ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲೆ ಕಲಿದೇವಯ್ಯಾ, ಆದಿಯ ಕುಳವೂ ಅನಾದಿಯ ಕುಳವೂ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಮೂಲಶುದ್ಧದ ಮುಕ್ತಾಯ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಉಭಯಕುಳದ ಕಿರಣಶಕ್ತಿ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಭಾವವೂ ನಿರ್ಭಾವವೂ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅರ್ಥ ಪ್ರಾಣ ಅಬ್ಥಿಮಾನ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅಂಗಲಿಂಗಸಂಗ ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಅಷ್ಟದಳಕಮಲದ ಸಪ್ತಕರ್ಣಿಕೆಯು ನಿಮ್ಮ ಜಂಗಮಮೂರ್ತಿಯಲ್ಲಿ ನಿಂದಿತ್ತು. ಎನ್ನ ನಡೆಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ. ಎನ್ನ ನುಡಿಗೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ ಎನ್ನ ನೋಟ ಕೆಟ್ಟಿತ್ತು ನಿಮ್ಮ ಜಂಗಮಮೂರ್ತಿಯಿಂದ. ಎನ್ನ ಮಾಟ ಸಮಾಪ್ತಿಯಾಯಿತ್ತು ನಿಮ್ಮ ಜಂಗಮಮೂರ್ತಿಯಿಂದ. ನಿಮ್ಮ ಪ್ರಸಾದದಿಂದ ತನು ಶುದ್ಧವಾಯಿತ್ತು. ಬಸವಣ್ಣ ತೋರಿದ ಕಾರಣ, ನಿಮ್ಮ ಜಂಗಮಮೂರ್ತಿಯ ಕಂಡು ಬದುಕಿದೆನು ಕಾಣಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಎರಡುಕೋಟಿ ವೀರಗಣಂಗಳಾಗಬಹುದಲ್ಲದೆ ಹರಳಯ್ಯ ಮಧುವಯ್ಯಗಳಾಗಬಾರದಯ್ಯಾ. ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ. ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಎಲ್ಲಾ ಎಲ್ಲವ ಹಡೆಯಬಹುದು, ಭಕ್ತಿಯ ಹಡೆಯಬಾರದು. ಅಷ್ಟಾದಶವಿದ್ಯೆ ಸಕಲಕಳೆಯನೆಲ್ಲವ ಹಡೆಯಬಹುದು, ಭಕ್ತಿಯ ಹಡೆಯಬಾರದು. ಪಂಚತತ್ವಪದವಿಯ ಹಡೆಯಬಹುದು, ಭಕ್ತಿಯ ಹಡೆಯಬಾರದು. ಈ ಆರಿಗೆಯೂ ಅರಿದು ಹಡೆಯಬಾರದಂಥ ಭಕ್ತಿಯ ಹಡೆದನು. ಆ ಬಸವಣ್ಣನ ನಾ ಹಡೆದೆನು. ನಾನೆಲ್ಲರಿಗೆಯೂ ಬಲ್ಲಿದನು ಕಾಣಾ, ಕಲಿದೇವರದೇವ ನಿಮ್ಮಾಣೆ.
--------------
ಮಡಿವಾಳ ಮಾಚಿದೇವ
ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ. ಎನ್ನ ಸ್ವಾಯತ ಸಂದಳಿಯಿತ್ತಯ್ಯಾ. ಎನ್ನ ಸಮಾಧಾನ ತರಹವಾಯಿತ್ತಯ್ಯಾ. ಎನ್ನ ಅರಿವು ನಿಜದಲ್ಲಿ ನಿಃಪತಿಯಾಯಿತ್ತಯ್ಯಾ. ಕಲಿದೇವರದೇವಾ, ನಿಮ್ಮಲ್ಲಿ ಶಬ್ದಮುಗ್ಧವಾದೆನು.
--------------
ಮಡಿವಾಳ ಮಾಚಿದೇವ
ಎನ್ನ ಅಷ್ಟವಿಧಾರ್ಚನೆ ಶುದ್ಧವಾಯಿತ್ತಯ್ಯಾ ನೀವು ಮೂರ್ತಿಲಿಂಗವಾದ ಕಾರಣ. ಎನ್ನ ತನು ಮನ ಶುದ್ಧವಾಯಿತ್ತಯ್ಯಾ ನೀವು ಜಂಗಮಲಿಂಗವಾದ ಕಾರಣ. ಎನ್ನ ಆಪ್ಯಾಯನ ಶುದ್ಧವಾಯಿತ್ತಯ್ಯಾ ನಿಮ್ಮ ಪ್ರಸಾದವ ಕೊಂಡೆನಾಗಿ. ಎನ್ನ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳೆಲ್ಲಾ ಶುದ್ಧವಾದವಯ್ಯಾ ನೀವು ಜ್ಞಾನಲಿಂಗವಾದ ಕಾರಣ. ಇಂತೀ ಎನ್ನ ಸರ್ವದಲ್ಲಿ ಸನ್ನಹಿತವಾದೆಯಲ್ಲಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎನಗೆ ಶಿವ ತಾನೀತ ಬಸವಣ್ಣನು ಮತ್ರ್ಯಲೋಕವನು ಪಾವನವ ಮಾಡುವಲ್ಲಿ. ಎನಗೆ ಗುರು ತಾನೀತ ಬಸವಣ್ಣನು ಎನ್ನ ಭವರೋಗವ bs್ಞೀದಿಸಿ ಭಕ್ತನೆನಿಸುವಲ್ಲಿ. ಎನಗೆ ಲಿಂಗ ತಾನೀತ ಬಸವಣ್ಣನು ಘನವಿಸ್ತಾರವಪ್ಪ ನಿಜಮಹಿಮೆಯುಳ್ಳಲ್ಲಿ. ಎನಗೆ ಜಂಗಮ ತಾನೀತ ಬಸವಣ್ಣನು ಅನಾದಿಸಂಸಿದ್ಧ ಘನಪ್ರಸಾದರೂಪನಾದಲ್ಲಿ. ಎನ್ನ ನಿಂದ ನಿಲುಕಡೆಯೀತ ಬಸವಣ್ಣನು ಎನ್ನ ಸರ್ವಸ್ವಾಯತವ ಮಾಡಿ ಸಲಹುವಲ್ಲಿ. ಇದು ಕಾರಣ, ಕಲಿದೇವರದೇವರು ಸಾಕ್ಷಿಯಾಗಿ ಎನ್ನ ಪೂರ್ವಾಚಾರಿ ಸಂಗನಬಸವಣ್ಣನ ಕರುಣದಿಂದಲಾನು ಬದುಕಿದೆನು.
--------------
ಮಡಿವಾಳ ಮಾಚಿದೇವ
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ. ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ. ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ. ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ತ್ವಕ್ಕಿಂಗೆ ಜಂಗುರುಲಿಂಗವಾದಾತ ಬಸವಣ್ಣ. ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ. ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ. ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ. ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ. ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ. ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ. ಎನ್ನ ಕಳೆಗೆ ಮಕಾರವಾದಾತ ಬಸವಣ್ಣ. ಎನ್ನ ರುದ್ಥಿರಕ್ಕೆ ನಕಾರವಾದಾತ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ. ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ. ಇಂತು ಬಸವಣ್ಣನೆ ಪರಿಪೂರ್ಣನಾಗಿ, ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ, ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ ಎಂದು ಬಯಲಾದೆನು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎನ್ನ ತನು ಶುದ್ಧವಾಯಿತ್ತು ಬಸವಣ್ಣನ ಶುದ್ಧಪ್ರಸಾದವ ಕೊಂಡೆನಾಗಿ. ಎನ್ನ ಮನ ಶುದ್ಧವಾಯಿತ್ತು. ಬಸವಣ್ಣನ ಸಿದ್ಧಪ್ರಸಾದವ ಕೊಂಡೆನಾಗಿ. ಎನ್ನ ಭಾವ ಶುದ್ಧವಾಯಿತ್ತು ಬಸವಣ್ಣನ ಪ್ರಸಿದ್ಧಪ್ರಸಾದವ ಕೊಂಡೆನಾಗಿ. ಇಂತೆನ್ನ ತನುಮನಭಾವಂಗಳು ಶುದ್ಧಸಿದ್ಧಪ್ರಸಿದ್ಧಪ್ರಸಾದದಲ್ಲಿ ಶುದ್ಧವಾದವು ಕಲಿದೇವಾ, ನಿಮ್ಮ ಶರಣ ಬಸವನಿಂತಹ ಘನಮಹಿಮ ನೋಡಯ್ಯಾ.
--------------
ಮಡಿವಾಳ ಮಾಚಿದೇವ
ಎಲ್ಲಾ ಭಕ್ತಿಯ ಭೇದವನು, ಎಲ್ಲಾ ಕೂಟದ ಭೇದವನು, ಎಲ್ಲಾ ಶೀಲದ ಭೇದವನು, ನಾನು ನಿನಗೆ ಬಿನ್ನೈಸುವೆ ಕೇಳಯ್ಯಾ. ನೀನು ಕರ್ತನಾಗಿ, ನಾನು ಭೃತ್ಯನಾಗಿ ಅವಧರಿಸಯ್ಯಾ. ಎಲ್ಲಾ ಭೇದಂಗಳನು ಬಸವಣ್ಣ ಮಾಡಿದನು. ನಿಜಸ್ವಾಯತವನು ಬಸವಣ್ಣ ಮಾಡಿದನು. ಜಂಗಮಸ್ವಾಯತವನು ಬಸವಣ್ಣ ಮಾಡಿದನು. ಎನ್ನ ಸರ್ವಾಂಗಸ್ವಾಯತವನು ಬಸವಣ್ಣ ಮಾಡಿದನು. ಕಾರಣ, ಆ ಬಸವಣ್ಣನ ನೆನೆನೆನೆದು ಬದುಕಿದೆನು ಕಾಣಾ ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಎನ್ನ ಆದಿಯನೆತ್ತುವೆನೆ ? ಅದ ನೀನೆ ಬಲ್ಲೆ, ಘನಗಂಬ್ಥೀರದಲ್ಲಿ ಹುಟ್ಟಿದನೆಂಬುದ. ಎನ್ನ ಅನಾದಿಯನೆತ್ತಿ ಹೇಳಿ ತೋರುವೆನೆ ? ಅದು ನೀನೆ ಬಲ್ಲೆ, ಎನಗೆ ಕಾಯವಿಲ್ಲೆಂಬುದ. ಬಸವಣ್ಣನ ಕಾರಣ ಮತ್ರ್ಯಕ್ಕೆ ಬಂದಡೆ ಒಡಲುಪಾದ್ಥಿಯೆಂಬುದಿಲ್ಲ ನೋಡಾ. ಒಡಲೆ ಬಸವಣ್ಣ, ಪ್ರಾಣವೆ ಚೆನ್ನಬಸವಣ್ಣ, ಎನ್ನ ಮಹಾಜ್ಞಾನವೇ ನೀವು ನೋಡಾ. ಇಂತು ಎರಡಿಲ್ಲದಿಪ್ಪಲ್ಲಿ, ನುಡಿಯಡಗಿದ ಪರಿಯ, ನಿಮ್ಮ ಶರಣ ಬಸವಣ್ಣ ಬಲ್ಲ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎಲ್ಲೆಲ್ಲಿಯ ಪ್ರಾಣಿಯ ಕೊಲ್ಲದಿಹುದೆ ಧರ್ಮ, ಒಲ್ಲದಿಪ್ಪುದೇ ತಪ. ಪರವಧುವಿನ ಆಸೆ, ತನ್ನ ಮನದಲ್ಲಿ ಇಲ್ಲದಿರ್ದಡೆ, ದೇವ ತಾನಲ್ಲಿಯೇ ಎಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಎಲ್ಲಾ ವ್ಯಾವರ್ಣಂಗಳು ಸ್ಥಾಪ್ಯದೊಳಗು. ಎಲ್ಲಾ ವಚನಂಗಳು ತಾಪದೊಳಗು. ಎಲ್ಲಾ ಸ್ತೋತ್ರಂಗಳು ಕ್ರೋಧದೊಳಗು. ಎಲ್ಲಾ ಅರಿವು ಮಥನದೊಳಗು. ಎಲ್ಲಾ ಮೂರ್ತಿಗಳು ಪ್ರಳಯದೊಳಗು. ಎಲ್ಲಾ ಗೀತಂಗಳು ಸಂವಾದದೊಳಗು. ಲಿಂಗಾನುಭಾವಿ ಇವನೊಂದನೂ ಮನದಲ್ಲಿ ನೆನೆಯ, ಏನೆಂದು ಅರಿಯ. ಸ್ವತಂತ್ರ ನಿತ್ಯನಾಗಿ, ಭಕ್ತಿದಾಸೋಹವ ನಿಮ್ಮ ಬಸವಣ್ಣನಳವಡಿಸಿಕೊಂಡನು. ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಎನ್ನ ಕಾಯ ಬಸವಣ್ಣನ ಪೂಜಿಸಲಿಕಾಯಿತ್ತು. ಎನ್ನ ಜೀವ ಬಸವಣ್ಣನ ನೆನೆಯಲಿಕಾಯಿತ್ತು. ಎನ್ನ ಶ್ರೋತ್ರ ಬಸವಣ್ಣನ ಚಾರಿತ್ರವ ಕೇಳಲಿಕಾಯಿತ್ತು. ಎನ್ನ ಪ್ರಾಣ ಬಸವಣ್ಣನ ಸ್ತುತಿಸಲಿಕಾಯಿತ್ತು. ಎನ್ನ ನೇತ್ರ ಬಸವಣ್ಣನ ಸರ್ವಾಂಗವ ನೋಡಲಿಕಾಯಿತ್ತು. ಇಂತೆನ್ನ ಪಂಚೇಂದ್ರಿಯಂಗಳು ಕಲಿಗಳಾಗಿ ಬಸವಣ್ಣನ ಹಿಡಿಯಲಿಕಾಯಿತ್ತು. ಬಸವಣ್ಣನ ಅರಿವಿನೊಳಗೆ ನಾನಿದ್ದೆನು. ಬಸವಣ್ಣನ ಮರಹಿನೊಳಗೆ ನಾನಿದ್ದೆನು ಕಾಣಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಎತ್ತು ಬಿತ್ತಿತ್ತು, ಒಕ್ಕಲಿಗನಿಂದ ಉತ್ತಮರಿಲ್ಲೆಂದು ನುಡಿವರು. ಹೊತ್ತಾರೆದ್ದು ಶಿವಲಿಂಗಾರ್ಚನೆಯ ಮಾಡಲರಿಯರು. ಎತ್ತಾಗಿ ಬಿತ್ತಿದ ನಮ್ಮ ಬಸವಣ್ಣ. ಹೊತ್ತು ಹೊರೆದನು ಜಗವನು. ಮತ್ತೆ ಮರಳಿ ಅನ್ಯದೈವವ ನೆನೆಯಲೇಕೊ ? ಎತ್ತು ಬಿತ್ತಿತ್ತು, ಹಾಲುಹಯನ ಬಸವನಿಂದಾಯಿತ್ತು. ಇಂತೀ ಬೆಳೆದ ಬಸವನ ಪ್ರಸಾದವನೊಲಿದು, ಮೃತ್ಯು ಮಾರಿಯ ಎಂಜಲ ಮಾಡಿಕೊಂಡು, ಭುಂಜಿಸುವ ತೊತ್ತುಜಾತಿಗಳ ನುಡಿಯ ಕೇಳಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎತ್ತಿನ ಮರೆಯ ಒತ್ತುಗಾರರಂತೆ, ಉಪ್ಪು ದೋಷವೆಂದು ಸಪ್ಪೆಯನುಂಡಡೆ, ಮತ್ತೆ ರೊಚ್ಚೆಯ ಬಚ್ಚಲ ಮುಟ್ಟುತ್ತಿಪ್ಪ ಸತ್ತನಾಯಿಗೇಕೆ ವ್ರತ ? ಇಂತಪ್ಪವರು ನಿಷೆ*ಹೀನರು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಎನ್ನಂಗದ ಆಚಾರದಲ್ಲಿ ಸಂಗನಬಸವಣ್ಣನ ಕಂಡೆನು. ಎನ್ನ ಮನದ ಅರಿವಿನಲ್ಲಿ ಚೆನ್ನಬಸವಣ್ಣನ ಕಂಡೆನು. ಎನ್ನ ಭಾವದ ಕೊನೆಯ ಮೊನೆಯ ಮೇಲೆ ಅಲ್ಲಮಪ್ರಭುದೇವರ ಕಂಡೆನು. ಎಲೆ ಕಲಿದೇವರದೇವಯ್ಯ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು, ನಮೋನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಎಂಜಲ ತಿಂಬ ಜಡದೊಳಗೆ ಹದಿನೆಂಟುಜಾತಿಯ ಎಂಜಲು ಭುಂಜಿಸಿ, ಉತ್ತಮರೆನಿಸಿಕೊಂಬ ಭವಜೀವಿಗಳು ಕೇಳಿರೊ. ಕುಂಜರನಾಗಿ ನಡೆದು ಸುಜಾತರೆನಿಸಿಕೊಂಬಿರಿ. ಅಜವಧೆ ಗೋವಧೆ ಮಾಡುವ ಅನಾಚಾರಿಗಳು ನೀವು ಕೇಳಿರೊ. ಬ್ರಾಹ್ಮಣ ವಾಕ್ಯವ ಕಲಿತು ಬ್ರಾಹ್ಮಣರೆನಿಸಿಕೊಂಬಿರಿ. ವರ್ಮವಿಡಿದು ನೋಡಹೋದಡೆ ನಿಮ್ಮಿಂದ ಕರ್ಮಿಗಳಲ್ಲ. ನಿಮ್ಮ ಧರ್ಮದ ಬಟ್ಟೆಯ ನೀವರಿಯದೆ ಹೋದಿರಿ. ಚಿತ್ತವಲ್ಲದೆ ಶಿವಭಕ್ತರ ಬುದ್ಧಿಯವಿಡಿದು ನಡೆಯಲೊಲ್ಲದೆ ಕೆಟ್ಟುಹೋದಿರಿ. ಸುಧೆಹೀನ ಶುದ್ಧವೆಂದು ಕೊಂಬಿರಿ. ಸುರೆಯ ಸೇವಿಸುವ ಬೋವರೆಂಜಲು ಎಣ್ಣೆ ಶುದ್ಧವೆಂದು ಕೊಂಬಿರಿ. ಬುದ್ದಲೆಯ ಎಂಜಲು ಹಾಲು ಮೊಸರು ಮಜ್ಜಿಗೆ ಶುದ್ಧವೆಂಬಿರಿ. ಶೂದ್ರರೆಂಜಲು ಹಾಲು ಮೊಸರು ತುಪ್ಪ ಆವ ಜಾತಿಯ ಮನೆಯಲ್ಲಿರ್ದಡೆ ಶುದ್ಧವೆಂದು ಕೊಂಬಿರಿ. ಹೊಲೆಯ ಭಕ್ಷಿಸಿ ಮಿಕ್ಕ ತೊಗಲಲ್ಲಿ ಬುದ್ದಲೆಯೊಳಗೆ ತುಪ್ಪವ ತುಂಬಿಹುದೊ ಆ ಹೊಲೆಯರ ಎಂಜಲು ತೊಗಲ ಸಗ್ಗಳೆಯಲ್ಲಿ ಉದಕವ ಕೊಂಬಿರಿ. ಹದಿನೆಂಟುಜಾತಿಗೆ ಅಧಿಕವೆನಿಸಿಕೊಂಬಿರಿ. ದ್ವಿಜರೆಲ್ಲರಿಗೆ ಲೆಕ್ಕವಿಲ್ಲದ ನರಕವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಎನ್ನ ಮನ ಬಸವಣ್ಣ, ಎನ್ನ ವಾಕು ಚೆನ್ನಬಸವಣ್ಣ. ಎನ್ನ ಕಾಯ ಪ್ರಭುದೇವರು. ಇಂತೀ ಮೂವರ ಪಾದವನು ತ್ರಿಕರಣಶುದ್ಧದಿಂದ ನಂಬಿ ನಂಬಿ ನಮೋ ನಮೋ ಎನುತಿರ್ದೆನು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ. ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು. ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ. ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ, ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ. ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ. ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ. ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಎನ್ನ ಚಿನ್ನಾದಮಯದ ಗುರುವೆಂದೆನಿಸಿದ ಬಸವಣ್ಣ. ಎನ್ನ ಚಿದ್ಬಿಂದುವಿನ ಇರವ ಲಿಂಗವೆಂದೆನಿಸಿದ ಬಸವಣ್ಣ. ಎನ್ನ ಚಿತ್ಕಳೆಯಂಬರವ ಜಂಗಮವೆಂದೆನಿಸಿದ ಬಸವಣ್ಣ. ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ. ಇಂತೀ ಶುದ್ಧಸಿದ್ಧಪ್ರಸಿದ್ಧಪ್ರಸಾದದಲ್ಲಿ, ಎನ್ನ ಉಣಕಲಿಸಿದ, ಕಲಿದೇವಾ, ನಿಮ್ಮ ಶರಣ ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ