ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿ ಅನಾದಿ ಸುರಾಳ ನಿರಾಳ ಶೂನ್ಯ ನಿಃಶೂನ್ಯದಿಂದತ್ತತ್ತಲಾದ ಘನಮಹಾಲಿಂಗವೆಂಬ ಪರಬ್ರಹ್ಮವು, ಗುರುಕರುಣದಿಂ ಬಹಿಷ್ಕರಿಸಿ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬರಲು ಆ ಲಿಂಗದಲ್ಲಿ ಕೃಷ್ಣಾ ಭಾಗೀರಥಿ ಮೊದಲಾದ ಅನೇಕ ತೀರ್ಥಂಗಳು, ಕಾಶಿರಾಮೇಶ್ವರ ಮೊದಲಾದ ಅನೇಕ ಕ್ಷೇತ್ರಂಗಳು, ಹಿಮಾಚಲ ಶ್ರೀಶೈಲಪರ್ವತ ಮೊದಲಾದ ಅನೇಕ ಪುಣ್ಯಶೈಲಂಗಳುಂಟೆಂದು, ತನ್ನ ಸ್ವಾನುಭಾವಮೂಲಜ್ಞಾನದಿಂ ತಿಳಿದು, ಸಕಲ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಮನವ ಮಹಾಘನದಲ್ಲಿರಿಸಿ ಇರಬಲ್ಲಡೆ ಆತನೇ ಅನಾದಿಸದ್ವೀರಮಹೇಶ್ವರನ ಭಕ್ತನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆನೆ ಕುದುರೆ ಒಂಟೆ ನಾಯಿ ಕೋತಿಗಳು ಮೊದಲಾದ ಪಂಚವಾಹನಾರೂಢರಾಗಿ ಚರಿಸುವವರಿಗೆ ಸುಂಕ. ಮನೆಯ ಕೆಡಿಸಿ ಮನೆಯ ಕಟ್ಟುವವರಿಗೆ ಸುಂಕ. ಹಾದರನಾಡುವವರಿಗೆ ಸುಂಕ. ತಳಮೇಲು ನಡುಮಧ್ಯ ಚತುದರ್ಶದಲ್ಲಿರುವವರಿಗೆ ಸುಂಕ. ಕಾಮಧೇನುವಿನ ಹಾಲ ಕರದು ಕುಡಿದವರಿಗೆ ಸುಂಕಿಲ್ಲ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಯತಲಿಂಗ ಮತ್ರ್ಯವ ನುಂಗಿತ್ತು. ಸ್ವಾಯತಲಿಂಗ ಸ್ವರ್ಗವ ನುಂಗಿತ್ತು. ಸನ್ನಹಿತಲಿಂಗ ಪಾತಾಳವ ನುಂಗಿತ್ತು. ತ್ರಿಣೇಶ್ವರಲಿಂಗ ಬ್ರಹ್ಮಾಂಡವ ನುಂಗಿತ್ತು. ನುಂಗಿದವರ ನುಂಗಿ ಬಾರದೆ ಪೋದರು. ಆದವರು ಪೋದರು, ಆಗದವರು ಪೋದರು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆನೆಯ ಏರುವಾತ ಮಹೇಶ್ವರನಲ್ಲ. ಕುದುರೆಯ ಏರುವಾತ ಮಹೇಶ್ವರನಲ್ಲ. ಬಸವನನೇರುವಾತ ಮಹೇಶ್ವರನಲ್ಲ. ಕೋಣವನೇರುವಾತ ಮಹೇಶ್ವರನಲ್ಲ. ವೈಲಿಪಾಲಿಕಿ ಸುಖಾಸನ ಏರುವಾತ ಮಹೇಶ್ವರನಲ್ಲ. ಗರುಡಗಂಭವನೇರುವಾತ ಮಹೇಶ್ವರನಲ್ಲ. ಕನ್ಯಸ್ತ್ರೀಯಳ ಕಳಸಕುಚವ ಪಿಡಿದು ಸಂಗವ ಮಾಡಬಲ್ಲರೆ ಮಹೇಶ್ವರನೆಂಬೆನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರೂ ಇಲ್ಲದ ಅರಣ್ಯದ ಹುಲ್ಲತಂದು, ಮೂರು ಚಾಪೆಯ ಹೆಣೆದು, ಮುಪ್ಪುರದರಸಿಂಗೆ ಕೊಟ್ಟು, ಮೂವರ ತಲೆ ಹೊಡೆದು, ಕೈಕಾಲು ಕಡಿದು, ಕಣ್ಣು ಕಳೆದು, ಪರದ್ರವ್ಯ ಕೊಳ್ಳದೆ ಹರದ್ರವ್ಯ ಕಳೆಯದೆ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರುವರ್ಣದ ಪಕ್ಷಿ ಮೂರುವರ್ಣದ ಗೂಡನಿಕ್ಕಿ, ತಲೆಯಿಲ್ಲದ ಮರಿಯನೀದು ಕಾಲಿಲ್ಲದೆ ನಡೆದಾಡುತಿರ್ಪುದ ಕಂಡೆ! ಆ ಮರಿ ಹಾಲನೊಲ್ಲದು. ಬೆಲ್ಲ ಕಹಿಯೆಂದು ಬೇವಿನ ರಸವ ಕುಡಿದು, ಮಲವ ತಿಂದು ಬದುಕೇನೆನುತಿರ್ಪುದ ಕಂಡೆ. ಆ ಮರಿಗೆ ಅಗ್ನಿವರ್ಣದ ಕೋಳಿ ಗುಟುಕನಿಕ್ಕಿ, ಗೂಗಿ ಆರೈಕೆಯ ಮಾಡಲು, ತಲೆ ಬಂದು, ಕಣ್ಣು ತೆರೆದು, ಪಕ್ಕವಿಲ್ಲದೆ ಹಾರಿಹೋಗಿ, ಕೊಂಕಣದೇಶದಲ್ಲಿ ಸತ್ತುದ ಕಂಡು ಬೆರಗಾದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮರಂಧ್ರ, ಶಿಖಾ, ಪಶ್ಚಿಮವೆಂಬ ನವಚಕ್ರಸ್ಥಾನವ ಗುದ ಗುಹ್ಯ ನಾಬ್ಥಿ ಹೃದಯ ಕಂಠ ಉತ್ತಮಾಂಗ ಅಳ್ಳನೆತ್ತಿ ನಡುನೆತ್ತಿ ಹಿಂಭಾಗದ ಕಳ್ಳಕುಣಿಕೆಯೆಂದು ಪೇಳುವಿರಿ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗ ಇರ್ಪುದೇ? ಇಲ್ಲ. ಮತ್ತಂ, ಬಲ್ಲಾದರೆ ಪೇಳಿರಿ, ಇಲ್ಲವಾದರೆ ನಮ್ಮ ಶಿವಗಣಂಗಳ ಕೇಳಿರಿ. ಅದೆಂತೆಂದಡೆ : ಆಧಾರಚಕ್ರವೆಂಬುದೇ ಘ್ರಾಣ. ಸ್ವಾದ್ಥಿಷ್ಠಾನಚಕ್ರವೆಂಬುದೇ ಜಿಹ್ವೆಸ್ಥಾನ. ಮಣಿಪೂರಕಚಕ್ರವೆಂಬುದೇ ನೇತ್ರಸ್ಥಾನ. ಅನಾಹತಚಕ್ರವೆಂಬುದೇ ತ್ವಕ್ಕಿನಸ್ಥಾನ. ವಿಶುದ್ಧಿಚಕ್ರವೆಂಬುದೇ ಕರ್ಣಸ್ಥಾನ. ಆಜ್ಞಾಚಕ್ರವೆಂಬುದೇ ಹೃದಯಸ್ಥಾನ. ಬ್ರಹ್ಮಸ್ಥಾನವೆಂಬುದೇ ಕರಸ್ಥಲ. ಶಿಖಾಸ್ಥಾನವೆಂಬುದೇ ಮನಸ್ಥಲ. ಪಶ್ಚಿಮಸ್ಥಾನವೆಂಬುದೇ ಪ್ರಾಣಸ್ಥಲ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗವು ಸಂಬಂಧವಾಗಿರುವುದಲ್ಲದೆ ಅಂತಪ್ಪ ಜಡದೇಹಿ ನವಸ್ಥಾನದ ಮಾಂಸರಕ್ತದಲ್ಲಿ ಪರಶಿವಲಿಂಗವು ಇರ್ಪುದೆ? ಇಲ್ಲ. ಅದೇನು ಕಾರಣವೆಂದಡೆ : ಘ್ರಾಣದಲ್ಲಿ ಆಚಾರಲಿಂಗಸ್ವಾಯತವಿಲ್ಲದೆ ಗಂಧ ದುರ್ಗಂಧ ಮೊದಲಾದ ಆವ ಗಂಧದ ವಾಸನೆಯು ತಿಳಿಯದು. ಜಿಹ್ವೆಯಲ್ಲಿ ಗುರುಲಿಂಗಸ್ವಾಯತವಿಲ್ಲದೆ ಸವಿ ಕಹಿ ಮೊದಲಾದ ಆವ ರುಚಿಸ್ವಾದವು ತಿಳಿಯದು. ನೇತ್ರದಲ್ಲಿ ಶಿವಲಿಂಗಸ್ವಾಯತವಿಲ್ಲದೆ ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ ಮೊದಲಾದ ಷಡ್ವರ್ಗದ ರೂಪು ಲಕ್ಷಣ ತಿಳಿಯದು. ತ್ವಕ್ಕಿನಲ್ಲಿ ಜಂಗಮಲಿಂಗಸ್ವಾಯತವಿಲ್ಲದೆ ಮೃದು ಕಠಿಣ ಮೊದಲಾದ ಆವ ಸುಖವು ತಿಳಿಯದು. ಶ್ರೋತ್ರದಲ್ಲಿ ಪ್ರಸಾದಲಿಂಗಸ್ವಾಯತವಿಲ್ಲದೆ ಸುಸ್ವರ ಅಪಸ್ವರ ಮೊದಲಾದ ಆವ ಸ್ವರಲಕ್ಷಣವು ತಿಳಿಯದು. ಹೃದಯದಲ್ಲಿ ಮಹಾಲಿಂಗಸ್ವಾಯತವಿಲ್ಲದೆ ಷಡಿಂದ್ರಿಸುಖತೃಪ್ತಿ ಮೊದಲಾದ ಸಕಲೇಂದ್ರಿಯ ಸುಖತೃಪ್ತಿ ಸಂತೋಷವು ತಿಳಿಯದು. ಕರಸ್ಥಲದಲ್ಲಿ ನಿರಾಕಾರವಾದ ನಿಷ್ಕಲಲಿಂಗವೆಂಬ ಇಷ್ಟಲಿಂಗ ಸ್ವಾಯತವಿಲ್ಲದೆ ಷಡ್ವಿಧಾಂಗದಲ್ಲಿ ಷಡ್ವಿಧಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಮನದಲ್ಲಿ ಶೂನ್ಯಲಿಂಗವೆಂಬ ಪ್ರಾಣಲಿಂಗಸ್ವಾಯತವಿಲ್ಲದೆ ಸರ್ವೇಂದ್ರಿಯಲ್ಲಿ ಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಪ್ರಾಣವೆಂಬಾತ್ಮನಲ್ಲಿ ಭಾವಲಿಂಗಸ್ವಾಯತವಿಲ್ಲದೆ ಸರ್ವಾಂಗಲಿಂಗಮಯ ಪರವಸ್ತುಸ್ವರೂಪ ತಾನೆಂದು ತಿಳಿಯದು. ಇಂತಪ್ಪ ವಿಚಾರವನು ತಿಳಿಯಬಲ್ಲಾತನೇ ಅನಾದಿಶರಣನು. ಅಂತಪ್ಪ ಪರಶಿವಲಿಂಗದ ಸ್ವಾಯತಸಂಬಂಧವಾದ ಭೇದವ ತಿಳಿಯದೆ ಅಂಗಭಾವ ಮುಂದುಗೊಂಡು ಇರ್ಪಾತನೇ ಭವಭಾರಿಕನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆನೆ ಕುದುರೆ ವೈಲಿ ಪಾಲಿಕಿ ರೂಢರಾದವರು, ಮನೆಯ ಪುರುಷನ ಉಪಚಾರಮಾಡುವ ಸತಿಯರಿಗೆ ಎಣ್ಣೆಯ ತೋರಿ ಮಾರರು. ಎಣ್ಣೆಯ ಕಾಣದೆ, ಎಣ್ಣೆಯ ನಾತಿಗೆ ಮಣ್ಣು ಮುಕ್ಕುವರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಳಿಂಗೆ ವರುಷದ ಚಿಂತೆ. ಬಂಟರಿಗೆ ಮೋಸದ ಚಿಂತೆ. ಮಜೂರಿ ಮಾನವರಿಗೆ ದಿವಸದ ಚಿಂತೆ. ನೆರೆದ ಹಿರಿಕಿರಿಯರಿಗೆ ಅಶನದ ಚಿಂತೆ. ಲಿಂಗೈಕ್ಯನಾದ ಶರಣನಿಗೆ ತನ್ನ ದೇಹದ ಚಿಂತೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರೇಣಿನ ಬೆಸೆ, ಒಂಬತ್ತುಹುರಿ ಬೇವ, ಎರಡು ಹಿಡಿಕಿಯ ಕೊಡತಿ ಹೆಣಕಿಲ್ಲದ ತಟ್ಟಿ, ಇಂತೀ ಆಯುಧದಿಂದ ಕೆಂಪಡಿ ಮಸಬ ಭೂಮಿಯ ಹತ್ತಿ ಅರಳಿಯ ಪಿಡಿದು ಝಾಡಿಸದೆ ಎರಿನೀರು ಕಲ್ಲಭೂಮಿಯ ಹತ್ತಿ ಅರಳಿಯ ಪಿಡಿದು ಝಾಡಿಸಿ, ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರೂ ಇಲ್ಲದ ಭೂಮಿಯಲ್ಲಿ ಬೇರಿಲ್ಲದ ರುದ್ರಾಕ್ಷಿಯ ಮರ ಪುಟ್ಟಿತ್ತು. ನೀರಿಲ್ಲದೆ ಆ ವೃಕ್ಷ ಪಲ್ಲವಿಸಿತ್ತು. ಆ ವೃಕ್ಷಕ್ಕೆ ರಕ್ತವರ್ಣದ ಒಂದು ಕುಸುಮ ಪುಟ್ಟಿತ್ತು. ಆ ಕುಸುಮದಲ್ಲಿ ಒಂದುಮುಖದ ಮೂರುಮುಖದ ಸಹಸ್ರಮುಖದ ದ್ವಿಮುಖದ ಷೋಡಶಮುಖದ ದ್ವಾದಶಮುಖದ ದಶಮುಖದ ಷಣ್ಮುಖದ ಚತುರ್ವಿಧಮುಖದ ಬ್ರಹ್ಮ ಮೊದಲಾಗಿ ರುದ್ರಾಕ್ಷಿಗಳು ಪುಟ್ಟಿದವು ನೋಡಾ. ಅಂತಪ್ಪ ರುದ್ರಾಕ್ಷಿಗಳನು ಗುರುಮುಖದಿಂದ ಪಡಕೊಂಡು ಒಂದುಮುಖದ ರುದ್ರಾಕ್ಷಿಯನು ಸ್ವರ್ಗಲೋಕದಲ್ಲಿಟ್ಟು, ಮೂರುಮುಖದ ರುದ್ರಾಕ್ಷಿಯನು ಪಾತಾಳದಲ್ಲಿಟ್ಟುಕೊಂಡು ಸಹಸ್ರಮುಖದ ರುದ್ರಾಕ್ಷಿಯನು ಮತ್ರ್ಯಲೋಕದಲ್ಲಿಟ್ಟು ದ್ವಿಮುಖದ ಉದ್ರಾಕ್ಷಿಯನು ಬೈಲಲ್ಲಿಟ್ಟು, ಷೋಡಶಮುಖದ ರುದ್ರಾಕ್ಷಿಯನು ಆಕಾಶದಲ್ಲಿಟ್ಟು ದ್ವಾದಶಮುಖದ ರುದ್ರಾಕ್ಷಿಯನು ವಾಯುವಿನಲ್ಲಿಟ್ಟು, ದಶಮುಖದ ರುದ್ರಾಕ್ಷಿಯನು ಅಗ್ನಿಯಲ್ಲಿಟ್ಟು, ಷಣ್ಮುಖದ ರುದ್ರಾಕ್ಷಿಯನು ನೀರಲ್ಲಿಟ್ಟು ಚತುರ್ಮುಖದ ರುದ್ರಾಕ್ಷಿಯನು ಭೂಮಿಯಲ್ಲಿಟ್ಟು, ಇದಲ್ಲದೆ ಕೆಲವು ರುದ್ರಾಕ್ಷಿಗಳನು ಬ್ರಹ್ಮಾಂಡದಲ್ಲಿಟ್ಟು ಇಂತೀ ಕ್ರಮದಲ್ಲಿ ರುದ್ರಾಕ್ಷಿಯನ್ನು ಧರಿಸಿ ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆನೆಯ ಹಿಂಡು ಹೊಗದೆ, ಕುದುರೆಯ ತೂರ ಹಿಡಿಯದೆ, ನಾಯಿಗಳ ಕೂಡ ಉಣ್ಣದೆ, ಓಣಿ ಬೀದಿಯ ಉಡುಗಿ, ನರಕವ ಬಳಿದುಚೆಲ್ಲಿ, ಊರ ನಿರ್ಮಲವ ಮಾಡಿ, ರಾಜಂಗೆ ಬಿನ್ನೈಸಲು, ಕೊಟ್ಟ ಹಣವ ಕೊಂಡು, ಕಾಯಕವ ಮಾಡಿ ಸುಖಿಯಾಗಿರ್ದರಯ್ಯ ನಿಮ್ಮವರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಡ ಕೊಂದು ಗಡಿಗೆಯಲಿಕ್ಕಿ, ಕುರಿಯ ಸುಲಿದು ಮಡಿಕೆಯಲಿಕ್ಕಿ, ಹೋತ ಕೊಯ್ದು ಕುಳ್ಳಿಯಲಿಕ್ಕಿ, ಬೆಂಕಿಯಿಲ್ಲದೆ ಪಾಕವ ಮಾಡಿ ಬೀರೇಶ್ವರಲಿಂಗಕ್ಕೆ ಕೊಟ್ಟು, ಕೀಲಿಲ್ಲದ ಕತ್ತರಿಯಿಂದ ಉಣ್ಣಿಯ ಕತ್ತರಿಸಿ, ಬಿರಿಕಿಲ್ಲದೆ ನೂಲು ಮಾಡಿ ಘಟ್ಟಿಸಿ ನೇದು, ಘಳಿಗೆಯ ಮಾಡಿ ವೀರಬೀರಗೆ ಹೊಚ್ಚಿ ಡೊಳ್ಳು ಹೊಡೆದು, ಸತ್ತಿಗೆಯ ನೆರಳಲ್ಲಿ ಪಿರಿಕೆಯ ಹೊಡೆದು, ಕಾಯಕವ ಮಾಡಿ ಹೋಗಬೇಕಣ್ಣ ವೀರಬೀರೇಶ್ವರಲಿಂಗದಲ್ಲಿಗೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಕಾರವಿಲ್ಲ-ನಿರಾಕಾರವಿಲ್ಲ, ಅಡಿಯಿಲ್ಲ-ಅಂತರವಿಲ್ಲ, ಎಡನಿಲ್ಲ-ಬಲನಿಲ್ಲ, ಹಿಂದಿಲ್ಲ-ಮುಂದಿಲ್ಲ, ಒಳಗಿಲ್ಲ-ಹೊರಗಿಲ್ಲ, ಈರೇಳರಲ್ಲಿಲ್ಲ, ಮಧ್ಯದಲ್ಲಿಲ್ಲ. ಮತ್ತೆಲ್ಲಿಹುದು? ಎರಡಳಿದು ಒಂದಿಲ್ಲದೆ ನಿರಾಳದಲ್ಲಿಹುದುಯೆಂದನಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿ ಅನಾದಿಯಿಲ್ಲದಂದು ; ಶೂನ್ಯ ನಿಃಶೂನ್ಯವಿಲ್ಲದಂದು: ಸುರಾಳ ನಿರಾಳವಿಲ್ಲದಂದು ; ಭೇದಾಭೇದಂಗಳೇನೂ ಇಲ್ಲದಂದು ; ನಿಮ್ಮ ನೀವರಿಯದೇ ಇರ್ದಿರಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಕಾರ ಪ್ರಸಾದ ಅಂಗೈ ನುಂಗಿ, ನಿರಾಕಾರ ಪ್ರಸಾದ ಮುಂಗೈ ನುಂಗಿ, ಉಭಯ ಪ್ರಸಾದ ಮೊಳಕೈ ನುಂಗಿ, ಬಾಹುಭುಜದ ಪ್ರಸಾದ ನಾನುಂಗಿ, ಸತ್ತುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರುಕಾಲವನ ಸುದ್ದಿ ಉಭಯ ಜಿಹ್ವೆಯನುಳ್ಳವರಿಗೆ ಹೇಳಿದಡೆ ಕೇಳಬಲ್ಲರೆ? ಮೋಟಮರಕ್ಕೆ ಪೇಳಿದಡೆ ಕೇಳಬಹುದು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರುವರ್ಣದ ಭೂಮಿಯ ಮೂರು ಬೆಟ್ಟದ ನಡುವಣ ಅಷ್ಟಪರ್ವತ ಸರೋವರ ಸಮುದ್ರದ ಹಂಸನು ಹಾಲನೊಲ್ಲದೆ ಹೊಲಸ ತಿಂದು, ಆರನಳಿದು, ಮೂರ ಕೆಡಹಿ, ಎಂಟ ಸುಟ್ಟು, ಸಾಗರ ಬತ್ತಿ, ಹಂಸ ಹಾಲು ಕುಡಿದು ಹಾರಿಹೋಯಿತ್ತು. ಇದರಂದಚಂದ ನಿಮ್ಮವರು ಬಲ್ಲರಲ್ಲದೆ ಮತ್ತಾರು ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಡಿನ ಹಾಲ ಹರವಿಯ ತುಂಬಿ, ಕುರಿಯ ಹಾಲ ಕೊಡವ ತುಂಬಿ, ಮರಿಯ ಹಾಲ ಮಗಿಯ ತುಂಬಿ, ಒಂದು ಕಲ್ಲಿನ ಒಲೆಯಮೇಲಿರಿಸಿ, ಐದೂರ ಬೆಂಕಿಲ್ಲದೆ, ಆರೂರ ಬೆಂಕಿಯಿಂದ ಕಾಸಲು, ಹಾಲರತು ಘಟ ಉಳಿದು, ಉಳಿದ ಘಟವ ತಲೆಯಿಂದ ಹೊತ್ತು ವೀರಬೀರೇಶ್ವರಲಿಂಗಕ್ಕೆ ಕೊಟ್ಟು ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರೂ ಇಲ್ಲದ ಅರಣ್ಯಕ್ಕೆ ಪೋಗಿ, ನಾನಾ ವರ್ಣದ ಕಟ್ಟಿಗೆಯ ತಂದು, ಸೂರ್ಯವರ್ಣದ ಕಟ್ಟಿಗೆಯಿಂದ ಗಳಿಗೆಯ ಬಂಧಿಸಿ, ಚಂದ್ರವರ್ಣದ ಕಟ್ಟಿಗೆಯಿಂದ ಗುಮ್ಮಿಯ ಬಂಧಿಸಿ, ಅಗ್ನಿವರ್ಣದ ಕಟ್ಟಿಗೆಯಿಂದ ಬುಟ್ಟಿಯ ಬಂಧಿಸಿ, ಉಳಿದ ವರ್ಣದ ಕಟ್ಟಿಗೆಯಿಂದ ತಟ್ಟಿ, ಹೆಡಗಿಯ ಬಂಧಿಸಿ, ಜ್ಯೋತಿವರ್ಣದ ಕಟ್ಟಿಗೆಯಿಂದ ಊರೆಲ್ಲವ ಬಂಧಿಸಿ, ಇಂತೀ ಪದಾರ್ಥವ ಮಾರಿ, ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಶೆಯುಳ್ಳವರಿಗೆ ವೇಷವ ಧರಿಸಿ ಮುಹೂರ್ತವ ಪೇಳಲಿಬೇಕು. ಪೇಳದಿದ್ದರೆ ಹೆಂಡಗಾರರು ಮೆಚ್ಚರು. ಆಶೆಯಿಲ್ಲದವರಿಗೆ ಆಶೆ ಮಾಡಿ ವೇಷವ ಧರಿಸಿ ಮುಹೂರ್ತವ ಪೇಳಿದವರಿಗೆ ಮೂರು ಮಲದ ಕೊಂಡದಲ್ಲಿರಿಸುವರು ನೋಡೆಂದನಯ್ಯಾ ಗೋವಿಂದಭಟ್ಟ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಡ ಅಣ್ಣ ತಿಂದ, ಕುರಿ ತಮ್ಮ ತಿಂದ, ಹೋತ ಕಿರಿತಮ್ಮ ತಿಂದ, ಹಲವು ಮರಿಗಳವರಪ್ಪ ತಿಂದ. ಅಪ್ಪನ ಎಂಜಲ ಕುರುಬ ತಿಂದು, ಬೀರೇಶ್ವರಲಿಂಗಕ್ಕೆ ಕೊಟ್ಟು ಕಾಯಕವ ಮಾಡುತಿರ್ದರು ನಿಮ್ಮವರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ