ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೀರಮಾಹೇಶ್ವರರು ಸರ್ವಾಂಗದಲ್ಲಿ ವಿಭೂತಿ-ರುದ್ರಾಕ್ಷಿ ಧಾರಣವಾಗಿ, ಶಿವಲಿಂಗವ ಧರಿಸಿ, ಕಾವಿಲಾಂಛನವ ಪೊದ್ದರೆಂದು ಈ ಮತ್ರ್ಯಲೋಕದ ಜಡಮತಿ ಮರುಳಮಾನವರು ತಾವು ಧರಿಸುತ್ತಿರ್ಪರು. ಇಂತಪ್ಪವರ ನಡತೆ ಎಂತಾಯಿತ್ತೆಂದರೆ, ಗುರುವನರಿಯದೆ ವಿಭೂತಿಧರಿಸುವರೆಲ್ಲ ಬೂದಿಯೊಳಗಣ ಕತ್ತೆಗಳೆಂಬೆ. ತಮ್ಮ ನಿಜವ ತಾವರಿಯದೆ ರುದ್ರಾಕ್ಷಿ ಧರಿಸುವರೆಲ್ಲ ಕಳವು ಮಾಡಿ ಕೈಯ ಕಟ್ಟಿಸಿಕೊಂಡ ಕಳ್ಳರೆಂಬೆ. ಲಿಂಗದ ಸ್ವರೂಪವ ತಿಳಿಯದೆ ಕೊರಳಲ್ಲಿ ಲಿಂಗವ ಕಟ್ಟುವರೆಲ್ಲ ವಾಳೆ ಆವಿಗೆ ಯಳಗುದ್ದಿಯ ಕಟ್ಟುವಂತೆ ಕಟ್ಟುವರೆಂಬೆ. ಜಂಗಮದ ನಿಲವ ಅರಿಯದೆ ಕಾವಿಯ ಲಾಂಛನ ಹೊದ್ದವರೆಲ್ಲ ರಕ್ತಮುಳುಗಿದ ಹಸಿಯ ಚರ್ಮವ ಹೊದ್ದವರೆಂಬೆ. ಇಂತಿದರನುಭಾವವ ತಿಳಿಯದೆ ಈಶ್ವರನ ವೇಷವ ಧರಿಸಿ ಉದರಪೋಷಣಕ್ಕೆ ತಿರುಗುವರೆಲ್ಲ ಜಾತಿಹಾಸ್ಯಗಾರರೆಂಬೆ. ಇಂತಪ್ಪ ವೇಷಧಾರಿಗಳ ಶಿವಸ್ವರೂಪರೆಂದು ಭಾವಿಸುವವರ ಶಿವಸ್ವರೂಪರೆಂದು ಹೇಳುವವರ, ಇಂತಪ್ಪ ಉಭಯ ಮೂಢಾತ್ಮರ ಮುಖದ ಮೇಲೆ ಲೊಟ್ಟಲೊಟ್ಟನೆ ಉಗುಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಘಟ್ಟಿಸಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿರಬೇಕು. ವಿರಕ್ತನಾದಡೆ ಊರನಾಶ್ರಯಿಸಿ ಮನೆ, ಮನೆ ಬ್ಥಿಕ್ಷವ ಬೇಡಬೇಕು. ವಿರಕ್ತನಾದಡೆ ಅರಣ್ಯ ಪರ್ವತ ಕಮಳಸರೋವರ ನದಿಗಳಲ್ಲಿರಬೇಕು. ವಿರಕ್ತನಾದಡೆ ದೇಶಬಿಟ್ಟು ಪರದೇಶಕ್ಕೆ ಹೋಗಬೇಕು. ವಿರಕ್ತನಾದಡೆ ಮಂಡೆಬೋಳಾಗಿ ನೀರ ಬೂದಿಯ ಧರಿಸಿ ಅಂಗದ ಮೇಲೆ ಲಿಂಗವಕಟ್ಟಿ ತಿರುಗಬೇಕು. ಇಂತೀ ಭೇದವ ತಿಳಿಯಬಲ್ಲರೆ ವಿರಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿರಕ್ತನಾದೆನೆಂಬರು, ವಿರಕ್ತನ ಬಗೆಯ ಪೇಳ್ವೆ. ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿ ಇರಲಾಗದು. ವಿರಕ್ತನಾದಡೆ ಊರನಾಶ್ರಯಿಸಿ ಮನೆಮನೆಯ ತಿರುಗಿ ಬ್ಥಿಕ್ಷವ ಬೇಡಲಾಗದು. ವಿರಕ್ತನಾದಡೆ ದೇಶ ಬಿಟ್ಟು ಪರದೇಶಕ್ಕೆ ಹೋಗಲಾಗದು. ವಿರಕ್ತನಾದಡೆ ಅರಣ್ಯಪರ್ವತದಲ್ಲಿರಲಾಗದು. ವಿರಕ್ತನಾದಡೆ ಮೇರುಪರ್ವತದ ಕಮಲಸರೋವರದಲ್ಲಿರಲಾಗದು. ವಿರಕ್ತನಾದಡೆ ಊರೂರು ತಿರುಗಲಾಗದು. ಪುಣ್ಯದೇಶಕ್ಕೆ ಹೋಗಲಾಗದು. ಇಂತಿಲ್ಲದಿರಬಲ್ಲರೆ ವಿರಕ್ತನೆಂಬೆನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವನಾಂತರದಲ್ಲಿ ಕೋಗಿಲೆ ಸ್ವರಗೈದಿತೆಂದು ಕುಂಬ್ಥಿನಿಯ ಮೇಲೆ ಕಾಗಿ ತಾ ಕರೆದಂತೆ, ಅರಸಿ ಮಂಚವನೇರಿದಳೆಂದು ಕಸ ನೀರು ಹೊರುವ ದಾಸಿ ತಾ ಹೊರಸನೇರುವಂತೆ, ಮಹಾರಾಜಕುಮಾರನು ಆನೆಯನೇರಿದನೆಂದು ಮಣ್ಣು ಹೊರುವ ಉಪ್ಪರಿಗನಮಗ ತಾ ಕೋಣ[ನ]ನೇರುವಂತೆ, ಮಹಾವೀರಕುಮಾರ ಮಹಾತೇಜಿಯನೇರಿದನೆಂದು ಮೈಲಿಗೆಯ ತೊಳೆಯುವ ಮಡಿವಾಳನಮಗ ತಾ ಮೋಳಿಗೆಯ ಹೇರುವ ಕತ್ತೆಯನೇರುವಂತೆ, ಬಾಲಹನುಮನು ಲಂಕೆಗೆ ಹಾರಿದನೆಂದು ಒಂದು ಮರುಳಕೋತಿ ತಾ ಪರ್ವತವನೇರಿ ಕೆಳಕ್ಕೆ ಬಿದ್ದಂತೆ, ಮಹಾಮಲೆಯೊಳಗೆ ಒಂದು ಮಹಾವ್ಯಾಘ್ರನು ಘುಡುಘುಡಿಸಿ ಲಂಘಿಸಿ ಒಂದು ಪಶುವಿಗೆ ಹಾರಿತೆಂದು ಮಹಾ ಶೀಗರಿಮೆಳೆಯೊಳಗೊಂದು ಮರುಳ ನರಿ ತಾ ಒದರಿ ಹಲ್ಲು ಕಿಸಿದು ಕಣ್ಣು ತೆರೆದೊಂದು ಇಲಿಗೆ ತಾ ಲಂಘಿಸಿ ಹಾರುವಂತೆ. ಇಂತೀ ದೃಷ್ಟಾಂತದಂತೆ ಆದಿ ಆನಾದಿಯಿಂದತ್ತತ್ತಲಾದ ಘನಮಹಾಲಿಂಗದೊಳಗೆ ಜ್ಯೋತಿ ಜ್ಯೋತಿ ಕೂಡಿದಂತೆ, ಬೆರಸದ ಶಿವಶರಣರು ಹಾಡಿದ ವಚನವ ಶಿವಾಂಶಿಕರಾದ ಸಜ್ಜೀವಾತ್ಮರು ಹಾಡಿ ನಿರ್ವಯಲಾದರೆಂದು ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿರುವ ದೇವ ದಾನವ ಮಾನವರು ಮೊದಲಾದ ಜೀವಾತ್ಮರು ಇಟ್ಟೆಯ ಹಣ್ಣ ನರಿ ತಾ ತಿಂದು ಪಿಟ್ಟೆಸಿಕ್ಕು ಬಾಯಿತೆರೆದು ಒದರುವಂತೆ ಏಕಲಿಂಗ ನಿಷ್ಠಾಪಾರಿಗಳ ವಚನವ ಮಲತ್ರಯವೆಂಬ ಇಟ್ಟೆಯಹಣ್ಣ ತಿಂದು ಪಿಟ್ಟೆಸಿಕ್ಕು ಬಾಯಿ ತೆರೆದು ಬೇನೆಹಾಯ್ದ ಕುರಿಯಂತೆ ಒದರಿ ಒದರಿ ಸತ್ತು ಭವದತ್ತ ಮುಖವಾಗಿ ಹೋದರಲ್ಲದೆ ಇವರು ಲಿಂಗೈಕ್ಯಗಳಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಸ್ತುವೆಂದರೆ ಪರಬ್ರಹ್ಮದ ನಾಮವು. ಅಂತಪ್ಪ ವಸ್ತುವಿನ ಕಳೆ, ಆ ವಸ್ತುವಿನ ನಿಲವು ಪೇಳ್ವೆ ಕೇಳಿರಯ್ಯ. ಅನಂತಹಸ್ತ, ಅನಂತಪಾದ, ಅನಂತಮುಖ, ಅನಂತನಯನ, ಅನಂತಕರಣ, ಅನಂತಾಂಗ, ಅನಂತ ಮಿಂಚಿನಲತೆಪ್ರಕಾಶದಂತೆ, ಅನಂತ ಚಂದ್ರ ಸೂರ್ಯಪ್ರಕಾಶದಂತೆ, ಅನಂತ ವಜ್ರ ವೈಡೂರ್ಯ ಮಾಣಿಕದ ಪ್ರಕಾಶದಂತೆ, ಇಂತೀ ನಿಲವನು, ಇಂತೀ ಪ್ರಕಾಶವನು ಗರ್ಭೀಕರಿಸಿಕೊಂಡು, ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯದಿಂದತ್ತತ್ತಲಾದ ಪರವಸ್ತು ಸ್ವಯಂಭುವಾಗಿರ್ದು ತನ್ನ ವಿನೋದಕ್ಕೆ ತಾನೆ ಶಂಭುರೂಪದಿಂ ಲೀಲಾಮೂರ್ತಿಯಾಗಿ, ಇಂತೀ ನಿಲವನು, ಇಂತೀ ಕಳೆಯನು ಧರಿಸಿ, ಘನಮಹಾಲಿಂಗವಾಗಿರ್ಪನು. ಅಂತಪ್ಪ ಘನಮಹಾಲಿಂಗವನು ಬಹಿಷ್ಕರಿಸಿ, ಶ್ರೀಗುರು ಶಿಷ್ಯನ ಕರಸ್ಥಳಕ್ಕೆ ಇಷ್ಟಲಿಂಗವ ಮಾಡಿ, ತೋರಿ ಕೊಟ್ಟ ಬಳಿಕ ಆ ಲಿಂಗದಲ್ಲಿ ತನ್ನ ತನುವನು ಅಡಗಿಸಿ, ಆ ತನುವಿನಲ್ಲಿ ಆ ಲಿಂಗವ ಸಂಬಂಧಿಸಿ, ಶಿಖಿ-ಕರ್ಪೂರದ ಸಂಯೋಗದ ಹಾಗೆ ಅಂಗಲಿಂಗವೆಂಬುಭಯ ನಾಮ ನಷ್ಟವಾಗಿರ್ಪಾತನೇ ಶಂಭುಸ್ವಯಂಭುಗಿಂದತ್ತತ್ತ ತಾನೆ ನೋಡಾ, ಶಂಭು-ಎಂದಡೆ ಇಷ್ಟಲಿಂಗ, ಸ್ವಯಂಭು ಎಂದೊಡೆ ಪ್ರಾಣಲಿಂಗ, ಉಭಯದಿಂದತ್ತತ್ತವೆಂದೊಡೆ ಭಾವಲಿಂಗ. ಅಂತಪ್ಪ ಭಾವಲಿಂಗಸ್ವರೂಪ ಶರಣ ತಾನೆ ನೋಡಾ ಎಂದನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವೇದವನೋದುವರೆಲ್ಲ ಬಂಜೆಯ ಮಕ್ಕಳು. ಶಾಸ್ತ್ರವನೋದುವರೆಲ್ಲ ಸೂಳೆಯ ಮಕ್ಕಳು. ಪುರಾಣವ ಹೇಳುವರೆಲ್ಲ ಕುಂಟಲಗಿತ್ತಿಯ ಮಕ್ಕಳು. ಆಗಮವ ನೋಡುವರೆಲ್ಲ ಹಾರುತಿಯ ಮಕ್ಕಳು. ತರ್ಕತಂತ್ರಗಳ ನೋಡಿ ಹೇಳುವರೆಲ್ಲ ವೈದ್ಯಗಾರತಿಯ ಮಕ್ಕಳು. ಇಂತೀ ವೇದಾಗಮಶಾಸ್ತ್ರಪುರಾಣ ತರ್ಕತಂತ್ರಂಗಳೆಲ್ಲ ಕೇಳಿ ಆಚರಿಸುವವರೆಲ್ಲ ಡೊಂಬಜಾತಕಾರ್ತಿಯ ಮಕ್ಕಳು. ಇಂತಪ್ಪ ಜಡಮತಿ ವ್ರತಭ್ರಷ್ಟ ಮೂಳಹೊಲೆಯರಿಗೆ ಭವಬಂಧನ ಎಂದೂ ಹಿಂಗದು, ಮುಕ್ತಿದೋರದು. ಇಂತಿವರ ಪುಣ್ಯಕ್ಕೆ ಅಧಿಕಾರಿಗಳಾದ ಬ್ರಹ್ಮ ವಿಷ್ಣು ರುದ್ರ ಮೊದಲಾದ ದೇವತೆಗಳಿಗೆ ಮುನ್ನವೇ ಭವಹಿಂಗದು, ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿಭೂತಿ ರುದ್ರಾಕ್ಷಿಯ ಧರಿಸಿ ಕಾಂಚನಕ್ಕೆ ಕೈ ಒಡ್ಡುವಾತ ಮಹೇಶ್ವರನಲ್ಲ. ಕಾವಿಕಾಷಾಂಬರ ಹೊದ್ದು ಶಿವಲಿಂಗಧಾರಣವಾಗಿ ಮೃಷ್ಟಾನ್ನಕ್ಕೆ ಮನಸೋಲುವಾತ ಮಹೇಶ್ವರನಲ್ಲ. ಕೌಪ ಖಟ್ವಾಂಗವ ಧರಿಸಿ ಪರಸ್ತ್ರೀಯರ ಕಂಡು ಮನಯೆಳಸುವಾತ ಮಹೇಶ್ವರನಲ್ಲ. ಜಂಗಮವ ಜರಿದು ಸ್ಥಾವರ ಪೂಜಿಸುವಾತ ಮಹೇಶ್ವರನಲ್ಲ ಇವರು ನಮ್ಮ ವೀರಮಾಹೇಶ್ವರರ ಸರಿ ಎಂದಡೆ ನಗುವರಯ್ಯಾ ನಿಮ್ಮ ಶರಣರು. ಅದೆಂತೆಂದಡೆ : ಭವಭಾರಿಗಳಾದ ಕಾರಣ. ಇಂತಪ್ಪ ಮಹೇಶ್ವರರ ಕಂಡಡೆ ಮೂಗುಕೊಯ್ದು ಮೂಕಾರ್ತಿಯ ಮದುವಿಯ ಮಾಡಿ ಹೊರಕೇರಿಯಲ್ಲಿರಿಸಿದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವಿನ ಶರಣ.
--------------
ಕಾಡಸಿದ್ಧೇಶ್ವರ
ವಿರಕ್ತನಾದಡೆ ಕುಳ್ಳಬೂದಿಯ ಧರಿಸಲಾಗದು. ವಿರಕ್ತನಾದಡೆ ಮಂಡೆಬೋಳಾಗಿ ಮೈ ಬತ್ತಲೆ ಇರಲಾಗದು. ವಿರಕ್ತನಾದಡೆ ಅಂಗದಮೇಲೆ ಲಿಂಗವಕಟ್ಟಿ ತಿರುಗಲಾಗದು. ವಿರಕ್ತನಾದಡೆ ರಂಡೆಯ ಸಂಗವ ಬಿಟ್ಟು ಕನ್ನೆಯ ಸಂಗವ ಮಾಡದಿರಲಾಗದು. ವಿರಕ್ತನಾದಡೆ ಕನ್ನೆಯ ಸಂಗವಮಾಡಿ ಮುಖವ ಮುಚ್ಚಿ ತಲೆತಗ್ಗಿಸಿ ತಿರುಗಲಾಗದು. ವಿರಕ್ತನಾದಡೆ ಹಿರಿಕಿರಿಯರ ಸಂಗವ ಮಾಡಲಾಗದು. ವಿರಕ್ತನಾದಡೆ ಕಾಂಚಾಣಕ್ಕೆ ಕೈಯನೊಡ್ಡಲಾಗದು. ಇಂತೀ ಬಿಟ್ಟಲ್ಲದೆ ವಿರಕ್ತನಾಗಲರಿಯನು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಂದಿಸಿದಲ್ಲಿ ಶತಕೋಟಿ ಯೋಜನವಾಯಿತ್ತು. ಪೂಜಿಸಿದಲ್ಲಿ ದ್ವಿಶತಕೋಟಿ ಯೋಜನವಾಯಿತ್ತು. ಪಣೆಮುಟ್ಟಿವಂದಿಸಿದಲ್ಲಿ ತ್ರಿಶತಕೋಟಿ ಯೋಜನವಾಯಿತ್ತು. ಸೇವಿಸಿದಲ್ಲಿ ನಾಲ್ಕುಕೋಟಿ ಯೋಜನವಾಯಿತ್ತು. ಕೊಂಡಲ್ಲಿ ಪಂಚಶತಕೋಟಿ ಯೋಜನವಾಯಿತ್ತು. ಇಂತೀ ಐವರಲ್ಲಿದ್ದವರಿಗೆ ಪಂಚವರ್ಣದ ಕಲ್ಲು ಷಡ್ವಿಧಶತಕೋಟಿ ಯೋಜನವಾಯಿತ್ತು. ಇದ ಕಂಡು ನಾ ಬೆರಗಾಗಿ ಮರೆಯಾದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು. ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು. ಶಿವಲಿಂಗವ ಧರಿಸುವ ಕೊರಳಿಗೆ ಬೆಳ್ಳಿಬಂಗಾರದ ತಾಯಿತದಲ್ಲಿ ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ ಗೊಲ್ಲರಾಗಿ ಪುಟ್ಟುವರು. ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ ಹಾವು ಚೋಳಿನ ಮಂತ್ರ ಮೊದಲಾದ ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು. ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು ಮರಳಿ ಕ್ಷೀಣಜಾತಿಯಲ್ಲಿ ಜನಿಸಿ, ನೂರೊಂದು ಕುಲ, ಹದಿನೆಂಟು ಜಾತಿಯವರಿಗೆ ಶಿರಬಾಗಿ ಶರಣುಮಾಡುವರು. ಗುರುಕೊಟ್ಟ ಇಷ್ಟಲಿಂಗದ ಪೂಜೆಯ ಬಿಟ್ಟು, ಶೈವರು ಸ್ಥಾಪಿಸಿದ ನಟ್ಟಕಲ್ಲು ಸ್ಥಾವರ ಶೈವಲಿಂಗವ ಪೂಜಿಸುವವರು, ಮರಳಿ ವಿಪ್ರ ಪಂಚಾಳ ಕುಲದವರು ಮೊದಲಾಗಿ ಅನೇಕ ಭವಿಗಳಲ್ಲಿ ಜನಿಸಿ, ಹುಲಿಗಿ, ಎಲ್ಲಿ, ಬನಶಂಕರಿ, ಕಾಳಿ, ಜಟ್ಟಿಂಗ, ಹಿರಿಯೊಡಿಯ ಲಕ್ಕಿ, ದುರ್ಗಿದೇವಿ ಮೊದಲಾದ ಬೀದಿಬಜಾರದಲ್ಲಿರುವ ಅಧಮ ಕ್ಷೀಣ ದೇವತೆಗಳ ಪೂಜಿಸುವವರು. ಜಂಗಮವ ಕಂಡು ಜರಿದು ಜಂಗುಳಿದೈವಕ್ಕೆ ಜನಿಗಿಯ ಬಿಟ್ಟು, ಒಂದ್ಹೊತ್ತು ಉಪವಾಸ ಮಾಡಿ ಮಡಿಗಳನುಟ್ಟು, ಎಡಿಯ ಕೊಟ್ಟುಂಬುವವರು ಮರಳಿ ಆ ದೇವತೆಗಳ ಸೇವಕರಾಗಿ ಪುಟ್ಟುವರು. ಅನ್ನೋದಕದ ಪೂರ್ವಾಶ್ರಯವನಳಿಯದೆ ಲಿಂಗಕ್ಕೆ ತೋರಿ ಉಂಬವರೆಲ್ಲ ಮರಳಿ ಹೆಂಡಗಾರ ಕಟುಕರಲ್ಲಿ ಜನಿಸಿ ಕಂಡ ಹೆಂಡ ಸೇವಿಸುವರು. ಇಂತಪ್ಪರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿವನಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿರಕ್ತನಾದಡೆ ರಂಡೆಯ ಸಂಗವಮಾಡಿ, ಮೂರುಮೊಲೆ ಹಾಲು ಕುಡಿದು ಕನ್ಯೆಯ ಸಂಗವಮಾಡಿ, ಹೆಂಡವ ಕುಡಿದು ಹೊಲೆಮಾದಿಗ ಸಮಗಾರರಲ್ಲಿ ಕೂಡಿ ಉಂಡು ಕುಲಗೆಟ್ಟು ಶೀಲವಂತನಾದಾತನೇ ವಿರಕ್ತ. ಇಂತಪ್ಪ ವಿರಕ್ತರ ನಿಲುಕಡೆಯ ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು, ಮಡಿವಾಳ ಮಾಚಯ್ಯ, ಮರುಳಶಂಕರಪ್ರಿಯ, ಸಿದ್ಧರಾಮಯ್ಯ ಮೊದಲಾದ ಏಳುನೂರಾಎಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ವೇಷಧಾರಿಗಳೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ