ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು, ಗುರು ತಾನೀತ ಎನ್ನ ಭವರೋಗವ ವೇದ್ಥಿಸಲು, ಭಕ್ತ ತಾನೀತ ಎನಗೆ ವಿಸ್ತಾರವಾಗಿ. ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನಮಹಿಮನಾಗಿ. ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ. ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯ ತಾನಾಗಿ. ಎನ್ನ ಸರ್ವಸ್ವಾಯತವ ಮಾಡಿದ ಮಹಿಮ ತಾನೀತ ಕಾಣಾ, ಕಲಿಗೆದೇವರದೇವ, ನಿಮ್ಮ ಶರಣ ಬಸವಣ್ಣ.
--------------
ಮಡಿವಾಳ ಮಾಚಿದೇವ
ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚವಿಷಯ ಸಂಗತವಾವುದೆಂದಡೆ: ಶಬ್ದಗುರು, ಸ್ಪರ್ಶಲಿಂಗ, ರೂಪುಜಂಗಮ, ರಸಪ್ರಸಾದ, ಗಂಧ ಅನುಭಾವ. ಇಂತೀ ಪಂಚವಿಂಶತಿಯವನಲ್ಲವೆನಬಲ್ಲನಾಗಿ ಬಸವಣ್ಣನು. ಮನ ಬುದ್ಧಿ ಚಿತ್ತ ಅಹಂಕಾರ ಚತುರ್ವಿಧ ಸ್ಥೂಲವಾವುದೆಂದಡೆ: ಮನ ಧ್ಯಾನ ಬುದ್ಧಿ ವಂಚನೆ ಇಲ್ಲದುದು. ಚಿತ್ತ ದಾಸೋಹ ಅಹಂಕಾರ ಜ್ಞಾನ ಇವರಲ್ಲಿ ಮಾಡಬಲ್ಲನಾಗಿ ಬಸವಣ್ಣನು. ಸತ್ವ ರಜ ತಮವೆಂಬೀ ತ್ರಿಕರಣವಾವುದೆಂದಡೆ: ಸತ್ವಶುದ್ಧ ರಜಸಿದ್ಧ ತಮಪ್ರಸಿದ್ಧ. ಇಂತೀ ತ್ರಿವಿಧ ಸನ್ನಹಿತನಾಗಿ ಬಸವಣ್ಣನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾವುದೆಂದಡೆ: ಕಾಮ ಪೂಜೆ, ಕ್ರೋಧ ಅನಿಮಿಷ, ಲೋಭ ಭಕ್ತಿ, ಮೋಹ ಅಷ್ಟವಿಧಾರ್ಚನೆ, ಮದ ಷೋಡಶೋಪಚಾರ ಮತ್ಸರ ಭವಂ ನಾಸ್ತಿ ಎಂದೆನಬಲ್ಲನಾಗಿ ಬಸವಣ್ಣನು, ಮಹಾದೇವನು ಬಸವಣ್ಣನು, ಮಹಾಲಿಂಗವು ಬಸವಣ್ಣಂಗೆ ಮತ್ತೇನು ಅಪ್ರತಿಮ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಶರಣು ಶರಣು ಎನ್ನ ಬಿನ್ನಪವನಧರಿಸಯ್ಯಾ. ಬಸವಣ್ಣನೆ ಗುರುರೂಪಾಗಿ ಮತ್ರ್ಯಕ್ಕೆ ಬಂದ. ಚೆನ್ನಬಸವಣ್ಣನೆ ಲಿಂಗರೂಪಾಗಿ ಮತ್ರ್ಯಕ್ಕೆ ಬಂದ. ಪ್ರಭುವೆ ನೀವು ಜಂಗಮರೂಪಾಗಿ ಮತ್ರ್ಯಕ್ಕೆ ಬಂದಿರಿ. ಭಕ್ತಿಯ ಬೆಳವಿಗೆಗೆ ಬಸವಣ್ಣನೆ ಕಾರಣಿಕನಾದ. ಅರಿವಿನ ಬೆಳವಿಗೆಗೆ ಚೆನ್ನಬಸವಣ್ಣನೆ ಕಾರಣಿಕನಾದ. ಈ ಇಬ್ಬರನೂ ಒಳಗೊಂಬ ಮಹಾಘನಕ್ಕೆ ನೀವು ಕಾರಣಿಕರಾದಿರಿ. ಇಂತು ಗುರುಲಿಂಗಜಂಗಮವೊಂದೆ ಭಾವವಲ್ಲದೆ ಭಿನ್ನಭಾವವುಂಟೆ ? ಬಸವಣ್ಣ ಚೆನ್ನಬಸವಣ್ಣನ ಬಿನ್ನಪವ ಮೀರದೆ, ಬಿಜಯಂಗೆಯ್ವುದಯ್ಯಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಶಿವಾಚಾರ ಘನವೆಂಬುದ ಕೇಳಿ, ಭವಿಜಾತವಳಿದು, ಪುನರ್ಜಾತನಾಗಿ, ಅಂಗದ ಮೇಲೆ ಲಿಂಗವ ಧರಿಸಿ, ಆ ಲಿಂಗಜಂಗಮವನಾರಾಧಿಸಿ, ಪ್ರಸಾದವ ಕೊಂಡು, ಭಕ್ತರಾಗಿ ಮುಕ್ತಿಯ ಪಡೆದೆನೆಂಬವರ ಹೆದರಿಸಿ, ಜರೆದು ಝಂಕಿಸಿ ಕೆಡೆನುಡಿದು, ಆಚಾರವ ಬಿಡಿಸಿ, ಅವರ ಹಿಂದಣ ಭವಿಶೈವದೈವಂಗಳ ಹಿಡಿಸಿ, ತಮ್ಮಂತೆ ನರಕದೊಳಗಾಳಬೇಕೆಂದು, ನಿಮ್ಮ ಮುನ್ನಿನ ಹಿರಿಯರ ಬೆನ್ನಬಳಿವಿಡಿದು ಬಂದ ಕುಲದೈವ ಮನೆದೈವ ಬಿಟ್ಟು, ಈ ಲಿಂಗಜಂಗಮಭಕ್ತಿಯ ಮಾಡಬೇಡೆಂದು ಹೇಳುವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಶಿವಭಕ್ತಿಸಂಪುಟವಾದ ಮಹಾಮಹಿಮರ ನಿಲವು, ನಾದದ ಉತ್ಪತ್ಯವ ಸೋಂಕದು. ಬಿಂದುವಿನಾಶ್ರಯದಲ್ಲಿ ಬೆಳೆಯದು. ಶುಕ್ಲಶೋಣಿತವೆಂಬ ಪಂಚವರ್ಣಾಶ್ರಯವನು ಹೊದ್ದದು. ಅಷ್ಟದಳಕಮಲವ ಮುಟ್ಟದು. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳಿಚ್ಫೆಯಲ್ಲಿ ಸುಳಿದಾಡದು. ಜ್ಞಾನದಲ್ಲಿ ಬೆಳೆವುದು, ನಿರಾಲಂಬದಲ್ಲಿ ಆಡುವುದು. ಹೃದಯಕಮಲಪದ್ಮಪತ್ರ ಉಸಿರನಾಲಿಸಿ, ಶಿರಸಂಪುಟದ ಜಂಗಮದಾಟವನಾಡುವುದು. ಲಿಂಗದ ನೋಟವ ನೋಡುವುದು, ಮಹಾಘನದಲ್ಲಿ ಬೆಳೆವುದು, ನಿಜನಿರಾಳದಲ್ಲಿ ನಿವಾಸಿಯಾಗಿಪ್ಪುದು ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವು.
--------------
ಮಡಿವಾಳ ಮಾಚಿದೇವ
ಶರಣ ನಾದದೊಳಡಗಿ, ನಾದ ಪರನಾದದೊಳಡಗಿ, ಪರನಾದ ಸುನಾದದೊಳಡಗಿ, ಈ ನಾದ ಪರನಾದ ಸುನಾದವೆಂಬ ತ್ರಿಭಾವ ತ್ರಿಕೂಟನಾದ, ಸ್ಥಿರಪ್ರಣಮನಾದದೊಳಡಗಿ, ಆ ಸ್ಥಿರಪ್ರಣಮನಾದ, ಪ್ರಜ್ವಲಿಪ ನಾದದೊಳಡಗಿ, ಕಲಿದೇವ ನಿಮ್ಮ ಶರಣ, ನಾದಸ್ವರೂಪನಾದ.
--------------
ಮಡಿವಾಳ ಮಾಚಿದೇವ
ಶಿವನೊಡ್ಡಿದ ಮಾಯಾಗುಣದಿಂದ ತನ್ನ ತಾನರಿಯದೆ, ಅಜ್ಞಾನದಿಂದ ಎಂಬತ್ತನಾಲ್ಕುಲಕ್ಷ ಜೀವರಾಶಿಗಳ ಯೋನಿಯಲ್ಲಿ ಹುಟ್ಟಿ ಹುಟ್ಟಿ, ಶಿವಕಾರುಣ್ಯದಿಂದ ಮನುಷ್ಯಜನ್ಮಕ್ಕೆ ಬಂದು, ಆ ಮನುಷ್ಯಜನ್ಮದೊಳಗಧಿಕವಾದ ಶಿವಭಕ್ತಿಯ ಪಡೆದು, ಆ ಶಿವಭಕ್ತಿಯ ನೆಮ್ಮಿ ಸತ್ಯಸದಾಚಾರವಿಡಿದು ನಡೆದು. ಏಕಲಿಂಗನಿಷೆ*ಯಿಂದ ತನ್ನ ಕಷ್ಟ ಭವಂಗಳ ಗೆಲದಿರ್ದಡೆ, ಮೆಟ್ಟುವ ನರಕದೊಳಗೆ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಶರಣಂಗೆ ಕಟ್ಟಿದಿರ ಕರ್ಪುರ ಜ್ಯೋತಿಯಂತೆ, ಸಚರಾಚರ ಸಂಭ್ರಮ ಸೂತಕ ಪಾತಕವೆಂಬ ಘೋಷಣೆಗಳು ಹುಟ್ಟದಂದು, ದೇವಲೋಕ ಮತ್ರ್ಯಲೋಕ ನಾಗಲೋಕ ಹುಟ್ಟದಂದು, ಹುಟ್ಟಿಸುವಾಗ ಕರೆಸದರವೆಯೆನ್ನಾಧಾರಪಥ, ಪಲ್ಲವಿಸಿ ಗರ್ಭವಾಯಿತ್ತೆಂದು. ಮಹಾದೇವಂಗೆ ದೇವಗಣಂಗಳು ಬಿನ್ನಹಂ ಮಾಡುವಲ್ಲಿ, ಪ್ರಾಣ ಗರ್ಭಿತರುಂಟೆ ? ಅತಿಥರುಂಟೆ ? ಕ್ಷೀರಸಾಗರದ ನಡುವೆ ಜವುಳು ನೀರುಂಟೆ ? ಸಂವಿತ್ತು ಸಿಂಹಾಸನದ ಮೇಲೆ ಕಂದನೈದಾನೆ. ಇಂದು ಶಿವನು ಶಕ್ತಿಯ ಕೂಡಿಯಾಳಾಪವೊಕ್ಕನು ಕಾಣಾ. ಕಾರುಣ್ಯದ ವಾಹನವನೇರಿಕೊಂಡು, ಅಷ್ಟಗುಣವಿರಹಿತನು, ತ್ರಿವಿಧಗುಣ ನಷ್ಟನು, ಸದ್ಗುಣ ಸಿಂಹಾಸನನು ಸಪ್ತಸ್ವರಹಾರದೊಳು, ಘನದೇಹಾರದೊಳು ಹೇಳುವೆ. ಎನ್ನೊಡೆಯ ಬಂದುದ ಕಂಡು ಬಲವಿಡಿದೆ, ದೃಢವಿಡಿದೆ, ಜ್ಞಾನವಿಡಿದೆ, ಕಲಿದೇವಾ, ನಿಮ್ಮ ಬಸವನಡಿವಿಡಿದು ಘನವಾದೆ. ನಮೋ ನಮೋ ಎಂಬೆ ನಿಮ್ಮ ಸಂಗನಬಸವಣ್ಣಂಗೆ.
--------------
ಮಡಿವಾಳ ಮಾಚಿದೇವ
ಶಿವಭಕ್ತನಾಗಿ ಭವಿಶ್ಯೆವದ್ಯೆವಕ್ಕೆ ಶರಣೆಂದನಾದೆಡೆ, ಭವಹರಲಿಂಗದ ಚೇತನವದಂದೇ, ತೊಲಗುವುದೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು. ಮನ ತಾ ಮುನ್ನವೆ ಮರಹು. ಮನವೆಂಬ ಮರ್ಕಟನ ಮರವೆಯ ನೆನಹು ತಾ ಮುಂದೆ ಮರಹು. ಮನದಾಳಾಪನೆ ತಾ ಮುನ್ನವೆ ಮರಹು. ಮನಶರೀರ ಭಾವಂಗಳನರಿದು ನೋಡಾ, ತಿಳಿದು ನೋಡಾ ಎಚ್ಚೆತ್ತು ನೋಡಾ. ಸತ್ಯನಿತ್ಯ ಶಬ್ದನಿತ್ಯ ಊಧ್ರ್ವಮುಖದಲ್ಲಿ ಉತ್ಪತ್ಯವ ಮಾಡುವೆನೆಂದು, ಕರುಣೆ ನಿತ್ಯಸಿಂಹಾಸನದ ಮೇಲೆ ದಯವನೆ ಚರಣವ ಮಾಡಿ, ಮೂರ್ತಗೊಂಡು ಕಾರುಣ್ಯದಿಂ ನೋಡಿದ ಶಿವನು. ಉದಯಕಾಲ ವಿನೋದಕಾಲ ಶಿವನನು, ಮಹಾದಯವನು ಬೇಡುವ ಬನ್ನಿರಯ್ಯಾ. ಮನದಲ್ಲಿ ದಾಸೋಹ ಪರಿಪೂರ್ಣವಾಗಿ, ದಾಸೋಹವ ಬೇಡುವ ಬನ್ನಿರಯ್ಯಾ. ಸಂಸಾರಸಾಗರದೊಳದ್ದಿ ಹೋದರೆಂದು, ಮಾಯೆಯೆಂಬ ಕಾಲನು ಬಿನ್ನಹಂ ಮಾಡಿದನು. ಬ್ರಹ್ಮನರ್ಥ ವಿಷ್ಣುವರ್ಥ ರುದ್ರಾದಿಗಳರ್ಥ ವೇದಶಾಸ್ತ್ರಾಗಮಪುರಾಣಂಗಳರ್ಥ. ಸಪ್ತಕೋಟಿ ಮಹಾಮಂತ್ರಂಗಳರ್ಥ ದೇವಾದಿದೇವಂಗಳರ್ಥ. ವೇದಮಂತ್ರವಿಡಿದು ಪ್ರಾಣಘಾತಕರಾಗಿ ದ್ವಿಜರೆಲ್ಲ ಅದ್ದಿಹೋದರೆಂದು, ಮಾಯೆಯೆಂಬ ಕಾಲನು ಎಲ್ಲರ ಹಿಂದೆ ಇಕ್ಕಿಕೊಂಡು, ಶಿವಂಗೆ ಬನ್ನಹಂ ಮಾಡುವಲ್ಲಿ, ಗಣಂಗಳು ಅದ್ದಿಹೋದುದುಂಟೆಯೆಂದು, ನಂದಿಕೇಶ್ವರದೇವರು ಬೆಸಗೊಂಡರು. ಆ ನಿರೂಪಕ್ಕೆ ಮಾಯೆಯೆಂಬ ಕಾಲನು ಕರ್ಣವ ಮುಚ್ಚಿ, ಸ್ವಯಸ್ವಹಸ್ತಂಗಳಂ ಮುಗಿದು, ಹೀಗೆಂದು ನಿರೂಪವ ಕರುಣಿಸಿಕೊಡುವರೆ ದೇವಯೆಂದು, ಎನ್ನ ನಿರ್ಮಿಸಿದವರಾರು? ತ್ರಿಭುವನಂಗಳ ಮಾಡಿದವರಾರು? ಗಣಂಗಳದ್ದಿ ಹೋದುದುಂಟೆ ದೇವ? ಯಂತ್ರವಾಹಕ ನೀನು, ಸಕಲಪಾವಕ ನೀನು. ನಿತ್ಯಭಕ್ತರು ನಿತ್ಯರು, ನಿಮ್ಮ ಗಣಂಗಳು ದಯಾಪಾರಿಗಳು. ನಿಮ್ಮ ಶರಣರ ನೆನಹಿಂದ, ಸಮಸ್ತಲೋಕದವರುಗಳಿಗೆ ಚೈತನ್ಯಾತ್ಮವಹುದು. ಅವಧಾರವಧಾರೆಂದು ಬಿನ್ನಹಂ ಮಾಡಿ, ಮತ್ತೆ ಕಾಲನು ನಿತ್ಯ ಸಿಂಹಾಸನದ ಮೇಲೆ ಕುಳಿತಿರ್ದು, ಭಕ್ತಿನಿತ್ಯ ದಾಸೋಹವಂ ಮಾಡಲಿಕೆ ಕರ್ಮವೆಲ್ಲಿಯದು. ಮಹಾದಾನಿ ಕರುಣವಿಡಿದೆತ್ತಿದಿರೆನುತ ತಿರುಗಿದನು ತನ್ನವರು ಸಹಿತಿತ್ತ. ಅತ್ತ ಮಹಾಸಂಪಾದನೆಯಲ್ಲಿ ಶರಣ ಬಸವಣ್ಣನಿಗೆ ಶರಣೆನುತಿರ್ದೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಶ್ವಾನ ಮುಟ್ಚಿದ ಎಂಜಲನು ಮಾನವರು ಕೇಳ್ವರು. ಶ್ವಾನನಿಂದ ಕರಕಷ್ಟ ಸುರೆ ದೈವದ ಎಂಜಲ ತಂದು, ಆನಂದವೆಂಬ ಲಿಂಗಕ್ಕೆ ತೋರಿ, ಭುಂಜಿಸುವಂಗೆ ಆ ಶ್ವಾನ ಸೂಕರ ಗಂಗೆಯ ಮಿಂದ ತೆರನಂತೆ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಶಿವಭಕ್ತಿ ಸಂಗದಿಂದಾದುದಲ್ಲ. ಸಪ್ತಸ್ವರದಿಂದ ನುಡಿವ ನುಡಿಯಲ್ಲ. ಉಷ್ಣದಿಂದಾಗುವ ಗಮನದಿಂದ ನಡೆವ ನಡೆಯಲ್ಲ. ಜೀವನ ಸಂಗಸುಖದಲಾದ ಜೀವಾತ್ಮನಲ್ಲ. ರೇಚಕ ಪೂರಕ ಕುಂಭಕವೆಂಬ ಸ್ತ್ರೀಯರ ಉಚ್ವಾಸ ನಿಶ್ವಾಸವೆನಿಸಿಕೊಂಬುದಲ್ಲ. ಸಪ್ತವ್ಯಸನ ಉದರಾಗ್ನಿ ಉಳ್ಳುದಲ್ಲ. ಅಜನಾಳ ಸೋಹೆಯಲ್ಲಿ ಸುಳಿವುದಲ್ಲ. ಸತಿಪುರುಷರ ಮಥನದಿಂದಾದುದಲ್ಲ. ಮಹಾಘನವು ತನುವಿಡಿದು ನಿಂದ ನಿಲವ, ಮಹವೆಂದೇ ಕಾಬುದು. ಜಂಗಮ ನೋಟ, ಪ್ರಸಾದ ತದ್ಗತ. ಆವ ವರ್ಣವೂ ಇಲ್ಲದ ಭಕ್ತ, ಕಲಿದೇವನಿಂದಲಾದನು.
--------------
ಮಡಿವಾಳ ಮಾಚಿದೇವ
ಶ್ರೀಗುರುವೆ ಕರ್ತನೆಂದು ಪ್ರಸಾದ ಕೊಂಬ ಪ್ರಸಾದದೇಹಿಗಳು, ನೀವು ಕೇಳಿ ಭೋ. ಪ್ರಸಾದವಾಯತವನಾಯತವೆಂಬ ಅನಾಚಾರಿಗೆ ಸದಾಚಾರದ ಶುದ್ಧಿಯೆಲ್ಲಿಯದೊ ? ಈ ತ್ರಿವಿಧ ಅಚೇತನಂಗೆ ಮುಕ್ತಿಯುಂಟೆಂಬ ಮೂಕೊರೆಯರ ನೋಡಾ. ಈ ಮಹಾದಿವ್ಯಪ್ರಸಾದ ಸುಖವನರಿದು, ಚೆನ್ನಬಸವೇಶ್ವರನುದ್ಭವಿಸಿದನು. ಈ ಪ್ರಸಾದಕ್ಕೆ ಅಯತ ಅನಾಯತವೆಂಬ ಅನಾಚಾರಿಯ ಮುಖವನೆನಗೆ ತೋರದಿರು. ಇಂತಪ್ಪ ಮಹಾಪ್ರಸಾದವ ಕೊಂಡು, ನಾನು ಬದುಕಿದೆನಯ್ಯಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ