ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನಗನ್ಯವಾದುದ ನೋಡಿದಡೆ ಭವಿಸಂಗ. ಸತ್ಯರು ಒಪ್ಪಿದುದನೊಪ್ಪದಿರ್ದಡೆ ಭವಿಸಂಗ. ಮಾಡಿಕೊಂಡ ವ್ರತವ ಮೀರಿದಡೆ ಭವಿಸಂಗ. ತಾ ಮಾಡಿದ ಭಕ್ತಿಯನಾಡಿಕೊಂಡಲ್ಲಿ ಭವಿಸಂಗ. ಇಂತಿವನರಿದಡೆ ಸದ್ಭಕ್ತಿ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ತಾವು ಭಕ್ತರೆಂದು ಪುರಾತರ ವಚನವ ಕೇಳಿ, ಆಹಾ ಇನ್ನು ಸರಿಯುಂಟೆಯೆಂದು ಕೈವಾರಿಸುವರು ನೋಡಾ. ಆ ಪುರಾತರ ವಚನವನೊತ್ತಿ ಹೇಳಹೋದಡೆ, ನಮಗೆ ಅಳವಡುವುದೆ ಗೃಹಸ್ಥರಿಗೆ ಎಂಬರು. ಕೇಳಿ ಕೇಳಿ ಸತ್ಯವ ನಂಬದ ಮೂಳರನೇನೆಂಬೆನಯ್ಯಾ, ಕಲಿದೇವಯ್ಯ?
--------------
ಮಡಿವಾಳ ಮಾಚಿದೇವ
ತಾರಾಧಾರ ಬಾಹ್ಯವ ಸೋಹಂಭಾವ ಭಾವಾಂತರ ವಾಮಶಕ್ತಿ ಮೋಹಶಕ್ತಿ ಕನ್ಯಾಶಕ್ತಿ ಬಾಲಶಕ್ತಿ ಗಣಶಕ್ತಿ ಮಂದಿರಶಕ್ತಿ ಶಿವದೇವ ಈಶ್ವರ ಮಹಾದೇವ ಪರಾಪರ ಶಿವ ಇಂತಿವೆಲ್ಲವ ಬಸವಣ್ಣ ತಪ್ಪಿಸಿ, ಈಸರಿಂದಾದ ಭಕ್ತಿಯ ಪ್ರಭಾವದೊಳಿರಿಸಿ, ಗತಿಯತ್ತ ಹೊದ್ದಲೀಯದೆ, ಮೋಕ್ಷದತ್ತ ಹೊದ್ದಲೀಯದೆ, ನಾಲ್ಕೂ ಪದದತ್ತ ಹೊದ್ದಲೀಯದೆ, ಅಬ್ಥಿನವ ಕೈಲಾಸದತ್ತ ಹೊದ್ದಲೀಯದೆ, ಲಿಂಗಾರ್ಚನೆಯ ತೋರಿ, ಜಂಗಮಾರ್ಚನೆಯ ಹೇಳಿ, ಜಂಗಮನಿರಾಕಾರವೆಂದು ತೋರಿ, ಆ ಜಂಗಮ ಪ್ರಸಾದವ ಲಿಂಗಕ್ಕಿತ್ತು ಆರೋಗಿಸಿ, ಬಸವಣ್ಣ ತೋರಿದ ಕಾರಣ, ನಿರವಯದ ಹಾದಿಯ ಬಸವಣ್ಣನಿಂದ ಕಂಡೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತದ್ದುತತುರಿ ಬಾವು ಬಗದಳ ಶೀತ ವಾತ ಬಹುಜ್ವರ ಹೊಟ್ಟೆಬೇನೆ ಕೆಟ್ಟ ಹುಣ್ಣು ಮೈಕುಷ್ಠ ಮೊದಲಾದ ಮುನ್ನೂರರುವತ್ತು ವ್ಯಾದ್ಥಿಗಳ, ಶಿವನು ಹರಿಯಬಿಟ್ಟು ನೋಡುವ. ಇವೆಲ್ಲ ಶಿವನ ಕರುಣವಾದಲ್ಲದೆ ಹೋಗವು. ಇದನರಿಯದೆ, ನಾರು ಬೇರ ನಚ್ಚಿದ ಅವಿದ್ಯ ಸಾಧಕರೆಲ್ಲ ಹತವಾಗಿ ಹೋದರಂದೆ. ಇಂತಿದ ವಿಚಾರಿಸಿ ತಿಳಿಯದೆ, ಲೋಕದ ಬುದ್ಧಿಗೇಡಿ ಮನುಜರು, ಸಜ್ಜನಶುದ್ಧಶಿವಾಚಾರಸಂಪನ್ನರಾದ ಜಂಗಮಲಿಂಗದ ಮಾತ ಕೇಳದೆ, ಅದ್ದನ ಜೋಳ, ಅರಪಾವು ಎಣ್ಣೆಯ ಕೊಂಡು, ನೋಟಕಾರ್ತಿಯ ಮನೆಗೆ ಹೋಗಿ, ಅವಳು ಹೇಳಿದ ತಾತುಭೂತದ ಕೋಟಲೆಯ ಕೈಕೊಂಡು ಬಂದು, ಅವಕ್ಕೂಟವನಟ್ಟಿಕ್ಕಿ,. ಮಿಕ್ಕಿದ ಕೂಳ ತನ್ನಿಷ್ಟಲಿಂಗಕ್ಕೆ ತೋರಿ ತಿಂಬ, ಲಿಂಗದ್ರೋಹಿಗಳಿಗೆ ಕುಂಬ್ಥೀಪಾತಕ ನಾಯಕನರಕ, ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತನುವಿನಲ್ಲಿ ಹೊರೆಯಿಲ್ಲ, ಮನದಲ್ಲಿ ವ್ಯಾಕುಳವಿಲ್ಲ. ಭಾವದಲ್ಲಿ ಬಯಕೆಯಿಲ್ಲ, ಅರಿವಿನಲ್ಲಿ ವಿಚಾರವಿಲ್ಲ. ನಿಜದಲ್ಲಿ ಅವಧಾನವಿಲ್ಲ. ನಿರ್ಲೇಪಸಂಗದಲ್ಲಿ ಬಿಚ್ಚಿ ಬೇರಾಗಲಿಲ್ಲ. ಕಲಿದೇವರದೇವಾ, ನಿಮ್ಮಲ್ಲಿ ಬೆರೆಸಿ ಬೇರಿಲ್ಲದಿರ್ದೆನು.
--------------
ಮಡಿವಾಳ ಮಾಚಿದೇವ
ತನ್ನ ಪ್ರಾಣಲಿಂಗವನನ್ಯರಿಗೆ ಕೊಟ್ಟು ಮನ್ನಿಸಲೇಕೆ ? ಗುರುವೆಂದು ಬೆಬ್ಬನೆ ಬೆರೆವವರ ನೋಡಾ ಅಯ್ಯಾ. ಬಿನ್ನಾಣದಿಂದ ಪಂಚಪರ್ವವ ಮಾಡಿ, ನಂಬಿಸಿ ಹಣವ ಕೊಂಬ ಲಿಂಗದೆರೆಯರ ನೋಡಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತಾ ಗುರುಲಿಂಗಜಂಗಮದ ಪಾದಕ್ಕೆರಗಿ ಲೀಯವಾದ ಬಳಿಕ, ಇದು ಚಿಹ್ನೆ ನೋಡಯ್ಯಾ. ಗುರುಲಿಂಗಜಂಗಮದ ಪಾದವೆ ತನ್ನ ಸರ್ವಾಂಗದಲ್ಲಿ ಅಚ್ಚೊತ್ತಿದಂತಾಯಿತ್ತಾಗಿ, ಅಲ್ಲಿಯೆ ಪಾದಾರ್ಚನೆ, ಅಲ್ಲಿಯೆ ಪಾದೋದಕ ಸೇವನೆ. ಬೇರೆ ಪೃಥಕ್ ಎಂಬುದಿಲ್ಲಯ್ಯ. ಅದೆಂತೆಂದಡೆ: ಪರಮಗುರುಲಿಂಗಜಂಗಮದ ಸಂಬಂಧ ಸಮರತಿಯ ಸೋಂಕಿನಲ್ಲಿ, ಪರಮಾನಂದಜಲವೆ ಪ್ರವಾಹವಾಗಿ, ಸರ್ವಾಂಗದಲ್ಲಿ ಪುಳಕವಾಗಿ ಹರಿವುತ್ತಿರಲು, ಆ ಪರಮಸುಖಸೇವನೆಯ ಮಾಡುವಲ್ಲಿ, ಪಾದೋದಕ ಸೇವನೆಯೆನಿಸಿತ್ತಯ್ಯ. ಈ ಪರಮಾಮೃತದ ತೃಪ್ತಿ ಬಸವಣ್ಣಂಗಾಯಿತ್ತು. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತನುವಳಿಯಿತ್ತು. ಮನವಳಿಯಿತ್ತು, ಭಾವವಳಿಯಿತ್ತು, ಬಯಕೆಯಳಿಯಿತ್ತು, ನಿಜವಳಿಯಿತ್ತು. ನಾಮ ಸೀಮೆ ಬಯಲ ಬೆರೆಸಿ, ಕಲಿದೇವರದೇವನಲ್ಲಿ ಬೆರೆಸಿ ಬೇರಿಲ್ಲದಿರ್ದೆನು.
--------------
ಮಡಿವಾಳ ಮಾಚಿದೇವ
ತನ್ನ ಲಿಂಗವ ಬಿಟ್ಟು, ಅನ್ಯಲಿಂಗಕ್ಕೆ ಶರಣೆಂಬ ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ತ್ರಿವಿಧ ಮಧ್ಯದ ಶೇಷ, ತ್ರಿಕೂಟ [ಮಧ್ಯದ] ಬೆಳಸು, ದೇವಮಧ್ಯದ ಪರಿಯಾಣ. ನಿರ್ಭಾವ ಮಧ್ಯದ ಧಾನ್ಯವನೆ ತಂದು, ರತ್ನಾಭರಣದ ಭಾಜನದಲ್ಲಿ ಇವನೆಲ್ಲವನು ಸಂಹರಿಸುವೆ. ಹಿಂದೆ ನೋಡಿಯೂ ಆರುವ ಕಾಣೆ. ಮುಂದೆ ನೋಡಿಯೂ ಆರುವ ಕಾಣೆ. ಮಧ್ಯದಲ್ಲಿ ನೋಡುವೈಸಕ್ಕರ, ನಾ ಮಾಡಿದ ಭಕ್ತಿಯ ಬೇಡಲೆಂದೊಬ್ಬ ಜಂಗಮ ಬಂದಡೆ, ಕೊಟ್ಟು. ಆ ಭಕ್ತಿಯ ಶೇಷಪ್ರಸಾದದಿಂದ ಶುದ್ಧನಾದೆ ಕಾಣಾ, ಕಲೀದೇವರದೇವಯ್ಯಾ.
--------------
ಮಡಿವಾಳ ಮಾಚಿದೇವ
ತನ್ನ ತಾನರಿದ ಮಹಾಜ್ಞಾನಿ ಶರಣನು ಚರಿಸುವ ಕ್ರಮವೆಂತೆಂದಡೆ: ಸ್ಥೂಲವೆಂಬ ಕಂಥೆಯ ತೊಟ್ಟು, ಸೂಕ್ಷ್ಮವೆಂಬ ಟೊಪ್ಪರವನಿಕ್ಕಿ, ತತ್ವವೆಂಬ ಖರ್ಪರವನಾಂತು, ಸತ್ಯವೆಂಬ ದಂಡವಂ ಪಿಡಿದು, ಶಾಂತಿಯೆಂಬ ಭಸಿತವಂ ತೊಡೆದು, ಸುಚಿತ್ತವೆಂಬ ಮಣಿಯ ಕಟ್ಟಿ, ವೈರಾಗ್ಯವೆಂಬ ಹಾವುಗೆಯಂ ಮೆಟ್ಟಿ, ಮನದೃಢವೆಂಬ ಕೌಪವಂ ಕಟ್ಟಿ, ಆಚಾರವೆಂಬ ಕಂಕಣವನ್ನಿಕ್ಕಿ, ಕ್ಷಮೆದಮೆಗಳೆಂಬ ಕುಂಡಲಮಂ ಧರಿಸಿ, ಪರಮಾನಂದದಿಂದ ಸುಳಿದು, ಜಗವ ಪಾವನವ ಮಾಡಲೆಂದು ಭಕ್ತಿ ಭಿಕ್ಷವಂ ಬೇಡುತ್ತ ಬಂದನಯ್ಯ, ತನ್ನ ಒಲುಮೆಯ ಶರಣರ್ಗೆ ನಿಜಸುಖವನೀಯಲೆಂದು. ಕಲಿದೇವರದೇವಾ, ನಿಮ್ಮ ಶರಣ ಪ್ರಭುವೆಂಬ ಜಂಗಮವಂ ಕಂಡು, ಅರ್ಚಿಸಿ, ಪೂಜಿಸಿ, ಒಕ್ಕುದನುಂಡು, ನಿಶ್ಚಿಂತನಾದೆನಯ್ಯ.
--------------
ಮಡಿವಾಳ ಮಾಚಿದೇವ
ತನುಮುಖಕ್ಕೆ ನೀಡಿದ ಬೋನ ಅನುವಾಗಿ ಅಳವಡದ ಮುನ್ನ, ಮನಮುಖಕ್ಕೆ ಸರಿಯಾಯಿತ್ತು. ಮನಮುಖಕ್ಕೆ ನೀಡಿದ ಬೋನ ಅನುವಾಗಿ ಅಳವಡದ ಮುನ್ನ, ನೋಡನೋಡಲೈಕ್ಯವಾಯಿತ್ತು. ಆಕಾಶ ಬಾಯಿದೆಗೆದಂತೆ ಆರೋಗಣೆ ಮಾಡುತಿದ್ದನು. ಮಾಡಿಸುವ ಗರುವರಾರೊ ? ಕಲಿದೇವರದೇವನ ಅನುವರಿದು ನೀಡುವಡೆ, ಸಂಗನಬಸವಣ್ಣಂಗಲ್ಲದೆ ಮತ್ತಾರಿಗೂ ಅಳವಡದು.
--------------
ಮಡಿವಾಳ ಮಾಚಿದೇವ
ತನುಗುಣವಳಿದು ಲಿಂಗಸಂಗಿಯಾದ. ಮನಗುಣವಳಿದು ಜ್ಞಾನಸಂಬಂಧಿಯಾದ. ಪ್ರಾಣಗುಣವಳಿದು ಪ್ರಸಾದಸಂಬಂಧಿಯಾದ. ಭಾವಭ್ರಮೆಯಳಿದು ನಿಜಲಿಂಗಸಂಬಂಧಿಯಾದ. ಇಂತೀ ಚತುರ್ವಿಧಸಂಬಂಧಿಯಾಗಿ, ಶೂನ್ಯಸಿಂಹಾಸನವನಿಂಬುಗೊಂಡ, ಕಲಿದೇವರ ದೇವ, ನಿಮ್ಮ ಶರಣ ಪ್ರಭುದೇವರ ಪಾದಕ್ಕೆ ನಮೋ ನಮೋ ಎಂಬೆನು.
--------------
ಮಡಿವಾಳ ಮಾಚಿದೇವ
ತೊತ್ತು ಶೃಂಗಾರವಾದಡೇನೋ ಪುರುಷನುಳ್ಳ ಮುತ್ತೈದೆಯ ಸರಿಯಹಳೆ? ಭಕ್ತರ ನುಡಿಗಡಣ ಸಂಗದಲ್ಲಿರಬೇಕೆಂದು ಗುರುಸಾಹಿತ್ಯಸಂಬಂಧವ ಮಾಡಿದಡೆ, ಅವರೆಲ್ಲರೂ ಭಕ್ತರಾಗಬಲ್ಲರೆ ? ಆಗಲರಿಯರು. ಅದೇನು ಕಾರಣವೆಂದಡೆ: ಸತ್ಯಸದಾಚಾರ ಭಕ್ತಿನಿಷೆ*ಯ ನಂಬುಗೆ ಇಲ್ಲವಾದ ಕಾರಣ. ಅಂಥ ಭಕ್ತಿನಿಷೆ* ನಂಬುಗೆಹೀನನ ಗೃಹದಲ್ಲಿರುವ ಸತಿ ಸುತ ಪಿತ ಮಾತೆ ಸಹೋದರ ಬಂಧುಜನ ಭೃತ್ಯದಾಸಿಯರೊಳಗಾಗಿ ಯಾವನಾನೊಬ್ಬಂಗೆ ಶಿವಾಜ್ಞೆಯಿಂದೆಡರಾಪತ್ತಿಟ್ಟಡೆ, ಬಂಧನ ರುಜೆ ರೋಗ ಮುಂತಾದವರ ತೆರದಿಂದಾದಡೆಯೂ ಶಿವಲಿಖಿತ ತುಂಬಿ ಲಿಂಗದೊಳಗಾದಡೆ, ಪೂರ್ವದ ಶಿವಲಿಂಗವೆಂದು ತಿಳಿವ ನಂಬುಗೆಯಿಲ್ಲದೆ, ಹಂಬಲಿಸಿ ಹಿಡಿಗೊಂಡು ಭ್ರಮಿಸುತ್ತ, ತಾವು ಭಕ್ತರಾಗಿ ಕೆಟ್ಟೆವು, ಮನೆದೈವ ಮುನಿದವು, ಧನಹಾನಿಯಾಯಿತ್ತು, ದರಿದ್ರಎಡೆಗೊಂಡಿತ್ತು, ಭಕ್ತರಾಗಿ ಕೆಟ್ಟೆವಿನ್ನು, ಹೇಗೆಂಬ ಭ್ರಷ್ಟರ ಮೆಟ್ಟುವ ನರಕದಲ್ಲಿ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತನುನಷ್ಟ, ಮನನಷ್ಟ, ನೆನಹುನಷ್ಟ, ಭಾವನಷ್ಟ, ಜ್ಞಾನನಷ್ಟ. ಇಂತು ಪಂಚನಷ್ಟದೊಳಗೆ ನಾ ನಷ್ಟವಾದೆನು. ಆ ನಷ್ಟದೊಳಗೆ ನೀನು ನಷ್ಟವಾದೆ. ಕಲಿದೇವರದೇವನೆಂಬ ನುಡಿ, 'ನಿಶ್ಯಬ್ದಂ ಬ್ರಹ್ಮಮುಚ್ಯತೇ.'
--------------
ಮಡಿವಾಳ ಮಾಚಿದೇವ
ತನು ಮನ ಧನವೆಲ್ಲ ಶಿವನ ಒಡವೆಯೆಂದಾರಾಧಿಸುವ ಅನ್ಯದೈವವಿದ್ದವರ ಮನೆಯಲ್ಲಿ ಅನ್ನವ ಕೊಳ್ಳದಾತನೆ ಶಿವವ್ರತಿ. ಮಿಕ್ಕಿನ ಭೂತಪ್ರಾಣಿಗಳೆಲ್ಲ ಭಕ್ತರೆನಿಸಿಕೊಂಬುದು. ಮಾತಿನ ಮಾಲೆಗೆ ತನುವ ಕೊಡುವರು, ಮನವ ಕೊಡುವರು, ಧನವ ಕೊಡುವರು ಶಿವನ ಘನವ ನೆನೆವ ಪ್ರಕಾಶವನರಿಯರು, ಅನ್ಯಜಾತಿಯ ಹೆಸರಿನ ಭೂತಿನ ಓಗರವ ಭುಂಜಿಸುವರು, ಮರಳಿ ಶಿವಭಕ್ತರೆನಿಸಿಕೊಂಬ ಅನಾಚಾರಿಯರ ನುಡಿಯ ಕೇಳಲಾಗದೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ