ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇವನೊಬ್ಬನೆ ಜಗವ ಕಾವಾತ, ಕೊಲುವಾತ. ದೇವರು ಮುನಿದಡೆ ಮರಳಿ ಕಾವವರುಂಟೆ? ಈ ಸಾವಿಗೊಳಗಾಗಿ ಹೋಹ ಸಮಸ್ತದೈವಂಗಳು, ಮಹಾದೇವನ ಸರಿಯೆಂದು ಆರಾದ್ಥಿಸಿ, ಅಚಲಿತಪದವಿಯ ಬೇಡುವ ಈರೇಳುಜಾತಿಗಳಿಗೆ, ಆವಾವ ಕಾಲದಲ್ಲಿ ನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ದಾಸೋಹವೆಂಬನ್ನಬರ ಈಶ್ವರ ಪೂಜೆ, ಆಚಾರದಲ್ಲಿರಬೇಕು. ಮಾಡೆನೆಂಬ ನೇಮ ಬೇಡ. ಮಾಡಿಹೆನೆಂಬ ಕೃತ್ಯ ಬೇಡ. ಈ ಭಾವ ಅಳವಟ್ಟಲ್ಲಿ, ಕಲಿದೇವಂಗೆ ಭಾವಶುದ್ಧವಾಯಿತ್ತು, ಚಂದಯ್ಯ.
--------------
ಮಡಿವಾಳ ಮಾಚಿದೇವ
ದೂರದಲರ್ಪಿತವೆಂಬ ದುರಾಚಾರಿಯನೇನೆಂಬೆನಯ್ಯಾ. ಅಂತರದಲರ್ಪಿತವೆಂಬ ಅನಾಚಾರಿಯನೇನೆಂಬೆನಯ್ಯಾ. ಭಾವದಲರ್ಪಿತವೆಂಬ ಭ್ರಮಿತರನೇನೆಂಬೆನಯ್ಯಾ. ಮನದಲ್ಲಿ ಅರ್ಪಿತವೆಂಬ ವ್ರತಗೇಡಿಗಳನೇನೆಂಬೆನಯ್ಯಾ. ಇಂತೀ ತನ್ನ ಇಷ್ಟಲಿಂಗಕ್ಕೆ ಕೊಟ್ಟು ಕೊಳ್ಳದಿರ್ದಡೆ ಸತ್ತನಾಯ ಮಾಂಸವ ತಂದು, ಅಟ್ಟದ ಮೇಲಿರಿಸಿ, ನಿತ್ಯಂ ನವೋಪ್ಪಲವ ತೂಗಿ ತಿಂದಂತೆ ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ದಾಸಿಯ ಸಂಗ ದೇಶವರಿಯೆ ಪಡಗ. ವೇಶಿಯ ಸಂಗ ಹದಿನೆಂಟುಜಾತಿ ನೂರೊಂದುಕುಲವೆಲ್ಲ ದೃಷ್ಟಿಸುವ ಮರದ ಕುಳಿ. ಪರಸ್ತ್ರೀಯ ಸಂಗ ಪಂಚಮಹಾಪಾತಕ, ಅಘೋರನರಕ. ಇಂತೀ ತ್ರಿವಿಧಸಂಗ ಸಲ್ಲವೆಂಬುದನರಿದು, ಬಿಡದೆ ಬಳಸುವವ ಗುರುವಾದಡಾಗಲಿ, ಚರವಾದಡಾಗಲಿ, ಭಕ್ತನಾದಡಾಗಲಿ, ಇಂತೀ ಗುರುಚರಪರದೊಳಗಾರಾದಡಾಗಲಿ, ಅವರನು ಪತಿತ ಪಾತಕರೆಂದು ಬಿಟ್ಟುಕಳೆಯದೆ, ಅವರನು ತನ್ನವರೆಂದು ಮನ್ನಿಸಿ ಒಳಕೊಂಡನಾದಡೆ, ಅವಂಗೆ ಕುಂಭೀಪಾತಕ, ನಾಯಕನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ದಾಸಿಯ ಸಂಗವ ಮಾಡುವ ಪಾಪಿಗೆ ಈಶ್ವರನ ಪೂಜಿಸುವ ಆಶೆಯಬೇಕೆ ? ವೇಶಿಯ ಸಂಗವ ಮಾಡುವ ದ್ರೋಹಿಗೆ ಶಿವಪ್ರಸಾದವ ಕೊಂಬ ಆಶೆಯದೇಕೆ ? ಪರಸ್ತ್ರೀ ಸಂಗವ ಮಾಡುವ ಪಂಚಮಹಾಪಾತಕರಿಗೆ ಪರಬ್ರಹ್ಮದ ಮಾತಿನ ಮಾಲೆಯ ಅದ್ವೈತವದೇಕೆ ? ಇಂತಿವರ ನಡೆನುಡಿ ಎಂತಾಯಿತ್ತೆಂದಡೆ, ಗಿಳಿ ಓದಿ ಹೇಳಿ, ತನ್ನ ಮಲವ ತಾ ತಿಂದಂತಾಯಿತ್ತೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ದ್ವೈತಾದ್ವೈತವೆಂಬ ಉಭಯಕರ್ಮವನತಿಗಳೆದ ಅಂಗಲಿಂಗಸಂಬಂಧವನುಳ್ಳ ನಿಜವೀರಶೈವಸಂಪನ್ನರು, ನಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ ಭವಿಶೈವ ಭಿನ್ನಕರ್ಮಿಗಳಂತೆ ಬೇರಿಟ್ಟು, ಅಘ್ರ್ಯಪಾದ್ಯ ಆಚಮನವಾದಿಯಾದ ಉಪಪಾತ್ರೆಗಳಲ್ಲಿ ನೀರನೆರೆದು, ಪಂಚಮಶುದ್ಧಿ ಪಂಚಾಮೃತಾಭಿಷೇಕವ ಮಾಡಿ, ತನ್ನ ಲಿಂಗವನರ್ಚಿಸಿ, ಪ್ರಸಾದವ ಕೊಂಡೆನೆಂಬ ಜಡಶೈವ ಭಿನ್ನಕರ್ಮವನುಳ್ಳ ಕುನ್ನಿಗಳು ಎನ್ನ ಲೋಕಕ್ಕೆ ಹೊರಗೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ದೇಶವಿನೋದಿಗಳಲ್ಲ, ದೇಶಭಾಷಿತರಲ್ಲ. ದೇಶಾಶ್ರಯವ ತಮ್ಮದೆಂದೆನ್ನರು. ದಾಸಭಾವದಲ್ಲಿಪ್ಪ ಸದ್ಭಕ್ತರಲ್ಲಿ, ದೇಶಾಂತರವ ಮಾಡುವರು ಭಕ್ತಿವತ್ಸಲರು, ಭಕ್ತಿನಿಶ್ಚಲರು, ಕಲಿದೇವಾ ನಿಮ್ಮ ಶರಣರು.
--------------
ಮಡಿವಾಳ ಮಾಚಿದೇವ
ದೇವರು ಮುಂತಾಗಿ ನಡೆ, ದೇವರು ಮುಂತಾಗಿ ನುಡಿ. ದೇವರು ಮುಂತಾಗಿ ಅನುಭಾವಿಸಬಲ್ಲಡೆ, ದೇವ ಬ್ರಾಹ್ಮಣರೆನಿಸಿಕೊಂಡಡೆ ದೇವರು ಮೆಚ್ಚುವನು. ದೇವ ದಾನವ ಮಾನವ ದೇವನ ಸುದ್ದಿಯನರಿಯದೆ, ವಾದಿತನಕ್ಕೆ ಹೋರಿಹೋರಿ ನಾಯಸಾವ ಸತ್ತರು. ಗುರುಲಿಂಗ ಮುಂತಾಗಿ ನಡೆ, ಗುರುಲಿಂಗ ಮುಂತಾಗಿ ನುಡಿ. ಗುರುಲಿಂಗ ಮುಂತಾಗಿ ಅನುಭಾವಿಸಬಲ್ಲಡೆ ಗುರುವೆನಿಸಿಕೊಳಬೇಕು. ಗುರುಲಿಂಗವ ಹಿಂದು ಮಾಡಿ, ತಾ ಮುಂದಾಗಿ, ಗುರುದೇವನೆನಿಸಿಕೊಂಡಡೆ ಗುರು ತಾ ಮೆಚ್ಚುವನೆ ? ಗುರುಲಿಂಗಜಂಗಮದ ಪರಿಯವನರಿಯದೆ, ಸುರೆಯ ದೈವದ ಎಂಜಲ ಭುಂಜಿಸುವವರು, ತಾವು ಗುರುತನಕ್ಕೆ ಹೋರಿಹೋರಿ ನರಕದಲ್ಲಿ ಬಿದ್ದರು. ಭಕ್ತಿ ಮುಂತಾಗಿ ನಡೆ, ಭಕ್ತಿ ಮುಂತಾಗಿ ನುಡಿ. ಭಕ್ತಿ ಮುಂತಾಗಿ ನುಡಿಯ ಅನುಭಾವಿಸಬಲ್ಲಡೆ ಬಣಜಿಗನು ತಾ ಭಕ್ತನೆ? ಭಕ್ತಿಯಿಲ್ಲದ ವ್ಯರ್ಥಜೀವಿಗಳು ಭಕ್ತನ ಸರಿಯೆನಿಸಿಕೊಂಡಡೆ ಶಿವ ಮೆಚ್ಚುವನೆ? ಸತ್ಯಸದಾಚಾರದ ಹವನನರಿಯದೆ, ಮೃತ್ಯು ಮಾರಿಯ ಎಂಜಲ ತಿಂದು, ಮತ್ರ್ಯದಲ್ಲಿ ಹೋರಿಹೋರಿ ವ್ಯರ್ಥವಾಗಿ ಕೆಟ್ಟರು. ಶಿವಭಕ್ತನು ಗುರುದೇವ ನಮ್ಮ ಬ್ರಾಹ್ಮಣನು ಬಸವರಾಜದೇವರ ಸಂತತಿಗಲ್ಲದೆ ಮತ್ತಾರಿಗುಂಟು, ಕಲಿದೇವರದೇವಾ ?
--------------
ಮಡಿವಾಳ ಮಾಚಿದೇವ
ದಾಸೋಹವೂ ಭೃತ್ಯಾಚಾರವೂ ಅತಿಪ್ರೇಮವೂ ಕಿಂಕಿಲವೂ ಸಂಗನಬಸವಣ್ಣಂಗಲ್ಲದೆ ಮತ್ತಾರಿಗೂ ಇಲ್ಲ. ಇಂತಪ್ಪ ಭಕ್ತಿಯ ಕುಳಸ್ಥಳವನರಿಯದೆ ಎಲ್ಲರೂ ಅಂದಂತೆ ಅಂದು, ಬಂದಲ್ಲಿಯೆ ಬಂದರು. ಇದ ನೀಕರಿಸಿ ಜಂಗಮವೆ ಲಿಂಗವೆಂದು, ಸಂಗಸಾಹಿತ್ಯವಾದ ಬಸವಣ್ಣ. ನಿಮ್ಮ ಬಸವಣ್ಣನಿಂತಹ ನಿತ್ಯನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ದೇಶಾಂತರಿ ದೇಶಾಂತರಿಯೆಂದು ನುಡಿವ ಹುಸಿಭ್ರಷ್ಟರನೇನೆಂಬೆನಯ್ಯಾ. 'ಏಕಮೂರ್ತಿಸ್ತ್ರಯೋ ಭಾಗಃ ಗುರುರ್ಲಿಂಗಂತ 'ಜಂಗಮಃ' ಎಂಬುದನರಿಯದೆ, ದೇಶಾಂತರಿಯೆಂದರೆ ಆರು ಮೆಚ್ಚುವರಯ್ಯ? ಸುಮ್ಮನಿರಿ ಭೋ, ಬರುಕಾಯರುಗಳಿರಾ. ದೇಶಾಂತರಿಯಾದರೆ ಮೂರುಲೋಕದ ಕರ್ತನಂತೆ ಶಾಂತನಾಗಿರಬೇಕು. ಜಲದಂತೆ ಶೈತ್ಯವ ತಾಳಿರಬೇಕು. ಸೂರ್ಯನಂತೆ ಸರ್ವರಲ್ಲಿ ಪ್ರಭೆ ಸೂಸುತ್ತಿರಬೇಕು. ಪೃಥ್ವಿಯಂತೆ ಸರ್ವರ ಭಾರವ ತಾಳಿರಬೇಕು. ಹೀಂಗಾದಡೆ ಮಹಂತಿನ ಕೂಡಲದೇವರೆಂಬೆನಯ್ಯ. ಹೀಂಗಲ್ಲದೆ ತ್ರಿವಿಧಮಲಗಳ ಭುಂಜಿಸುತ್ತ, ಗುರುಲಿಂಗಜಂಗಮಕ್ಕೆ ತನುಮನಧನ ಸವೆಯದೆ, ತಾವೇ ದೇವರೆಂದು, ತಮ್ಮ ಉದರವ ಹೊರೆವ ಶ್ವಾನ ಸೂಕರನಂತೆ, ಪ್ರಪಂಚಿನ ಗರ್ವಿಗಳ, ದೇಶಾಂತರ, ಮಹಂತರೆನಬಹುದೇನಯ್ಯ? ಎನಲಾಗದು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ