ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಣ್ಣದೆ ತೃಪ್ತನಾದ ಗುರು. ಆ ಗುರುವು ಪೆಸರ್ಗೊಳ್ಳದೆ ಮುನ್ನವಾದ ಶಿಷ್ಯ. ಇದು ಅನ್ಯರಿಗೆ ಕಾಣಬಾರದು. ತನ್ನೊಳಗಿರ್ದ ಲಿಂಗೈಕ್ಯದ ಭಕ್ತಿಯನು, ಪಸಾರಕಿಕ್ಕುವ ಅಜ್ಞಾನಿಗಳೆತ್ತ ಬಲ್ಲರು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಉಡಿಯ ಲಿಂಗವ ಬಿಟ್ಟು, ಗುಡಿಯ ಲಿಂಗಕ್ಕೆ ಶರಣೆಂಬ ಮತಿಭ್ರಷ್ಟರನೇನೆಂಬೆನಯ್ಯಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ, ಭಕ್ತಿಯಪಥವ ಕೆಡಿಸಿದರು. ಡೊಂಬ ಡೋಹರ ಹೊಲೆಯರು ಮಾದಿಗರು. ಉಪದೇಶವಿಲ್ಲದವರು ಪಿಂಬೇರ ಅನಾಚಾರಿಯ ಆರಾಧಿಸಿ, ಶಂಭುವಿನ ಸರಿಯೆಂದು ಅವರೊಳಗೆ ಹಲವರು ಕೊಂಬನೂದುವ, ಸೊಣಕನ ಕೊರಳಲ್ಲಿ ಬಾರ ಕವಡೆಯ ಕಟ್ಟಿಕೊಂಡು ನಾಯಾಗಿ ಬೊಗಳುವರು. ಕಂಬದ ಬೊಂಬೆಯ ಮಾಡಿ ಮೈಲಾರ ಭೈರವ ಆಯಿರ (?) ಧೂಳಕೇತನೆಂಬ ಕಾಳುದೈವವ ಊರೂರದಪ್ಪದೆ ತಿರಿದುತಿಂಬ ಡಂಭಕರ ಕೈಯಲ್ಲಿ ಉಪದೇಶವ ಕೊಂಡವರು, ಗುರುಲಿಂಗಜಂಗಮದ ಹೊಲಬನರಿಯದೆ ಭಂಗಿತರಾದರು. ಅಂಗದ ಮೇಲಣ ಸೂತಕ ಹಿಂಗದು. ಅನ್ಯದೈವದ ಜಾತ್ರೆಗೆ ಹೋಗಿ, ನಾಡನರಕದಲ್ಲಿ ಬೆರಣಿಯ ಮಾಡುವ ನಾನಾ ಜಾತಿಗಳು ಹರಕೆಯ ಹಿಂಗಿಸದೆ, ಗುರುಕಾರುಣ್ಯವ ಕೊಟ್ಟವಂಗೆ ಕುಂಭಿನಿಪಾತಕ ತಪ್ಪದೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ. ಮೆಟ್ಟಿದ ಕೆರಹ ಕಳೆದುಹೋದಾತ ನೀನಲಾ ಬಸವಣ್ಣ. ಕಟ್ಟಿದ ಮುಡಿಯ ಬಿಟ್ಟುಹೋದಾತ ನೀನಲಾ ಬಸವಣ್ಣ. ಸೀಮೆಸಂಬಂಧವ ತಪ್ಪಿಸಿಹೋದಾತ ನೀನಲಾ ಬಸವಣ್ಣ. ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ಬಸವಣ್ಣ. ಜಂಗಮಕ್ಕೆ ಮಾಡಿದ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲಾ ಬಸವಣ್ಣ. ಬೆಳಗನುಟ್ಟು ಬಯಲಾಗಿ ಹೋದೆಯಲ್ಲಾ ಬಸವಣ್ಣ. ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಉದಾಸೀನಂ ಮಾಡಿದರೆಂದು ಬೆಂಬೀಳುವರೆ ಅಯ್ಯಾ ಬಸವಣ್ಣಾ. ಎನ್ನ ಕಾಯದೊಳಗೆ ನಿನ್ನ ಕಾಯವಿಪ್ಪುದು ಬಸವಣ್ಣಾ. ಎನ್ನ ಜೀವದೊಳಗೆ ನಿನ್ನ ಜೀವವಿಪ್ಪುದು ಬಸವಣ್ಣಾ. ಎನ್ನ ಭಾವದೊಳಗೆ ನಿನ್ನ ಭಾವವಿಪ್ಪುದು ಬಸವಣ್ಣಾ. ಎನ್ನ ಕರಣ, ನಿನ್ನ ಕರಣ ಬಸವಣ್ಣಾ. ಆನು ನೀನಾದ ಕಾರಣ ರೂಪಿಂಗೆ ಕೇಡುಂಟು. ನಿರೂಪು ಕರ್ಪುರ ಅಗ್ನಿ ಬಸವಣ್ಣಾ. ಚಿಂತಿಸುವರೆ ದೇವರದೇವ ಕಲಿದೇವಾ.
--------------
ಮಡಿವಾಳ ಮಾಚಿದೇವ
ಉಂಡಡೆ ಭೂತವೆಂಬರು, ಉಣ್ಣದಿರ್ದಡೆ ಚಕೋರಿಯೆಂಬರು. ಊರೊಳಗಿರ್ದಡೆ ಸಂಸಾರಿಕನೆಂಬರು, ಅಡವಿಯೊಳಗಿರ್ದಡೆ ಮರ್ಕಟನೆಂಬರು. ಮಾತನಾಡಿದಡೆ ಪಾಪಕರ್ಮಿಯೆಂಬರು, ಮಾತನಾಡದಿರ್ದಡೆ ಮುಸುಕರ್ಮಿಯೆಂಬರು. ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿಯೆಂಬರು. ಇಂತೀ ವಸುಧೆಯೊಳಗೆ ಎಂಟುವಿಧ ಕಳೆಯಲು ವಶವಲ್ಲ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ