ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಳ್ಳೆ ಪದಾರ್ಥಬಂದಡೆ ನೀಡೆಂಬಿರಿ, ಕೀಳುಪದಾರ್ಥಬಂದಡೆ ಬೇಡೆಂಬಿರಿ. ಕಮ್ಮಾದರೆ ನೀಡೆಂಬಿರಿ, ಆ ಪದಾರ್ಥ ಹೆಚ್ಚಾದರೆ ಪ್ರಸಾದ[ವೆಂದು] ಕೈಕೊಂಬಿರಿ. ಕಡ್ಡಿ ಹರಳು ಮೊದಲಾದ ಕಠಿನಪದಾರ್ಥ ಬಂದಡೆ, ಜಿಹ್ವೆಯಲ್ಲಿ ತೊಂಬಲವನಾರಿಸಿಬಿಡುವಿರಿ. ಮಕ್ಷಿಕ ಮೊದಲಾದ ಕ್ರಿಮಿಗಳು ಬಿದ್ದರೆ ಆರೂ ಅರಿಯದ ಹಾಗೆ ತೆಗೆದು ಸಿಪ್ಪದೆ ವರಸದೆ ಕದ್ದು ಚಲ್ಲುವಿರಿ. ಇಂತಪ್ಪ ಮೂಳಹೊಲೆಯರು ಪ್ರಸಾದಿಗಳೆಂದಡೆ ಪರಶಿವಪ್ರಸಾದಿಗಳಾದ ಶಿವಶರಣರು ಊರ ಸೂಳೆಯರ ಹಾಟಹೊಯಿಸಿ ತಲೆಯಬೋಳಿಸಿ ಪಟ್ಟಿಯ ತೆಗೆದು ಅವರ ಎಡಗಾಲಕೆರ್ಪಿನಿಂದ ಘಟ್ಟಿಸಿ ಮೂಡಲದಿಕ್ಕಿಗೆ ಅಟ್ಟಿದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಜಡಿಯ ಬಿಚ್ಚಿ ಸಹಸ್ರ ಹುರಿಗೂಡಿದ ಒಂದು ಹಗ್ಗ. ಮೂರು ಹುರಿಗೂಡಿದ ಒಂದು ಹಗ್ಗ. ಒಂದು ಹುರಿಗೂಡಿದ ಒಂದು ಹಗ್ಗ. ನಾಲ್ಕು ಹುರಿಗೂಡಿದ ಒಂದು ಹಗ್ಗ. ಆರು ಹುರಿಗೂಡಿದ ಒಂದು ಹಗ್ಗ. ಹತ್ತು ಹುರಿಗೂಡಿದ ಒಂದು ಹಗ್ಗ. ದ್ವಾದಶ ಹುರಿಗೂಡಿದ ಒಂದು ಹಗ್ಗ. ಷೋಡಶ ಹುರಿಗೂಡಿದ ಒಂದು ಹಗ್ಗ. ಎರಡು ಹುರಿಗೂಡಿದ ಒಂದು ಹಗ್ಗ. ಇಂತೀ ಹುರಿಗೂಡಿದ ಹಗ್ಗ ಮೊದಲಾದ ಅನೇಕ ಹುರಿಗೂಡಿದ ಒಂದು ಅಖಂಡ ಹಗ್ಗವಮಾಡಿ, ನಾಲ್ಕು ಹುರಿ ಹಗ್ಗದಿಂ ಬ್ರಹ್ಮನ ಕಟ್ಟಿ, ಷಡುಹುರಿ ಹಗ್ಗದಿಂ ವಿಷ್ಣುವಿನ ಕಟ್ಟಿ, ದಶಹುರಿ ಹಗ್ಗದಿಂ ರುದ್ರನ ಕಟ್ಟಿ, ದ್ವಾದಶಹುರಿ ಹಗ್ಗದಿಂ ಈಶ್ವರನ ಕಟ್ಟಿ, ಷೋಡಶಹುರಿ ಹಗ್ಗದಿಂ ಸದಾಶಿವನ ಕಟ್ಟಿ, ದ್ವಿಹುರಿ ಹಗ್ಗದಿಂ ಶಿವನ ಕಟ್ಟಿ, ಸಹಸ್ರ ಹುರಿಹಗ್ಗದಿಂ ಮತ್ರ್ಯದರಸನ ಕಟ್ಟಿ, ಮೂರು ಹುರಿಹಗ್ಗದಿಂ ಸ್ವರ್ಗಲೋಕದರಸನ ಕಟ್ಟಿ, ಒಂದು ಹುರಿಹಗ್ಗದಿಂ ಪಾತಾಳಲೋಕದರಸನ ಕಟ್ಟಿ, ಅನಂತ ಹುರಿಗೂಡಿದ ಅಖಂಡ ಹಗ್ಗದಿಂ ಚತುರ್ದಶಭುವನಯುಕ್ತವಾದ ಬ್ರಹ್ಮಾಂಡವ ಕಟ್ಟಿ, ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. ಈ ಭೇದವ ಬಲ್ಲವರು ಲಿಂಗಸಂಬಂದ್ಥಿಗಳು ಈ ಭೇದವ ತಿಳಿಯದವರು ಅಂಗಸಂಬಂದ್ಥಿಗಳು.
--------------
ಕಾಡಸಿದ್ಧೇಶ್ವರ
ಒಂದನೆಯ ಗಾಳಕ್ಕೆ ಬ್ರಹ್ಮನ ಕೆಡವಿದೆ. ಎರಡನೆಯ ಗಾಳಕ್ಕೆ ವಿಷ್ಣುವಿನ ಕೆಡವಿದೆ. ಮೂರನೆಯ ಗಾಳಕ್ಕೆ ರುದ್ರನ ಕೆಡವಿದೆ. ಮಿಕ್ಕಾದ ಗಾಳದಿಂ ಹಲವು ದೇವತೆಗಳ ಕೆಡವಿದೆ. ಒಂದು ಗಾಳದಿಂದ ನಾ ಸತ್ತು ಕಾಯಕವ ಮಾಡುತ್ತಿರ್ಪೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಕ್ಕಲಿಗನ ಸಂಗದಲ್ಲಿದ್ದವರಿಗೆ ಬಡತನವಿಲ್ಲ. ಕೂಲಿಮನುಜರ ಸಂಗದಲ್ಲಿದ್ದವರಿಗೆ ದ್ರವ್ಯ ತಾನಿಲ್ಲ. ಒಕ್ಕಲಿಗನ ಸಂಗದಲ್ಲಿದ್ದವರಿಗೆ ಸಾವಿಲ್ಲ. ಕೂಲಿಮನುಜರ ಸಂಗದಲ್ಲಿದ್ದವರಿಗೆ ಸಾವುಂಟು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಮ್ಮನದವರಿಗೆ ಹಣವಿಲ್ಲ; ಇಮ್ಮನದವರಿಗೆ ಹಣವುಂಟು. ಇಮ್ಮನ ಸುಟ್ಟು, ಒಮ್ಮನ ನುಂಗಿ ಬಂದವರು ಮರಳಿಬಾರದೆ ಪೋದರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಟಗರು ಮೂರು ಸೊನ್ನಿಗೆ ಹತವಾಗಿ, ಒಂದು ಟಗರು ಆರು ಸೊನ್ನಿಗೆ ಹತವಾಗಿ, ಒಂದು ಟಗರು ಅನೇಕ ಸೊನ್ನಿಗೆ ಹತವಾಗಿ, ನಾ ಸತ್ತು ಟಗರ ಸೊನ್ನೆಯನುಳ್ಳವರು ಅತ್ತಯಿಲ್ಲದವರು ಇತ್ತೆಂದು ಮುಂಡಿಗೆಯ ಹಾಕಿದೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಬ್ಬನ ಮಾತಕೊಟ್ಟು ಬಾಹ್ಯದಲ್ಲಿಟ್ಟು ಕೊಂದೆ. ಒಬ್ಬನ ಗುಪ್ತಭಾಷೆಯಕೊಟ್ಟು ಅಂತರಂಗದಲ್ಲಿಟ್ಟು ಕೊಂದೆ. ಒಬ್ಬನ ಮೌನಭಾಷೆಯಕೊಟ್ಟು ಆಕಾಶದಲ್ಲಿಟ್ಟು ಕೊಂದೆ. ಒಬ್ಬ ಅಧಮನಿಗೆ ತಪ್ಪದೆ ಭಾಷೆಯಕೊಟ್ಟು ಒಳಗಾಗಿ ಹಾದರವನಾಡಿ ಕಾಯಕದಲ್ಲಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಅಚ್ಚಿಗೆ ನಾಲ್ಕು ಗಾಲಿ, ಒಂದೇ ಕೀಲು. ಎಂಟು ಕಂಬದ ಮಂಟಪದಲ್ಲಿ ಮಂಚದಮೇಲೆ ಜಗನ್ಮೋಹಿನಿಯೆಂಬ ಸ್ತ್ರೀ ಇರುವಳು. ಆ ಸ್ತ್ರೀಯಳ ಮಸ್ತಕದ ಮೇಲೊಂದು ನವರತ್ನಯುಕ್ತವಾದ ವಜ್ರದ ಪೆಟ್ಟಿಗೆಯಲ್ಲಿ ಬೆಲೆಯಿಲ್ಲದ ಒಂದು ಮಾಣಿಕ ಇರುವುದು. ಆ ಮಾಣಿಕಕ್ಕೆ ಇಬ್ಬರು ಹೆಣಗಾಡುತಿರ್ಪರು. ಅವರ ಹೆಣಗಾಟವ ಕಂಡು ಅತ್ತಣ ಊರಿಂದ ಒಬ್ಬ ಪುರುಷ ಬಂದು, ನಾಲ್ಕು ಗಾಲಿಯ ತುಂಡಿಸಿ, ಕೀಲನುಚ್ಚಿ, ಅಚ್ಚು ಮುರಿದು, ಅಷ್ಟಕಂಬದ ಮಂಟಪವ ಕೆಡಿಸಿ, ಮಂಚವ ಮೆಟ್ಟಿ, ಆ ಜಗನ್ಮೋಹಿನಿಯೆಂಬ ಸ್ತ್ರೀಯಳ ಕೈಕಾಲುತಲೆಹೊಡೆದು ಆ ಪೆಟ್ಟಿಗೆಯೊಳಗಣ ಮಾಣಿಕವ ತಕ್ಕೊಳ್ಳಬಲ್ಲರೆ ಆತನೇ ಅಸುಲಿಂಗಸಂಬಂಧಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಳ್ಳೆಯವರ ಸಂಗವ ಮಾಡಿ ಅವರ ಬಾಯ ತಾಂಬೂಲವ ಸೇವಿಸದೆ, ಭವಿಗಳ ಸಂಗವ ಮಾಡಿ ಅವರ ಬಾಯ ತಾಂಬೂಲವ ಸೇವಿಸಿ ಕಾಯಕದಲ್ಲಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಕೊಟ್ಟು ಎರಡು ಕೊಂಡು, ಎರಡು ಕೊಟ್ಟು ಮೂರು ಕೊಂಡು, ಎರಡು ತಲೆಯುಳ್ಳ ಸ್ತ್ರೀಸಂಗದಲ್ಲಿ ಲೋಕಾದಿಲೋಕಂಗಳು ಸಂಸಾರಮಾಡುತ್ತಿರ್ಪವು. ಇಂತಪ್ಪ ಸಂಸಾರಮಾಡುವನಲ್ಲ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಬ್ಬ ಪುರುಷಂಗೆ ಮೂವರು ಸಸ್ತ್ರೀಯರು. ಒಬ್ಬ ಸ್ತ್ರೀಗೆ ಮೂವರು ಪುರುಷರು. ಒಬ್ಬ ಕಂಗಳ, ಒಬ್ಬ ಮೂಕ, ಒಬ್ಬ ಹೆಳವ, ಇಂತೀ ಮೂವರ ಗಂಡರ ಆಳಾಪದಿಂದಿರಲು ಅಷ್ಟರಲ್ಲಿಯೇ ಪೂರ್ವದ ಪುರುಷನು ಬಂದು ಕಂಗಳಪುರುಷನ ಮತ್ರ್ಯದಲ್ಲಿಟ್ಟು, ಮೂಕ ಪುರುಷನ ಸ್ವರ್ಗದಲ್ಲಿಟ್ಟು, ಹೆಳವ ಪುರುಷನ ಪಾತಾಳದಲ್ಲಿಟ್ಟು, ಶಾಲಿಕುಪ್ಪುಸ ಕಳೆದು ಎನ್ನ ಅಪ್ಪಲೊಡನೆ ಅವನಂಗದಲ್ಲಿ ಅಡಗಿ ಎತ್ತ ಹೋದೆನೆಂಬುದ ಪತಿವ್ರತಾಸ್ತ್ರೀಯರು ಬಲ್ಲರಲ್ಲದೆ ಹಾದರಮಾಡುವ ಸ್ತ್ರೀಯರು ಅರಿಯರು ನೋಡಾ! ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಕ್ಷೇತ್ರಕ್ಕೆ ಹೋಗಿ ಬ್ರಹ್ಮಲೋಕವ ದಾನವ ಕೊಟ್ಟೆ. ಎರಡನೆಯ ಕ್ಷೇತ್ರಕ್ಕೆ ಹೋಗಿ ವಿಷ್ಣುಲೋಕವ ದಾನವ ಕೊಟ್ಟೆ, ಮೂರನೆಯ ಕ್ಷೇತ್ರಕ್ಕೆ ಹೋಗಿ ರುದ್ರಲೋಕವ ದಾನವ ಕೊಟ್ಟೆ, ನಾಲ್ಕನೆಯ ಕ್ಷೇತ್ರಕ್ಕೆ ಹೋಗಿ ಈಶ್ವರಲೋಕವ ದಾನವ ಕೊಟ್ಟೆ. ಐದನೆಯ ಕ್ಷೇತ್ರಕ್ಕೆ ಹೋಗಿ ಸದಾಶಿವಲೋಕವ ದಾನವ ಕೊಟ್ಟೆ, ಆರನೆಯ ಕ್ಷೇತ್ರಕ್ಕೆ ಹೋಗಿ ಶಿವಲೋಕವ ದಾನವ ಕೊಟ್ಟೆ, ಏಳನೆಯ ಕ್ಷೇತ್ರಕ್ಕೆ ಹೋಗಿ ಮತ್ರ್ಯಲೋಕವ ದಾನವ ಕೊಟ್ಟೆ. ಎಂಟನೆಯ ಕ್ಷೇತ್ರಕ್ಕೆ ಹೋಗಿ ಸ್ವರ್ಗಲೋಕವ ದಾನವ ಕೊಟ್ಟೆ, ಒಂ¨ತ್ತನೆಯ ಕ್ಷೇತ್ರಕ್ಕೆ ಹೋಗಿ ಪಾತಾಳಲೋಕವ ದಾನವ ಕೊಟ್ಟೆ, ದಶ ಕ್ಷೇತ್ರಕ್ಕೆ ಹೋಗಿ ಚತುರ್ದಶಭುವನ ದಾನವ ಕೊಟ್ಟೆ. ನಾ ಸತ್ತು ಬದುಕಿದವರ ಹೊತ್ತು ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಮ್ಮನದ ಯೋನಿಯಲ್ಲಿ ಪುಟ್ಟಿದವರು ಮನೆಯೊಳಗೆ ಕಂಡು ಲಯವಾದರು ಹೊರಗೆ ಕಾಣಲಿಲ್ಲ. ಇಮ್ಮನದ ಯೋನಿಯಲ್ಲಿ ಹುಟ್ಟಿದವರು ಮನೆಯೊಳಗೆ ಕಾಣದೆ ಬಾಹ್ಯದಲ್ಲಿ ಕಂಡು ಲಯವಾಗಿ ಪೋದರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ಜನ್ಮದಲ್ಲಿ ನಿನ್ನ ಕಲ್ಲದೇವರ ಮಾಡಿ ಪೂಜಿಸಿ, ಜೋಗಿ, ಜಂಗಮ, ಗೊರವನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ಕಟ್ಟಿಗೆದೇವರ ಮಾಡಿ ಪೂಜಿಸಿ ಬಡಗಿ ಕಂಬಾರನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ಮಣ್ಣುದೇವರ ಮಾಡಿ ಪೂಜಿಸಿ, ಬಾರಿಕ ತಳವಾರನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ನೀರದೇವರ ಮಾಡಿ ಪೂಜಿಸಿ, ವಿಪ್ರನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ಬೆಂಕಿಯ ದೇವರೆಂದು ಮಾಡಿ ಪೂಜಿಸಿ, ವಿಪ್ರಾಚಾರ್ಯನಾಗಿ ಪುಟ್ಟಿದೆ, ಇಂತಿವೆಲ್ಲವನು ನೀನೆಂದು ಭಾವಿಸಿ ಪೂಜಿಸುವಲ್ಲಿ, ಇಂತೀ ಭವದಲ್ಲಿ ನಾನು ಪುಟ್ಟಿದೆ. ಇಂತೀ ಜಡಸ್ವರೂಪ ನೀನಲ್ಲ, ನೀನು ನಿರಾಳ ನಿಃಶೂನ್ಯ ನಿರಾಕಾರನೆಂದು ಎನ್ನ ಕರಸ್ಥಲದಲ್ಲಿ ಅರಿದು ಪೂಜಿಸಿ ಸಕಲಕುಲದವರಿಗೆ ಹೊರತಾಗಿ ಕುಲಗೆಟ್ಟು ನಾನಾವಜನ್ಮಕ್ಕೆ ಹೊದೆನೆಂದರಿಯೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ