಲ್ಲದೆ ಜಂಗಮದೇವರೊಯ್ವರೆ? ಆ ಜಂಗಮದೇವರ ಮೇಲೆ ಹೊರಿಸುವನೆ ಭಕ್ತ ? ಅವರು ಭಕ್ತರೊಡೆಯರಲ್ಲ. ಅವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು. ಹೊಯ್ಯೋ ಡಂಗುರವ, ಕಲಿದೇವರು ಸಾಕ್ಷಿಯಾಗಿ.
--------------
ಮಡಿವಾಳ ಮಾಚಿದೇವ
ಪರಸ್ತ್ರೀಯರ ನೋಡುವ ಕಣ್ಣು, ಲಿಂಗವ ನೋಡಿದ ಅವರಿಗೆ ಲಿಂಗವಿಲ್ಲ. ಪರಬ್ರಹ್ಮವ ನುಡಿವ ನಾಲಿಗೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ, ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ತೋಳು ಕುಚವ ಮುಟ್ಟಿದಡೆ, ತಾ ಮಾಡುವ ಪೂಜೆ ನಿಷ್ಫಲ. ಇದರಿದಡೆ ವ್ರತ. ಅಲ್ಲದಿರ್ದಡೆ, ಸುರೆಯ ಒಳಗೆ ತುಂಬಿ, ಹೊರಗೆ ಬೂದಿಯ ಪೂಸಿದಂತಾಯಿತ್ತು, ಕಲಿದೇವಾ.
--------------
ಮಡಿವಾಳ ಮಾಚಿದೇವ
ಪಾದೋದಕ ಪ್ರಸಾದದಿಂದ ಮೇಲೆ ಪರವಿಲ್ಲವಾಗಿ, ಗುರುವಿಡಿದು ಲಿಂಗವ ಕಂಡೆ. ಲಿಂಗವಿಡಿದು ಜಂಗಮವ ಕಂಡೆ. ಪ್ರಸಾದದಿಂದ ಪರವ ಕಂಡೆ. ಪರವ ತೋರಿದ ಗುರುವಿನಾಜ್ಞೆಯನು ಮೀರುವ ದುರಾತ್ಮರೆನ್ನ ಮುಖಕ್ಕೆ ತೋರದಿರು, ಕಲಿದೇವರದೇವಯ್ಯಾ.
--------------
ಮಡಿವಾಳ ಮಾಚಿದೇವ
ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡಿ, ಕಲ್ಲುಕುಟಿಗನಲ್ಲಿಯೆ ಗುರುವಾದ, ಕಲ್ಲು ಶಿಷ್ಯನಾದ. ಹಿಂದಣಾದಿಯನರಿಯದ ಗುರು, ಮುಂದೆ ವೇದಿಸಲಿಲ್ಲದ, ಉಪದೇಶಕೊಳ್ಳಲರಿಯದ ಶಿಷ್ಯ, ಈ ಎರಡೂ ಕಲ್ಲಕುಟಿಗನ ಕಲ್ಲಿನಂತೆ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಪ್ರಣಮ ಪ್ರಜ್ವಲಿತವಾಯಿತ್ತು, ಪ್ರಸಾದ ನಿಂದ ಸ್ಥಲವು. ಪ್ರಸಾದ ಪ್ರಜ್ವಲಿತವಾಯಿತ್ತು, ಅನುಭಾವ ನಿಂದ ಸ್ಥಲವು. ಅನುಭಾವ ಪ್ರಜ್ವಲಿತವಾಯಿತ್ತು. ಇಂತಾ ಮಹಾಘನವು ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಜೈಕ್ಯದ ನಿಲವು.
--------------
ಮಡಿವಾಳ ಮಾಚಿದೇವ
ಪೃಥ್ವಿಯ ಚಿತ್ತದ ಪಂಚಕರ್ಮೇಂದ್ರಿಯಂಗಳೈದೂ ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ. ಅಪ್ಪುವಿನ ಬುದ್ಧಿಯ ಪದಾರ್ಥಂಗಳೈದೂ ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ. ಅಗ್ನಿಯ ಅಹಂಕಾರ ಪಂಚೇಂದ್ರಿಯಂಗಳೈದೂ ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ. ವಾಯುವಿನ ಮನದ ಪಂಚಪ್ರಾಣವಾಯುಗಳೈದೂ ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ. ಆಕಾಶದ ಸುಜ್ಞಾನದ ಜ್ಞಾನಂಗಳೈದೂ ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ. ಆತ್ಮನ ಪರಮಾತ್ಮನ ಹಸ್ತಂಗಳೈದೂ ಲಿಂಗೈಕ್ಯವಾದವು, ಬಸವಣ್ಣ ನಿಮ್ಮಿಂದ. ಇಂತಿವೆಲ್ಲವೂ ಲಿಂಗೈಕ್ಯವಾದವು ಬಸವಣ್ಣ ನಿಮ್ಮಿಂದ. ಕಲಿದೇವಾ, ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಪ್ರಾಣಾಪಾನ ಮೊದಲಾದ ದಶವಾಯುಗಳ ಇಚ್ಫೆಯಲ್ಲಿ ಸುಳಿದಾಡದು. ಜ್ಞಾನದಲ್ಲಿ ಬೆಳೆವುದು, ನಿರಾಲಂಬದಲ್ಲಿ ಆಡುವುದು, ಹೃದಯಕಮಲ ಪದ್ಮಪತ್ರದುಸುರನಾಲಿಸಿ, ಸಂಪುಟಜಂಗಮದಾಟವನಾಡುವುದು, ಲಿಂಗದ ನೋಟವ ನೋಡುವುದು, ಮಹಾಪ್ರಸಾದದಲ್ಲಿ ಬೆಳೆವುದು, ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವಿದು.
--------------
ಮಡಿವಾಳ ಮಾಚಿದೇವ
ಪಾಪಿಗೆ ಪ್ರಾಯಶ್ಚಿತ್ತವುಂಟು. ಪರವಾದಿಗೆ ಪ್ರಾಯಶ್ಚಿತ್ತವುಂಟು. ಶಿವಭಕ್ತನಾಗಿ ಅನ್ಯದೈವವ ಪೂಜಿಸುವಂಗೆ ಪ್ರಾಯಶ್ಚಿತ್ತವಿಲ್ಲವೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಪದ್ಮದೊಳಗಣ ಪತ್ರದೊಳಗಣ ದ್ವಿದಳದೊಳಗಣ ಸ್ವರದ ಬಯಕೆಯೊಳಗಣ ಕರ್ಣಿಕಾಕುಹರದೊಳಗಣ ಅಜಸ್ಥಲದೊಳಗಣ ಅಹಿಮಧ್ಯದೊಳಗಣ ಹಲವುಕೋಟಿ ಪತ್ರದೊಳಗಣ ಕುಹರ ಪದ್ಮಮಧ್ಯದೊಳಗಣ ಪ್ರಾಣವಿಪ್ಪುದೆಂದು ಆತ್ಮನೆ ನಿಶ್ಚೈಸುವೆನೆನುತ, ಅನಂತಯೋಗಿಗಳು ಸಂಸಾರದ ವರ್ಮವ ಕೆಡಿಸಿಹೆವೆಂದು, ಅನಂತನಾಳದಲ್ಲಿ ನಿರ್ಬಂಧವ ಮಾಡಿ ಅಮೃತರಾದೆಹೆವೆಂದು, ಅಮೃತವ ದಣಿಯಲುಂಡೆಹೆವೆಂದು, ನಾನಾ ಕುಟಿಲವಾದ ಭಾವದಲ್ಲಿ ಐದಾರೆ ಕಾಣೆವಯ್ಯ. ನಿಮ್ಮ ಶಿವಾಚಾರದ ಕುಳವನರಿಯದೆ, ಅನೇಕರು ಬಂಧನದಲ್ಲಿ ಸಿಲುಕಿದರು ಕಾಣಯ್ಯ. ನೀವು ಚತುರ್ವಿಧಸ್ಥಲ ಮಂಟಪವ ಮಾಡಿದ ಸಿಂಹಾಸನದ ಮೇಲಿರ್ದು ನಿತ್ಯರಿಗೆ ಭಕ್ತಿಯನೀವುದ ಕಂಡ ಭಕ್ತರು ನಿತ್ಯರು. ನಿಮಗೆ ಶರಣಾಗತಿವೊಕ್ಕೆ, ಮಹಾಪ್ರಸಾದ. ದೇವಾತ್ಮನು ಪರಿಭವಕ್ಕೆ ಬಪ್ಪನೆಯೆಂದಡೆ, ಅದು ಹುಸಿ ಕಾಣಿರೊ. ಆ ಆತ್ಮನಿಪ್ಪ ನೆಲೆಯ ಕೇಳಿರೊ. ಗುರುಭಕ್ತಿಯಲ್ಲಿಪ್ಪ, ದಾಸೋಹದಲ್ಲಿಪ್ಪ, ಅರ್ಪಿತ ಪ್ರಸಾದದಲ್ಲಿಪ್ಪ, ಮಾಡುವಲ್ಲಿಪ್ಪ, ಮಾಡಿಸಿಕೊಂಬಲ್ಲಿಪ್ಪ, ತನುಮನಧನವೊಂದಾಗಿ ನಿವೇದಿಸುವಲ್ಲಿಪ್ಪ, ಪರಿಪೂರ್ಣಾತ್ಮವೆಂದು ನಿತ್ಯರಿಗೆ ನೀವು ಕಾರುಣ್ಯವ ಮಾಡಿದಿರಿ. ನಿಮ್ಮ ಕರುಣಕಟಾಕ್ಷದಲ್ಲಿ ಬಸವಣ್ಣನಲ್ಲದೆ ಮಾಡುವರಿಲ್ಲ, ಮಾಡಿಸಿಕೊಂಬವರಿಲ್ಲ. ಅದು ಕಾರಣ, ನಿಮ್ಮ ಬಸವಣ್ಣ ಹೇಳಿತ್ತ ಮೀರೆ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಪರದೈವ ಪರಧನ ಪರಸ್ತ್ರೀ ಪರನಿಂದೆ ಪರಹಿಂಸೆಯಲ್ಲಿ ಚರಿಸುವ ಹೊಲೆಯರಿಗೆ, ಕ್ರಿಯಾದೀಕ್ಷೆಯ ಮಾಡುವನೊಬ್ಬ ಗುರುದ್ರೋಹಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಪೃಥ್ವಿಯ ಗುಣವುಳ್ಳಡೆ ಭಕ್ತ. ಅಪ್ಪುವಿನ ಗುಣವುಳ್ಳಡೆ ಮಾಹೇಶ್ವರ. ಅಗ್ನಿಯ ಗುಣವುಳ್ಳಡೆ ಪ್ರಸಾದಿ. ವಾಯುವಿನ ಗುಣವುಳ್ಳಡೆ ಶರಣ. ಆತ್ಮನ ಗುಣವುಳ್ಳಡೆ ಐಕ್ಯ. ಇಂತೀ ಕ್ಷಮೆದಮೆಶಾಂತಿಸೈರಣೆಯುಳ್ಳಾತನೆ ಷಟ್ಸ್ಥಲಬ್ರಹ್ಮಿ. ಇದು ಕಾರಣ, ಗುರುಲಿಂಗದಲ್ಲಿ ವಿಶ್ವಾಸ, ಚರಲಿಂಗದಲ್ಲಿ ಸದ್ಭಕ್ತಿಯುಳ್ಳಾತನೆ ಭಕ್ತ ಮಾಹೇಶ್ವರ. ಪರಬ್ರಹ್ಮದಲ್ಲಿ ಪರಿಣಾಮವುಳ್ಳಾತನೆ ಪ್ರಸಾದಿ. ತನ್ನ ತಾನರಿದು, ಇದಿರ ಮರೆದಾತನೆ ಪ್ರಾಣಲಿಂಗಿ. ಅನುಪಮಜ್ಞಾನದಿಂದ ತನ್ನ ನಿಜಸ್ವರೂಪವ ತಿಳಿಯಬಲ್ಲಾತನೆ ಶರಣ. ಪಿಂಡಬ್ರಹ್ಮಾಂಡವನೊಳಕೊಂಡು ಚಿದಾನಂದಬ್ರಹ್ಮದಲ್ಲಿ ಕೂಡಬಲ್ಲಾತನೆ ಐಕ್ಯ. ಇಂತಪ್ಪ ವರ್ಮಾದಿ ವರ್ಮವನರಿಯದ ಅದ್ವೈತಿಗಳೆಲ್ಲ, ಭವಕ್ಕೆ ಬೀಜರಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಪರಮವಿಭೂತಿಯ ಹಣೆಯಲ್ಲಿ ಧರಿಸಿ, ಕೊರಳಲ್ಲಿ ರುದ್ರಾಕ್ಷಿಯ ಧರಿಸಿ, ಗುರು ಕೊಟ್ಟ ಲಿಂಗವ ಕರದಲ್ಲಿ ಧರಿಸಿ, ಮರಳಿ ಮತ್ತೆ ಧರೆಯ ಪ್ರತಿಷೆ*ಗೆರಗುವ ನರಕಿಜೀವಿಗಳನೇನೆಂಬೆನಯ್ಯಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಪೃಥ್ವಿ ಲಿಂಗವೆಂದು ಗತವಾದರು ಹಲಬರು. ಅಪ್ಪು ಲಿಂಗವೆಂದು ತಪ್ಪಿದರು ಶಿವಪಥವ ಹಲಬರು. ತೇಜ ಲಿಂಗವೆಂದು ವಾದಿಗಳಾದರು ಹಲಬರು. ವಾಯು ಲಿಂಗವೆಂದು ಘಾಸಿಯಾದರು ಹಲಬರು. ಆಕಾಶ ಲಿಂಗವೆಂದು ಶೂನ್ಯವಾದಿಗಳಾದರು ಹಲಬರು. ಇಂತೀ ಹುಸಿಶಬ್ಧವ ತೊಡೆದು, ನಿಜಲಿಂಗ ನಿಜಜಂಗಮ ನಿತ್ಯಪ್ರಸಾದದ ನಿಜವ ತೋರಿ, ಎನ್ನ ಬದುಕಿಸಿದಾತ ಬಸವಣ್ಣ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಪ್ರಥಮಕಾಲದಲ್ಲಿ ದೇವಗಣ, ಮಹಾಗಣ, ಕಿನ್ನರಗಣ, ಆಳಾಪಗಣಸಹಿತ ಸಂಗನಬಸವಣ್ಣ. ಗಣಪ್ರಸಾದಿಯಾಗಿ ಮತ್ರ್ಯಲೋಕಕ್ಕೆ ಮಹವ ತಂದು, ಶಿವಗಣಂಗಳ ಮಾಡಿದಾತ ಬಸವಣ್ಣ. ಸ್ವರೂಪ ಸಾರಾಯವ ಪದಾರ್ಥವೆಂದಾತ ಬಸವಣ್ಣ. ಕಲಿದೇವಯ್ಯ, ನಿಮ್ಮ ಶರಣನಿಂತಹ ಘನಮಹಿಮ, ನೋಡಯ್ಯಾ.
--------------
ಮಡಿವಾಳ ಮಾಚಿದೇವ
ಪಕ್ಕ ಮುರಿದ ಕೋಳಿಯಂತೆ ಬೆಕ್ಕಿನ ಬಾಧೆಗೆ ಸಿಕ್ಕಬೇಡವೆಂದು, ಗುರುಲಿಂಗಜಂಗಮದ ಪಾದತೀರ್ಥಪ್ರಸಾದದ ದಿಕ್ಕ ತೋರೆ, ದೀಕ್ಷೆಯ ಕೊಟ್ಟ, ಮಾರ್ಗವ ಮೀರಿ, ಮರಳಿ ಮಕ್ಕಳು ಮಾತಾಪಿತರು ಬಂಧುಗಳು ಭವಿಗಳಾಗಿರಲು, ಅವರ ಮುಖವ ಬಿಡಲಾರದೆ ಕೂಳಿನಾಸೆ ಮಾಡಿ ಹೋದೆನೆಂದಡೆ, ಕೋಳಿ ತಾನು ಬೆಕ್ಕು ನಾಯಿ[ಯಿದ್ದ]ಗೃಹಕೆ ಗುಟುಕಕೊಳಹೋದ ತೆರನಾಯಿತ್ತು, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಪುರವರಾಧೀಶ್ವರರೆಲ್ಲರೂ ಪುರದೊಡೆಯ ಬಸವಣ್ಣ ಎಂದೆಂಬರು. ಅಮರಾಧೀಶ್ವರರೆಲ್ಲರೂ ಅಮರಪತಿ ಬಸವಣ್ಣ ಎಂದೆಂಬರು. ಕೈಲಾಸಾಧಿಪತಿಗಳೆಲ್ಲರೂ ಶಿವಲಿಂಗ ಬಸವಣ್ಣ ಎಂದೆಂಬರು. ದೇವಸಮೂಹವೆಲ್ಲ ಮಹಾಲಿಂಗ ಬಸವಣ್ಣ ಎಂದೆಂಬರು. ಪಂಚವಕ್ತ್ರಗಣಂಗಳೆಲ್ಲರೂ ಪಂಚಲಿಂಗ ಬಸವಣ್ಣ ಎಂದೆಂಬರು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಗಣಂಗಳೆಲ್ಲರೂ ಪದವೀವ ಬಸವಣ್ಣ ಎಂದೆಂಬರು. ನಾಗಲೋಕದವರೆಲ್ಲರೂ ಸಕಲಾಧಾರ ಬಸವಣ್ಣ ಎಂದೆಂಬರು. ಮತ್ರ್ಯಲೋಕದವರೆಲ್ಲರೂ ಗುರುಲಿಂಗ ಬಸವಣ್ಣ ಎಂದೆಂಬರು. ಭಕ್ತ ಬಸವಣ್ಣ ಎಂದೆಂಬರು, ಸೋಹಿ ದಾಸೋಹಿ ಬಸವಣ್ಣ ಎಂದೆಂಬರು. ತನುಮನಧನವ ಗುರುಲಿಂಗಜಂಗಮಕ್ಕೆ ನಿವೇದಿಸುವಾತ ಬಸವಣ್ಣ ಎಂದೆಂಬರು. ಇದು ಕಾರಣ, ನಾನು ಬಸವಣ್ಣ ಬಸವಣ್ಣ ಬಸವಣ್ಣ ಎಂದು ಬಯಲಾದೆನು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಪರಧನ ಪರಸತಿಗಳುಪಿದಡೆ, ಮುಂದೆ ನರಕವೆಂದು ಗುರುವಾಕ್ಯ ಸಾರುತಿದೆ. ಪರಧನ ಪರಸತಿಗಳುಪಿ ಹತವಾಗಿ ಹೋದ ದುರ್ಯೋಧನ. ಪಾಂಡವರ ಕಥೆಯ ಕೇಳಿ, ಹರಿವ ನದಿಯ ಮಿಂದು, ಗೋದಾನ ಮಾಡುವ ನರಕಿಗಳ ನುಡಿಯ ಕೇಳಲಾಗದೆಂದ, ಕಲಿದೇವರದೇವ
--------------
ಮಡಿವಾಳ ಮಾಚಿದೇವ