ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು. ನಾನದ ಮನದಲ್ಲಿ ಹಿಡಿದು ಮಾತಾಡುವೆನಲ್ಲದೆ ಕ್ರೀಯಿಂದ ಕಾಣೆ. ಸತ್ತೆ ಗುರು, ಚಿತ್ತೆ ಲಿಂಗ, ಆನಂದವೆ ಜಂಗಮ. ನಿತ್ಯವೆ ಪ್ರಸಾದ, ಪರಿಪೂರ್ಣವೆ ಪಾದೋಕವೆಂಬುದನವಗ್ರಹಿಸಿ ನಿಂದು, ಜಂಗಮಕ್ಕೆ ಭಕ್ತನಾದೆನಯ್ಯಾ. ನಿತ್ಯನಾಗಿ ನಿಮ್ಮ ಜಂಗಮಕ್ಕೆ ವಂದಿಸುವೆ. ಆನಂದದಿಂದ ನಿಮ್ಮ ಜಂಗಮದ ಪಾದೋದಕವ ಕೊಂಬೆ. ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಪ್ಪೆ ನಾನು. ಭಕ್ತಿಪ್ರಸಾದ ಮುಕ್ತಿಪ್ರಸಾದ ನಿತ್ಯಪ್ರಸಾದವ ನಿಮ್ಮ ಜಂಗಮದಲ್ಲಿ ವರವ ಪಡೆದು, ಕಲಿದೇವರದೇವಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದದಲ್ಲಿ ಮನಮಗ್ನನಾಗಿರ್ದೆನಯ್ಯ.
--------------
ಮಡಿವಾಳ ಮಾಚಿದೇವ
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ? ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು. ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ ? ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ ? ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಹಿತವಾಗಿಹುದು. ಇಂತಿವರ ಭೇದವ ಬಸವಣ್ಣ ಬಲ್ಲನು. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು, ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ. ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ. ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ. ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ. ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ. ಇದು ಕಾರಣ, ಬಸವಣ್ಣ ಬಸವಣ್ಣ ಎನುತಿರ್ದೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಸನ್ಮಾರ್ಗದ ವಿಚಾರವ ಸದ್ಗುರು ಮುಖದಿಂ ತಿಳಿದು, ತನ್ನಂತರಂಗ ಬಹಿರಂಗದ ಸಂದುಸಂಶಯವ ಪರಿಹರಿಸಿ, ನಿಶ್ಚಿಂತನಾಗಿ ನಿಜದಲ್ಲಿ ನಿಂದು, ಅಂಗಕ್ಕಾಚಾರವ ಸಂಬಂಧಿಸಿ, ಮನಕ್ಕೆ ಅರಿವಿನಾಚರಣೆಯ ನೆಲೆಗೊಳಿಸಿ, ಆತ್ಮಂಗೆ ಸತ್ಕಿøಯಾ ಸಮ್ಯಕ್‍ಜ್ಞಾನವ ಬೋಧಿಸಿ, ಪ್ರಾಣಕ್ಕೆ ಲಿಂಗಮಂತ್ರಧಾರಣವ ಮಾಡಿ, ಜೀವ ಪರಮರಿಗೆ ಚಿದ್ಘನಪಾದೋದಕಸಾದಭೋಗವನಿತ್ತು, ಅವಕ್ಕೆ ತಾನಾಶ್ರಯನಾಗಿ, ತನ್ನ ನಿಜದಲ್ಲಿ ನಿಂದು ನೋಡಬಲ್ಲಾತನೆ ಶಿವಯೋಗಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಸತ್ಯಸದಾಚಾರ ಭಕ್ತಿಯನರಿಯದೆ ಬರಿದೆ ಭಕ್ತರೆಂಬುದ ನೋಡಾ. ಮತ್ತೆ ಮರಳಿ ಮನೆದೈವ ಕುಲದೈವಕೆರಗುತ್ತ ಭಕ್ತರೆಂದು ನುಡಿದಡೆ ನರಕದಲ್ಲಿ ಮೆಟ್ಟುವನೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಸಂಸಾರಸಾರಾಯದ ತನಿರಸವ ಹಿಂಡಿ ಹಿಳಿದಾಡಿದ. ಕೈಯ ಸವರಿಕೊಂಡು ಹರಿದು ಹತ್ತುವನಲ್ಲ, ಮರಳಿ ನೋಡುವನಲ್ಲ. ಇಂತಪ್ಪ ವೀರರುಂಟೆ? ಇಂತಪ್ಪ ಧೀರರುಂಟೆ? ಇಂತಪ್ಪ ಪೌರುಷದ ಚರಿತನಾಗಿ ಮಾಯೆಯಂ ಹಿಂಗಿಸಿ, ಮುಯ್ಯಾಂತು ಮುಂದಣ ನಿಲವನಾಗುಮಾಡಿದ ನಿಜೈಕ್ಯ. ನಿರ್ವಯಲ ನಿಃಪತಿಗೆ ನಿಜವಾಗಿ, ನಿರಾಳದೊಳಗೆ ತಾನೆ ತೊಳಲುತಿರ್ದನು. ಕಲಿದೇವಾ, ನಿಮ್ಮ ಲಿಂಗೈಕ್ಯ ಪ್ರಭುದೇವರ ಶ್ರೀಪಾದಕ್ಕೆ ಭೃಂಗವಾಗಿರ್ದೆನು.
--------------
ಮಡಿವಾಳ ಮಾಚಿದೇವ
ಸತ್ತು ಗುರುವಿನ ಕಾರುಣ್ಯವ ಕೊಂಬ ಶಿಷ್ಯಂಗೆ ಭಕ್ತಿ ವಿಸ್ತರಿಸುವುದು, ಕರ್ತಾರ ನೆಲೆಗೊಂಬ. ಕೊಟ್ಟುದನು ಮರೆದು ಬಳಸುವ ಮಿಟ್ಟೆಯ ಭಂಡರನೇನೆಂಬೆ ಹೇಳಾ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಸಾಧನೆಯ ಕಲಿತು ಆಣೆಯ ತಪ್ಪಿಸಲರಿಯದವನ ಕೈಯಲಿ ಅಲಗಿದ್ದಡೇನಯ್ಯ ? ಮಾಡುವದಕ್ಕೆ ಕರ್ಮ ದುರಿತದ ವರ್ಮವನರಿಯದವನು ಸಕಲಶಾಸ್ತ್ರವನೋದಿದಡೇನಯ್ಯ ? ಗಿಳಿಯೋದಿ ತನ್ನ ಅಶುದ್ಭವ ತನ್ನ ಮೂಗಿನಲ್ಲಿ ಕಚ್ಚಿ ತೆಗೆದಂತೆ ಆಯಿತ್ತೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಸಿಂಹದ ಮುಂದೆ [ಜಿಂಕೆಯ] ಜಿಗಿದಾಟವೆ ? ಪ್ರಳಯಾಗ್ನಿಯ ಮುಂದೆ ಪತಂಗದಾಟವೆ ? ಸೂರ್ಯನ ಮುಂದೆ ಕೀಟದಾಟವೆ ? ನಿಮ್ಮ ಮುಂದೆ ಎನ್ನಾಟವೆ, ಕಲಿದೇವರದೇವಾ ?
--------------
ಮಡಿವಾಳ ಮಾಚಿದೇವ
ಸೋಮವಾರಕ್ಕೆ ಮೀಸಲೆಂದು ಊರ ಹೊರಗಣ ದೈವವ ಆರಾಧಿಸಿ, ಅವಕ್ಕೆ ಇಕ್ಕಿದ ಮಿಕ್ಕಿನ ಕೂಳ ಸೋಮಧರಗರ್ಪಿತವೆಂಬವರ ಭಕ್ತಿಯ ತೆರ ಎಂತಾಯಿತ್ತೆಂದಡೆ, ಗ್ರಾಮ ಸೂಕರನು ಶುನಕನು ಗಂಗೆಯನೀಸಿ ಅಶುದ್ಧ ಭುಂಜಿಸಿದ ತೆರನಾಯಿತ್ತೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಸತ್ಯಸದ್ಭಕ್ತಿಸದಾಚಾರ ಸತ್ಕಿøಯಾ ಸಮ್ಯಗ್‍ಜ್ಞಾನ ಸದ್ವರ್ತನೆ ಸದ್ಭಾವ ಷಟ್ಸ್ಥಲಮಾರ್ಗಸದ್ಭಕ್ತ ಮಾಹೇಶ್ವರಶರಣಗಣಂಗಳು ಸದಾವಾಸ ಪರಿಯಂತರ ನೀಚಾಶ್ರಯಗಳ ಹೊದ್ದಲಾಗದು. ಅದೆಂತೆಂದಡೆ, ಈಚಲಮರದಿಂದ ಮನೆಯ ಕಟ್ಟಲಾಗದು. ಆ ಗಿಡದ ನೆರಳಲ್ಲಿ ಅರ್ಚನೆ ಅರ್ಪಣ ಶಯನ ಆಸನ ಮೊದಲಾದ ಕೃತ್ಯಗಳ ಮಾಡಲಾಗದು. ಪಾಕವ ಮಾಡುವಲ್ಲಿ ಅದರ ಕಾಷ*ದಲ್ಲಿ ಅಡಿಗೆಯ ಮಾಡಲಾಗದು. ಅಣಬೆ ಇಂಗು ಹಾಕಿ ಭವಿಜನ್ಮಾತ್ಮರ ದರ್ಶನ ಸ್ಪರ್ಶನ ಸಂಭಾಷಣೆಯಿಂದ ಪಾಕವ ಮಾಡಲಾಗದು. ತಥಾಪಿಸಿ ಮಾಡಿದ ಪಾಕವ ಶರಣಗಣಂಗಳು ಲಿಂಗಾರ್ಪಿತವ ಮಾಡಲಾಗದು. ಲಿಂಗಬಾಹ್ಯರು ಆಚಾರಭ್ರಷ್ಟರು ಭವಿಸಂಪರ್ಕರು ಗುರುಲಿಂಗಜಂಗಮದ್ರೋಹಿಗಳು ಮೊದಲಾದವರ ಸಮ್ಮುಖದಲ್ಲಿ ಅರ್ಚನೆ ಅರ್ಪಣಕ್ರಿಯೆಗಳ ಮಾಡಲಾಗದು. ಅವರು ಮಾಡಿದ ಪಾಕವ ಪರಶಿವಲಿಂಗಕ್ಕೆ ಅರ್ಪಿಸಲಾಗದು. ಪಾದೋದಕಪ್ರಸಾದದ್ರೋಹಿಗಳ ಸಮಪಙÂ್ತಯ ಮಾಡಲಾಗದು. ಅವರಾರಾರೆಂದಡೆ, ಗಣಸಮೂಹದಲ್ಲಿ ಪ್ರಸಾದವ ಕೈಕೊಂಡು, ಸಾವಧಾನ ಭಕ್ತಿಯಿಂದ ಮುಗಿದು, ತಾನೊಬ್ಬನೆ ಏಕಾಂತವಾಸದಲ್ಲಿ ಸಾವಧಾನ ಭಕ್ತಿಯನುಳಿದು, ಲಿಂಗಕ್ಕೆ ಕೊಡದೆ, ತನ್ನ ಅಂಗವಿಕಾರದಿಂದ, ಮನಬಂದಂತೆ ಸೂಸಾಡಿ ಭುಂಜಿಸುವನೊಬ್ಬ ಪಾದೋದಕಪ್ರಸಾದದ್ರೋಹಿ. ಸಮಪಙÂ್ತಯಲ್ಲಿ ತನ್ನ ಅಂಗವಿಕಾರದಿಂದ ನನಗೆ ಓಗರವಾಯಿತ್ತೆಂದು, ಪ್ರಸಾದಿಸ್ಥಲಹೀನರ ಕರದು ಕೊಡುವನೊಬ್ಬ ಪಾದೋದಕಪ್ರಸಾದದ್ರೋಹಿ. ತಾ ಮುಗಿದ ಸಮಯದಲ್ಲಿ ಮಧುರ ಒಗರು ಕಾರ ಹುಳಿ ಕಹಿ ಅತಿಯಾಸೆಯಿಂದ ನೀಡಿಸಿಕೊಂಡು, ಜಿಗುಪ್ಸೆ ಹುಟ್ಟಿ, ಕಡೆಗೆ ಬಿಸುಟನೊಬ್ಬ ಪಾದೋದಕ ಪ್ರಸಾದದ್ರೋಹಿ. ಗುರುಲಿಂಗಜಂಗಮದಿಂದ ಪಾದೋದಕಪ್ರಣಮ ಪ್ರಸಾದಪ್ರಣಮವ ಪಡೆದು, ಮತ್ತಾ ಗುರುಲಿಂಗಜಂಗಮನಿಂದೆಯ ಮಾಡುವನೊಬ್ಬ ಪಾದೋದಕಪ್ರಸಾದದ್ರೋಹಿ. ಇಂತಪ್ಪ ಪರಮದ್ರೋಹಿಗಳ ದರ್ಶನದಿಂದ ಪಾದಾರ್ಚನೆ ಅರ್ಪಣಗಳ ಮಾಡಲಾಗದು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಸ್ವಯ ಚರ ಪರವೆಂಬ ತ್ರಿವಿಧ ಗುರುಗಳಲ್ಲಿ ಪಾದೋದಕ ಪ್ರಸಾದವ ಕೊಳಲಾಗದು. ಪರಿಣಾಮಿ ನಿರುಪಾಧಿ ಪರಿಪೂರ್ಣವೆಂಬ ತ್ರಿವಿಧ ಜಂಗಮದಲ್ಲಿ ಪಾದೋದಕ ಪ್ರಸಾದವ ಕೊಳಬೇಕೆಂದಾತ, ನಮ್ಮ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಸತ್ಯರು ನಿತ್ಯರು ಮುಕ್ತರೆಂದು ಅರ್ತಿಗೊಳ್ಳುತ್ತ ನುಡಿವರು. ಭಕ್ತಿ ಸದಾಚಾರದ ವರ್ತನೆಯ ಸತ್ಯರು ಹೇಳ ಹೋದಡೆ ನಮಗೆ ತೀರುವುದೆ ಸಂಸಾರಿಗಳಿಗೆಂಬ ವ್ಯರ್ಥರನೇನೆಂಬೆನಯ್ಯಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಸೂಳೆ ಸುರೆ ಬೆಕ್ಕು ನಾಯಿ ಅನ್ಯದೈವ ತಾಳಹಣ್ಣು ಇಷ್ಟುಳ್ಳನ್ನಕ್ಕರ ಅವ ಭಕ್ತನೆ ? ಅಲ್ಲ ಅಲ್ಲ. ಅವ ಶಿವದ್ರೋಹಿ, ಅವ ಗುರುದ್ರೋಹಿ. ಹಂದಿ ಹಂದಿಯ ಹೇಲ ತಿಂದು, ಒಂದರ ಮೋರೆಯನೊಂದು ಮೂಸಿ ನೋಡುವಂತೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಸತ್ತು ಮಣ್ಣಾಗಿ ಹೋದ ಮಾತಾಪಿತರುಗಳು ತಮ್ಮ ಸಂತಾನವಾಗಿ ಜನಿಸಿ ಬಂದರೆಂದು ಹೆತ್ತು ಹೆಸರಿಟ್ಟು ಕರೆವರಯ್ಯಾ. ಕಾಗೆಯ ಬಾಯ ಕರಗದ ಬಾಯೋಗರವ ಕೊಂಡು ಅನ್ಯದೈವಂಗಳ ಪೂಜಿಸುವ ಲೋಗರವರ ಕೈಯಲುಪದೇಶವ ಮಾಡಿಸಿಕೊಂಡ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವಿಂಗೆ ಅವರಿಬ್ಬರಿಗೆಯೂ ಅಜ್ಞಾನಭವಂ ನಾಸ್ತಿಯಾಗದೆ ಭವಸಾಗರದೊಳಗವರಿಬ್ಬರೂ ಅಳುತ್ತ ಮುಳುಗುತ್ತಲಿಹರು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ