ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂತಪ್ಪ ನಿರ್ಣಯವನು ಸ್ವಾನುಭಾವ ಗುರುಮುಖದಿಂ ತಿಳಿದು ವಿಚಾರಿಸಿಕೊಳ್ಳದೆ, ಬ್ಥಿನ್ನಗುರುವಿನ ಕೈಯಲ್ಲಿ ಉಪದೇಶವ ಹಡದು, ಲಿಂಗವ ಪಡಕೊಂಡು ಗುರುಕಾರುಣ್ಯ ಉಳ್ಳವರೆಂದು ಲೋಕದ ಮುಂದೆ ಬೊಗಳುವ ಮೂಳಹೊಲೆಯರ ಕಟಬಾಯ ಸೀಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಹೊಡೆದಡೆ, ಎನ್ನ ಸಿಟ್ಟು ಮಾಣದು. ಅದೇನು ಕಾರಣವೆಂದಡೆ, ನೀವು ಪಡಕೊಂಡ ಗುರುವಿಗೆ ಗುರುಕಾರುಣ್ಯವಿಲ್ಲ. ಅವನ ಗುರುವಿಗೆ ಮುನ್ನವೇ ಗುರುಕಾರುಣ್ಯವಿಲ್ಲ. ನಿಮಗಿನ್ನಾವ ಕಡೆಯ ಗುರುಕಾರುಣ್ಯವೊ? ಎಲೆ ಮರುಳ ಮಾನವರಿರಾ ಗುರುಕಾರುಣ್ಯವಾದ ಬಳಿಕ ತನು-ಮನ-ಧನದಾಸೆ ಹಿಂದುಳಿದು ಗುರು-ಲಿಂಗ-ಜಂಗಮದಾಶೆ ಮುಂದುಗೊಂಡಿರಬೇಕು. ಗುರುಕಾರುಣ್ಯವಾದಡೆ ಆಣವಮಲ, ಮಾಯಾಮಲ, ಕಾರ್ಮಿಕಮಲಗಳ ಜರಿದು ಇಷ್ಟ-ಪ್ರಾಣ-ಭಾವದಲ್ಲಿ ಭರಿತವಾಗಬೇಕು. ಗುರುಕಾರುಣ್ಯವಾದಡೆ ಲಿಂಗವು ಆರಿಗೂ ತೋರದಿರಬೇಕು. ಇಷ್ಟುಳ್ಳಾತನೆ ಗುರುಕಾರುಣ್ಯ ಉಳ್ಳವನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ತ್ರಿವಿಧಾಚರಣೆಯಲ್ಲಿ ಬ್ಥಿನ್ನಜ್ಞಾನಿಗಳಾಗಿ ಬ್ಥಿನ್ನ ಕ್ರಿಯಗಳಾಚರಿಸಿ, ಬ್ಥಿನ್ನಭಾವ ಮುಂದುಗೊಂಡು ವ್ರತವನಾಚರಿಸುವ ಅಜ್ಞಾನಿಗಳಾದ ಜೀವಾತ್ಮರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ ? ಮತ್ತೆಂತೆಂದೊಡೆ : ಸುಜ್ಞಾನೋದಯವಾಗಿ ಸಕಲಪ್ರಪಂಚ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದುನೋಡಿ, ಅಂತಪ್ಪ ಘನಮಹಾಲಿಂಗ ಇಷ್ಟಬ್ರಹ್ಮವನು ತನುವಿನಲ್ಲಿ ಸ್ವಾಯತವ ಮಾಡಿ, ಆ ತನುಪ್ರಕೃತಿಯನಳಿದು ಆ ಇಷ್ಟಲಿಂಗದ ಸತ್ಕ್ರಿಯವನಾಚರಿಸುವುದೇ ದಿನಚರಿ ವಾರ ಸೋಮವಾರವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮದ ಚಿತ್ಕಲಾಸ್ವರೂಪವಾದ ನಿಷ್ಕಲಪ್ರಾಣಲಿಂಗವನು ಮನದಲ್ಲಿ ಸ್ವಾಯತವಮಾಡಿ, ಆ ಮನೋಪ್ರಕೃತಿಯನಳಿದು ಆ ನಿಷ್ಕಲ ಪ್ರಾಣಲಿಂಗದ ಸುಜ್ಞಾನಕ್ರಿಯಗಳನಾಚರಿಸುವುದೇ ದ್ವಾದಶಮಾಸದೊಳಗೆ ಶ್ರೇಷ್ಠವಾದ ಶ್ರಾವಣಮಾಸದವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮಾನಂದಸ್ವರೂಪವಾದ ನಿರಂಜನಭಾವಲಿಂಗವನು - ಧನವೆಂದಡೆ ಆತ್ಮ. ಅಂತಪ್ಪ ಆತ್ಮನಲ್ಲಿ ಸ್ವಾಯತವ ಮಾಡಿ, ಆ ಆತ್ಮಪ್ರಕೃತಿಯನಳಿದು, ಆ ನಿರಂಜನ ಭಾವಲಿಂಗದ ಮಹಾಜ್ಞಾನಾಚರಣೆಯನಾಚರಿಸುವುದೇ ದ್ವಾದಶಮಾಸ, ದ್ವಾದಶ ಚತುರ್ದಶಿ, ದ್ವಾದಶ ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ ಶಿವರಾತ್ರಿಅಮವಾಸೆಯ ವ್ರತವೆಂಬೆ. ಇಂತೀ ತ್ರಿವಿಧಲಿಂಗ ಮೊದಲಾದ ಚಿದ್ಘನಲಿಂಗವು ತನ್ನ ಸರ್ವಾಂಗದಲ್ಲಿ ಸ್ವಾಯತವುಂಟೆಂದು ಶ್ರೀಗುರುಮುಖದಿಂ ತಿಳಿಯದೆ ಲಿಂಗವಿರಹಿತರಾಗಿ, ಬಾಹ್ಯದ ಕ್ರಿಯೆಗಳ ಪಿಡಿದು ವ್ರತವನಾಚರಿಸುವುದೆಲ್ಲ ಮಾಯಾವಿಲಾಸ ಭವದ ಬಟ್ಟೆ ಎಂದು ತಿಳಿಯದೆ ಭವಭಾರಿಗಳಾಗಿ, ಭವಕ್ಕೆ ಭಾಜನವಾಗಿ ಕೆಟ್ಟು ಮನು ಮುನಿ ದೇವ ದಾನವರು ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ತಮ್ಮ ನಿಲುವು ತಾವಾರೆಂಬುದನ್ನರಿಯದೆ ಇದಿರಿಟ್ಟು ಕೆಟ್ಟುಪೋದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂದಿನ ಚಿಂತೆಯುಳ್ಳವರೆಲ್ಲ ಹಂದಿಗಳು. ನಾಳಿನ ಚಿಂತೆಯುಳ್ಳವರೆಲ್ಲ ನಾಯಿಗಳು. ತನ್ನ ಚಿಂತೆಯುಳ್ಳವರೆಲ್ಲ ಜೋಗಿಗಳು. ನಿನ್ನ ಚಿಂತೆಯುಳ್ಳವರೆಲ್ಲ ಯೋಗಿಗಳು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ವಿಚಾರವ ತಿಳಿಯದೆ ಹತ್ತು ಹೊನ್ನಿಗೆ ಒಂದು ಹೊಲವ ಮಾಡಿ, ಹತ್ತು ಖಂಡಗ ಧಾನ್ಯವ ಬೆಳೆದು, ಹಗೆಯ ಮೆಟ್ಟಿ ಹಗೆಯ ಹಾಕಿ, ಮುಂದೆ ಮಾರಿ ಕಡಬಡ್ಡಿಯ ಕೊಟ್ಟು ತೆಗೆದುಕೊಂಬವರು ಭಕ್ತರೆಂತಪ್ಪರಯ್ಯ ? ಇಂತಪ್ಪವರು ಭಕ್ತರೆಂದರೆ ನಗುವರಯ್ಯ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಪ್ರಣಮಮಂತ್ರಸಂಬಂಧವನು ಸ್ವಾನುಭಾವಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಬೇಕಲ್ಲದೆ, ಭಿನ್ನ ಜ್ಞಾನಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಲಾಗದು. ಅದೇನು ಕಾರಣವೆಂದಡೆ: ದ್ವಾದಶ ರುದ್ರಾಕ್ಷಿಮಾಲೆಯಂ ಮಾಡಿ, ಆ ದ್ವಾದಶ ರುದ್ರಾಕ್ಷಿಗೆ ದ್ವಾದಶಪ್ರಣಮವ ಸಂಬಂಧಿಸಿ, ಶಿಖಾರುದ್ರಾಕ್ಷಿಗೆ ನಿರಂಜನ ಅವಾಚ್ಯಪ್ರಣವವೆಂಬ ಹಕಾರ ಪ್ರಣಮವ ಸಂಬಂಧಿಸಿ, ಉದಯ ಮಧ್ಯಾಹ್ನ ಸಾಯಂಕಾಲವೆಂಬ ತ್ರಿಕಾಲದಲ್ಲಿ ಸ್ನಾನವ ಮಾಡಿ, ಏಕಾಂತಸ್ಥಾನದಲ್ಲಿ ಉತ್ತರವಾಗಲಿ ಪೂರ್ವವಾಗಲಿ ಉಭಯದೊಳಗೆ ಆವುದಾನೊಂದು ದಿಕ್ಕಿಗೆ ಮುಖವಾಗಿ ಶುಭ್ರವಸ್ತ್ರವಾಗಲಿ, ಶುಭ್ರರೋಮಶಾಖೆಯಾಗಲಿ, ಶುಭ್ರ ರೋಮಕಂಬಳಿಯಾಗಲಿ, ತೃಣದಾಸನವಾಗಲಿ, ನಾರಾಸನವಾಗಲಿ, ಇಂತೀ ಪಂಚಾಸನದೊಳಗೆ ಆವುದಾನೊಂದು ಆಸನ ಬಲಿದು, ಮೂರ್ತವ ಮಾಡಿ, ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಆ ರುದ್ರಾಕ್ಷಿಮಾಲೆಗೆ ವಿಭೂತಿ ಅಗ್ಗಣಿ ಪತ್ರಿಯ ಧರಿಸಿ, ತರ್ಜನ್ಯವಾಗಲಿ ಅನಾಮಿಕ ಬೆರಳಾಗಲಿ ಉಭಯದೊಳಗೆ ದಾವುದಾದರೇನು ಒಂದು ಬೆರಳಿಗೆ ರುದ್ರಾಕ್ಷಿಯಂ ಧರಿಸಿ ಅದರೊಳಗೆ ದೀಕ್ಷಾಗುರು ಅಧೋಮುಖವಾಗಿ ರುದ್ರಾಕ್ಷಿಮಾಲೆಯ ಜಪಿಸೆಂದು ಪೇಳ್ವನು. ಮತ್ತಂ, ಕುರುಡರೊಳಗೆ ಮೆಳ್ಳನು ಚಲುವನೆಂಬ ಹಾಗೆ ಅಜ್ಞಾನಿಗಳೊಳಗಣ ಜ್ಞಾನಿಗಳು ಊಧ್ರ್ವಮುಖವಾಗಿ ರುದ್ರಾಕ್ಷಿ ಜಪಿಸೆಂದು ಪೇಳುವರು. ಇಂತಪ್ಪ ಸಂಶಯದಲ್ಲಿ ಮುಳುಗಿ ಮೂರುಲೋಕವು ಭವಭವದಲ್ಲಿ ಎಡೆಯಾಡುವುದು ಕಂಡು, ಶಿವಜ್ಞಾನ ಶರಣನು ವಿಸರ್ಜಿಸಿ ಸ್ವಾನುಭಾವಸೂತ್ರದಿಂ, ದ್ವಾದಶಪ್ರಣಮವ ಪೋಣಿಸಿ, ಅಧೋ ಊಧ್ರ್ವವೆಂಬ ವಿಚಾರವಿಲ್ಲದೆ ದಿವಾರಾತ್ರಿಯಲ್ಲಿ ನಿಮಿಷ ನಿಮಿಷವನಗಲದೆ ಮರಿಯದೆ ಜಪಿಸಿ ಸದ್ಯೋನ್ಮುಕ್ತನಾಗಿ ಶಿವಸುಖದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತೀ ವಿಚಾರವನು ತಿಳಿಯದೆ ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ಹೆಸರಿಟ್ಟು ಇಷ್ಟಲಿಂಗದಲ್ಲಿ ಅವಿಶ್ವಾಸವ ಮಾಡಿ, ಕ್ರಿಯಾಚಾರದಲ್ಲಿ ಅನಾಚಾರಿಯಾಗಿ, ಜೀವಾತ್ಮನೇ ಪರಮಾತ್ಮನೆಂದು ಅಹಂಕರಿಸಿ, ದೇಹದ ಸಕಲಕರಣವಿಷಯಂಗಳಲ್ಲಿ ಮನಮಗ್ನವಾಗಿ ತನ್ನ ನಿಜದ ನಿಲವ ಮರೆದು, ಪರರಿಗೆ ಶಿವಶರಣಂಗಳ ವಚನವ ನೋಡಿ ಶಿವಾನುಭಾವವ ಪೇಳುವ ಕುನ್ನಿ ಮನುಜರ ಕೂಗ್ಯಾಡಿ ಕೂಗ್ಯಾಡಿ ನರಕದಲ್ಲಿಕ್ಕೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಪ್ರಣವಪಂಚಾಕ್ಷರಿ ಮಂತ್ರವನು ಸಾಯದಕಿನ್ನ ಮುನ್ನವೆ ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವ ಮಂತ್ರವನು ಸಂಬಂಧಿಸಿಕೊಳ್ಳಬೇಕಲ್ಲದೆ, ಸತ್ತ ಶವಕ್ಕೆ ಭುಜಪತ್ರದ ಮೇಲೆ ಪ್ರಣಮವ ಬರದು ಆ ದೇಹಕ್ಕೆ ಹಚ್ಚಿದರೆ ಆ ದೇಹವು ಮಂತ್ರದೇಹವಾಗಬಲ್ಲದೆ? ಆಗಲರಿಯದು. ಅದೆಂತೆಂದಡೆ: ಚಿತ್ರಕನು ಕಾಗದದ ಮೇಲೊಂದು ಚಿತ್ರವ ಬರೆದು ಗೋಡೆಗೆ ಹಚ್ಚಿದರೆ ಆ ಗೋಡೆಯು ಚಿತ್ರವಾಗಲರಿಯದು ಎಂಬ ಹಾಗೆ. ಉಭಯವು ಒಂದೇ ಆದ ಕಾರಣ; ಅಂತಪ್ಪ ಮೂಢಾತ್ಮರ ಮೇಳಾಪವ ವಿಸರ್ಜಿಸಿದ ಶಿವಶರಣನು ದೇಹದಲ್ಲಿರುವ ಪರಿಯಂತರದಲ್ಲಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವಮಂತ್ರವನು ಮುಳ್ಳೂರಲಿಕ್ಕೆ ಇಂಬಿಲ್ಲದ ಹಾಗೆ ಸ್ವಾಯತವ ಮಾಡಿಕೊಂಡು ಆ ಮಂತ್ರದಲ್ಲಿ ಲೀಯವಾಗಿ ಪ್ರಪಂಚವನಾಚರಿಸುತ್ತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಲಿಂಗೈಕ್ಯವಹ ಭೇದವ ತಿಳಿಯದೆ ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಪಿಡಿದು, ಮೈಯಲ್ಲಿ ಬೂದಿಯ ಧರಿಸಿ, ಗುಡ್ಡಗಂಹರ ಗುಹೆಗಳಲ್ಲಿ ಕಲ್ಲಪಡಿಯಲ್ಲಿ ಪರ್ಣಶಾಲೆಯ ಬಂಧಿಸಿ, ಅನ್ನ ಉದಕ ನಿದ್ರೆಯ ತೊರೆದು, ಪರ್ಣಾಹಾರವ ಭಕ್ಷಿಸಿ, ತನುವನೊಣಗಿಸಿ, ಮನವ ಬಳಲಿಸಿ, ಆತ್ಮನ ಸತ್ವಗುಂದಿ, ಚಳಿ ಮಳಿ ಗಾಳಿ ಬಿಸಿಲುಗಳಿಂದ, ಕಲ್ಲುಮರದಂತೆ ಕಷ್ಟಬಟ್ಟರೆ, ಇಂತಪ್ಪವರು ಲಿಂಗೈಕ್ಯವಾಗಲರಿಯರು ; ಕಡೆಯಲ್ಲಿ ಭವಭಾರಿಗಳು. ಮತ್ತೆಂತೆಂದಡೆ : ತಮ್ಮ ನಿಲವ ತಾವರಿಯದೆ ಎಲ್ಲಿ ಕುಳಿತರೂ ಇಲ್ಲ ; ಎಲ್ಲಿ ಹೋದಡೆಯೂ ಇಲ್ಲ. ಏನು ಮಾಡಿದಡೆಯು ವ್ಯರ್ಥವಲ್ಲದೆ ಸ್ವಾರ್ಥವಿಲ್ಲ. ಅದೇನು ಕಾರಣವೆಂದಡೆ : ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದು, ಆ ಘನಮಹಾ ಇಷ್ಟಬ್ರಹ್ಮದಲ್ಲಿ ಬೇರೆಯಲ್ಲದೆ ಕೂಡಬಲ್ಲರೆ ಅದೇ ಲಿಂಗೈಕ್ಯ ಎಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಲಿಂಗಾಂಗದ ಸಮರಸವ ತಿಳಿಯದೆ, ಆವ ನೇಮ ವ್ರತವ ಪಿಡಿದು ಆಚರಿಸಿದಡೆ ಮುಂದೆ ಭವಬಂಧನವೇ ಪ್ರಾಪ್ತಿಯಾಗುವದು. ಮತ್ತಂ, ವಾರದಫಲ ಬಯಸುವವರಿಗೆ ಗುರುವಿಲ್ಲ. ಮಾಸದ ಫಲ ಬಯಸುವವರಿಗೆ ಲಿಂಗವಿಲ್ಲ. ಚತುರ್ದಶಿ ಫಲ ಬಯಸುವವರಿಗೆ ಜಂಗಮವಿಲ್ಲ. ಆ ಮಾಸದ ಫಲ ಬಯಸುವವರಿಗೆ ಪಾದೋದಕವಿಲ್ಲ. ಗ್ರಹಣ ಫಲ ಬಯಸುವವರಿಗೆ ಪ್ರಸಾದವಿಲ್ಲ. ಇಂತಪ್ಪ ಫಲವ ಬಯಸಿ ಮಾಡಬೇಕೆಂಬವರಿಗೆ ವಿಭೂತಿ, ರುದ್ರಾಕ್ಷಿ, ಮಂತ್ರ ಮೊದಲಾದ ಅಷ್ಟಾವರಣವು ಇಲ್ಲ. ಇತಂಪ್ಪ ವ್ರತಭ್ರಷ್ಟ ಹೊಲೆಯರಿಗೆ ವೀರಮಹೇಶ್ವರರೆಂದಡೆ ನಿರ್ಮಾಯಪ್ರಭುವಿನ ಶರಣರು ನರಕದಲ್ಲಿಕ್ಕದೆ ಬಿಡುವರೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಇಂತಪ್ಪ ನಿರ್ಣಯವನು ಸ್ವಾನುಭಾವಜ್ಞಾನದಿಂ ತಿಳಿದು ಶಿವಜ್ಞಾನಿಗಳಾದ ಶಿವಶರಣರಿಗೆ, ಅಚ್ಚ ನಿಚ್ಚ ಸಮಯ ಏಕಪ್ರಸಾದಿಗಳೆಂದೆನ್ನಬಹುದು. ಭಕ್ತಾದಿ ಐಕ್ಯಾಂತಮಾದ ಷಟ್‍ಸ್ಥಲಬ್ರಹ್ಮ ಎಂದೆನ್ನಬಹುದು. ಅಂಗಸ್ಥಲ 44, ಲಿಂಗಸ್ಥಲ 57 ಇಂತೀ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದುಸ್ಥಲ ಮೊದಲಾದ ಸರ್ವಾಚಾರಸಂಪನ್ನನೆಂದೆನ್ನಬಹುದು. ಇಂತೀ ಭೇದವನರಿಯದೆ ತಮ್ಮ ತಾವಾರೆಂಬುದು ತಿಳಿಯದಿರ್ದಂಥ ಮತಿಭ್ರಷ್ಟ ಹೊಲೆಮಾದಿಗರಿಗೆ ಅದೆಲ್ಲಿಯದೊ ಗುರುಲಿಂಗಜಂಗಮದ ತೀಥಪ್ರಸಾದಸಂಬಂಧ ? ಅದೆಲ್ಲಿಯದೋ ಅಚ್ಚ ನಿಚ್ಚ ಸಮಯ ಏಕಪ್ರಸಾದದಸಂಬಂಧ ? ಇಂತಪ್ಪ ಗುರುಲಿಂಗಜಂಗಮದ ತೀರ್ಥಪ್ರಸಾದಕ್ಕೆ ಅಂದೇ ಹೊರಗಾಗಿ ಮತ್ತೆ ಮರಳಿ ಇಂದು ನಾವು ಗುರುಲಿಂಗಜಂಗಮದ ತೀರ್ಥಪ್ರಸಾದ ಪ್ರೇಮಿಗಳೆಂದು, ಆ ತ್ರಿಮೂರ್ತಿಗಳ ತಮ್ಮಂಗದಿಂ ಭಿನ್ನವಿಟ್ಟು, ತ್ರಿಕಾಲಂಗಳಲ್ಲಿ ಸ್ನಾನವ ಮಾಡಿ, ಜಪ, ತಪ, ಮಂತ್ರ, ಸ್ತೋತ್ರಗಳಿಂದ ಪಾಡಿ, ಪತ್ರಿ, ಪುಷ್ಪ ಮೊದಲಾದುದರಿಂ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಅರ್ಚಿಸಿ, ನಿತ್ಯನೇಮದಿಂ ಶೀಲ ವ್ರತಾಚಾರಂಗಳಿಂದ ಸಕಲ ಕ್ರಿಯಗಳನಾಚರಿಸಿ ಭಿನ್ನಫಲಪದವ ಪಡದು, ಕಡೆಯಲ್ಲಿ ಎಂ¨ತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಣದಂತೆ ತಿರುಗುವ ಭವಭಾರಿಗಳಾದ ಜೀವಾತ್ಮರಿಗೆ ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಬ್ಬರ ಸಂಗದಲ್ಲಿ ಹುಟ್ಟಲಿಲ್ಲ, ಒಬ್ಬರ ಸಂಗದಲ್ಲಿ ನಿಲ್ಲಲಿಲ್ಲ, ಮೂವರ ಕೂಡ ಮಾತಾಡಲಿಲ್ಲ, ನಾಲ್ವರ ಕೂಡ ನಡೆಯಲಿಲ್ಲ, ಐವರ ಕೂಡ ಉಣಲಿಲ್ಲ. ಕೈ ಕಾಲಿಲ್ಲದ ಕುರುಡಿಯ ಸಂಗದಲ್ಲಿ ಸಂಸಾರವ ಮಾಡುತ್ತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಮೂಢಾತ್ಮರ ಮೇಳಾಪವ ಬಿಟ್ಟು ನೀರಿಲ್ಲದ ಹೊಳೆಯಲ್ಲಿ ಪಂಚವರ್ಣದ ಒಂದು ಕಲ್ಲು ತಂದು ಕಣ್ಣಿಲ್ಲದ ಗೊಲ್ಲನ ಕೈಯಲ್ಲಿ ಕೊಟ್ಟು, ಗುಲ್ಲುಮಾಡದೆ ಆ ಕಲ್ಲು ಪಡಕೊಂಡು ಸಂದುಸಂದಿನಲ್ಲಿ ಬಡಕೊಂಡು ಆ ಕಲ್ಲ ಪೆಟ್ಟು ಆರಿಗೆ ಹೇಳದೆ ಸತ್ತು ಸಮಾಧಿಯ ಕೊಳಲಿಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇರುವ ಮನೆಯ ವಿಸರ್ಜಿಸಿ ನೆರೆಮನೆಯಲ್ಲಿ ಚರಿಸಿ, ಜನ್ಮವ ನೀಗಿ ಸತ್ತನೆಂಬವರಿಗೆ ಜನರು ಮೆಚ್ಚರು. ಅದೇನು ಕಾರಣವೆಂದಡೆ: ನೆರೆಮನೆಗೆ ಪೋಗದೆ, ಇರುವಮನೆ ವಿಸರ್ಜಿಸದೆ ಹುಟ್ಟಿ ಆಚರಿಸಿ ಸತ್ತವರಿಗೆ ಜನರು ಮೆಚ್ಚುವರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಬ್ಬರಿಗೆ ಮೂರು, ಮೂರಿಟ್ಟವರು ಹಲವು ಮನೆಯಲ್ಲಿ ಚರಿಸುವರು. ಒಬ್ಬಂಗೆ ಒಂದು, ಒಂದಿಟ್ಟವರು ಮನೆಯಿಲ್ಲದೆ ಬಯಲಲ್ಲಿ ಚರಿಸುವರು. ಬಯಲ ಹೊತ್ತವರೆ ಅಸುಲಿಂಗಿಗಳು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಶಿವಾಚಾರದ ನಿರ್ಣಯವನರಿಯದೆ ಜಡಭೂಮಿ ಪೃಥ್ವಿಯಲ್ಲಿ ಕಾಡಗಲ್ಲಿನ ಮೇಲೆ ಲಿಂಗಸ್ವರೂಪವ ಬರೆದು, ಜಡಭೂಮಿ ಪೃಥ್ವಿಯಲ್ಲಿ ನಡಿಸಿ, ಮಡ್ಡಜೀವಿಗಳಾದ ಜಡಶವವನ್ನು ನೆಲದಲ್ಲಿ ಹೂಳಿದಡೆ, ಮೂರು ದಿವಸಕ್ಕೆ ಮಣ್ಣಾಗಿ ಹೋಗುವುದಲ್ಲದೆ ಬಯಲಾಗಲರಿಯದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ಮಣ್ಣು ಮಟ್ಟಿಯ ಧರಿಸಿ ಭವಭಾರಕ್ಕೆ ಒಳಗಾದರು ವಿಪ್ರ ಮೊದಲು ಶ್ವಪಚ ಕಡೆಯಾಗಿ ನೋಡಾ. ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ದೇವ-ದಾನವ-ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ಭವಕ್ಕೆ ಭಾಜನವಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಗರುಡ ಗಂಧರ್ವ ಕಿನ್ನರ ಕಿಂಪುರುಷರು ಮೊದಲಾದ ಸಕಲ ಮನುಮುನಿಜನಂಗಳು ಋಷಿಗಳು ಭವಕ್ಕೆ ಗುರಿಯಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಅಂಗಾಲಕಣ್ಣವರು ಮೈಯೆಲ್ಲಕಣ್ಣವರು ಒಂದುತಲೆಯವರು ಎರಡುತಲೆಯವರು ಮೂರುತಲೆಯವರು ನಾಲ್ಕುತಲೆಯವರು ಐದುತಲೆಯವರು ಆರುತಲೆಯವರು ಏಳುತಲೆಯವರು ಎಂಟುತಲೆಯವರು ಒಂಬತ್ತು ತಲೆಯವರು ಹತ್ತುತಲೆಯವರು ಹನ್ನೊಂದುತಲೆಯವರು ನೂರುತಲೆಯವರು ಐದುನೂರುತಲೆಯವರು ಸಾವಿರತಲೆಯವರು ಗಂಗೆಗೌರಿವಲ್ಲಭರು ಸಮಾರುದ್ರರು ನಂದಿವಾಹನರು ಇಂತಪ್ಪವರೆಲ್ಲ ಆದಿಪ್ರಮಥರು ಇವರು ಎತ್ತಲಾನುಕಾಲಕ್ಕೆ ಭವಕ್ಕೆ ಬರುವರು ನೋಡಾ. ಮತ್ತಂ, ಇಂತಪ್ಪ ಶ್ರೀ ವಿಭೂತಿಯನು ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರುಯೆಪ್ಪತ್ತು ಪ್ರಮಥಗಣಂಗಳು ಮೂಳ್ಳೂರಲಿಕ್ಕೆ ಇಂಬಿಲ್ಲದೆ ಸರ್ವಾಂಗದಲ್ಲಿ ಧರಿಸಿ ತ್ರೈಲೋಕ ಮೊದಲಾದ ಚತುರ್ದಶಭುವನವ ತಮ್ಮ ಚರಣದಿಂದ ಸ್ವಯವಮಾಡಿ ಪರಶಿವಲಿಂಗದಲ್ಲಿ ಶಿಖಿಕರ್ಪುರ ಸಂಯೋಗದ ಹಾಗೆ ಬೆರೆದು ನಿರ್ವಯಲಾದರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು. ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ ನೀಡಿದಾತನೇ ಭಕ್ತನೆಂದು ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು. ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ. ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ, ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು ಗುರುವಿಗೆ ತನುವ ನೀಡಬೇಕೆಂದು, ಆ ಗುರುವಿನ ಸೇವಾವೃತ್ತಿಯಿಂದ ತನುವ ದಂಡನೆಯ ಮಾಡುವರು. ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ. ಲಿಂಗಕ್ಕೆ ಮನವ ನೀಡಬೇಕೆಂದು ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ, ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ ಕಣ್ಣು ತೆರೆದು ನೋಡಿದಡೆ ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ? ನಿಲ್ಲಲರಿಯದು. ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತೀ ಪರಿಯಲ್ಲಿ ಮನವ ಬಳಲಿಸುವರು. ಜಂಗಮಕ್ಕೆ ಧನವ ನೀಡಬೇಕೆಂದು ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ ನಾನಾ ಧಾವತಿಯಿಂದ ಗಳಿಸಿ ಸಕಲ ಪದಾರ್ಥವನು ಜಂಗಮಕ್ಕೆ ನೀಡಿ, ಆತ್ಮನ ಬಳಲಿಸುವರು. ಅದೇನು ಕಾರಣವೆಂದಡೆ, ಆ ಜಂಗಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತಿವೆಲ್ಲವು ಹೊರಗಣ ಉಪಚಾರ. ಈ ಹೊರಗಣ ಉಪಚಾರವ ಮಾಡಿದವರಿಗೆ ಪುಣ್ಯಫಲಪ್ರಾಪ್ತಿ ದೊರಕೊಂಬುವದು. ಆ ಪುಣ್ಯಫಲ ತೀರಿದ ಮೇಲೆ ಮರಳಿ ಭವಬಂಧನವೇ ಪ್ರಾಪ್ತಿ. ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ. ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು. ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಬ್ಬರಲ್ಲಿ ಹುಟ್ಟದೆ ಕರದಲ್ಲಿ ಹುಟ್ಟಿ, ಕೂಲಿಯ ಮಾಡದೆ ಸಾಲವ ಬೇಡದೆ ಕಡ ಕೊಡದೆ, ಕೊಟ್ಟು ಮರಳಿ ಬೇಡದೆ, ಕೊಂಡ ಒಡವೆಯ ಕೊಂಡ ಹಾಗೇ ಕೊಟ್ಟು ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಹವ ತಿಳಿಯದೆ, ಮೂರಿಟ್ಟು ಕಮಲವ ಕಾಣದೆ ಬೆಟ್ಟದಲ್ಲಿ ಕೂಡಿ ಹಳ್ಳದಲ್ಲಿ ಬಿದ್ದು ಸಮುದ್ರವ ಕೂಡಿದವರಿಗೆ ಇನ್ನೆತ್ತಣ ಮುಕ್ತಿ ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ ಶ್ವೇತ, ಪೀತ, ಕಪೋತ, ಮಾಂಜಿಷ್ಟ, ಮಾಣಿಕ್ಯವೆಂಬ ಪಂಚವರ್ಣದ ಗೋವಿಗೆ ಭೂಮಿಯ ಸಾರಿಸಿ ಆ ಭೂಮಿಯಲ್ಲಿ ಪಂಚಗೋವುಗಳ ಕಟ್ಟಿ, ಪೂಜೋಪಚಾರ ಮಾಡಿ, ಮಂತ್ರದಿಂದ ಅನ್ನ ಉದಕವ ಹಾಕಿ, ಆ ಗೋವಿನ ಸಗಣಿ ಭೂಮಿಗೆ ಬೀಳದೆ ಅಂತರದಲ್ಲಿಯೇ ಪಿಡಿದು, ಕುಳ್ಳು ಮಾಡಿ ಬಿಸಿಲಿಲ್ಲದೆ ನೆರಳಲ್ಲಿ ಒಣಗಿಸಿ, ಮಂತ್ರದಿಂದ ನೆಲ ಸಾರಿಸಿ, ಮಂತ್ರದಿಂದ ಸುಟ್ಟು ಭಸ್ಮವ ಮಾಡಿ, ಆ ಭಸ್ಮಕ್ಕೆ ಜಂಗಮಾರ್ಚನೆಯ ಮಾಡಿ, ಜಂಗಮದ ಪಾದೋದಕದಿಂದ ಆ ಭಸ್ಮವ ಮಂತ್ರದಿಂದ ಶುದ್ಧಸಂಸ್ಕಾರವ ಮಾಡಿ, ಇಂತಪ್ಪ ವಿಭೂತಿಯ ತ್ರಿಕಾಲದಲ್ಲಿ ಕ್ರೀಯವಿಟ್ಟು ಧರಿಸಿ ಲಿಂಗಾರ್ಚನೆಯ ಮಾಡಿದವರಿಗೆ ಸಕಲ ಕಂಟಕಾದಿಗಳ ಭಯ ಭೀತಿ ನಷ್ಟವಾಗಿ ಚತುರ್ವಿಧಫಲಪದಪ್ರಾಪ್ತಿ ದೊರಕೊಂಬುವದು. ಆ ಫಲಪದ ಪಡೆದವರು ವೃಕ್ಷದ ಮೇಲೆ ಮನೆಯ ಕಟ್ಟಿದವರು ಉಭಯರು ಒಂದೆ. ಅದೆಂತೆಂದಡೆ: ವೃಕ್ಷದ ಮೇಲೆ ಮನೆ ಕಟ್ಟಿದವರು ಆ ವೃಕ್ಷವಿರುವ ಪರ್ಯಂತರವು ಆ ಮನೆಯಲ್ಲಿರುವರು. ಆ ವೃಕ್ಷವು ಮುಪ್ಪಾಗಿ ಅಳಿದುಹೋದಲ್ಲಿ ನೆಲಕ್ಕೆ ಬೀಳುವರಲ್ಲದೆ, ಅಲ್ಲೆ ಸ್ಥಿರವಾಗಿ ನಿಲ್ಲಬಲ್ಲರೆ? ನಿಲ್ಲರೆಂಬ ಹಾಗೆ. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧಫಲಪದವ ಪಡೆದವರು ಆ ಫಲಪದವಿ ಇರುವ ಪರ್ಯಂತರವು ಸ್ಥಿರವಾಗಿ ಇರುವರಲ್ಲದೆ, ಆ ಫಲಪದವಿ ಕಾಲೋಚಿತದ ಮೇಲೇರಿ ಅಳಿದು ನಾಶವಾದ ಮೇಲೆ ಮರಳಿ ಭವಕ್ಕೆ ಬೀಳುವರಲ್ಲದೆ, ಅಲ್ಲಿ ಸ್ಥಿರವಾಗಿ ನಿಲ್ಲಲರಿಯರೆಂದು ನಿಮ್ಮ ಶರಣ ಕಂಡು ಅದು ಮಾಯಾಜಾಲವೆಂದು ತನ್ನ ಪರಮಜ್ಞಾನದಿಂ ಭೇದಿಸಿ ಚಿದ್‍ವಿಭೂತಿಯನೇ ಸರ್ವಾಂಗದಲ್ಲಿ ಧರಿಸಿ, ಶಿಖಿ-ಕರ್ಪುರದ ಸಂಯೋಗದ ಹಾಗೆ ಆ ಚಿದ್ಭಸ್ಮದಲ್ಲಿ ನಿರ್ವಯಲಾದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಲಿಂಗೈಕ್ಯದ ಭೇದವ ತಿಳಿಯದೆ ತಮ್ಮಾತ್ಮನ ಭಿನ್ನಭಾವಮೂಢಮತಿಯಿಂದ ಲಿಂಗೈಕ್ಯವಾಗಬೇಕೆಂದು ಊರಬಿಟ್ಟು ಕಾಂತಾರಕ್ಕೆ ಪೋಗಿ ಗುಡ್ಡ ಗಂಹಾರ ಕಲ್ಲುಪಡಿ ಗುಹೆದಲ್ಲಿ ಅನ್ನ ಉದಕವ ತೊರೆದು, ವಸ್ತ್ರವ ಬಿಟ್ಟು, ಕಂದಮೂಲ ಪರ್ಣಾಹಾರವ ಭಕ್ಷಿಸಿ, ಇರುವ ಮರುಳುಗಳೆಲ್ಲಾ ಮರಣವಾದ ಮೇಲೆ, ಮರಳಿ ವನಚರಪಕ್ಷಿಯಾಗಿ ಗೂಗಿಯಾಗಿ ಪುಟ್ಟುವರಲ್ಲದೆ, ಇವರು ಲಿಂಗೈಕ್ಯವಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪಪ್ರಸಾದದ ಘನವನರಿಯದೆ ಸ್ಥಾವರಕ್ಕೆ ಕೊಟ್ಟ ದ್ರವ್ಯವು ಲಿಂಗಕ್ಕೆ ಸಲ್ಲದೆಂಬರು. ಅದೇನು ಕಾರಣವೆಂದಡೆ: ಸ್ಥಾವರವು ನಿಶ್ಶಬ್ದ, ಲಿಂಗವು ಮಂತ್ರಶಬ್ದ ಎಂಬರಯ್ಯಾ. ಎಲೆ ಮರುಳ ಮಾನವರಿರಾ, ಹದಿನೆಂಟು ಜೀನಸು ಧಾನ್ಯವು ಭೂಮಿಯಲ್ಲಿ ಬೆಳೆಯುವದು. ಆ ಭೂಮಿ ಸ್ಥಾವರವಲ್ಲವೆ? ಆ ಧಾನ್ಯವ ತಂದು ಕಲ್ಲವಳ್ಳಿಗೆ ಹಾಕಿ ಕುಟ್ಟಿ ಬೀಸಿ ಗಡಿಗೆಯೊಳಗೆ ಹಾಕಿ ಪಾಕವ ಮಾಡುವರು. ಆ ಕಲ್ಲು ಒಳ್ಳು ಗಡಿಗೆ ಸ್ಥಾವರವಲ್ಲವೆ? ಅಂತಪ್ಪ ಪಾಕವನು ಗಡಿಗೆಯೊಳಗೆ ಇದ್ದಾಗ ಬೋನವೆಂಬರು. ಹರಿವಾಣಕ್ಕೆ ಬಂದಲ್ಲಿ ನೈವೇದ್ಯವೆಂಬರು. ಜಂಗಮದ ಹಸ್ತಸ್ಪರ್ಶವಾದಾಗಲೇ ಪದಾರ್ಥದ ಪೂರ್ವಾಶ್ರಯವಳಿಯಿತೆಂಬರು. ಜಂಗಮವು ತನ್ನ ಲಿಂಗಕ್ಕೆ ತೋರಿ, ಸಲಿಸಿದ ಮೇಲೆ ಪ್ರಸಾದವಾಯಿತೆಂಬರು. ಇಂತಪ್ಪ ಪ್ರಸಾದಕ್ಕೆ 'ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸಿರೆ'ಂದು ಕೂಳ ಚೆಲ್ಲಿದರೆ ಕಾಗಿ ನೆರೆದು ಒಂದಕ್ಕೊಂದು ಕಚ್ಚಿ ಕಡಿದಾಡುವಂತೆ, ಒಬ್ಬರಿಗೊಬ್ಬರು ನಾ ಮುಂದೆ ನೀ ಮುಂದೆಂದು ಅಡ್ಡಡ್ಡ ಬಿದ್ದು, ಆ ಜಂಗಮ ತಿಂದ ಎಂಜಲ ಪ್ರಸಾದವೆಂದು ಪಡಕೊಂಡು ತಮ್ಮ ತಮ್ಮ ಲಿಂಗಕ್ಕೆ ತೋರಿ ತೋರಿ ಆಧಾರಸ್ಥಾನ ಮೊದಲಾಗಿ ವಿಶುದ್ಧಿಸ್ಥಾನ ಪರಿಯಂತರ ತೊಗಲತಿತ್ತಿ ನೀರ ತುಂಬಿದಂತೆ ತುಂಬಿಕೊಂಡು, ಸತ್ತ ಮೊಲದಂತೆ ಕಣ್ಣ ಬಿಡುವಣ್ಣಗಳು ನಿಮ್ಮ ಶಿವಶರಣರ ಮಹಾಘನಪ್ರಸಾದವ ಈ ಕುರಿಮನುಜರೆತ್ತಬಲ್ಲರಯ್ಯ. ಅದೆಂತೆಂದಡೆ : ಲಿಂಗಕ್ಕೆ ಶಿವಕಳೆಯಿಲ್ಲ, ಭಕ್ತಂಗೆ ಗುರುಕಾರುಣ್ಯವಿಲ್ಲ, ಜಂಗಮಕ್ಕೆ ಪರಮಕಳೆಯಿಲ್ಲ. ಪ್ರಸಾದಕ್ಕೆ ಜಡರೂಪಿಲ್ಲದಾದಕಾರಣ ಹೀಗೆಂಬುದ ತಿಳಿಯದೆ ಮಾಡುವ ಮಾಟವೆಲ್ಲ, ನೀರೊಳಗೆ ಅಗ್ನಿಹೋಮವನಿಕ್ಕಿದಂತೆ ಆಯಿತು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ವಿರಕ್ತನ ನಿಲುಕಡೆಯ ದೇವ ದಾನವ ಮಾನವರು ಮೊದಲಾದ ಸಕಲಜೀವಾತ್ಮರು ತಿಳಿಯದೆ ವೇಷವ ಧರಿಸಿ, ಗ್ರಾಸಕ್ಕೆ ತಿರುಗುವ ಹೇಸಿಗಳ್ಳರ ನಾನೇನೆಂಬೆನಯ್ಯಾ ? ಇಂತಪ್ಪ ವಿರಕ್ತನ ನಿಲುಕಡೆಯ ಬಲ್ಲವರು ಆರೆಂದಡೆ ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯ ಪಡೆದು ಲಿಂಗಾಂಗಸಂಬಂಧಿಗಳಾದ ವೀರಮಾಹೇಶ್ವರರಾಗಲಿ ಅಥವಾ ಭಕ್ತಗಣಂಗಳಾಗಲಿ ಅಲ್ಲದೆ ವಿಪ್ರಮೊದಲು ಶ್ವಪಚಕಡೆಯಾಗಿ ಆವ ಜಾತಿಯಲ್ಲಿ ಆವನಾದಡೇನು ಸುಜ್ಞಾನೋದಯವಾದ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಭಿನ್ನಭಾವಿಗಳಾದ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಕರ್ಮಕಾಂಡಿಗಳಾದ ವೇಷಧಾರಿಗಳೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಇಂತೀ ನಿರ್ಣಯದಲ್ಲಿ ವಿಭೂತಿ ಧರಿಸಲರಿಯದೆ ಕುಳ್ಳು ಕಟ್ಟಿಗೆಯ ಸುಟ್ಟು ಬೂದಿಯ ತಂದು, ನೀರಲ್ಲಿ ಕಲಿಸಿದ ಉಂಡಿ ತಂದು, ಜಂಗಮದ ಪಾದೋದಕದಿಂ ಶುದ್ಧಮಾಡಿ ಧರಿಸಿದಡೆ ಭವ ಹಿಂಗುವುದೇ? ಭವ ಹಿಂಗದು. ವಿಶ್ವಾಸದಿಂದ ಚಿದ್ಭಸ್ಮವೆಂದು ಧರಿಸಿದಡೆ ಪುಣ್ಯದ ಫಲ ಪ್ರಾಪ್ತಿಯಾಗುವುದು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ರುದ್ರಾಕ್ಷಿಯನು ಧರಿಸಿದ ಚೇರಮರಾಯಂಗೆ ಮೋಕ್ಷವಾಯಿತ್ತು. ಈ ರುದ್ರಾಕ್ಷಿಯಿಂದ ಮಹಾದೇವಿಯಕ್ಕಗಳಿಗೆ ಆರೂಢಪದವಾಯಿತ್ತು. ಈ ರುದ್ರಾಕ್ಷಿಯಿಂದ ಸೌಂದರನಂಬೆಣ್ಣಗಳಿಗೆ ನಿಜಲಿಂಗೈಕ್ಯಪದವಾಯಿತ್ತು. ಇಂತಿವರು ಮೊದಲಾಗಿ ಸಕಲಗಣಂಗಳಿಗೆ ರುದ್ರಾಕ್ಷಿಯಿಂದ ಶಿವಪದವಾಯಿತ್ತು. ಇಂತಿದರ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿಕೊಂಡು ಸರ್ವಾಂಗದಲ್ಲಿ ರುದ್ರಾಕ್ಷಿಯನು ಧರಿಸಿ ರುದ್ರಾಕ್ಷಿಮಯವಾಗಿ ಪರಶಿವಲಿಂಗದಲ್ಲಿ ಬೆರೆಯಬೇಕಲ್ಲದೆ ಇಂತಪ್ಪ ವಿಚಾರವನು ತಿಳಿಯದೆ ರುದ್ರಾಕ್ಷಿಧಾರಕರ ಕಂಡು ನೋಡಿ ಧರಿಸುವರೆಲ್ಲಾ ಹುಲಿಯ ಬಣ್ಣಕ್ಕೆ ನರಿಯು ಮೈಸುಟ್ಟುಕೊಂಡು ಸತ್ತಂತಾಯಿತ್ತು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...