ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸತ್ತವರು ಸಾಯದವರ ನುಂಗಿ, ಸಾಯದವರು ಸತ್ತವರ ನುಂಗಿ, ಈ ಉಭಯರು ಎತ್ತಹೋದರೆಂಬುದ ನೀ ಬಲ್ಲೆ, ನಾನರಿಯೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಾಯದ ಪಶುವಿಂಗೆ ಒಂದು ಗೂಟ, ಸಾಯುವ ಪಶುವಿಂಗೆ ಮೂರು ಗೂಟ, ಸತ್ತ ಪಶುವಿಂಗೆ ಆರು ಗೂಟ. ಸತ್ತ ಕರವ ಹೊತ್ತವರಿಗೆ ಅನೇಕ ಗೂಟ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸವುಳಭೂಮಿಯ ಉಳ್ಳಿ ಮೂಲಂಗಿ ಬಳ್ಳೊಳ್ಳಿ ಸಬ್ಬಸಗಿ ನಾರುಗಡ್ಡೆಯ ತಿಂದವರಿಗೆ ರೋಗ ಪ್ರಾಪ್ತಿಯಾಗುವದು. ಕೆಂಪುಭೂಮಿಯ ಉಳ್ಳಿ ಮೂಲಂಗಿ ಬಳ್ಳೊಳ್ಳಿ ಸಬ್ಬಸಗಿ ನಾರುಗಡ್ಡೆಯ ತಿಂಬವರಿಗೆ ರೋಗ ಪರಿಹಾರವಾಗುವದು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸತ್ತವರ ಮನೆಗೆ ಸಾಯದವರು ಪೋಗಿ ತಮ್ಮ ಅಳುವ ಮಾಣಿಸಿ, ಸತ್ತವನ ಸತಿಯಳ ಸಂಗವ ಮಾಡಿ ಕುಲಗೆಟ್ಟು ಹೊಲೆಗೇರಿಯ ಪೊಕ್ಕು ಎತ್ತ ಹೋದರೆಂಬುದು ತಿಳಿಯಬಲ್ಲರೆ ಅಚ್ಚಶರಣನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸೂಜಿಯ ಹಿನ್ನಿಯ ಹರಿದು ದಾರವ ಪೋಣಿಸಿ, ಮೂರುಮೂಲಿ ಆರೇಣಿಗೆ ಹಲವು ವರ್ಣದ ಮಣಿಗಳ ಹೊಲಿದು ಸಂದುಸಂದಿಗೆ ಯಂತ್ರವ ಹೊಲಿದು ಕಾಂತಿಯ ಮಾಡಿ ಕೈಕಾಲು ಕಣ್ಣು ಕರುಳಿಲ್ಲದ ಪರದೇಶದ ಪರದೇಶಿಯಾದ ಶಿಶುವಿಂಗೆ ತೊಡಿಸುವರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಾಣಿಯ ಮೇಲೆ ಶ್ರೀಗಂಧವನಿಟ್ಟು, ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ? ಜಡಚಕ್ರದೊಳಗೆ ಧಾನ್ಯವ ನೀಡಿ ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ ? ಗಾಣಕ್ಕೆ ಎಳ್ಳು ನೀಡಿ, ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ? ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ ಹೊಟ್ಟೆ ತುಂಬಿ ಹಸುವಡಗಬಲ್ಲುದೆ ? ಹಾಗೆ ಜಡರೂಪವಾದ ಲಿಂಗವ ಜಡಮತಿಗಳಾದ ಗುರುಮುಖದಿಂ ಪಡಕೊಂಡು ಅಂಗದ ಮೇಲೆ ಇಷ್ಟಲಿಂಗವೆಂದು ಧರಿಸಿ ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ, ಆ ಲಿಂಗವು ಮುಕ್ತಿಯ ಕೊಡಲರಿಯದು. ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು 'ಮರ್ದನಂ ಗುಣವರ್ಧನಂ' ಎಂದುದಾಗಿ, ಇಂತೀ ಎಲ್ಲವು ಮರ್ದನವಿಲ್ಲದೆ ಸ್ವಧರ್ಮಗುಣ ತೋರಲರಿಯವು. ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು, ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ ವಿಶ್ವಾಸ ಬಲಿದು ತುಂಬಿ ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂದ್ಥಿಯಾಗಿ ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು, ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಾಲ ಮಾಡಲಿಲ್ಲ, ಕಡ ಕೊಡಲಿಲ್ಲ, ಊರನಾಶ್ರೈಸಲಿಲ್ಲ, ಕಾಂತಾರಕ್ಕೆ ಹೋಗಲಿಲ್ಲ. ನೆಲವಿಲ್ಲದ ಭೂಮಿಯಲ್ಲಿ ಬೀಜವಿಲ್ಲದೆ ಬಿತ್ತಲು, ಅದು ಅಂಕುರಿಸಿ ಎರಡಾಯಿತ್ತು, ಶಾಖೆ ಮೂರಾಯಿತ್ತು, ತಳಿರು ಆರಾಯಿತ್ತು, ಕುಸುಮ ಮೂವತ್ತಾರಾಯಿತ್ತು ಫಲ ಇನ್ನೂರಾ ಹದಿನಾರಾಯಿತ್ತು, ಹಣ್ಣು ವಿಶ್ವಪರಿಪೂರ್ಣವಾಯಿತ್ತು, ಆ ಹಣ್ಣನು ಕಣ್ಣಿಲ್ಲದೆ ನೋಡಿ, ಕಾಲಿಲ್ಲದೆ ನಡೆದು, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಪರಿಣಾಮಿಸಿ, ಜಿಹ್ವೆ ಇಲ್ಲದೆ ರುಚಿಸಿ ಸುಖಿಯಾಗಿರ್ದು ಸಂಸಾರವ ಮಾಡುತಿರ್ದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸೌಟೆಣ್ಣೆಯ ಪ್ರೇಮಿಗಳು ಘನ ಎಣ್ಣೆಯ ಪ್ರೇಮವನೆತ್ತಬಲ್ಲರು? ಕೊಡದೆಣ್ಣೆಯ ಧಾರೆಯ ಕೊಳ್ಳದವರು ಕೊಡ ಎಣ್ಣೆಯ ಕೊಂಡೇವೆಂಬರು. ಇಂತಪ್ಪ ವ್ಯವಹಾರಿಗಳ ಕೂಡ ಗಾಣಿಗೇರ ಕಲ್ಲಪ್ಪನು ಮಾತಾಡನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಕಲ ಲೋಕಾದಿಲೋಕಂಗಳು ಉದಯ, ಮಧ್ಯಾಹ್ನ, ಸಾಯಂಕಾಲ ಪರಿಯಂತರವು ಒಡಲೋಪಾಧಿಯ ಚಿಂತೆಯಿಂದ ತಾಪತ್ರಯಾಗ್ನಿಯಲ್ಲಿ ಬೇಯುತ್ತಿರ್ಪರು ನೋಡಾ. ಅದೆಂತೆಂದೊಡೆ: ಉದಯಕಾಲಕ್ಕೆ ಹೋರಾಟದ ಚಿಂತೆ, ಮಧ್ಯಾಹ್ನಕಾಲಕ್ಕೆ ಅಶನದ ಚಿಂತೆ, ಸಾಯಂಕಾಲಕ್ಕೆ ವ್ಯಸನದ ಚಿಂತೆ, ಇಂತೀ ತ್ರಿವಿಧ ವ್ಯಸನದಲ್ಲಿ ಮನಮಗ್ನವಾದ ಪ್ರಾಣಿಗಳಿಗೆ ಶಿವಜ್ಞಾನವೆಲ್ಲಿಯದಯ್ಯಾ? ಇಂದಿನ ಚಿಂತೆಯ ಮಾಡುವರೆಲ್ಲ ಹಂದಿಗಳು. ನಾಳಿನ ಚಿಂತೆಯ ಮಾಡುವರೆಲ್ಲ ನಾಯಿಗಳು. ಅದೆಂತೆಂದೊಡೆ: ನೀ ಹುಟ್ಟದ ಮುನ್ನವೆ ತಾಯಿಗರ್ಭದಲ್ಲಿ ನವಮಾಸ ಪರಿಯಂತರವು ನಿನಗೆ ಆಹಾರವ ಕೊಟ್ಟವರಾರು ಹೇಳಾ ಮರುಳೆ? ಅಖಂಡತಂಡ ಶಿಲೆಯೊಳಗಿನ ಮಂಡೂಕಕ್ಕೆ ಆಹಾರವ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಕಟ್ಟಿಗಿಯೊಳಗಿನ ಭೃಂಗಕ್ಕೆ ಮಲೆಗಳ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಇರುವೆ ಮೊದಲು ಆನೆ ಕಡೆ ಎಂಬತ್ತು ನಾಲ್ಕುಲಕ್ಷ ಜೀವರಾಶಿಯ ಗರ್ಭದಲ್ಲಿ ಹುಟ್ಟಿ ಹುಟ್ಟಿ ಬರುವಲ್ಲಿ ನಿನಗೆ ಆಹಾರವ ಕೊಟ್ಟು ರಕ್ಷಣವ ಮಾಡಿದವರಾರು ಹೇಳಾ ಮರುಳೆ? ಇಂತೀ ಸರ್ವಲೋಕಾದಿಲೋಕಂಗಳಿಗೆ ಶಿವನೇ ಕರ್ತನೆಂದು ತಿಳಿದು ನೋಡಾ ಮರುಳೆ! ಇಂತಪ್ಪ ಯುಕ್ತಿವಿಚಾರದ ಸುಜ್ಞಾನವಿಲ್ಲದೆ ಬರಿಯ ಒಡಲ ಚಿಂತೆಯಲ್ಲಿ ಹೊತ್ತುಗಳೆದು ಸತ್ತು ಹೋಗುವ ಹೇಸಿ ಮೂಳರ ಕಂಡು ನಾಚಿದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ||4
--------------
ಕಾಡಸಿದ್ಧೇಶ್ವರ
ಸೆಳವಿನ ಮಡದ ಮತ್ಸ್ಯವು ವ್ಯಾಧಂಗೆ ವಶ. ತಿರುಗಣಿಯ ಮಡುವಿನ ಮತ್ಸ್ಯವು ವ್ಯಾಧಂಗೆ ವಶವಾಗದೆ ಪೋದವು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸ್ಥಾವರ ಜಂಗಮವೆಂದೆಂಬಿರಿ. ಸ್ಥಾವರವು ನಿಃಶಬ್ದ, ಜಂಗಮವು ಮಂತ್ರಶಬ್ದ. ಒಂದೆಂದಾಗದಯ್ಯ, ಒಂದಾಗಲರಿಯದು. ಅದೆಂತೆಂದಡೆ: ತಿಳಿದರೆ ಒಂದು, ತಿಳಿಯದಿದ್ದರೆ ಎರಡು. ಅದೇನು ಕಾರಣವೆಂದರೆ- ಸ್ಥಾವರವಾವುದು ಜಂಗಮವಾವುದು ತಿಳಿಯದ ಕಾರಣ. ಸ್ಥಾವರವೇ ಇಷ್ಟಲಿಂಗ, ಜಂಗಮವೇ ಪ್ರಾಣಲಿಂಗ. ಅಂತಪ್ಪ ಪ್ರಾಣಲಿಂಗವನೇ ಶ್ರೀಗುರು ಬಹಿಷ್ಕರಿಸಿ ಕರಸ್ಥಲಕ್ಕೆ ಇಷ್ಟಬ್ರಹ್ಮವ ಮಾಡಿಕೊಟ್ಟನೆಂದು ತಿಳಿಯಬಲ್ಲರೆ ಸ್ಥಾವರ ಜಂಗಮ ಒಂದೇ. ಈ ನಿರ್ಣಯವ ತಿಳಿಯದಿದ್ದರೆ ಸ್ಥಾವರ ಜಂಗಮ ಒಂದೇ ಅಲ್ಲವು. ಉಭಯದ ಭೇದವ ನಿಮ್ಮ ಶರಣರೇ ಬಲ್ಲರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಹಸ್ರಮುಖ ರುದ್ರಾಕ್ಷಿಯನು ಬ್ರಹ್ಮನ ಸಂತತಿಗೆ ಕಟ್ಟಿದೆ. ಮೂರುಮುಖದ ರುದ್ರಾಕ್ಷಿಯನು ವಿಷ್ಣುವಿನ ಸಂತತಿಗೆ ಕಟ್ಟಿದೆ. ಏಕಮುಖದ ರುದ್ರಾಕ್ಷಿಯನು ರುದ್ರನ ಸಂತತಿಗೆ ಕಟ್ಟಿದೆ. ಐದು ಬಾಗಿಲಿಗೆ ಐದು ರುದ್ರಾಕ್ಷಿಯನು ಕಟ್ಟಿದೆ. ಒಂದು ರುದ್ರಾಕ್ಷಿಯನು ಒಳಹೊರಗೆ ಕಟ್ಟಿ ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಹೀದರು ಕೊಟ್ಟ ಖುರಾನವ ಮುಂದಿಟ್ಟು ಅರ್ಚಿಸಿ ನಮಾಜ ಮಾಡುವರು. ಮಾಟವಳಿದು ಕೂಟ ನಿಂದು ಶಬ್ದವಡಗಿ ಬಯಲ ಖುದಾನಾಗಿರಬಲ್ಲಡೆ ಸಹೀದರೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸತ್ತವರ ಸಮಾಧಿಯಲ್ಲಿ ತಡಿಗಿಯ ಕಟ್ಟಿಸಿ, ಹಿರಿಯರ ಗದ್ದುಗೆಯನ್ನು ಪೂಜಿಸುವವರು ಮಹೇಶ್ವರರಲ್ಲ. ಕಟ್ಟಿಗೆ ಹಾವಿಗೆ, ಬೆಳ್ಳಿಯ ಕಟ್ಟಿಗೆ ಜಡಿಗಟ್ಟಿದ ಕೂದಲು ಹಿರಿಯರೆಂದು ಪೂಜಿಸುವವರು ಮಹೇಶ್ವರರಲ್ಲ. ಸತ್ತ ತಾಯಿತಂದೆಗಳ ಹೆಸರು ತಮ್ಮ ಪುತ್ರರಿಗೆ ಇಟ್ಟು, ಪರರಿಗೆ ತಮ್ಮ ಹಿರಿಯರು ಗಳಿಸಿದ ಮಠಮಾನ್ಯವೆಂದು ಹೋರಾಡಿ ತಗಾದಿ ತಳ್ಳಿ ತಡಿಯ ಮಾಡಿ ಸರಕಾರಕ್ಕೆ ಹೊನ್ನ ಕೊಟ್ಟವರು ಮಹೇಶ್ವರರಲ್ಲ. ಇಂತಿವರು ಮಹೇಶ್ವರರೆಂದಡೆ ನಿಮ್ಮ ಶರಣರು ತಮ್ಮ ಪಾದರಕ್ಷೆಯಿಂದ ಹೊಡೆಯದೆ ಮಾಣ್ಬರೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಮಾಧಿ ಸಮಾಧಿ ಎಂಬರಯ್ಯಾ, ಸಮಾಧಿಯ ಬಗೆಯ ಪೇಳ್ವೆ. ಅದೆಂತೆಂದಡೆ: ಪಂಚಭೂತಮಿಶ್ರವಾದ ದೇಹವೆಂಬುವುದೆ ಸಮಾಧಿ. ಅಂತಪ್ಪ ದೇಹದ ಪೃಥ್ವಿತತ್ವದಲ್ಲಿ ನಕಾರಪ್ರಣವ ಸ್ವಾಯತ. ಅಪ್ಪುತತ್ವದಲ್ಲಿ ಮಕಾರಪ್ರಣವ ಸ್ವಾಯತ. ತೇಜತತ್ವದಲ್ಲಿ ಶಿಕಾರಪ್ರಣವ ಸ್ವಾಯತ. ವಾಯುತತ್ವದಲ್ಲಿ ವಕಾರಪ್ರಣವ ಸ್ವಾಯತ. ಆಕಾಶತತ್ವದಲ್ಲಿ ಯಕಾರಪ್ರಣವ ಸ್ವಾಯತ. ಆತ್ಮದಲ್ಲಿ ಓಂಕಾರಪ್ರಣವ ಸ್ವಾಯತ. ಮತ್ತಂ, ಬಲಪಾದದಲ್ಲಿ ನಕಾರ, ಎಡಪಾದದಲ್ಲಿ ಮಕಾರ, ಮಧ್ಯನಾಭಿಸ್ಥಾನದಲ್ಲಿ ಶಿಕಾರ, ಬಲಹಸ್ತದಲ್ಲಿ ವಕಾರ, ಎಡಹಸ್ತದಲ್ಲಿ ಯಕಾರ, ಮಸ್ತಕದಲ್ಲಿ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಸ್ಥೂಲತನುವಿನಲ್ಲಿ ಬಕಾರಪ್ರಣವ ಸ್ವಾಯತ. ಸೂಕ್ಷ್ಮತನುವಿನಲ್ಲಿ ನಕಾರಪ್ರಣವ ಸ್ವಾಯತ. ಕಾರಣತನುವಿನಲ್ಲಿ ವಕಾರಪ್ರಣವ ಸ್ವಾಯತ. ಮತ್ತಂ, ವಿಶ್ವನಲ್ಲಿ ಅಕಾರಪ್ರಣವಸಂಬಂಧ. ತೈಜಸನಲ್ಲಿ ಉಕಾರಪ್ರಣವಸಂಬಂಧ. ಪ್ರಾಜ್ಞದಲ್ಲಿ ಮಕಾರಪ್ರಣವಸಂಬಂಧ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಆಧಾರದಲ್ಲಿ ನಕಾರ, ಸ್ವಾಧಿಷಾ*ನದಲ್ಲಿ ಮಕಾರ, ಮಣಿಪೂರಕದಲ್ಲಿ ಶಿಕಾರ, ಅನಾಹತದಲ್ಲಿ ವಕಾರ, ವಿಶುದ್ಧಿಯಲ್ಲಿ ಯಕಾರ, ಆಜ್ಞೆಯಲ್ಲಿ ಓಂಕಾರ, ಬ್ರಹ್ಮರಂಧ್ರದಲ್ಲಿ ಬಕಾರ, ಅಕಾರ, ವಕಾರ, ಶಿಖೆಯಲ್ಲಿ ಕ್ಷಕಾರ, ಉಕಾರ, ಸಕಾರ. ಪಶ್ಚಿಮದಲ್ಲಿ ಹಕಾರ, ಮಕಾರ, ವಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದಲ್ಲಿ ಓಂಕಾರ, ಎಡಭಾಗದಲ್ಲಿ ಮಕಾರ, ಮುಂಭಾಗದಲ್ಲಿ ಅಕಾರ, ಹಿಂಭಾಗದಲ್ಲಿ ಮಕಾರ, ಊಧ್ರ್ವಭಾಗದಲ್ಲಿ ಹಕಾರ. ಮತ್ತಂ, ಬಲಹಸ್ತದ ಮಧ್ಯದಲ್ಲಿ ಓಂಕಾರ, ಹೆಬ್ಬೆರಳಿನಲ್ಲಿ ಯಕಾರ, ಉಳಿದ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಗಳು. ಆ ಹಸ್ತದ ಮೇಲುಭಾಗದಲ್ಲಿ ಅಕಾರ, ಮುಂಗೈಯಲಿ ಬಕಾರ, ಮೊಳಕೈಯಲ್ಲಿ ಉಕಾರ, ರಟ್ಟೆಯಲ್ಲಿ ಸಕಾರ, ಭುಜದಲ್ಲಿ ಮಕಾರ, ಹೆಗಲಲ್ಲಿ ವಕಾರ, ಇಂತೀ ಪರಿಯಲ್ಲಿ ಉಭಯ ಹಸ್ತ ತೋಳಿನಲ್ಲಿ ಹಿಂದೆ ಹೇಳಿದ ಪಂಚಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಉಭಯ ತಳಪಾದದಲ್ಲಿ ಓಂಕಾರ, ಉಭಯ ಪಾದಾಂಗುಷ*ದಲ್ಲಿ ಯಕಾರ, ಉಭಯ ನಾಲ್ಕು ಬೆರಳಿನಲ್ಲಿ ನಾಲ್ಕು ಪ್ರಣವಂಗಳು. ಉಭಯ ಪಾದದ ಮೇಲುಭಾಗದಲ್ಲಿ ಅಕಾರ, ಉಭಯ ಪಾದದ ಬಾಹ್ಯ ಹರಡಿನಲ್ಲಿ ಉಕಾರ, ಉಭಯ ಪಾದದಂತರ ಹರಡಿನಲ್ಲಿ ಬಕಾರ. ಉಭಯ ಪಾದದ ಹಿಂಬಡದಲ್ಲಿ ಮಕಾರ, ಉಭಯ ಕಣಕಾಲಲ್ಲಿ ಸಕಾರ, ಮೊಳಕಾಲಲ್ಲಿ ಪಕಾರ, ಉಭಯ ಕಿರಿದೊಡೆಯಲ್ಲಿ ಅಕಾರ. ಹಿರಿದೊಡೆಯಲ್ಲಿ ಉಕಾರ, ಉಭಯಾಂಗದಲ್ಲಿ ಮಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೆ ಸಮಾಧಿ. ಮತ್ತಂ, ಉಭಯ ಬರಕಿಯಲ್ಲಿ ಓಂ ನಮಃಶಿವಾಯ ಎಂಬ ಮೂಲ ಷಡಕ್ಷರ. ಉಭಯ ಮೊಲೆಯಲ್ಲಿ ಓಂಕಾರ, ಉಭಯ ಬಗಲಲ್ಲಿ ಬಕಾರ, ಕಕ್ಷೆಯಲ್ಲಿ ಅಕಾರ, ಹೃದಯದಲ್ಲಿ ಉಕಾರ, ಕಂಠದಲ್ಲಿ ಮಕಾರ, ಹೆಡಕಿನಲ್ಲಿ ಸಕಾರ, ಹೆಡಕಿನ ಎಡಬಲದಲ್ಲಿ ವಕಾರ, ಉಭಯ ಕರ್ಣದ ಮಧ್ಯದಲ್ಲಿ ಓಂಕಾರ, ಹಾಲಿಯಲ್ಲಿ ಯಕಾರ, ಕಿರಿಹಾಲಿಯಲ್ಲಿ ವಕಾರ, ಕರ್ಣದ ಊಧ್ರ್ವಭಾಗದಲ್ಲಿ ಶಿಕಾರ, ಬಲ ಎಡಭಾಗದಲ್ಲಿ ಮಕಾರ, ಕರ್ಣದ ಹಿಂಭಾಗದಲ್ಲಿ ನಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣವಸಂಬಂಧವಾದುದೇ ಸಮಾಧಿ. ಮತ್ತಂ, ಬಲಭಾಗದ ನಯನದಲ್ಲಿ ಅಕಾರ, ಬಕಾರ. ಎಡಭಾಗದ ನಯನದಲ್ಲಿ ಉಕಾರ, ಸಕಾರ, ಉಭಯ ನಯನದ ಮಧ್ಯದಲ್ಲಿ ಮಕಾರ, ವಕಾರ, ಉಭಯ ಗಲ್ಲದಲ್ಲಿ ಓಂಕಾರ. ನಾಶಿಕದ ತುದಿಯಲ್ಲಿ ಮಕಾರ. ಬಲಭಾಗದ ಹೊಳ್ಳಿಯಲ್ಲಿ ಅಕಾರ, ಎಡಭಾಗದ ಹೊಳ್ಳಿಯಲ್ಲಿ ಉಕಾರ. ಮೇಲುಭಾಗದ ತುಟಿಯಲ್ಲಿ ಬಕಾರ. ಕೆಳಭಾಗದ ತುಟಿಯಲ್ಲಿ ಸಕಾರ. ಉಭಯಮಧ್ಯದಲ್ಲಿ ವಕಾರ. ನಾಲಿಗೆಯಲ್ಲಿ ಓಂ ನಮಃಶಿವಾಯವೆಂಬ ಮೂಲ ಷಡಕ್ಷರ. ದಂತಪಂಕ್ತಿಗಳೇ ಹಂ ಕ್ಷಂ ಎಂಬ ಶೂನ್ಯಪ್ರಣಮಂಗಳು. ಚರ್ಮವೆ ವಕಾರ, ಅಸ್ತಿಯೇ ಮಕಾರ, ಮಾಂಸವೇ ಶಿಕಾರ, ಮಜ್ಜವೇ ವಕಾರ, ರಕ್ತವೇ ಯಕಾರ, ಪ್ರಾಣವೇ ಓಂಕಾರ. ರೇಚಕ ಪೂರಕ ಕುಂಭಕವೆಂಬ ಸ್ವರದಲ್ಲಿ ಅಕಾರ, ಉಕಾರ, ಮಕಾರ. ಮತ್ತಂ, ಅಪಾದಮಸ್ತಕದ ಪರಿಯಂತರವು ರೋಮನಾಳಂಗಳಲ್ಲಿ ನಿರಂಜನ ಮೂಲಪ್ರಣಮವೆಂಬ ಓಂಕಾರ. ಇಂತೀ ಸ್ಥಾನಂಗಳಲ್ಲಿ ಪ್ರಣಮಸಂಬಂಧವಾದುದೇ ಸಮಾಧಿ. ಇಂತೀ ಕ್ರಮದಲ್ಲಿ ಕೀಯವಿಟ್ಟು ಬಾಹ್ಯದಲ್ಲಿ ದೇಹಕ್ಕೆ ಪ್ರಣಮಸಂಬಂಧಿಸಿದಡೆಯು ಆ ದೇಹವು ಭೂಮಿಯ ಮರೆಯಲ್ಲಿ ಒಂದು ಕ್ಷಣಕ್ಕೆ ನಿರ್ವಯಲಾಗುವುದು. ಇಂತೀ ಕ್ರಮದಲ್ಲಿ ಅಂತರಂಗದಲ್ಲಿ ಪ್ರಾಣಕ್ಕೆ ಪ್ರಣಮಸಂಬಂಧವ ಸುಜ್ಞಾನ ಕ್ರಿಯೆಗಳಿಂದ ಸಂಬಂಧಿಸಿದಡೆಯು ದೇಹದಲ್ಲಿರಲಿಕ್ಕೆಯು ಜೀವನ್ಮುಕ್ತನಾಗುವನು. ಅದೆಂತೆಂದಡೆ: ಚಿದಂಶಿಕನಾದ ಜ್ಞಾನಕಲಾತ್ಮಂಗೆ ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿ ಮಾಡಿ, ಶ್ರೀಗುರುಕಾರುಣ್ಯವ ಹಡೆದು ಅಂಗದ ಮೇಲೆ ಇಷ್ಟಲಿಂಗವು ಧಾರಣವಾದಾಕ್ಷಣವೇ ಹಿಂದೆ ಹೇಳಿದ ನಿರ್ಣಯದಲ್ಲಿ ಸರ್ವಾಂಗದಲ್ಲಿ ಮೂಲಪ್ರಣಮಾದಿ ಕ್ಷಕಾರ ಪ್ರಣಮಾಂತ್ಯವಾದ ಸಕಲನಿಃಷ್ಕಲಪ್ರಣಮಂಗಳು ಬೆಲ್ಲದ ಕುಳ್ಳಿಗೆ ಇರುವೆ ಮುತ್ತಿದಂತೆ ತನ್ನಿಂದ ತಾನೆ ಸಂಬಂಧವಾಗಿ ಜೀವನ್ಮುಕ್ತನಾಗಿ ಲೀಲೆಯಲ್ಲಿರುವ ಪರಿಯಂತರದಲ್ಲಿ ಉದಕದೊಳಗೆ ಇರ್ಪ ತಾವರೆಯಂತೆ ನಿರ್ಲೇಪನಾಗಿ ಪ್ರಪಂಚವನಾಚರಿಸುವನು. ಈ ಭೇದವನು ಶಿವಜ್ಞಾನಿ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಾಯದವರು ಸತ್ತವರ ಸುದ್ದಿಯ ಕೇಳಿ, ಇದ್ದವರಿಗೆ ಹೇಳಿ ಸಾಯೆಂಬರು. ಹೇಳದವರು ಸಾಯದೆ, ಕೇಳದವರು ಸಾಯದೆ, ಇವರ ಸುದ್ದಿಯ ನೆರೆಮನೆಯವರು ಕೇಳಿ ಸತ್ತುಹೊದರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸರ್ಪನ ಧ್ವನಿಗೆ ಆಕಾಶದ ಟೆಂಗಿನುದಕ ಉಕ್ಕಿ ಭೂಮಿಗೆ ಬೀಳಲು, ಭೂಮಿ ಕರಗಿ, ಸಮುದ್ರ ಬತ್ತಿ, ಸತ್ತವರು ಬದುಕಿದವರ ಹೊತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸತ್ತವರ ಸಂಗ ಸಾಯದವರು ಮಾಡಿ ಸತ್ತು ಪೋದರು. ಸಾಯದವರ ಸಂಗ ಸತ್ತವರು ಮಾಡಿ ಸಾಯದವರು ಆಗಲಿಲ್ಲ ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸೆಳವು ನೆಲೆಯಿಲ್ಲದ ಮಡುವಿನ ಏಡಿ ಮಂಡೂಕವ ಬಲೆಯಿಲ್ಲದೆ ಪಿಡಿದು, ಕರುಳನೆಲ್ಲವ ತೆಗೆದು ಮಾರಿ, ಮಾರಾಂಕನ ಕಾಯಕವ ಮಾಡುತ್ತಿರ್ಪನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸೂರ್ಯವರ್ಣದ ಚಾಪಿ ಬ್ರಹ್ಮಲೋಕವ ನುಂಗಿತ್ತು. ಚಂದ್ರವರ್ಣದ ಚಾಪಿ ವಿಷ್ಣುಲೋಕವ ನುಂಗಿತ್ತು. ಅಗ್ನಿವರ್ಣದ ಚಾಪಿ ರುದ್ರಲೋಕವ ನುಂಗಿತ್ತು. ಉಳಿದ ವರ್ಣದ ಚಾಪಿ ಹಲವು ಲೋಕ ಬ್ರಹ್ಮಾಂಡವ ನುಂಗಿತ್ತು. ನುಂಗದೆ ಹಿಂಗದಿರಬಲ್ಲಡೆ ಕಾಯಕದಲ್ಲಿರಬೇಕು. ಹಿಂಗಿದಡೆ ಭಂಗ, ಅಂತಕನವರ ಮನೆವಾಸ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸೆರೆಯ ಕುಡಿದವ ಗುರು ಎಂಬೆನೆ? ಎನ್ನೆನಯ್ಯಾ. ಹೆಂಡವ ಕುಡಿದವ ಲಿಂಗಾಂಗಿ ಎಂಬೆನೆ? ಎನ್ನೆನಯ್ಯಾ. ಕಂಡವ ತಿಂದವ ಚರಲಿಂಗವೆಂಬೆನೆ? ಎನ್ನೆನಯ್ಯಾ. ಈ ಭೇದವ ತಿಳಿಯಬಲ್ಲರೆ ಭಕ್ತರೆಂಬೆ, ತಿಳಿಯದಿದ್ದರೆ ಭವಭಾರಿಗಳೆಂಬೆ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸತ್ತವರ ಸುದ್ದಿ ಇದ್ದವರು ಕೇಳಿ ಸಾಯಬೇಕೆಂಬರು. ಸತ್ತವರ ಸುದ್ದಿ ಹೊಲೆಯರು ಬಲ್ಲರು ಉತ್ತಮರರಿಯರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸುಟ್ಟ ಸುಣ್ಣವ ಹಸಿಮಡಕೆಗೆ ತುಂಬದೆ, ಹಸಿಗೋಡೆಗೆ ಸಾರಿಸದೆ, ಬಿಸಿಮಡಕೆಗೆ ತುಂಬದೆ, ಬಿಸಿಲಿಗೆ ಒಣಗಿಸಿ ಬಿಸಿನೀರೊಳಗೆ ಕಲಿಸಿ, ಒಣಗೋಡೆಗೆ ಸಾರಿಸುವರು. ಬಯಸಿ ಹಿಂಗದವರು ಈ ಸುಣ್ಣವ ಕೊಳ್ಳಿರಿ. ಇಲ್ಲಾದರೆ ಇರುವಿರಿ ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸತ್ತ ಹೆಣದ ಮುಂದೆ ಅತ್ತವರು ಅತ್ತಲೇ ಸುರಚಾಪದಂತೆ ಇರ್ಪರು. ಅಳದವರು ಬಹುಕಾಲಿರುವರು. ಆ ಹೆಣದ ಮುಂದೆ ಮಾಯವಿಲ್ಲದೆ, ಅತ್ತವರು ಆರಿಗೂ ಸಿಕ್ಕದೆ ಎತ್ತ ಹೋದರೆಂಬುದ ಬಡವರು ಬಲ್ಲರು, ಬಲ್ಲಿದರು ಅರಿಯರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಂದಿ ಕೇರಿ ಗೊಂದಿ ಪಕ್ಷಿಯ ಕೋಡು ಕಿತ್ತು, ಕಣ್ಣು ಕಾಲು ಹಲ್ಲು ತೆಗೆದು, ರೆಕ್ಕೆಯ ಮುರಿದು, ಹೊಟ್ಟೆಯ ಬಿಟ್ಟು, ತಲೆಯ ಬೇಯಿಸಿ ಪಾಕವ ಮಾಡಿ, ಡೊಂಕಮೋರೆಯ ಹನುಮಗೆ ಕೊಟ್ಟು, ನಾನುಂಡು ಕಾಯಕವ ಮಾಡಿದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...