ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಪೂಜೆಯುಳ್ಳನ್ನಕ್ಕ ಲಿಂಗವಿಲ್ಲ. ಲಿಂಗದ ನೆನವು ಉಳ್ಳನ್ನಕ್ಕ ಲಿಂಗವಿಲ್ಲ. ಲಿಂಗವ ಕೂಡಬೇಕು, ಲಿಂಗವನರಿಯಬೇಕೆಂಬನ್ನಕ್ಕ ಲಿಂಗವಿಲ್ಲ. ಲಿಂಗವನರಿಯದಿರ್ದು, ಲಿಂಗವನರಿದು, ಲಿಂಗದಲ್ಲಿ ಬೆರೆದು, ಸುಖಿಯಾದೆನೆಂಬನ್ನಕ್ಕ ಲಿಂಗವಿಲ್ಲ. ನಾ ನನ್ನ ನಿಜವನರಿದು ಪರಿಣಾಮಿಯಾದೆನೆಂಬನ್ನಕ್ಕ ಲಿಂಗವಿಲ್ಲ. ಲಿಂಗೈಕ್ಯನಾದೆನೆಂದು ಪರರ ಮುಂದೆ ಬೀರುವನ್ನಕ್ಕ ಎಂದೆಂದಿಗೂ ಮುನ್ನವೆ ಲಿಂಗವಿಲ್ಲ. ಮತ್ತಂ, ಲಿಂಗವನರಿಯಬೇಕು, ಲಿಂಗವ ಕೊಡಬೇಕು, ಭವಬಂಧವ ಕಡಿಯಬೇಕೆಂದು ದೇಶದೇಶವ ತಿರುಗಿದರಿಲ್ಲ. ಊರಬಿಟ್ಟು ಅರಣ್ಯವ ಸೇರಿದರಿಲ್ಲ, ಹೊನ್ನು ಹೆಣ್ಣು ಮಣ್ಣು ಮೊದಲಾದ ಮನೆಮಾರು ತೊರೆದು ಸನ್ಯಾಸಿಯಾಗಿ ವೈರಾಗ್ಯತೊಟ್ಟು ವನವಾಸಗೈದರಿಲ್ಲ. ಅಶನ ವ್ಯಸನವ ಬಿಟ್ಟು, ಹಸಿವು ತೃಷೆಗಳ ತೊರೆದು, ಪರ್ಣಾಹಾರ ಕಂದಮೂಲ ತಿಂದು, ತನುಮನಧನವನೊಣಗಿಸಿದರಿಲ್ಲ. ಮಾತನಾಡಿದರಿಲ್ಲ, ಮಾತುಬಿಟ್ಟು ಮೌನದಿಂದಿದ್ದರೂ ಇಲ್ಲ. ಕ್ರೀಯ ಬಿಟ್ಟರಿಲ್ಲ, ಕ್ರೀಯ ಮಾಡಿದರಿಲ್ಲ. ಏನು ಮಾಡಿದರೇನು ವ್ಯರ್ಥವಲ್ಲದೆ ಸ್ವಾರ್ಥವಲ್ಲ. ಅದೇನುಕಾರಣವೆಂದರೆ, ತಮ್ಮ ನಿಲವು ತಾವು ಅರಿಯದ ಕಾರಣ. ನಮ್ಮ ಗುಹೇಶ್ವರಲಿಂಗವ ಬೆರೆಸಬೇಕಾದರೆ ಸಕಲಸಂಶಯ ಬಿಟ್ಟು, ಉಪಾದ್ಥಿರಹಿತನಾಗಿ, ಎರಡಳಿದು ಕರಕಮಲದಲ್ಲಿ ಅಡಗಬಲ್ಲರೆ ಪರಶಿವಲಿಂಗದಲ್ಲಿ ಅಚ್ಚಶರಣ ತಾನೇ ಎಂದನಯ್ಯ ನಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲೌಕಿಕದಲ್ಲಿ ಒಬ್ಬ ಪುರುಷಂಗೆ ಸ್ತ್ರೀಯರು ಒಬ್ಬರು, ಇಬ್ಬರು, ಮೂವರು, ನಾಲ್ವರು, ಐವರು ಪರಿಯಂತರ ಸತಿಯರುಂಟು. ಒಬ್ಬ ಸ್ತ್ರೀಯಳಿಗೆ ಐವರು ಪುರುಷರುಂಟೆ? ಇಲ್ಲೆಂಬ ಹಾಗೆ, ಎನಗೆ ಎನ್ನ ತಾಯಿತಂದೆಗಳು ಮೂರಾರು ಗಂಡರ ಮದುವೆ ಮಾಡಿ ಒಗತನ ಮಾಡೆಂದು ಸಕಲಗಣಂಗಳ ಸಾಕ್ಷಿಯಾಗಿ ಎನಗೆ ಕೊಟ್ಟರು. ಆ ನಿರೂಪವ ಕೈಕೊಂಡು ಗಂಡನ ಸಂಗವ ಮಾಡದೆ ಅವರ ಸಂಗವ ಬಿಡದೆ ರಂಗಮಂಟಪದಲ್ಲಿ ಒಬ್ಬನ ಕುಳ್ಳಿರಿಸಿ, ನಡುಮನೆಯಲ್ಲಿ ಒಬ್ಬನ ಕುಳ್ಳಿರಿಸಿ, ಒಬ್ಬನ ಹಿರಿಮನೆಯಲ್ಲಿ ಕುಳ್ಳಿರಿಸಿ, ಷಡ್ವಿಧಸ್ಥಾನಗಳಲ್ಲಿ ಷಡ್ವಿಧರ ಕುಳ್ಳಿರಿಸಿ, ಇಂತೀ ಪುರುಷರ ಕೂಡಿ ಒಗತನವ ಮಾಡಿ, ಇವರಿಗೆ ಸಿಕ್ಕದೆ ಹೊಲೆಯನ ಕೂಡಿ ಕುಲಗೆಟ್ಟು ನಾಯೆತ್ತ ಹೋದೆನೆಂದರಿಯನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗೈಕ್ಯರು ಲಿಂಗೈಕ್ಯರು ಎಂದೆಂಬಿರಿ. ಲಿಂಗೈಕ್ಯರ ನಿಲವ ಆರು ಬಲ್ಲರಯ್ಯ ಎಂದಡೆ, ಅಜಗಣ್ಣತಂದೆ, ಮೋಳಿಗೆ ಮಾರಿತಂದೆ, ಕೂಗಿನ ಮಾರಿತಂದೆ, ನುಲಿಯಚಂದಯ್ಯ, ಹಡಪದ ಅಪ್ಪಣ್ಣ, ಮುಗ್ಧಸಂಗಯ್ಯನವರು, ಘಟ್ಟಿವಾಳತಂದೆ ಮೊದಲಾದ ಪ್ರಮಥಗಣಂಗಳು, ಶಿವಜ್ಞಾನೋದಯವಾದಂಥ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕುರಿಮನುಜರೆತ್ತ ಬಲ್ಲರು ನೋಡೆಂದನಯ್ಯ ನಿಮ್ಮ ಲಿಂಗೈಕ್ಯನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗನಿಷೆ*ಯುಳ್ಳ ವೀರಶೈವ ಮಹೇಶ್ವರರು ಸಕಲಪದಾರ್ಥವ ಲಿಂಗಕ್ಕೆ ಕೊಡದೆ, ಎನ್ನಂಗಕ್ಕೆ ಕೊಂಡಡೆ ವ್ರತಕ್ಕೆ ಭಂಗವೆಂದೆಂಬಿರಯ್ಯಾ ಉದಯಕಾಲದಲ್ಲಿ ಶೌಚಾಚಮನವ ಮಾಡಿ ಅಗ್ಗಣಿಯ ಬಳಸುವಿರಿ, ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಹಳ್ಳ ಕೊಳ್ಳ ಕೆರೆ ಬಾವಿ ನದಿಗಳಿಗೆ ಹೋಗಿ, ಮೃತ್ತಿಕಾದಿಂದ ಹಸ್ತಪಾದಕ್ಕೆ ಮೂರು ವೇಳೆ ಪೂಸಿ ಮೂರು ವೇಳೆ ತೊಳೆವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಆ ಮೇಲೆ ಶೌಚಕ್ಕೆ ಒಯ್ದ ಪಾತ್ರೆಯ ಮೃತ್ತಿಕಾದಿಂದ ತೊಳೆದು, ತಾ ಉಟ್ಟು ತೊಟ್ಟ ಪಾವಡಪಂಕಿಗಳ ನೀರಿನಲ್ಲಿ ಸೆಳೆದು ಗಾಳಿ ಬಿಸಲಾಗ ಹಾಕುವಿರಿ. ಆವಾಗ ಅವ ಲಿಂಗಕ್ಕೆ ಕೊಡುವಿರಿ. ಇಂತೀ ಎಲ್ಲವನು ಶುಚಿ ಮಾಡಿ ಜ್ಯಾಲಿ ಬೊಬ್ಬಲಿ ಉತ್ರಾಣಿಕಡ್ಡಿ ಮೊದಲಾದ ಕಡ್ಡಿಗಳ ತಂದು ಆವಾಗ ತಮ್ಮ ಅಂಗದ ಮೇಲಣ ಲಿಂಗವ ತೆಗೆದು ಅಂಗೈಯಲ್ಲಿ ಪಿಡಿದು, ಆ ಲಿಂಗಕ್ಕೆ ಮಜ್ಜನ ಮಾಡಿ, ಮರಳಿ ತಾ ಮುಖಮಜ್ಜನವ ಮಾಡಿ, ಆ ಮೇಲೆ ತಮ್ಮ ಅಂಗೈಯೊಳಗಿನ ಇಷ್ಟಲಿಂಗಕ್ಕೆ ಆ ಕಡ್ಡಿಯ ತೋರಿ, ತೋರಿದಂಥ ಧಾವನೆಯ ಮಾಡುವರು. ಲಿಂಗದ ಗೊತ್ತು ತಮಗಿ¯್ಲ ; ತಮ್ಮ ಅಂಗದ ಗೊತ್ತು ಲಿಂಗಕ್ಕಿಲ್ಲ . ಇಂತಪ್ಪ ಭಿನ್ನವಿಚಾರವನುಳ್ಳ ಮಂಗಮನುಜರಿಗೆ ಲಿಂಗನೈಷೆ*ಯುಳ್ಳ ವೀರಮಹೇಶ್ವರರೆಂದಡೆ ನಿಮ್ಮ ಶಿವಶರಣರು ಮುಖವೆತ್ತಿ ನೋಡರು. ಮನದೆರೆದು ಮಾತನಾಡರು, ತಮ್ಮೊಳಗೆ ತಾವೇ ಮುಗುಳುನಗೆಯ ನಕ್ಕು ಸುಮ್ಮನಿರುವರು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗಜಂಗಮ ಒಂದೆಂದರಿಯದೆ ಲಿಂಗಜಂಗಮವ ಭಿನ್ನವಿಟ್ಟು ಅರ್ಚಿಸುವರು. ಅದೆಂತೆಂದಡೆ: ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೆ? ಬೀಜ ವೃಕ್ಷಕ್ಕೆ ಭೇದವುಂಟೆ? ಜ್ಯೋತಿ ಪ್ರಭೆಗೆ ಭೇದ ಉಂಟೆ? ಹಾಗೆ ಲಿಂಗಜಂಗಮಕ್ಕೆ ಭೇದವಿಲ್ಲ. ಅದೇನು ಕಾರಣವೆಂದಡೆ: ಲಿಂಗವೇ ಅಂಗ, ಜಂಗಮವೇ ಪ್ರಾಣ. ಲಿಂಗವೇ ಬೀಜ, ಜಂಗಮವೇ ವೃಕ್ಷ. ಲಿಂಗವೇ ಜ್ಯೋತಿ, ಜಂಗಮವೇ ಪ್ರಕಾಶ. ಇಂತೀ ನಿರ್ಣಯವ ತಿಳಿದರೆ ಪ್ರಾಣಲಿಂಗಿ, ತಿಳಿಯದಿದ್ದರೆ ಜಡಲಿಂಗಿಗಳೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲೌಕಿಕ ಪಾರಮಾರ್ಥವೆಂಬುಭಯವನು ಪಿಡಿದು ಆಚರಿಸಿ ಮುಕ್ತನಾಗುವಾತ ಜಾಣನೆಂದೆಂಬರು. ಲೌಕಿಕಕ್ಕೆ ಮುಕ್ತಿದೋರದು, ಪಾರಮಾರ್ಥಕ್ಕೆ ಮುಕ್ತಿದೋರುವದು. ಅದೆಂತೆಂದೊಡೆ: ಲೌಕಿಕವೆಂದಡೆ ಆವುದು, ಪಾರಮಾರ್ಥವೆಂದಡೆ ಆವುದು, ಬಲ್ಲಾದರೆ ಪೇಳಿ, ಇಲ್ಲಾದರೆ ನಮ್ಮ ಪ್ರಭುವಿನ ಶರಣರ ಕೇಳಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲೋಕದ ಗಂಡರ ಪರಿ ಬೇರೆ, ಎನ್ನ ಗಂಡನ ಪರಿ ಬೇರೆ ಕೇಳಿರವ್ವಾ. ಲೋಕದ ಗಂಡರು ಉಪಚಾರವ ಮಾಡಿ ಕರೆದರೆ ಬರುವರು. ಇಲ್ಲದಾದರೆ ಮೋರೆಯ ತೋರರು. ಎನ್ನ ಗಂಡ ಉಪಚಾರವ ಒಲ್ಲ. ಕರೆದರೆ ಎನ್ನ ಬಿಟ್ಟು ಹೋಗುವ. ಎನ್ನ ಒಡಹುಟ್ಟಿದವರ ಬಿಟ್ಟು ಶಾಲಿಯ ಕಳದು ಪೋದೊಡೆ ಎನ್ನ ಸರ್ವಾಂಗವನು ಬಿಗಿದಪ್ಪಿ ಅಗಲದೆ ಇರುವನವ್ವಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲೋಡಿಗೆ ಮೂರು ಹಣವ ಕೊಂಬರು. ತಿಬ್ಬಿಗೆ ಐದು ಹಣವ ಕೊಂಬರು. ಎಳೆಗೆ ಎಂಟಾರು ಹಣವ ಕೊಂಬರು. ಬೆನ್ನಿಗೆ ಹೀಗೆ ಕೊಂಬರು, ಉದರಕ್ಕೆ ಹೀಗೆ ಕೊಂಬರು ನೋಡೆಂದನಯ್ಯಾ ಅಸುಲಿಂಗಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗೈಕ್ಯಂಗೆ ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ. ಷಡೂರ್ಮಿಗಳು ಮೊದಲಾದ ಆವ ಕಾರಣವಿಷಯವು ಇಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗಧಾರಣದ ನಿರ್ಣಯವ ಪೇಳ್ವೆ. ಅದೆಂತೆಂದಡೆ: ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿಯಮಾಡಿ, ಶ್ರೀಗುರುಕಾರುಣ್ಯವ ಹಡದು, ಅಂಗದ ಮೇಲೆ ಲಿಂಗಧಾರಣವಾದ ಶಿವಶರಣನು, ಷಟ್‍ಸ್ಥಾನದಲ್ಲಿ ಲಿಂಗವ ಧರಿಸುತ್ತಿರ್ದ. ಅದೆಂತೆಂದಡೆ: ಕರಸ್ಥಲವೆಂಬ ಪೃಥ್ವಿತತ್ವದಲ್ಲಿ ಆಚಾರಲಿಂಗಸ್ವಾಯತವಮಾಡಿ, ಕಕ್ಷೆಯೆಂಬ ಅಪ್ಪುತತ್ವದಲ್ಲಿ ಗುರುಲಿಂಗಸ್ವಾಯತವಮಾಡಿ, ಹೃದಯವೆಂಬ ತೇಜತತ್ವದಲ್ಲಿ ಶಿವಲಿಂಗಸ್ವಾಯತವಮಾಡಿ, ಕಂಠವೆಂಬ ವಾಯುತತ್ವದಲ್ಲಿ ಜಂಗಮಲಿಂಗಸ್ವಾಯತವಮಾಡಿ, ಉತ್ತಮಾಂಗವೆಂಬಾಕಾಶತತ್ವದಲ್ಲಿ ಪ್ರಸಾದಲಿಂಗಸ್ವಾಯತವಮಾಡಿ, ಅಮಳೋಕ್ಯವೆಂಬ ಆತ್ಮತತ್ವದಲ್ಲಿ ಮಹಾಲಿಂಗಸ್ವಾಯತವಮಾಡಿ, ಇದಲ್ಲದೆ, ಆಪಾದಮಸ್ತಕ ಪರಿಯಂತರ ಸರ್ವಾಂಗಲಿಂಗಮಯವಾಗಿ, ಆವಾವೇಷವ ಧರಿಸದೆ ಲೌಕಿಕಾತ್ಮರಲ್ಲಿ ಹತ್ತರೊಳಗೆ ಹನ್ನೊಂದು ಎಂಬ ಹಾಗೆ ಸರ್ವರಲ್ಲಿಯೂ ಶಿವಶರಣನು ಅವರಂತೆ ಇರ್ಪನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲೌಕಿಕದ ಮಧ್ಯದಲ್ಲಿ ಬಾಗಿಣವನಿಕ್ಕಿದ ಸ್ತ್ರೀಯರ ಪುರುಷರು ಮೃತವಾದಡೆ ಮರಳಿ ಬಾಗಿಣವನಿಕ್ಕಿ ವಿವಾಹವ ಮಾಡುವರು. ವಿವಾಹವಾದ ಸ್ತ್ರೀಯರ ಪುರುಷರು ಮೃತವಾದಡೆ ಮರಳಿ ಹಳದಿಯ ಪೂಸಿ ವಿವಾಹವ ಮಾಡುವರೆ ? ಮಾಡಲಾಗದು. ಅದರೊಳಗೊಬ್ಬ ಪತಿವ್ರತಾಸ್ತ್ರೀಯಳು ಎನ್ನ ಪ್ರಾಣವಲ್ಲಭನು ಮೃತವಾದನೆಂದು ಆ ಪುರುಷಂಗೆ ತನ್ನ ಪ್ರಾಣತ್ಯಾಗ ಮಾಡುವಳು. ಒಬ್ಬರು ಮಂಡಿಬೋಳಾಗಿ ಮೈ ಬತ್ತಲೆಯಿರ್ಪರು. ಒಬ್ಬರು ಮರಳಿ ಒಬ್ಬ ಪುರುಷನ ಕೈ ಹಿಡಿದು ಪೋಗುವದ ಕಂಡು ಬೆರಗಾದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗವಂತರಿಗೆ ಮುಹೂರ್ತವ ಪೇಳಿ ಪಂಚಾಂಗವ ತೋರಬೇಕಲ್ಲದೆ ಭವಿಗಳಿಗೆ ಮುಹೂರ್ತವ ಪೇಳಿ ಪಂಚಾಂಗವ ತೋರಲಾಗದು. ಅದೇನು ಕಾರಣವೆಂದಡೆ: ಕೈಯೊಳಗಿನ ಪಂಚಾಂಗ ಹೃದಯದೊಳಗಣ ಮುಹೂರ್ತ ತನಗೆ ಸಾಧ್ಯವಾಗದಾಗಿ. ಪೇಳಿದರೆ ಪೇಳಬಹುದು. ಹಣವ ಕೊಡವುಳ್ಳವರ ಕಂಡರೆ ಪಂಚಾಂಗದ ಮುಹೂರ್ತವ ನೋಡೆಂದನಯ್ಯಾ ಗೋವಿಂದಭಟ್ಟ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗೈಕ್ಯವಾಗಬೇಕೆಂದು ಅಜ್ಞಾನದೊಳಗೆ ಭಿನ್ನ ಜ್ಞಾನವೆಂಬ ಜ್ಞಾನೋದಯವಾಗಿ, ಶೈವಗುರುಗಳಲ್ಲಿ ಶೈವಲಿಂಗವ ಪಡಕೊಂಡು, ಶೈವಲಿಂಗವ ಪೂಜೆಯ ಮಾಡಿ, ಆ ಶೈವಲಿಂಗವ ಸರ್ವಜೀವಿಗಳ ಹಾಗೆ ಕಣ್ಣಗೊಂಬಿಯ ತಿರುಹಿ, ಅನಿಮಿಷದೃಷ್ಟಿಯೆಂದು ಕಣ್ಣ ಕಿಸಿಕಿಸಿದು ನೋಡಿದಡೆಯು ಕಣ್ಣ ಗುಡ್ಡಿ ಬ್ಯಾನಿಕ್ಕಿ ನೀರು ಸುರಿವುದಲ್ಲದೆ, ಇವರು ಲಿಂಗೈಕ್ಯವಾಗಲರಿಯರು. ಮತ್ತಂ, ಏಕಾಂತಸ್ಥಾನದಲ್ಲಿಗೆ ಹೋಗಿ ಕಾಲ ಮೇಲಕ್ಕೆ ತಲೆಯ ಕೆಳಯಕ್ಕೆ ಮಾಡಿ, ಆ ತಲೆಯ ಕೆಳಗೆ ಅಡಕಿಯಾಗಲೀ, ಹಳ್ಳವಾಗಲೀ ಒಂದರ ಮೇಲೆ ಒಂದು ಇಟ್ಟು ಕಣ್ಣು ಮುಚ್ಚಿ ಕೈ ಮುಗಿದು ಒಂದು ಜಾವ, ಗಳಿಗಿ, ತಾಸುವ್ಯಾಳ್ಯದಲ್ಲಿ ತಪವ ಮಾಡುವವರೆಲ್ಲ ಮರಣವಾದ ಮೇಲೆ ಮರಳಿ ವನಚರದೊಳಗೆ ವೃಕ್ಷದ ಕೊನೆಯಲ್ಲಿ ಅಧೋಮುಖವಾಗಿರುವ ಹಕ್ಕಿಯಾಗಿ ಪುಟ್ಟುವರಲ್ಲದೆ ಇವರು ಲಿಂಗೈಕ್ಯವಾಗಲರಿಯರು. ಇಂತಪ್ಪ ಮೂಢಾತ್ಮರ ಕಂಡು ನಗುತಿರ್ದನಯ್ಯಾ ನಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ