ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಡಭಾಗದ ಮುರಗಿಂದ ಬ್ರಹ್ಮನ ಹೊಡೆದು ಕೊಂದೆ, ಬಲಭಾಗದ ಮುರಗಿಂದ ವಿಷ್ಣುವಿನ ಕೊಂದೆ, ಹಿಂಭಾಗದ ಮುರಗಿಂದ ರುದ್ರನ ಕೊಂದೆ. ಒಂಟಿಮುರಗಿಯ ಹನಿಗಳಿಂದ ಶುನಿಗಳ ಕೊಂದೆ, ಮೈಲಿಗಿ ಮೋಳಗಿಯ ನುಂಗಿ ಸತ್ತು ಕಾಯಕವ ಮಾಡುತಿರ್ದನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎನ್ನ ತಾಯಿ ಹೊಲೆಯನ ಸಂಗವಮಾಡಿ ಎನ್ನ ಹಡದು ಊರಲ್ಲಿಟ್ಟಳು. ಆ ಊರಿಗೆ ಒಡೆಯನಾಗಿ ತಲೆಯಿಲ್ಲದ ಸ್ತ್ರೀಸಮ್ಮೇಳನದಲ್ಲಿರುತ್ತಿರಲು, ಎನ್ನ ಕುಲದವರು ಬಂದು ಈ ಊರವ ನೀನಲ್ಲ, ಹೊಲೆಯನೆಂದು ಪೇಳಿದಾಕ್ಷಣವೆ ತಲೆಯಿಲ್ಲದ ಸ್ತ್ರೀಯ ಕೊಂದು, ಊರ ಸುಟ್ಟು ಮನುಜರ ಬಿಟ್ಟು, ಕುಲದವರ ಕೂಡಿ ಕಾಯಕವ ಮಾಡುತಿರ್ದರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎರಡಿಲ್ಲದ ಭೂಮಿಯಲ್ಲಿ ಬಯಲ ಪಟ್ಟಣ. ಆ ಪಟ್ಟಣಕ್ಕೆ ಒಡೆಯನಾದ ನಿರಂಜನನೆಂಬ ರಾಜನು ಸಂಗವಿಲ್ಲದ ಸ್ತ್ರೀಸಂಯೋಗದಿಂ ಶಿಶುವ ಪಡೆದು, ಆ ಶಿಶು ತಂಗಿಯನೊಡಗೂಡಿ ಪಂಚಮುಖವುಳ್ಳಾತನ ಪಡೆದು, ಆ ಪುತ್ರನ ಮಮಕಾರಶಕ್ತಿಯಿಂದ ಮೂವರು ಪುಟ್ಟಿದರು. ಆ ಮೂವರು ಮೂರುಪುರವ ನಿರ್ಮಿಸಿದರು. ಆ ಮೂರುಪುರ ಈರೈದು ನಾಲ್ಕು ದೇಶ, ಆ ದೇಶದಲ್ಲಿ ಎರಡು ಕುಲ, ಎಂಬತ್ತುನಾಲ್ಕು ಕುಲವಾಯಿತ್ತು. ಇಂತೀ ಎಲ್ಲವು ಯಾತರಿಂದಾಯಿತ್ತೆಂದರಿದು ಅದ ನುಂಗಿ ತಾನಳಿದುಳಿದು ಇರ್ಪಾತನೇ ಶರಣ. ಅಂಗಲಿಂಗಸಂಬಂದ್ಥಿ ಸರ್ವಾಂಗಲಿಂಗಿಯೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎನ್ನ ಮನದಲ್ಲಿ ನೀ ಹುಟ್ಟಿ, ನಿನ್ನ ಕರದಲ್ಲಿ ನಾ ಹುಟ್ಟಿ, ಉಭಯರು ಕೂಡಲಿಕ್ಕೆ ಎನಗೊಂದು, ನಿನಗೆ ಮೂರು ಮಕ್ಕಳು ಹುಟ್ಟಿ, ನಾ ಬರುವಾಗ ನಿನ್ನ ಮಕ್ಕಳ ಮೂವರನು ಒಬ್ಬನ ಮತ್ರ್ಯಲೋಕದಲ್ಲಿಟ್ಟೆ, ಒಬ್ಬನ ಪಾತಾಳಲೋಕದಲ್ಲಿಟ್ಟೆ, ಒಬ್ಬನ ಸ್ವರ್ಗಲೋಕದಲ್ಲಿಟ್ಟೆ. ಇಂತೀ ಮೂವರನು ಮೂರುಲೋಕದಲ್ಲಿಟ್ಟು ನಾ ನನ್ನ ಮಗನ ಸಂಗವ ಮಾಡಿ, ಸತ್ತು ಮುತ್ತೈದೆಯಾಗಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎಮ್ಮಿಯ ಕೊಂದು ಹಾಲು ಕರದು, ಗಡಿಗೆಯನೊಡೆದು ಹಾಲು ತುಂಬಿ, ಮಾರಬಲ್ಲಾತನೇ ಗೊಲ್ಲರ ನಾಗಣ್ಣನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎರಡು ಕೊಟ್ಟು ಒಂದು ಕೊಂಡೆ, ಒಂದು ಕೊಟ್ಟು ಏನೂ ಕೊಳ್ಳಲಿಲ್ಲ. ಮೂರುಹಣವ ಕೊಟ್ಟು ಮೂರುರತ್ನವ ಕೊಂಡೆ. ಮೂರು ಕೊಂದು ಆರುಮಂದಿಗೆ ಹೇಳದೆ ಏಳರಲ್ಲಿ ಸತ್ತು ಸಂಸಾರ ಮಾಡುತಿರ್ದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎನಗೊಂದು ವ್ಯಾಧಿ ಹತ್ತಿ ಗೊಲ್ಲನ ಧ್ವನಿಮಾಡಲು, ಆ ಗೊಲ್ಲನು ಮೆಲ್ಲಮೆಲ್ಲನೆ ಬಂದು ತನ್ನ ಜೋಳಿಗೆಯೊಳಗಣ ನವಗುಳಿಗೆಯ ತೆಗೆದು, ಎಂಟು ದಿಕ್ಕಿಗೆ ಎಂಟು ಗುಳಿಗೆಯನೊಗೆದು, ಮಧ್ಯದಲ್ಲಿ ಒಂದು ಗುಳಿಗೆಯನಿಟ್ಟು, ತಣ್ಣೀರು ಕುಡಿಯಬೇಡ, ತಂಗಳನ್ನವನುಣ್ಣಬೇಡ, ಮಜ್ಜಿಗೆಯ ಕುಡಿಯಬೇಡ, ಎಮ್ಮಿಯ ಹಾಲ ಸೇವಿಬೇಡ, ಇಂತೀ ಎಲ್ಲವನು ವಿಸರ್ಜಿಸಿ, ಬಿಸಿನೀರು ಕುಡಿದು, ಬಿಸಿ ಅನ್ನವನುಂಡು, ಬಿಳಿ ಆವಿನ ಹಾಲು ಸೇವಿಸಿ, ಪಥ್ಯವ ಮಾಡೆಂದು ಗೊಲ್ಲನು ಪೇಳಿದನು. ಇಂತೀ ಕ್ರಮದಲ್ಲಿ ಪಥ್ಯವ ಮಾಡಿದವರಿಗೆ ರೋಗಾದಿಗಳ ಬಾಧೆ ಪಲಾಯನವಾಗುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎಮ್ಮೆ ಕೋಣನ ಚರ್ಮವ ತೆಗೆದು, ಸುಣ್ಣವಿಲ್ಲದೆ ಆಕಾಶದ ರಂಜಣಿಗಿಯಲಿಕ್ಕಲು ಮೂರಾರಕ್ಕೆ ಹದ ಬಂದು, ಒಳ ಅಟ್ಟೆಗೆ ಮೂರುಹೊಲಿಗೆ, ಹೊರ ಅಟ್ಟೆಗೆ ಆರುಹೊಲಿಗೆ, ಉಂಗುಷ*ಕ್ಕೆ ಸೂರ್ಯನ ಹೊಲಿಗೆ, ಚಂಡಿಕೆಗೆ ಚಂದ್ರನಹೊಲಿಗೆ, ಹಿಮ್ಮಡಕ್ಕೆ ಅಗ್ನಿಯಹೊಲಿಗೆ, ಶತವೊಂದು ಬಾರ ಬಂಧಿಸಿದ ಮೆಟ್ಟು ಹಣವ ಕೊಟ್ಟೊಡೆ ಕೊಡೆ, ಮಲವ ಕೊಟ್ಟೊಡೆ ಕೊಟ್ಟು ಕಾಯಕವ ಮಾಡುತಿರ್ದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎಮ್ಮ ಶಿವಶರಣರ ಪ್ರಸಾದವಿವರ ಎಂತೆಂದಡೆ : ಶುದ್ಧಪ್ರಸಾದಸ್ವರೂಪವಾದ ಸದ್ರೂಪಾಚಾರ್ಯನನು ತನುವಿನಲ್ಲಿ ಸ್ವಾಯತವ ಮಾಡಿ, ಆ ತನುಪ್ರಕೃತಿ ಆ ಗುರುವಿನಲ್ಲಿ ನಷ್ಟವಾದುದೆ ಅಚ್ಚಪ್ರಸಾದ. ಸಿದ್ಧಪ್ರಸಾದಸ್ವರೂಪವಾದ ಚಿದ್ರೂಪಲಿಂಗವನು ಮನದಲ್ಲಿ ಸ್ವಾಯತವ ಮಾಡಿ, ಆ ಮನೋಪ್ರಕೃತಿ ಆ ಲಿಂಗದಲ್ಲಿ ನಷ್ಟವಾದುದೆ ನಿಚ್ಚಪ್ರಸಾದ. ಸಿದ್ಧಪ್ರಸಾದಸ್ವರೂಪವಾದ ಪರಮಾನಂದ ಜಂಗಮವನು ಆತ್ಮದಲ್ಲಿ ಸ್ವಾಯತವ ಮಾಡಿ, ಆತ್ಮಪ್ರಕೃತಿ ಆ ಜಂಗಮದಲ್ಲಿ ನಷ್ಟವಾದುದೇ ಸಮಯಪ್ರಸಾದ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದತ್ರಯದ ಏಕಸ್ವರೂಪವಾದ ಮಹಾಪ್ರಸಾದ, ಅಂತಪ್ಪ ಮಹಾಪ್ರಸಾದಸ್ವರೂಪವಾದ ಘನಮಹಾಲಿಂಗವು. ಆ ಘನ ಮಹಾಲಿಂಗವನು ಅಪಾದ ಮಸ್ತಕ ಪರಿಯಂತರವಾಗಿ, ಸರ್ವಾಂಗದಲ್ಲಿ ಸ್ವಾಯತವ ಮಾಡಿ ಆ ಲಿಂಗಪ್ರಕಾಶದಲ್ಲಿ ಸರ್ವಾಂಗದ ಪ್ರಕೃತಿ ನಷ್ಟವಾಗಿ, ಅಂತಪ್ಪ ಘನಮಹಾಲಿಂಗದೇಕಸ್ವರೂಪ ತಾನಾದುದೇ ಏಕಪ್ರಾಸದ. ಇಂತೀ ನಾಲ್ಕುತರದ ಪ್ರಸಾದವ ಕೊಂಡವರು ಆರೆಂದಡೆ : ಹಿಂದಕ್ಕೆ ಕಲ್ಯಾಣಪುರದಲ್ಲಿ ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರೆಪ್ಪತ್ತು ಪ್ರಮಥಗಣಂಗಳು, ಇನ್ನು ಮುಂದೆ ಶಿವಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಂಬಂಧಿಗಳಾದ ಶಿವಶರಣರಿಗೆ ಇದೇ ಪ್ರಸಾದವು ನೋಡೆಂದನಯ್ಯಾ ನಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎನಗೆ ಭಕ್ತನೆಂಬರು, ಎನ್ನ ಭಕ್ತಿಚಾರಿತ್ರವ ಪೇಳ್ವೆ ಕೇಳಿರಯ್ಯ. ಎನ್ನ ಮತ್ಪ್ರಾಣನಾಥಲಿಂಗತಂದೆ ಗುರುಲಿಂಗಜಂಗಮದ ಭಕ್ತಿಯೆಂದಡೆ ಎನ್ನ ತನುಮನವು ಕುಗ್ಗುವುದು. ಮಾರಿ ಮಸಣಿಯ ಭಕ್ತಿಯೆಂದಡೆ ನದಿ ಸರ್ಪನಂತೆ ಎನ್ನ ತನು-ಮನವು ಉಬ್ಬುವುದು. ಶಿವಶಾಸ್ತ್ರ, ಶಿವಾನುಭಾವ ಶಿವಮಂತ್ರಬೋಧೆ ಎಂದಡೆ ಎನ್ನ ಶ್ರೋತ್ರಂಗಳು ಲಾಲಿಸವು. ಕುಟಿಲ, ಕುಹಕ, ಸಟೆಯ ಶಾಸ್ತ್ರ, ಕಪಟ ಮಂತ್ರ ಯಂತ್ರ ತಂತ್ರಗಳೆಂದಡೆ ಎನ್ನುಭಯ ಶ್ರೋತ್ರಂಗಳು ಚೈತ್ರ ವೈಶಾಖ ಮಾಸದಲ್ಲಿ ಮೊಲ್ಲೆ ಮೊಗ್ಗೆ ಉದಯಕ್ಕೆ ಅರಳಿ ಹೇಗೆ ಎಸೆಯುವುದು ಹಾಗೆ ವಿಕಸಿತವಾಗಿ, ಶಬ್ದವಿಷಯ ಎಸೆವುದು. ಹರಪೂಜೆ ಗುರುಪೂಜೆ ಲಿಂಗನಿರೀಕ್ಷಣವೆಂದಡೆ ಎನ್ನ ನೇತ್ರಂಗಳು ನಿರೀಕ್ಷಿಸವು. ಆಟ, ನೋಟ, ಸೂಳೆಯರ ಬೇಟ, ಕನ್ಯಾಸ್ತ್ರೀಯರ ರೂಪಲಾವಣ್ಯವೆಂದಡೆ ಎನ್ನ ನೇತ್ರದ ರೂಪುವಿಷಯವು ಬೇಂಟೆಯ ಶ್ವಾನನಂತೆ ಹರಿಯುತಿಪ್ಪುದು. ಗುರುಲಿಂಗಜಂಗಮದ ತೀರ್ಥಪ್ರಸಾದ ಸೇವಿಸೆಂದಡೆ ಎನ್ನ ಜಿಹ್ವೆಯು ಸೇವಿಸದು. ದಾಸಿ ವೇಸಿಯರ ಬಾಯ ತಾಂಬೂಲವೆಂದಡೆ ಎನ್ನ ಜಿಹ್ವೇಂದ್ರಿಯ ರುಚಿವಿಷಯವು ಕೀಳುಮಾಂಸಕ್ಕೆ ಮೆಚ್ಚಿ ಹರಿದಂತೆ ಹರಿಯುತ್ತಿಪ್ಪುದು. ಗುರುಲಿಂಗಜಂಗಮದ ಪಾದಸೇವೆಯೆಂದಡೆ ಎನ್ನ ತ್ವಕ್ಕು ಜಾಡ್ಯವಾಗಿ ಆಲಿಸದು. ಸೂಳಿಢಾಳಿಯರ ಅಂಗಸೇವನೆಯೆಂದಡೆ ಎನ್ನ ತ್ವಕ್ಕು ಉಡ ಉಬ್ಬಿದಂತೆ ಉಬ್ಬುವದು. ಗುರುಲಿಂಗಜಂಗಮವು ಧರಿಸಿದ ಪುಷ್ಪ ಪತ್ರಿ ಪರಿಮಳ ಸುಗಂಧ ಚಂದನದ ಸದ್ವಾಸನೆ ಎಂದಡೆ ಎನ್ನ ಘ್ರಾಣವು ಮುಡಿಯದು. ವೇಶ್ಯೆ, ದಾಸಿ, ಜಾರಸ್ತ್ರೀಯರು ಧರಿಸಿದ ಪುಷ್ಪ ಪರಿಮಳ ಗಂಧ ಚಂದನದ ಸದ್ವಾಸನೆಯೆಂದಡೆ ಎನ್ನ ಘ್ರಾಣವು ಸಂಪಿಗೆಯರಳಿಗೆ ಭ್ರಮರ ಎರಗಿದಂತೆ ಎರಗುವದು. ಇಂತಪ್ಪ ಗುಪ್ತಪಾತಕವಾದ ಗುರುದ್ರೋಹಿಗೆ ಗುರುಲಿಂಗಜಂಗಮಭಕ್ತನೆಂದಡೆ ನಗುವರಯ್ಯ ನಿಮ್ಮ ಶರಣರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎರಕದ ಭಾಂಡಕ್ಕೆ ತೂಕಿಲ್ಲ, ಹಣವಿಲ್ಲ. ಚಕ್ಕಿಯ ಭಾಂಡಕ್ಕೆ ತೂಕುಂಟು ಹಣವುಂಟು. ಎರಕದ ಭಾಂಡವ ಕೊಂಡವರು ಹೊರಕೇರಿಯವರು. ಮಿಕ್ಕಾದ ಚಕ್ಕಿಯ ಭಾಂಡವ ಕೊಂಡವರು ಗ್ರಾಮದವರು. ಎರಡಿಲ್ಲದೆ ಕೊಂಬವರು ಲಿಂಗೈಕ್ಯರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎರಡುಗಾಲಿಯ ಬಂಡಿಯ ಮುರಿದು ಮೂರುಗಾಲಿಯ ಬಂಡಿಯ ಹೂಡಿ, ಮೂಗೇಣ ಬಿಟ್ಟು, ಮೂಯೆತ್ತ ಕಟ್ಟಿ, ಭೂಮಿಲ್ಲದಾರಣ್ಯ ಬೆಟ್ಟದ ಕಲ್ಲ ಬಂಡಿತುಂಬ ತುಂಬಿತಂದು ಬೇಡಿದವರಿಗೆ ಕಲ್ಲ ಕೊಡೆ, ಬೇಡದವರಿಗೆ ಕಲ್ಲ ಹಾಕಿ, ಹಾಗದ ರೊಕ್ಕವ ಕೊಂಡು, ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎಮ್ಮ ಶಿವಗಣಂಗಳು ಕಲ್ಯಾಣಪುರದಲ್ಲಿ ಇಂತಪ್ಪ ಕಾಮಾಟದಿಂದ ಕಾಯಕವ ಮಾಡಿ ಜಂಗಮಾರ್ಚನೆ ಮಾಡುತ್ತಿರ್ದರಲ್ಲದೆ, ಲೌಕಿಕರ ಹಾಗೆ ಮಣ್ಣು ಕಲ್ಲಿನ ಕಾಮಾಟವ ಮಾಡಿ ನಾಲ್ಕು ಹಾಗದ ಕಾಂಚನವ ತಂದು, ಗುರು-ಲಿಂಗ-ಜಂಗಮಕ್ಕೆ ಭಿನ್ನವಿಟ್ಟು ಅರ್ಚಿಸಿ, ಫಲಪದವ ಪಡವರೆ, ಇಲ್ಲೆಂಬ ಹಾಗೆ. ಮತ್ತಂ, ಒಂದು ಸಮಯದಲ್ಲಿ ಮಾಡಿದಡೆಯೂ ಮಾಡುವರು. ಮಾಡಿದಡೆಯೂ ಜ್ಞಾನಕ್ಕೆ ಹಾನಿ ಇಲ್ಲ, ದೋಷವಿಲ್ಲ. ಅದೆಂತೆಂದಡೆ : ಶಿವಕೃಪೆಯಿಂ ದೇಹವ ತಾಳಿ ಮತ್ರ್ಯಲೋಕಕ್ಕೆ ಬಂದ ಮೇಲೆ, ಆ ದೇಹದಲ್ಲಿರುವ ಪರಿಯಂತರದಲ್ಲಿ ಅನ್ನ ಉದಕ ವಸ್ತ್ರದಿಂದ ದೇಹವ ರಕ್ಷಿಸಬೇಕಲ್ಲದೆ, ಆ ಅನ್ನ ಉದಕ ವಸ್ತ್ರದಿಂದ ದೇಹದ ಶೋಷಣವ ಮಾಡಲಾಗದು, ಮಾಡಿದಡೆ ಜ್ಞಾನಕ್ಕೆ ಹಾನಿ. ಅದೇನು ಕಾರಣವೆಂದಡೆ: ಅಂತಪ್ಪ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ ಸುಖಿಸಿದಡೆ ಜ್ಞಾನಕ್ಕೆ ಹಾನಿ. ಹೀಗೆಂದರೆಂದು ಆ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ ಶೋಷಣೆಯ ಮಾಡಿದಡೆಯು ಜ್ಞಾನಕ್ಕೆ ಹಾನಿ. ಈ ಉಭಯ ಭೇದವ ತಿಳಿದು ಆ ದೇಹ ನಿಮಿತ್ಯವಾಗಿ ಪ್ರಪಂಚವ ಮಾಡುವರಲ್ಲದೆ ಇಂದಿಂಗೆಂತು ನಾಳಿಂಗೆಂತು ಎಂದು ಹೆಂಡರು ಮಕ್ಕಳುಪಾದಿಯ ಪಿಡಿದು ಮಾಡುವರೆ ? ಮಾಡುವರಲ್ಲ. ಈ ನಿರ್ಣಯವನು ಶಿವಜ್ಞಾನಶರಣರೇ ಬಲ್ಲರಲ್ಲದೆ, ಈ ಲೋಕದ ಜಡಮತಿಗಳೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ