ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಲುಕುಮಲುಕಿನ ಅರಮನೆಯಲ್ಲಿ ಮೂರುಮುಖದ ಅಂಗನೆ ಇರ್ಪಳು. ಆ ಅಂಗನೆಯ ಮೂರುಮುಖದಲ್ಲಿ ಮೂರುರಾಜ್ಯಕ್ಕೆ ಒಡೆಯರಾದ ರಾಜರು ಇರ್ಪರು. ಆ ಅಂಗನೆಯ ಕಾಲೊಳಗೆ ಕೆಲಬರು ಎಡೆಯಾಡುತ್ತಿರ್ಪರು. ಆ ಅಂಗನೆಯ ಉದರದಲ್ಲಿ ಉರಿ ಉದ್ಭವಿಸಲು ಅಂಗನೆಯಳಿದು ಮುಖವಿಕಾರವಾಗಿ, ತ್ರಿಪುರ ಸುಟ್ಟು, ಅರಸು ಮಡಿದು, ಕಾಲು ಮುರಿದು, ಮನೆ ನಷ್ಟವಾದಲ್ಲದೆ ತನ್ನ ತಾನರಿಯಬಾರದು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಟಮಟವೃಕ್ಷದ ಘಟದಲ್ಲಿ ಕಂಚುಮಿಂಚಿನ ಸೂಜಿಯ ಹಿನ್ನಿಯಲ್ಲಿ ಈರೇಳುಲೋಕದ ಎಡೆಯಾಟ. ಅಗ್ರದಲ್ಲಿ ಪರ್ವತ ಗಜ ತುರಂಗದ ತಂಡತಂಡಿನ ಒಡೆಯನ ಶಿರವೊಡೆದು ಕಮಲದಲ್ಲಿ ಬರಲು, ಸರ್ವ ನಷ್ಟವಾಗಿ, ತಂಡಿನೊಡೆಯ ಕಮಲವ ನುಂಗಿ ನಿರ್ವಯಲಾದ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಡ್ಡಕ್ಕೆ ಆರು, ದುಡ್ಡಿಗೆ ಮೂರು ಲಿಂಗ ಮಾರುವರು. ಇಂತಪ್ಪ ಅಗ್ಗದ ಲಿಂಗವ ತಂದು ಮೂಢಗುರುವಿನ ಕೈಯಲ್ಲಿ ಕೊಟ್ಟು ಮಡ್ಡಜೀವಿಗಳು ಅಡ್ಡಬಿದ್ದು ಕಾಡಲಿಂಗವ ಪಡಕೊಂಡು ತಮ್ಮ ಕೊರಳಲ್ಲಿ ಕಾಣಿಯ ಕಲ್ಲು ತಕ್ಕಡಿಗೆ ಕಟ್ಟಿದ ಹಾಗೆ ಕಟ್ಟಿಕೊಂಡು, ನಾವು ಪ್ರಾಣಲಿಂಗಿಗಳೆಂದಡೆ ನಗುವರಯ್ಯ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಣ್ಯದ ಬೆಟ್ಟದಲ್ಲಿ ಮೂವರು ಕಳ್ಳರು ಮನೆಮಾಡಿ ಲೆಕ್ಕವಿಲ್ಲದೆ ನರರ ಕೊಲ್ಲುತ್ತಿರ್ಪರು, ಅರಣ್ಯದ ಬೆಟ್ಟವ ಸುಟ್ಟು ಮನೆಯ ಸುಡದೆ ಕಳ್ಳರಕೊಂದಾತನೆ ಪ್ರಾಣಲಿಂಗೈಕ್ಯನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಗಿನ ಭೂಮಿ ನೀರಹೊಳೆಯಲ್ಲಿ ಅಗ್ನಿ ಪುಟ್ಟಿ ನೀರಲ್ಲಿ ನೊಂದದೆ ನೀರು ಸುಟ್ಟು. ಆ ಅರಗಿನ ಭೂಮಿಯನುರುಹದೆ, ಆ ಭೂಮಿಯಲ್ಲಿರುವ ತೃಣ ಪತ್ರಿ ಮೊದಲಾದ ಎಲ್ಲ ವೃಕ್ಷವನು ದಹಿಸಿ, ಆ ಅರಗಿನ ಭೂಮಿಯಲ್ಲಿ ಬಯಲಾದುದ ಕಂಡು ಸೋಜಿಗ ಸೋಜಿಗ ಎಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಣ್ಯದೊಳಗಿರುವಣ್ಣಗಳ ಅಂಗನೆಯರ ಅಂಗಳದಲ್ಲಿರಿಸಿತ್ತು ಮಾಯೆ. ಅರಮನೆಯೊಳಗೆ ಅಂಗನೆಯರ ಸಂಗಸುಖದಲ್ಲಿರುವಣ್ಣಗಳ ಅರಣ್ಯದ ಗುಡ್ಡಗಂಹಾರ ಗುಹ್ಯದಲ್ಲಿರಿಸಿತ್ತು ಮಾಯೆ. ಹೆಣ್ಣುಬಿಟ್ಟೆವೆಂಬಣ್ಣಗಳ ಸ್ತ್ರೀಯರ ಕಣ್ಣ ಮುಂದೆ ಕಾಲಕಟ್ಟಿ ಕೆಡವಿತ್ತು ಮಾಯೆ. ಹೊನ್ನು ಬಿಟ್ಟೆವೆಂಬಣ್ಣಗಳ ಕಳವಳದಿಂದ ಪರದ್ರವ್ಯವ ಅಪಹರಿಸಿತ್ತು ಮಾಯೆ. ಮಣ್ಣಬಿಟ್ಟೆವೆಂಬಣ್ಣಗಳ ಮಠಮಾನ್ಯಕ್ಕೆ ಹೋರಾಡಿಸಿ ದೇಶಭ್ರಷ್ಟನಾಗಿ ತಿರುಗಿಸಿತ್ತು ಮಾಯೆ. ಬುದ್ಧಿವಂತರೆಂಬಣ್ಣಗಳ ಮುದ್ದಿ ನರಕವ ತಿನಿಸಿತ್ತು ಮಾಯೆ. ಸಕಲವಿದ್ಯೆ ಬಲ್ಲೆವೆಂಬಣ್ಣಗಳ ಬಲ್ಲತನ ನೋಡಾ ! ಬಾಲೆಯರ ಬಾಯ ಲೋಳೆಯ ನೆಕ್ಕಿಸಿತ್ತು ಮಾಯೆ. ಸ್ತ್ರೀಯರ ಮುಖ ನೋಡಲಾಗದೆಂದು ಮುಖದಮೇಲೊಂದು ವಸ್ತ್ರವ ಹಾಕಿಕೊಂಡು ತಿರುಗುವಣ್ಣಗಳ ಬಾಲೆಯರ ಬಾಗಿಲ ಮೋರೆಯಲ್ಲಿರಿಸಿತ್ತು ಮಾಯೆ. ಸ್ತ್ರೀಯರ ಕಂಡು ನಾಚಿ ಮಾತಾಡದಣ್ಣಗಳ ನಾಚಿಕೆಯ ಬಿಡಿಸಿ ಮಾತಾಡಿಸಿತ್ತು ಮಾಯೆ. ವಿರಕ್ತರೆಂಬಣ್ಣಗಳ ಬಾಲೆಯರ ಬಾಯಿತೊಂಬಲ ತಿನಿಸಿತ್ತು ಮಾಯೆ. ಪಾದಪೂಜೆಯ ಮಾಡಿ ಪಾದೋದಕ ಪ್ರಸಾದ ಕೊಂಬ ಭಕ್ತಜನಂಗಳ ಪಾದಪೂಜೆಯ ಮಾಡಿಸಿಕೊಂಡು ಪಾದೋದಕ ಪ್ರಸಾದವ ಪಾಲಿಸುವ ಹಿರಿಯರ ಇಂತಪ್ಪ ದೇಶಭಕ್ತರೆಂಬುಭಯರ ಬಾಲೆಯರ ಪಾದಪೂಜೆ ಮಾಡಿಸಿತ್ತು ಮಾಯೆ. ಸರ್ವಾಂಗ ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ಬಾಲೆಯರ ಮನೆಯಲ್ಲಿ ಒಲಿಯ ಬೂದಿಯ ಬಳಿಸಿತ್ತು ಮಾಯೆ. ಮಂತ್ರವ ನೆನೆವಣ್ಣಗಳ ಬಾಲೆಯರ ನಾಮವ ನೆನಿಸಿ ಅವರ ಬಾಗಿಲ ಮುಂದೆ ಹೆಳವನಂತೆ ಹೊಗಳಿಸಿತ್ತು ಮಾಯೆ. ಕರಸ್ಥಲದಲ್ಲಿ ಲಿಂಗವ ಪಿಡಿವಣ್ಣಗಳ ಬಾಲೆಯ ಕುಚವ ಪಿಡಿಸಿ ಮುಖದ ಮೇಲೆ ಚುಂಬನವ ಕೊಡಿಸಿ ತೊಡೆಯ ಸಂದಿನಲ್ಲಿರಿಸಿತ್ತು ಮಾಯೆ. ಪಂಡಿತರೆಂಬಣ್ಣಗಳ ಬಾಲೆಯರ ಮಲವಸರುವ ಪೃಷ* ಹಿಡಿಸಿತ್ತು ಮಾಯೆ. ಇಂತಪ್ಪ ಮಾಯಾಶಕ್ತಿಯ ಗೆಲುವರೆ ನವಖಂಡಪೃಥ್ವಿಮಧ್ಯದಲ್ಲಿರುವ ದೇವ ದಾನವ ಮಾನವರು ಮೊದಲಾದವರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರಿಗಲ್ಲದೆ ಇಲ್ಲ ಅಲ್ಲ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅವಿದ್ಯಾಪಟ್ಟಣದ ಹೊರಕೇರಿಯಲ್ಲಿ ಅಂಗವಿಲ್ಲದ ಉರಿಮಾರಿ ಬಿಳಿಯ ಸೀರೆಯನುಟ್ಟು ಹೆಂಡವ ಹೊತ್ತು ಮಾರುತ್ತಿಹಳು. ಆ ಹೆಂಡವ ಕುಡಿಯಬೇಕೆಂದು ಅವಿದ್ಯಾನಗರದ ಅರಸು ಮಂತ್ರಿಗಳು ಮೊದಲಾದ ಜನಂಗಳು ಪೋಗುತಿರ್ಪರು. ಹೆಂಡವ ಮಾಡಿ ಕಂಡವ ಕೊಡಳು. ಹೊನ್ನು ಇದ್ದವರಿಗೆ, ಸತಿಸಂಗದಲ್ಲಿದ್ದವರಿಗೆ, ಇಬ್ಬರ ಸಂಗದಲ್ಲಿ ವರ್ತಿಸಿದವರಿಗೆ ಸಂಗಮಾಡಳು. ಹೆಂಡ ಕೊಡಳು, ಕಂಡ ಮಾರಳು. ಕೈಕಾಲು ಕಣ್ಣು ಇಲ್ಲದ ಬಡವರು ಬಂದರೆ ಕಂಡವ ತಿನಿಸಿ, ಹೆಂಡ ಕುಡಿಸಿ, ಸಂಗಸುಖದಲ್ಲಿ ಅಗಲದೆ ಇರ್ಪಳು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಷ್ಟಪರ್ವತ ಮೇಲುಗಿರಿಯ ಮೇಲೊಂದು ಪಕ್ಕವಿಲ್ಲದ ಹಕ್ಕಿ ಮೂರುಗೂಡನಿಕ್ಕಿ, ತಲೆಯಿಲ್ಲದ ಮರಿಮಾಡಿ, ಹಾಲು ಹೊಲಸು ಕೂಡಿ ತಿನ್ನಿಸಿ. ಕಣ್ಣು ಬಂದು ಗೂಡ ಕೆಡಿಸಿ, ಹಕ್ಕಿಯ ಕೊಂದು, ಪುಚ್ಚ ಬಲಿದು, ಪಕ್ಕ ಬಂದು ಪರ್ವತವ ಮೆಟ್ಟಿ ಗಗನಕ್ಕೆ ಹಾರಿ ಎತ್ತ ಹೋಯಿತೆಂಬುದ ಬಲ್ಲರೆ ಐಕ್ಯನೆಂಬುದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಣ್ಯದ ಅಡ್ಡಗುಡ್ಡದ ಸರೋವರದಲ್ಲಿರುವ ಹಂದಿಯ ಉಕ್ಕಿನ ಬಿಲ್ಲತಂತಿಯ ನಾರಿಗೆ, ಗುರಿಯಿಲ್ಲದ ಸರಳ ಹೂಡಿ ಹೊಡೆಯಲು ಬಿಲ್ಲು ಮುರಿದು, ನಾರಿ ಹರಿದು, ಬಾಣ ತಾಗಿ, ಹಂದಿ ಸತ್ತು ಬಾಣ ಉಳಿಯಿತು. ಆ ಬಾಣದಿಂದ ಸತ್ತ ಹಂದಿಯ ಕಾಲು, ಕೊಳಗ, ಹಲ್ಲು, ಕೋರಿ, ಕಣ್ಣು, ತಲೆ, ಕರಳು, ಮಿದಡು, ಚರ್ಮ, ಕೂದಲ ಮೊದಲಾದವನು ತೆಗೆದು ಉಳಿದುದನು ನೀರಿಲ್ಲದೆ ಹೆಸರಿಟ್ಟು, ಬೆಂಕಿಯಿಲ್ಲದೆ ಸುಟ್ಟು, ಪಾಕವ ಮಾಡಿ, ಎನ್ನ ನಿರ್ಮಾಯಪ್ರಭುವಿಂಗೆ ಅರ್ಪಿಸಿ, ಆ ಪ್ರಭುವಿನ ಮಹಾಪ್ರಸಾದವ ಕೊಂಡು ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂತಪ್ಪ ಭವಭಾರಿಗಳಾದ ಜೀವಾತ್ಮರು ಒಂದುಗೂಡಿ ದಾಸೋಹಮಾಡಿ, ಅಗ್ನಿಜ್ವಾಲೆಯಲ್ಲಿ ಅರತು ಹೋಗುವ ನೀರಿಗೆ ಪಾದೋದಕವೆಂದು ಹೆಸರಿಟ್ಟು, ಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಅಗ್ನಿ ನೀರಿನಿಂದ ಅಟ್ಟು ಪಾಕ ಮಾಡಿದ ಅನ್ನಕ್ಕೆ ಪ್ರಸಾದವೆಂದು ಹೆಸರಿಟ್ಟು, ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸೆಂದು ಎಲ್ಲರೂ ಕ್ಯೆಯ್ಯೊಡ್ಡೊಡ್ಡಿ ಕೈಕೊಂಡು, ತಮ್ಮ ಕೈಯಲ್ಲಿರ್ದ ಇಷ್ಟಲಿಂಗಕ್ಕೆ ತೋರಿ ತೋರಿ ಲಿಂಗಕ್ಕೆ ಕೊಟ್ಟೆವೆಂದು ತಮ್ಮ ಉದರಾಗ್ನಿ ಹಸಿವು ತೃಷೆಯನಡಗಿಸಿಕೊಂಡು, ಮುಂಜಾವಿನಲ್ಲೆದ್ದು ಮಲಮೂತ್ರ ವಿಸರ್ಜಿಸುವ ಮೂಳಹೊಲೆಮಾದಿಗರಿಗೆಲ್ಲಿಹುದಯ್ಯಾ ಆ ಗುರುಲಿಂಗಜಂಗಮದ ತೀರ್ಥಪ್ರಸಾದಸಂಬಂಧ ? ಇಂತಪ್ಪ ಮತಿಭ್ರಷ್ಟ ಮರುಳಮಾನವರ ಭಿನ್ನಕ್ರಿಯಾಚಾರವನು ಸುಜ್ಞಾನಿ ಶರಣ ಕಂಡು ಹೊಟ್ಟಿ ಹುಣ್ಣಾಗುವನ್ನಬರ ನಕ್ಕು ಶಬ್ದಮುಗ್ಭನಾಗಿ ಸುಮ್ಮನಿದ್ದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಳಿ ಅತ್ತಿ ಆಲದ ಮರವೆಂಬ ವೃಕ್ಷಪರ್ಣದ ಪಾತ್ರೆಯಲ್ಲಿ ಭೋಜನವ ಮಾಡದೆ ಟೆಂಗು ಮಾವು ಬಾಳೆ ವೃಕ್ಷ ಪಾನಪಾತ್ರೆಯಲ್ಲಿ ಭೋಜನವ ಮಾಡಿ ಬಲಭೀಮನಾಗಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ