ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ. ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ ಇಂತೀ ಉಭಯ ಪಾಶಬದ್ಧರ ಕೈಯಿಂದ ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು, ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ, ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ, ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ. ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು. ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ ನಿಲುಕಡೆಯ ತಿಳಿಯದ ಕಾರಣ. ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು, ಸರ್ವಾಂಗಲಿಂಗಮಯವಾಗಿರುವಂಥ ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ, ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ ಇಂತೀ ಉಭಯ ಭಕ್ತಗಣಂಗಳು ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು, ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು, ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ. ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು. ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಮತ್ತಂ, ಲಿಂಗಾಂಗಸಂಬಂದ್ಥಿಯಾಗಿ ಸರ್ವಾಚಾರ ನೆಲೆಗೊಂಡು ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ, ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ, ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ ದೀರ್ಘದಂಡನಮಸ್ಕಾರಮಂ ಮಾಡಿ ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು. ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ, ಅಥವಾ ಜಂಗಮಲಿಂಗಿಗಳಲ್ಲಾಗಲಿ, ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ, ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು, ತೋರದಿದ್ದರೆ ಪ್ರಮಥರು ಮೆಚ್ಚರು. ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತನಾದರೆ ಬಾಳೆಹಣ್ಣಿನಂತಿರಬೇಕು. ಭಕ್ತನಾದರೆ ಬೆಲ್ಲದಕುಳ್ಳಿಯಂತಿರಬೇಕು. ಭಕ್ತನಾದರೆ ಮಾವಿನಫಲದಂತಿರಬೇಕು. ಇಂತಪ್ಪಾತನೇ ಸದ್ಭಕ್ತ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತನಾದಮೇಲೆ ಗುರುವಿಗೆ ತನುವ ನೀಡಬೇಕು, ಲಿಂಗಕ್ಕೆ ಮನವ ನೀಡಬೇಕು, ಜಂಗಮಕ್ಕೆ ಧನವ ನೀಡಬೇಕು. ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟು ಹೊಲಗೇರಿಯ ಹೊಕ್ಕು ಕುಲಗೆಟ್ಟವನೇ ಭಕ್ತ ಕಾಣಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಯಲ್ಲಿ ಹುಟ್ಟಿದ ಕಲ್ಲು ತಂದು ಲಿಂಗವೆಂದು ಹೆಸರಿಟ್ಟು, ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತರ ಸಂಯೋಗದಿಂದ ಪುಟ್ಟಿದ ಮನುಜರಿಗೆ ಭಕ್ತನೆಂದು ಹೆಸರಿಟ್ಟು, ಇಂತಪ್ಪ ಭಕ್ತಂಗೆ ಅಂತಪ್ಪ ಲಿಂಗವನು ವೇಧಾ, ಮಂತ್ರ, ಕ್ರಿಯೆ ಎಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ, ಅಂಗದ ಮೇಲೆ ಲಿಂಗಧಾರಣವ ಮಾಡಿದಡೆ, ಅದು ಲಿಂಗವಲ್ಲ, ಅವನು ಭಕ್ತನಲ್ಲ. ಅದೇನು ಕಾರಣವೆಂದಡೆ: ಅವನು ಮರಣಕ್ಕೆ ಒಳಗಾಗಿ ಹೋಗುವಲ್ಲಿ ಪೃಥ್ವಿಯ ಕಲ್ಲು ಪೃಥ್ವಿಯಲ್ಲಿ ಉಳಿಯಿತು. ಭಕ್ತಿ ಭ್ರಷ್ಟವಾಗಿ ಹೋಯಿತು ಬಿಡಾ ಮರುಳೆ. ಇದು ಲಿಂಗಾಂಗಸ್ವಾಯುತವಲ್ಲ. ಲಿಂಗಾಂಗದ ಭೇದವ ಹೇಳ್ವೆ ಲಾಲಿಸಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭವಿಗಳ ನೂಲಪಿಡಿದು ನೆಯ್ದು ವಸ್ತ್ರವ ಮಾರಿ ಕಾಯಕವ ಮಾಡುತ್ತಿರ್ಪರು. ಶೀಲವಂತರ ನೂಲಪಿಡಿದು ನೆಯ್ದು ಮಾರಿ ಕಾಯಕವ ಮಾಡಲಿಲ್ಲ ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಲೋಕದಲ್ಲಿ ಪುಟ್ಟಿದ ವೃಕ್ಷ ಪರ್ಣಪಾತ್ರೆಯಲ್ಲಿ ಮೂರು ಕೂಳನುಂಬುವರು, ಇಮ್ಮಡಿ ಮಕ್ಕಳಾಗಿ ಕಾಲನ ಪುರದಲ್ಲಿರ್ಪರು. ಸ್ವರ್ಗಲೋಕದಲ್ಲಿ ಪುಟ್ಟಿದ ವೃಕ್ಷಪರ್ಣಪಾತ್ರೆಯಲ್ಲಿ ಮೂರು ಶೇಷನುಂಬುವರು, ಮುಮ್ಮಡಿ ಮಕ್ಕಳು ಕಾಲಸಂಹರನಪುರದಲ್ಲಿರುವರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಯಲ್ಲಿ ಲಿಂಗಸ್ಥಾಪನೆಯಿಲ್ಲದೆ ಶ್ಮಶಾನಭೂಮಿಯಲ್ಲಿ ಶವವ ಸಂಚಗರಿಸಲಾಗದು ಎಂಬಿರಿ. ಭೂಮಿಯ ಶುದ್ಧಮಾಡಿ ಸಂಚಗರಿಸುವ ಕ್ರಮವಂ ಪೇಳ್ವೆ, ಅದೆಂತೆಂದೊಡೆ : ಆರೂ ಇಲ್ಲದ ಅರಣ್ಯದ ಬೆಟ್ಟವನೊಡದು, ಚಂದ್ರ ಸೂರ್ಯ ಅಗ್ನಿ ಪ್ರಕಾಶವನುಳ್ಳ ನಾನಾ ವರ್ಣದ ಕಲ್ಲು ತಂದು, ಸಪ್ತಚರಣದ ಭೂಮಿಯ ಮೂರಾರು ಕೋಣೆಗೆ ಹಾಕಿ, ಹಂಚು ಹರಳು ಎಲುವು ನೋಡಿ ತೆಗೆದು, ಹುಲ್ಲುಕೊಯ್ದು ಭೂಮಿಯ ಹಸನ ಮಾಡಿ, ಕಳ್ಳಿ ಮುಳ್ಳ ಹಚ್ಚದೆ ಬೇಲಿಯ ಬಂಧಿಸಿ, ಆ ನಿರ್ಮಳವಾದ ಭೂಮಿಯಲ್ಲಿ ಶವಸಂಚಗರಿಸಿದಾಕ್ಷಣವೇ ಬಯಲಾಗುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಯ ಬೆಳೆ ಕಳೆಯದೆ, ಪಂಚಪದಾರ್ಥವ ಬಿಡದೆ, ಪಂಚಾಗ್ನಿಯ ಸುಡದೆ, ಷೋಡಶ ಮದಕರಿ ಬೆಟ್ಟವನಳಿಯದೆ, ಇವನಳಿಯದೆ ಗೊಲ್ಲನೆಂದಡೆ ಹಾಸನಗೈವರು ನಿಮ್ಮವರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭವಿಗಳ ಕಪ್ಪಡ ಕವುದಿ ಕಂಬಳಿ ಕರಿಯಶಾಲಿಯ ತೊಳೆಯದೆ ಲಿಂಗವಂತರಾದವರ ಕಪ್ಪಡ ಶಾಲು ಶಕಲಾತಿ ಜರತಾರವ ತೊಳೆದು, ಮಡಿಯ ತೊಳೆಯದೆ, ಮೈಲಿಗೆಯ ತೊಳೆದು, ಮಡಿ ಉಡದೆ ಮೈಲಿಗೆಯನುಟ್ಟು ಕಳೆಯದೆ ಕಾಯಕವ ಮಾಡುತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಯಿಲ್ಲದೆ ಊರೊಳಗೆ ಒಂದು ಶಿಶು ಹುಟ್ಟಿ, ತ್ರಿಲೋಕದ ಸಿದ್ಧಕಳ್ಳರ ಗುದ್ದಿ, ಭೂಮಿ ಆಕಾಶವ ಕೆಡಿಸಿ, ಪಂಚವಕ್ತ್ರವನುಳ್ಳ ಶೇಷನ ಕೊಂದು, ಸತ್ತಶೇಷನು ಕಪ್ಪೆಯ ನುಂಗಲು, ಸತ್ತ ಕಪ್ಪೆಯು ಶಿಶುವ ನುಂಗಿ ಬಟ್ಟಬಯಲಲ್ಲಿ ನಿರ್ವಯಲಾಯಿತ್ತು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತಿಗೆ ತೋಲಾಗಿ ಓಡುವಾತ ಜಂಗಮವಲ್ಲ. ಮಂತ್ರ ತಂತ್ರ ವಶೀಕರಣ ಕಲಿತು ಮೆರೆದಾಡುವಾತ ಜಂಗಮವಲ್ಲ. ವೇಷದ ಗುಣವನರಿಯದ ಹಾಸ್ಯಗಾರನ ಹಾಗೆ ವಿಭೂತಿ ರುದ್ರಾಕ್ಷಿ ಕಾವಿಲಾಂಛನವ ಧರಿಸಿ ತಿರುಗುವರೆಲ್ಲ ಜಂಗಮರಲ್ಲ. ಬೇಟೆಯ ನಾಯಿಯಂತೆ ವಿಷಯದಾಶೆಗೆ ಮುಂದುವರೆದು ತಿರುಗುವಾತ ಜಂಗಮವಲ್ಲ. ಇವರು ಜಂಗಮವೆಂದಡೆ ನಗುವರಯ್ಯ ನಿಮ್ಮ ಶರಣರು. ಅದೇನು ಕಾರಣವೆಂದಡೆ: ಇಂತಿವರೆಲ್ಲರು ಪರಮಜಂಗಮದ ನಿಲುಕಡೆಯನರಿಯರಾಗಿ, ಮುಂದೆ ಭವಜಾಲದಲ್ಲಿ ರಾಟಾಳ ತಿರುಗಿದಂತೆ ತಿರುಗುವದೇ ಪ್ರಾಪ್ತಿ ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿ ಬಿಟ್ಟವರಿಗೆ ಭೂಮಿಕೊಟ್ಟು ಹಣವ ಕೊಂಬುವರು ; ಭೂಮಿ ಹಿಡಿದವರಿಗೆ ಭೂಮಿಕೊಟ್ಟು ಹಣವ ಕೊಳಲಿಲ್ಲ. ಅನ್ನೋದಕ ಉಂಬವರಿಗೆ ವಿಷ ಅಮೃತವನುಣಿಸಲಿಲ್ಲ; ಅನ್ನೋದಕ ಬಿಟ್ಟಿವರಿಗೆ ವಿಷ ಅಮೃತವನುಣಿಸುವರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತರಮನೆಗೆ ಕರೆಯದೆ ಅಶನಕ್ಕೆ ಪೋಗುವ ಮಹೇಶ್ವರರೆಲ್ಲ ಬೆಕ್ಕು ನಾಯಿಗಳಂತೆ, ಭಕ್ತರು ಹೊಡೆದು ಬಡಿದು ಹೊರಯಕ್ಕೆ ನೂಕಿದಡೆ ಬಾಗಿಲಲ್ಲಿ ನಿಂತು ಅಶನವ ನೀಡೆಂದು ಒದರುವರೆಲ್ಲ ಮನೆಮನೆ ತಪ್ಪದೆ ತಿರುಗುವ ಚಂಚರು ಕೊರವರಂತೆ. ಭಕ್ತರು ಭಿಕ್ಷವ ಕೊಟ್ಟರೆ ಹೆಳವ ಗೊರವನಂತೆ ಹೊಗಳಿ ಕೊಂಡಾಡುವರು. ಇಲ್ಲವಾದರೆ ಬೆಕ್ಕು ನಾಯಿಗಳ ಹಾಗೆ ಬೊಗಳುವರು. ಇಂತಪ್ಪವರು ಮಹೇಶ್ವರರೆಂದಡೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವಿನ ಶರಣರು ಮೂಗಕೊಯ್ದು ಕನ್ನಡಿಯ ತೋರಿ ತಮ್ಮ ಪಾದರಕ್ಷೆಯಲ್ಲಿ ಘಟ್ಟಿಸದೆ ಬಿಡುವರೆ ?
--------------
ಕಾಡಸಿದ್ಧೇಶ್ವರ