ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಯಕ್ಕೆ ತನುವೆಂಬ ಹಸ್ತದಲ್ಲಿ ಇಷ್ಟಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಮಧ್ಯಾಹ್ನಕ್ಕೆ ಮನವೆಂಬ ಹಸ್ತದಲ್ಲಿ ಪ್ರಾಣಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಅಸ್ತಮಾನಕ್ಕೆ ಧನವೆಂಬ ಹಸ್ತದಲ್ಲಿ ಭಾವಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ತನು ಮುಟ್ಟದ ಮುನ್ನ, ಮನ ಮುಟ್ಟದ ಮುನ್ನ, ಭಾವ ಮುಟ್ಟದ ಮುನ್ನ, ಲಿಂಗಕ್ಕೆ ದ್ರವ್ಯವ ಸಲಿಸಬಲ್ಲರೆ ಶರಣನೆಂಬೆ. ಕಾಲು ತಾಗದ ಮುನ್ನ, ಕೈ ಮುಟ್ಟದ ಮುನ್ನ ಉದಕವ ತಂದು ಲಿಂಗಕ್ಕೆ ಮಜ್ಜನವ ನೀಡಬಲ್ಲರೆ ಶರಣನೆಂಬೆ. ಹೂವು ನೋಡದ ಮುನ್ನ, ಹಸ್ತದಿಂದ ಮುಟ್ಟದ ಮುನ್ನ, ಹೂವಕೊಯಿದು ಧರಿಸಬಲ್ಲರೆ ಶರಣನೆಂಬೆ. ಈ ಭೇದವ ತಿಳಿಯಬಲ್ಲರೆ ಶಿವಜ್ಞಾನಿಶರಣ ಲಿಂಗಾಂಗಸಂಬಂದ್ಥಿ. ಇಂತೀ ನಿರ್ಣಯವ ತಿಳಿಯದೆ ಶರಣಸತಿ ಲಿಂಗಪತಿ ಎಂಬಾತನ ಲಿಂಗ ಪ್ರೇತಲಿಂಗ, ಅವ ಭೂತಪ್ರಾಣಿ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉದಯಕಾಲದ ಸೂರ್ಯನಂತೆ; ಮುಗಿಲೊಳಗಣ ಕ್ಷಣಿಕದಂತೆ; ಗರ್ಭದೊಳಗಣ ಶಿಶುವಿನಂತೆ; ನೆಲದಮರೆಯ ನಿಧಾನದಂತೆ; ಜ್ಞಾನಕಲಾತ್ಮನಂಗದಿಂದ ಪರವಸ್ತು ನಿದರ್ಶನವಾಗುತ್ತಿರ್ದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉದಯದ ಉದಕವ ನಾಲ್ಕು ಮುಖದ ರಾಜಂಗೆ ಕುಡಿಸಿ ಕೊಂದು, ಮಧ್ಯಾಹ್ನದ ಉದಕವ ವಿಟಪುರುಷನೆಂಬ ರಾಜಂಗೆ ಕುಡಿಸಿ ಕೊಂದು, ಅಸ್ತಮಾನದ ಉದಕವ ಉಭಯ ಸತಿಪುರುಷನೆಂಬ ರಾಜಂಗೆ ಕುಡಿಸಿ ಕೊಂದು, ಮೂರುಕಾಲದುದಕವ ಕುಡಿದವರು ಮರಳಿ ಮನೆಗೆ ಬಾರದೆ ಪೋದರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉಣ್ಣಬೇಕು, ಉಡಬೇಕು, ಇಡಬೇಕು, ಭೋಗಿಸಬೇಕೆಂಬರಯ್ಯ. ಉಂಡದ್ದು ಏನಾಯಿತು ? ಉಟ್ಟಿದ್ದು ಏನಾಯಿತು ? ಇಟ್ಟಿದ್ದು ಏನಾಯಿತು ? ಭೋಗಿಸಿದ್ದು ಏನಾಯಿತು ? ಇಂತೀ ವಿಚಾರವ ಬಲ್ಲವರಾದರೆ ಪೇಳಿರಿ, ಅರಿಯದಿದ್ದರೆ ಕೇಳಿರಿ ಎಲೆ ಮರುಳ ಮನುಜರಿರಾ, ಅದೆಂತೆಂದಡೆ : ಮೃಷ್ಟಾನ್ನವಾಗಲಿ, ಕೃಷ್ಣಾನ್ನವಾಗಲಿ ಆವ ಪದಾರ್ಥವಾದಡೇನು ಉಂಡ ಮೂರು ಘಳಿಗೆಯ ಮೇಲೆ ನರಕವಾಗಿ ತೋರುವದು. ಆ ಅನ್ನ ಹೆಚ್ಚಾಗಿ ಕೊಂಡಡೆ ಹೊಟ್ಟೆ ಉಬ್ಬಿ ಕಮರಡರಕಿ ಬಂದು ಕರಸತ್ತ ಮರುವಿನ ಎಮ್ಮೆಯಂತೆ ಪೃಷ* ಒದರುವದು. ಮತ್ತಂ, ಒಂದು ಹೊನ್ನಾಗಲಿ, ಐದು ಹೊನ್ನಾಗಲಿ, ಹತ್ತು ಹೊನ್ನಾಗಲಿ, ನೂರು ಹೊನ್ನಾಗಲಿ, ಇಂತೀ ಹೊನ್ನು ಮೊದಲಾದ ಹೊನ್ನಿನ ವಸ್ತ್ರ ಶಾಲು ಶಕಲಾತಿ ಮೊದಲಾದ ಆವ ವಸ್ತ್ರವಾದಡೇನು ಉಟ್ಟು ತೊಟ್ಟು ಪೊದ್ದಗಳಿಗೆಯ ಜಾವದಲ್ಲಿ ನಿರಿಬಿದ್ದು ದಡಿ ಮಾಸಿ ಮುಂದೆ ಅವು ವರುಷಾರುತಿಂಗಳಿಗೆ ಸವದು ಹಣ್ಣಹರದು ಹರಿದು ಹೋಗುವವು. ಮತ್ತಂ, ಬೆಳ್ಳಿ ಬಂಗಾರ ಮೊದಲಾದ ವಸ್ತು ಒಡವೆಗಳು ಆವುದಾದರೇನು ಅಂಗದ ಮೇಲೆ ಇಟ್ಟಲ್ಲಿ ದಿನಚರ್ಯ ಮಾಸದ ಕಾಲದಲ್ಲಿ ಸವಸವದು ಸಣ್ಣಾಗಿ ಹೋಗುವದು. ಮತ್ತಂ, ಕನ್ಯಾಕುಮಾರಿ, ಮಿಂಡಿಹೆಣ್ಣು, ತುಂಟರಂಡಿ, ಹಲವಾದ ಸ್ತ್ರೀ ಮೊದಲಾದ ಆವಳಾದರೇನು, ಸಂಗವಾಗದಕ್ಕಿಂತ ಮುನ್ನವೆ ಚಲುವೆ, ಸಂಗವಾದ ಬಳಿಕ ನೀರಿಲ್ಲದ ವೃಕ್ಷ ಮೂಲಸಹವಾಗಿ ಕಿತ್ತು ಚೆಲ್ಲಿದಂತೆ. ಉಭಯ ಸ್ತ್ರೀ ಪುರುಷರ ತನುವು ಜರ್ಜರಿತವಾಗಿ ಸತ್ವಗುಂದಿ ಕೈಕಾಲ ಲಾಡಿ ಸತ್ತು, ಕೈಯ್ಯೂರಿ ಏಳುವರು. ಇಂಥ ಮಾಯಾವಿಲಾಸವ ಶಿವಜ್ಞಾನಿ ಶರಣ ಕಂಡು ಆರೂ ಅರಿಯದೆ ವಿಸರ್ಜಿಸಿ ತನ್ನ ಲಿಂಗದ ನೆನವಿನಲ್ಲಿ ಸ್ವಸ್ಥಿರಚಿತ್ತನಾಗಿರ್ದ ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉಂಡು ಕಾರುವಾತ ಇಸವ ಕಂಡ. ಕಾರಿದ್ದು ಉಂಡು ಉಗುಳದಾತ ಹರಳ ಕಂಡ. ಕಾರಿದ್ದು ಕಂಡು ನುಂಗದೆ ಉಗುಳುವಾತ ಈರಿಸವ ಕಂಡ. ಕಾರಿದ್ದು ಕಂಡು ಉಗುಳದೆ ನುಂಗುವಾತ ಈರಾಳ ಕಂಡ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ