ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮದ ಇಂಗಿತ ಆಕಾರವಾದಾತನೆ ಗುರು. ಜಂಗಮದ ಭಕ್ತಿಪ್ರಸಾದವುಳ್ಳಾತನೆ ಗುರು. ಮಂಗಳತರ ಜ್ಞಾನ, ಮೋಕ್ಷವಹ ಉಪದೇಶವಸ್ತುವನೀವಾತನೆ ಗುರು. ಇಂತಪ್ಪ ಶ್ರೀಗುರುವಿಂಗೆ ಜಗದಾರಾಧ್ಯರೆಂಬೆ ಕಾಣಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಜಂಗಮವೆ ಪ್ರಾಣವೆಂಬುದು ನಿನಗೆ ಹುಸಿಯಾಯಿತ್ತಲ್ಲಾ ಸಂಗನಬಸವಣ್ಣ. ನಿನಗೆ ಪ್ರಸಾದದ ಪ್ರಸನ್ನತೆಯೆಂಬುದು ಸಂದೇಹವಾಯಿತ್ತಲ್ಲಾ ಚೆನ್ನಬಸವಣ್ಣ. ನಿನಗೆ ಕಾಯವೆ ಬಸವಣ್ಣ, ಜೀವವೆ ಚೆನ್ನಬಸವಣ್ಣ. ಕೇತಯ್ಯಗಳ ಅಳಿವು, ಕಲಿದೇವನ ಉಳಿವಾಯಿತ್ತು.
--------------
ಮಡಿವಾಳ ಮಾಚಿದೇವ
ಜಂಗಮದ ಸೇವೆಗೆ ಲಿಂಗವಿರಹಿತವಾಗಿರಬೇಕೆ ? ಲಿಂಗವೆಂಬುದು ಜಂಗಮದಂಗ. ಆ ಲಿಂಗವಿಲ್ಲದೆ ಪ್ರಾಣವುಂಟೆ ? ಹಣ್ಣಿಲ್ಲದ ರುಚಿಯ ಬಯಸುವಂತೆ, ನಿನ್ನ ಕಾಯಕದ ಕ್ರೀಯೆಲ್ಲವೂ ಲಿಂಗವಾದ ಬಳಿಕ, ಮತ್ತೇನು ಭಾವ ಭೇದವೆ ? ನೀನೆಂದಂತೆ ಇರಲಿ. ಆರೆನೆಂದಡೆ ನಿನ್ನ ಮನವ ತಿಳುಹಿಕೊಳು. ಇದಕ್ಕೆ ಕಲಿದೇವ ಹೊಣೆ. ಕರಕೊಳ್ಳಾ ಎನ್ನೊಡೆಯನ, ಚಂದಯ್ಯಾ.
--------------
ಮಡಿವಾಳ ಮಾಚಿದೇವ
ಜಲದೈವವೆಂದಡೆ ಶೌಚವ ಮಾಡಲಿಲ್ಲ. ನೆಲದೈವವೆಂದಡೆ ಕಾಲೂರಿ ನಡೆಯಲಿಲ್ಲ. ಅಗ್ನಿದೈವವೆಂದಡೆ ತರಿದು ಮೆಲಲಿಲ್ಲ. ಅಗ್ನಿದೈವವೆಂದಡೆ ಮನೆಗಳು, ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ. ವಾಯುದೈವವೆಂದಡೆ ಕೆಟ್ಟಗಾಳಿ ಮನೆಗೆ ಬಂದಿತ್ತು, ಬಾಗಿಲಿಕ್ಕಿ ಎನಲಿಲ್ಲ. ಆಕಾಶದೈವವೆಂದಡೆ ಆಕಾಶವ ಹೊರಗುಮಾಡಿ, ಒಳಗೆ ಮನೆಯ ಕಟ್ಟಲಿಲ್ಲ. ಚಂದ್ರದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ. ಸೂರ್ಯದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ. ಆತ್ಮದೈವವೆಂದಡೆ ಸಾವು ಕೇಡು ಇಲ್ಲದಿರಬೇಕು. ಇದು ಕಾರಣ, ನೆಲದೈವವಲ್ಲ, ಜಲದೈವವಲ್ಲ, ಅಗ್ನಿದೈವವಲ್ಲ, ವಾಯುದೈವವಲ್ಲ, ಆಕಾಶದೈವವಲ್ಲ, ಚಂದ್ರಸೂರ್ಯ ಆತ್ಮರು ದೈವವಲ್ಲ. ಕಲಿದೇವಾ, ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ, ಮಡಿವಾಳನು.
--------------
ಮಡಿವಾಳ ಮಾಚಿದೇವ
ಜಕ್ಕಿ ಜನ್ನಿ ಎಕ್ಕನಾತಿ ಮಾಯಿರಾಣಿ ಕುಕ್ಕನೂರ ಬಸದಿ ಚೌಡಿ ಮೈಲಾರ ಜಿನ್ನನು ಕುಂಟಭೈರವ ಮೊದಲಾದ ಭೂತ ಪ್ರೇತ ಪಿಶಾಚಿ ದೇವರೆಲ್ಲರೂ ಅಕ್ಕಸಾಲೆಯ ಕುಪ್ಪಟ್ಟಿಗೆ ಬಂದರಾಗಿ, ಇದೇ ಸುಡುಗಾಡ ಕಾಣಾ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಜಾತಿನಾಲ್ಕುವಿಡದು ಜಂಗಮವ ಮಾಡಬೇಕೆಂಬ ಗುರುದ್ರೋಹಿಯ ಮಾತ ಕೇಳಲಾಗದು. ಅದೆಂತೆಂದಡೆ:'ಯತ್ಕುಲಂ ಗುರುಮುಖಂ ಯೋ ತತ್ಕುಲಂ' ಎಂದುದಾಗಿ. ಇಂತೆಂಬ ಶ್ರುತಿಯನರಿದು ಸಮಸ್ತ ಕುಲಗೋತ್ರ ಆಶ್ರಮ ನಾಲ್ಕ ಹೇಳಿ, ಕಳಸ ಪಂಚಕವನಿಕ್ಕಿ, ಹಲವು ಮಂತ್ರವಿಡಿದು ಮಾಡುವ ಭವಿಶೈವದೀಕ್ಷೆಯ ಅಂಗಲಿಂಗಸಂಬಂಧವನುಳ್ಳ ನಿಜವೀರಶೈವಕ್ಕೆ ಮಾಡುವ ಅಜ್ಞಾನಿಗಳಿಗೆ ರವಿಸೋಮರುಳ್ಳನ್ನಕ್ಕ ನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು. ಜೀವಂಗೆ ಆತ್ಮಸ್ಥಲ ಸಲ್ಲದು. ತಮ್ಮ ಜೀವಾತ್ಮನನು ಶಿವನೆಂದು, ತಮ್ಮ ಶರೀರವನು ಶಿವನೆಂದು ಅನಂತ ಋಷಿಯ ಅರ್ಚಿಸಿಕೊಂಬರು. ಆರಾರುವೆಂದಡೆ: ವಶಿಷ* ವಾಲ್ಮೀಕಿ ಭೃಗು ದಧೀಚಿ ಕಾಶ್ಯಪ ಅಗಸ್ತ್ಯ ಮಾರ್ಕಂಡೇಯ ಮೊದಲಾದ ಮಹಾಋಷಿಯರು. ಅವರ ಶಾಪಾನುಗ್ರಹ ಸಾಮರ್ಥಿಕೆಯ ಪೇಳುವಡೆ, ಅನಂತ ಶ್ರುತಿಗಳೈದಾವೆ, ಅನಂತ ಶಾಸ್ತ್ರಂಗಳೈದಾವೆ. ಶಿವನ ಕರದೋಯೆನಿಸಬಲ್ಲರು. ಅಂತಹರು, ಅಕಟಕಟ ಭಕ್ತಿಯ ಕುಳವನರಿಯದೆ, ಭವಭಾರಕರಾದರು. ಅಂತು ಜೀವನ ಬಲುಹಿಂದಲು ಸುರರು ಖೇಚರರು ಗರುಡ ಗಂಧರ್ವರು ಸಿದ್ಧವಿದ್ಯಾಧರರು ಗುಹ್ಯಕರು ಯಕ್ಷರಾಕ್ಷಸರು ಹರಿವಿರಂಚಿಗಳು ಮೊದಲಾದ ದೈವಂಗಳೆಲ್ಲಾ ಪ್ರಳಯಚಕ್ರಕ್ಕೊಳಗಾದರು. ಭಾವಾದ್ವೈತರು ವಾಗಾದ್ವೈತರು ಶ್ವಾನಜ್ಞಾನಿಗಳಾಗಿ ಕೆಟ್ಟರು. ಭಕ್ತರು ಭಕ್ತಿಯ ಸ್ಥಿತಿ ಕುಳವನರಿಯದೆ, ಧ್ಯಾನ ಮೌನ ಅನುಷಾ*ನ ಜಪತಪ ಸಮಾಧಿ ಸಂಜೆ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರ ಇಂತೀ ವ್ರತ ಭಾವ ಭಕ್ತಿಯ ಮಾಡಿದರಲ್ಲದೆ, ಭಕ್ತಿದಾಸೋಹವನರಿಯದೆ ಕೆಟ್ಟರು. ಅಂದು ನಮ್ಮ ಬಸವಣ್ಣ ಸ್ವತಂತ್ರನಾದ ಕಾರಣ, ಭಕ್ತಿದಾಸೋಹವಳವಟ್ಟಿತ್ತು. ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಳವಟ್ಟಿತ್ತು. ಜಂಗಮ ಲಿಂಗವೆಂಬುದು ಸಂಗನಬಸವಣ್ಣಂಗೆ ಅಳವಟ್ಟಿತ್ತು. ದ್ವೈತನಲ್ಲ ಅದ್ವೈತನಲ್ಲ ಬಸವಣ್ಣ, ಭಾವಿಯಲ್ಲ ನಿರ್ಭಾವಿಯಲ್ಲ ಬಸವಣ್ಣ. ದೇಹಿಯಲ್ಲ ನಿರ್ದೇಹಿಯಲ್ಲ ಬಸವಣ್ಣ, ಖಂಡಿತನಲ್ಲ ಅಖಂಡಿತನಲ್ಲ ಬಸವಣ್ಣ. ಇಂತಪ್ಪ ಬಸವಣ್ಣಂಗೆ ಆವ ಗುಣಂಗಳೂ ಇಲ್ಲ. ನಿರ್ಗುಣ ನಿರಂಜನ ನಿಸ್ಸೀಮ ಶಿವನು ಬಸವಣ್ಣನೊಡನೆ ಆಡುತ್ತಿಪ್ಪನು ಹಾಡುತ್ತಿಪ್ಪನು. ಅದು ಕಾರಣ, ಬಸವಣ್ಣನ ಮನ ಪರುಷ, ಬಸವಣ್ಣನ ನೋಟ ಪರುಷ. ಭಾವ ಪರುಷ, ನಡೆ ಪುರುಷ, ನುಡಿ ಪರುಷ, ಹಸ್ತ ಪರುಷ. ತನುಮನಧನವ ನಿವೇದಿಸಿದಾತ ಬಸವಣ್ಣ. ಲಿಂಗ ಬಸವಣ್ಣ, ಜಂಗಮ ಬಸವಣ್ಣ, ಗುರು ಬಸವಣ್ಣ. ಆದಿ ಅನಾದಿಯಿಲ್ಲದಂದಿನ ಬಸವಣ್ಣನ ನೆನೆವುದೆ ಪರತತ್ವ. ಬಸವಣ್ಣನ ನೆನೆವುದೆ ಪರಮಜ್ಞಾನ, ಬಸವಣ್ಣನ ನೆನೆವುದೆ ಮಹಾನುಭಾವ. ಎಲೆ ಕಲಿದೇವ, ನಿಮ್ಮ ಶರಣ ಬಸವಣ್ಣನ ಸಮಸ್ತ ಗಣಂಗಳೆಲ್ಲಾ ನೆನೆದು ಶುದ್ಧರಾದರು.
--------------
ಮಡಿವಾಳ ಮಾಚಿದೇವ
ಜಂಗುಳಿದೈವವೆಂಬ ಜವನಿಕೆಯ ಶಿವನೊಡ್ಡಿದನು ನೋಡಾ. ಲಿಂಗದ ನಿಷೆ*ಯನರಿಯದೆ, ಅರುಹಿರಿಯರೆಲ್ಲ ಮರುಳಾಗಿ ನರಕಕ್ಕಿಳಿದರು ಆಗಮದ ಶುದ್ಧಿಯನರಿಯದೆ ಅನ್ಯದೈವಕ್ಕೆರಗುವ ಭಂಗಿತರೊಡನಾಡಿ ಕೆಡಬೇಡವೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಜನ್ಮ ಜರೆ ಮರಣ ಭವಭವಾಂತರದಲ್ಲಿ ತೊಳಲುವ, ನೂರೊಂದುಕುಲ ಹದಿನೆಂಟುಜಾತಿಗಿಕ್ಕಿದ, ಅನಂತದೈವದುಚ್ಫಿಷ್ಟೋದಕ ಅದರೆಂಜಲನ್ನಪಾನ್ಯವ ತಂದು, ಶ್ರೀಗುರು ಕರುಣಿಸಿಕೊಟ್ಟ ಇಷ್ಟಲಿಂಗಕ್ಕೆ ನೈವೇದ್ಯವ ಮಾಡಿ ಭುಂಜಿಸುವ ಮೂಳಹೊಲೆಯರ ಮನೆಯಲ್ಲಿ ಮಾಡಿದ ಪಾಕವನು, ತ್ರಿವಿಧದೀಕ್ಷಾನ್ವಿತವಾದ ಇಷ್ಟಮಹಾಲಿಂಗಕ್ಕೆ ಅರ್ಪಿಸಿ ಭುಂಜಿಸುವ ಅಧಮ ಹೊಲೆಯರು, ಶತಸಹಸ್ರವೇಳೆ ಶುನಿಸೂಕರಾದಿಗಳಲ್ಲಿ ಜನಿಸಿ, ಅಂತ್ಯದಲ್ಲಿ ಕಾಲಕಾಮರ ಪ್ರಳಯಕ್ಕೊಳಗಾಗದೆ ಮಾಣ್ಬರೇನೊ, ಕಲಿದೇವರದೇವಾ ?
--------------
ಮಡಿವಾಳ ಮಾಚಿದೇವ