ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕರಿಚರ್ಮದ ಮಚ್ಚಿ ಮೆಟ್ಟಿದವರು ಕೆಳಗಾದರು. ಎರಡುವರ್ಣದ ಮಚ್ಚಿ ಮೆಟ್ಟಿದವರು ಮೇಲಾದರು. ಮೂರುಗೂಡಿದ ವರ್ಣದ ಮಚ್ಚಿಯ ಮೆಟ್ಟಿದವರು ತಳಮೇಲು ಅವಸ್ಥಾನದಲ್ಲಿರದೆ ಕಮಲ ಭ್ರಮರದಲ್ಲಿ ಸತ್ತುಪೋದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕುರುಡಿ ಕುಂಟರ ನಡುವೆ ನಾ ಹುಟ್ಟಿದೆನಯ್ಯಾ. ಎನಗೆ ಐವರು ಸ್ತ್ರೀಯರ ಮದುವೆಯ ಮಾಡಿದರು. ಅವರ ಸಂಗದಲ್ಲಿರಲೊಲ್ಲದೆ ಒಬ್ಬಳ ಬ್ರಹ್ಮಂಗೆ ಕೊಟ್ಟೆ, ಒಬ್ಬಳ ವಿಷ್ಣುವಿಂಗೆ ಕೊಟ್ಟೆ, ಒಬ್ಬಳ ರುದ್ರಂಗೆ ಕೊಟ್ಟೆ, ಒಬ್ಬಳ ಈಶ್ವರಂಗೆ ಕೊಟ್ಟೆ, ಮತ್ತೊಬ್ಬಳ ಸದಾಶಿವಂಗೆ ಕೊಟ್ಟು ತಾಯಿಯ ಒಡನಾಡಿ ಸಂಸಾರ ಮಾಡುತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕತ್ತೆ ರುದ್ರಾಕ್ಷಿಯ ಹೊತ್ತು ವ್ಯವಹರಿಸಿದಲ್ಲಿ ಮೋಕ್ಷವಾಯಿತು. ಬೇಂಟೆಗಾರನು ಶುನಿಗಳ ಕೂಡಿಕೊಂಡು ಅರಣ್ಯದಲ್ಲಿ ಬೇಂಟೆಯನಾಡುವ ಸಮಯದಲ್ಲಿ ಒಂದು ರುದ್ರಾಕ್ಷಿಯ ಕಂಡು ತನ್ನ ಶುನಿಗಳಿಗೆ ಗಾದಿಯ ಮಣಿಗಳೆಂದು ಕಟ್ಟಿಬಿಡಲು, ಆ ಶುನಿಗಳು ಹೋಗಿ ಹಂದಿಯ ಹಿಡಿಯಲು ಆ ಹಂದಿಗೂ ಆ ಶುನಿಗೂ ಮೋಕ್ಷವಾಯಿತು. ವೇಶ್ಯಾಂಗನೆಯು ತನ್ನ ವಿನೋದಕ್ಕೆ ಮರ್ಕಟ ಕುಕ್ಕುಟಂಗೆ ರುದ್ರಾಕ್ಷಿ ಧರಿಸಲು ಅವಕ್ಕೆ ಮುಂದೆ ಅಂತ್ಯಕಾಲಕ್ಕೆ ಮೋಕ್ಷವಾಯಿತೆಂದು ವೇದ, ಶ್ರುತಿ, ಪ್ರಮಾಣಗಳಿಂದ ಕೇಳಿ ಜೀವಾತ್ಮರು ರುದ್ರಾಕ್ಷಿಯ ಧರಿಸುತ್ತಿರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಲ್ಲಮರದ ಕೋಡಗದ ತಲೆಯೆಂಟು ಸ್ಥಾನವ ಮೆಟ್ಟಿ ತಿರಗುವ ತಲೆ ಕಾಲು ಪಕ್ಕವಿಲ್ಲದ ವಿಹಂಗನ ನಡುನೆತ್ತಿ ಸುಳಿಯೊಳು ನಿಲ್ಲಿಸಲು, ಹಾಲುಬಿಟ್ಟು ಹಾಲು ಬೇಡುವದು. ಈ ಭೇದವ ತಿಳಿಯಬಲ್ಲಡೆ ಅವರು ಲಿಂಗಸಂಬಂದ್ಥಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಳಿಯ ಧ್ವನಿ ಒಳ್ಳೆಯವರು ಕೇಳರು, ಬಡವರು ಕೇಳ್ವರು. ಕೇಳಿದವರು ಸತ್ತು, ವಂಶ ನಿರ್ವಂಶವಾಗುವರು. ಕೇಳದವರು ಸಾಯದೆ ಬಳಗದಲ್ಲಿರುವರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕುಬಟಗಿಯನೊಡೆದು ಇದ್ದಲಿಯ ಹಾಕದೆ, ಬೆಂಕಿಯ ಕಳದು ಕಲ್ಲ ಕರಗಿ ರಸಹಿಂಡಿ, ಚಿನ್ನವಮಾಡಿ ಹಣವಿಲ್ಲದವರಿಗೆ ಕೊಟ್ಟು, ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಲ್ಯಾಣಪುರದೊಳಗೆ ಬಿಜ್ಜಳಾಂಕನೆಂಬ ರಾಜನು ಅಷ್ಟವಿಧಪ್ರಧಾನರ ಸಮೂಹದಲ್ಲಿ ಶಿವಭಕ್ತಿ ಇಲ್ಲದೆ ರಾಜ್ಯವನಾಳುತಿರ್ಪನು. ಇಂಗಳೇಶ್ವರನೆಂಬ ಪುರದ ವಿಪ್ರರ ಸಂದಣಿಯಲ್ಲಿ ಬಸವೇಶ್ವರನುದ್ಭವಿಸಿ ಕಲ್ಯಾಣಕ್ಕೆ ಬಂದು ಬಿಜ್ಜಳನ ಅಷ್ಟವಿಧಪ್ರಧಾನರ ನಷ್ಟವಮಾಡಿ, ನವಮಪ್ರಧಾನನಾಗಿ, ಬಿಜ್ಜಳನ ರಾಜ್ಯವನ್ನಾಳುತ್ತ ನಿತ್ಯದಲ್ಲಿ ಹಲವು ಜಂಗಮಕ್ಕೆ ಭೋಜನವ ಮಾಡುತ್ತ ಬಸವಣ್ಣ ಇರ್ಪನು ಕಲ್ಯಾಣಪುರದಲ್ಲಿ ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಲಿಲ್ಲದೆ ನೂರಾವಂದುಯೋಜನ ನಡೆದು, ಕಣ್ಣಿಲ್ಲದೆ ಸಾವಿರದೈವತ್ತೆರಡು ಕೋಶವ ನೋಡಿ, ಕೈಯಿಲ್ಲದೆ ಇರುಳು ಬಿಟ್ಟು ಹಗಲು ಹಿಡಿದು, ನೀರುಸುಟ್ಟು ಬೂದಿಯ ಧರಿಸಬಲ್ಲಾತನೇ ಐಕ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕತ್ತಲಿಪುರದಲ್ಲಿ ಎತ್ತೆಮ್ಮೆ ಮೈಥುನ ಮಾಡುವದ ಕಂಡೆ. ಆ ಎಮ್ಮೆಯ ಗರ್ಭದಲ್ಲಿ ಎಂಬತ್ತುನಾಲ್ಕುಲಕ್ಷ ಎತ್ತು ಪುಟ್ಟುವದ ಕಂಡೆ. ಹಾಳೂರ ಕೋಳಿ ಕೂಗಲು ಕತ್ತಲಿಪುರÀ ಬೆಳಕುದೋರಿತ್ತ ಕಂಡೆ. ಆ ಬೆಳಗಿನೊಳಗೆ ಎತ್ತೆಮ್ಮಿ ಸತ್ತು ಎಂಬತ್ತುನಾಲ್ಕುಲಕ್ಷ ಎತ್ತೆತ್ತ ಹೋದವೆಂದರಿಯೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೊಟ್ಟ ಹಣವ ಮುಟ್ಟದೆ, ಒಂದು ಕೊಟ್ಟು ಎರಡು ಪಡೆಯದೆ, ತಮ್ಮ ಮಾತಾಪಿತರು ಗಳಿಸಿದ ದ್ರವ್ಯವನುಂಡು ಸುಖದಿಂದ ಕಾಯಕವ ಮಾಡುತ್ತಿರ್ದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಟ್ಟಿದ ಮನೆ ಬಿಚ್ಚದೆ, ಮಾಡಿದ ಮನೆ ಕೆಡವದೆ, ಅಟ್ಟನ್ನವನುಣ್ಣದೆ, ಅಡದನ್ನವನುಂಡು, ಇದ್ದವರಿಗೆ ಹೇಳದೆ, ಹೋದವರ ಕೇಳದೆ ಇರಬಲ್ಲರೆ ಪ್ರಾಣಲಿಂಗಿ ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಪ್ಪಿನ ಭೂಮಿಗೆ ಮೂರುಗಜ ಸೂರ್ಯಕಾಂತದ ಕಲ್ಲು ಹಾಕಿ, ಮೂರು ಹಣವ ಕೊಂಡೆ. ಕೆಂಪಿನ ಭೂಮಿಗೆ ಆರು ಐದು ಗಜ ಚಂದ್ರಕಾಂತದ ಕಲ್ಲು ಹಾಕಿ, ಆರೈದು ಹಣವ ಕೊಂಡೆ. ಬಿಳುಪಿನ ಭೂಮಿಗೆ ಎರಡೆಂಟು ಏಳುಗಜದ ಅಗ್ನಿಕಾಂತದ ಕಲ್ಲು ಹಾಕಿ, ಎರಡೆಂಟು ಏಳು ಹಣವ ಕೊಂಡೆ. ಉಳಿದ ವರ್ಣದ ಭೂಮಿಗೆ ಮೂವತ್ತಾರು ಗಜ ಹಲವು ವರ್ಣದ ಚಿಪ್ಪುಗಲ್ಲುಗಳ ತುಂಬಿ ಈರೈದುಹಣವ ಕೊಂಡೆ. ಹೀಗೆ ಕಲ್ಲುಮಾರಿ ಹಾಗದ ಹಣವ ಕೊಂಡು ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೇಳು ಕೇಳಯ್ಯ ಎನ್ನ ಮತ್ಪ್ರಾಣನಾಥ ಬಸವಣ್ಣಲಿಂಗತಂದೆ. ಜಿತೇಂದ್ರಿಯರಲ್ಲಿ ತೀರ್ಥಪ್ರಸಾದ ಇಪ್ಪುದಲ್ಲದೆ ಕೃತಕೇಂದ್ರಿಗಳಲ್ಲಿ ತೀರ್ಥಪ್ರಸಾದ ಇಪ್ಪುದೇನಯ್ಯಾ? ಶಿವಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಗಳಾದ ಶಿವಶರಣರಲ್ಲಿ ಪರಶಿವಲಿಂಗ ಇಪ್ಪುದಲ್ಲದೆ, ಭಿನ್ನಜ್ಞಾನಿಗಳಾದ ಅಜ್ಞಾನ ನರಕಜೀವಿಗಳಾದ ಮತಿಭ್ರಷ್ಟಮನುಜರಲ್ಲಿ ಪರಶಿವಲಿಂಗ ಇಪ್ಪುದೇನಯ್ಯ? ಊಧ್ರ್ವಕುಂಡಲಿಯಲ್ಲಿ ಅಮೃತಕುಂಭ ಇಪ್ಪುದಲ್ಲದೆ, ಅಧೋಕುಂಡಲಿಯಲ್ಲಿ ಅಮೃತಕುಂಭ ಇಪ್ಪುದೇನಯ್ಯ? ಚಿತ್ತಸ್ವಸ್ಥಿರವಾದ ಸದ್ಭಕ್ತ ಮಹೇಶ್ವರರ ಹಸ್ತದಲ್ಲಿ ಚಿದ್ಘನಲಿಂಗವಿಪ್ಪುದಲ್ಲದೆ, ಕುಚಿತ್ತ ಕುಬುದ್ಧಿ ದುರ್ಭಾವಿಗಳ ಹಸ್ತದಲ್ಲಿ ಚಿದ್ಘನಲಿಂಗವಿಪ್ಪುದೇನಯ್ಯಾ? ಉದಯದಲ್ಲಿ ಸೂರ್ಯನು ಹೊರಡುವುನಲ್ಲದೆ, ಅಸ್ತಮಾನಕ್ಕೆ ಸೂರ್ಯನು ಹೊರಡುವುನೇನಯ್ಯಾ? ಆಕಾಶದೊಳಗೆ ಮಿಂಚು ಮಿಂಚುವುದಲ್ಲದೆ, ಭೂಮಿಯೊಳಗೆ ಮಿಂಚು ಮಿಂಚುವುದೇನಯ್ಯ? ಇಂತೀ ದೃಷ್ಟದಂತೆ ತನ್ನ ತಾನರಿದಂಥ ಗುರುಹಿರಿಯರಲ್ಲಿ ತೀರ್ಥಪ್ರಸಾದ ಇಪ್ಪುದಲ್ಲದೆ ತನ್ನ ನಿಜವ ಮರೆದು ಮಲತ್ರಯಯುಕ್ತವಾದ ದೇಹೋಹಮೆಂದು ಸಟೆಯ ಸಂಸಾರದಲ್ಲಿ ಮನಮಗ್ನವಾಗಿ ಜಡಸಂಸಾರ ಮಾಡುವ ಜಗಭಂಡ ಹೊಲೆಮಾದಿಗರಲ್ಲಿ ಲಿಂಗವಿಲ್ಲ, ಲಿಂಗವಿಲ್ಲಾಗಿ ತೀರ್ಥಪ್ರಸಾದವಿಲ್ಲ. ಇಂತಪ್ಪ ಜಡಮತಿ ನರಕಜೀವಿಗಳ ವಿಸರ್ಜಿಸಿ, ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವುಳ್ಳ ಗುರುಲಿಂಗಜಂಗಮದ ತೀರ್ಥಪ್ರಸಾದವ ಕೊಂಡಡೆ ನರಕ ತಪ್ಪುವದು. ಮೋಕ್ಷವೆಂಬುದು ಕರತಳಾಮಳಕವಾಗಿ ತೋರುವುದು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಮವಿಲ್ಲದ ಸ್ತ್ರೀಗೆ ನಪುಂಸಕನೆಂಬ ಪುರುಷನು. ಹುಟ್ಟಬಂಜಿಗೆ ಗಂಡಸ್ತನಯಿಲ್ಲದ ಗಂಡನು. ಇಬ್ಬರ ಸಂಗದಿಂದ ಅಂಗವಿಲ್ಲದೊಂದು ಉರಿಮಾರಿ ಶಿಶು ಹುಟ್ಟಿತ್ತು. ಆ ಶಿಶುವು ತಾಮಸಪುರವೆಂಬ ರಾಜನ ಕಣ್ಣು ಕಳದು ಮಂತ್ರಿಯ ತಲೆ ಚಂಡಾಡಿ, ಆನೆ, ಕುದುರಿ, ನಾಯಿಗಳ ಕೊಂದು, ರಥ ಮುರಿದು, ಬಾರಿಕ ತಳವಾರಕುಲವ ಸವರಿ, ಸರ್ವಮಾರ್ಬಲವೆಲ್ಲ ಹೊಡೆದು ತಾಮಸಪುರವೆಂಬ ಪಟ್ಟಣವ ಸುಟ್ಟು, ಬೂದಿಯ ಧರಿಸಿ ಮಾತಾಪಿತರುಗಳ ಹತ ಮಾಡಿ ಕಾಶಿ ವಿಶ್ವನಾಥನ ಚರಣಕ್ಕೆರಗಿ ಸತ್ತು ಕಾಯಕವ ಮಾಡುತಿರ್ದಿತ್ತು ಆ ಶಿಶುವು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರ್ಲಭೂಮಿ, ನೀರಭೂಮಿ, ಹಾಳಭೂಮಿ ಈ ಮೂರು ಭೂಮಿಯ ಸವಳು ತಾರದೆ, ಕೆಂಪು ಮಸಬು ಬಿಳುಪೆಂಬ ತ್ರಿಭೂಮಿಯ ಸವಳ ತಂದು, ನೀರಿಲ್ಲದ ಮಾಳ ಉಪ್ಪ ಸೇವಿಸಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರೆಯದೆ ಬಂದವರು ಕೆಲಬರು, ಹೇಳದೆ ಹೋದವರು ಕೆಲಬರು, ಬಾರದೆ ಹೋಗದೆ ಬಹುಕಾಲಿರ್ಪರು ಕೆಲಬರು, ಈ ಮಾತು ಕಣ್ಣಿದ್ದವ ಬಲ್ಲ, ಕಂಗಳರಿಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರ್ಲಭೂಮಿಯ ಹರಳ ಅಶ್ವಪತಿ ಕಿರಣದಿಂದ ದಹಿಸಿ, ನೀರಭೂಮಿಯ ಹರಳ ಯರಳಪತಿ ಕಾಯಿಂದ ದಹಿಸಿ, ಬೆಟ್ಟದ ಭೂಮಿಯ ಹರಳ ಟೆಗರಪತಿ ಕಾಂತಿಯಿಂದ ದಹಿಸಿ, ಉಳಿದ ಭೂಮಿಯ ಹರಳ ದಗಡಲೋಹದ ಕಿಡಿಗಳಿಂದ ದಹಿಸಿ, ಸುಣ್ಣವ ಮಾಡಿ ಮೂರು ಮುಖದಪ್ಪಿಗೆ ಕೊಟ್ಟು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರಿಭೂಮಿಯ ಬಿದಿರ ಬೊಂಬವ ಕಡಿದು ಬಿಳಿಭೂಮಿಯ ಬಿದಿರ ಅಗ್ನಿಯಿಂದ ದಹಿಸಿ ಭಸ್ಮ ಮಾಡಿ ಧರಿಸಿ ಕಾಯಕದಲ್ಲಿರ್ದು ಕಾಯಕಕ್ಕೆ ಸಿಕ್ಕದೆ ಮೇದಾರ ಕೇತಯ್ಯನೊಳಗಾದರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಲ್ಲು ದೇವರೆಂದು ಪೂಜಿಸುವರೆಲ್ಲ ಕಲ್ಲಾಗಿ ಪುಟ್ಟುವರು. ಕಟ್ಟಿಗೆ ದೇವರೆಂದು ಪೂಜಿಸುವರೆಲ್ಲ ಕಟ್ಟಿಗೆಯಾಗಿ ಪುಟ್ಟುವರು. ಮಣ್ಣುದೇವರೆಂದು ಪೂಜಿಸುವರೆಲ್ಲ ಮಣ್ಣಾಗಿ ಪುಟ್ಟುವರು. ನೀರು ದೇವರೆಂದು ಪೂಜಿಸುವರೆಲ್ಲ ನೀರಾಗಿ ಪುಟ್ಟುವರು. ಅಗ್ನಿದೇವರೆಂದು ಪೂಜಿಸುವರೆಲ್ಲರು ಅಗ್ನಿಯಾಗಿ ಪುಟ್ಟುವರು. ಇದಕ್ಕೆ ದೃಷ್ಟಾಂತ: 'ಯದ್ದøಷ್ಟಂ ತನ್ನಷ್ಟಂ ಯಥಾಭಾವಸ್ತಥಾ ಸಿದ್ಧಿಃ' ಎಂದುದಾಗಿ, ಇಂತಿವರೆಲ್ಲರು ದೇವರೆಂದು ಪೂಜಿಸುವರು ಹುಟ್ಟುಕುರುಡನು ಬೆಣ್ಣೆಯೆಂದು ನರಕವ ಭುಂಜಿಸಿದಂತಾಯಿತ್ತಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಂಡವರಿಗೆ ಒಂದು, ಕಾಣದವರಿಗೆ ಎರಡು. ಎರಡಿಲ್ಲದವರಿಗೆ ಆವುದೂ ಇಲ್ಲ. ಎರಡುಳ್ಳವರಿಗೆ ಹಲವು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಕ್ಷೆ ಕರಸ್ಥಲ ಹೃದಯ ಕಂಠ ಉತ್ತಮಾಂಗ ಅಮಳೋಕ್ಯವೆಂಬ ಷಟ್‍ಸ್ಥಾನದಲ್ಲಿ ಲಿಂಗವ ಧರಿಸಬೇಕೆಂಬರು ವೇಷಧಾರಿಗಳು. ಅದೆಂತೆಂದೊಡೆ: ಕರಸ್ಥಲದಲ್ಲಿ ಲಿಂಗವ ಧರಿಸುವರೆಲ್ಲ ಸನ್ಯಾಸಿಗಳೆನಿಸುವರು. ಕಕ್ಷೆಯಲ್ಲಿ ಲಿಂಗವ ಧರಿಸುವರೆಲ್ಲ ಮುಪ್ಪಿನ ಹಿರಿಯರೆನಿಸುವರು. ಹೃದಯದಲ್ಲಿ ಲಿಂಗವ ಧರಿಸುವರೆಲ್ಲ ಪ್ರೌಢಪತಿಯೆನಿಸುವರು. ಕಂಠದಲ್ಲಿ ಲಿಂಗವ ಧರಿಸುವರೆಲ್ಲ ಬಾಲಕರೆನಿಸುವರು. ಉತ್ತಮಾಂಗದಲ್ಲಿ ಲಿಂಗವ ಧರಿಸುವರೆಲ್ಲ ಯತಿಗಳೆನಿಸುವರು. ಅಮಳೋಕ್ಯದಲ್ಲಿ ಲಿಂಗವ ಧರಿಸುವರೆಲ್ಲ ಸಿದ್ಧರೆನಿಸುವರು. ಇಂತೀ ಷಡ್ವಿಧಸ್ಥಾನಂಗಳಲ್ಲಿ ಕಲ್ಪಿಸಿ ಲಿಂಗವ ಧರಿಸುವರೆಲ್ಲ ಷಟ್‍ಶೈವವಾದಿಗಳು ಇವರು ಲಿಂಗಧಾರಕರಲ್ಲ; ಇವರು ಲಿಂಗವೆಂಬ ಲಾಂಛನಧಾರಕರು ನೋಡೆಂದ ನಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರ್ಲಭೂಮಿ ಸವುಳ ಭೂಮಿ ಕಲ್ಲು ಭೂಮಿ ಈ ಮೂರು ಭೂಮಿಯ ಹುಲ್ಲಿನ ಹೊಡೆಯ ರಸವ ಸೇವಿಸದೆ, ಕೆಂಪು ಬಿಳುಪು ಮಸಬು ಎಂಬ ಭೂಮಿಯ ಹುಲ್ಲಹೊಡೆಯ ರಸವ ಸೇವಿಸಿ, ಗುರುಕೊಟ್ಟ ಕಾಯಕದಲ್ಲಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೆಚ್ಚಿಲ್ಲದ ವೃಕ್ಷಕ್ಕೆ ಫಲವಾದುದೆ ಕಡೆ. ನಾರಿಯ ಕುಚ ಇಳಿದುದೆ ಕಡೆ. ವಿಷದ ಪುಳುವಿಂಗೆ ಗರ್ಭವಾದುದೆ ಕಡೆ. ತೃಣದ ಸಸಿಗೆ ತೆನೆಯಾದುದೆ ಕಡೆ. ಎನ್ನ ಕರಕ್ಕೆ ನೀ ಬಂದುದೆ ಕಡೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೀಲಿಲ್ಲದ ಬಂಡಿಯ ಗಾಲಿಯನುಚ್ಚಿ, ಈಸಿಲ್ಲದ ನೊಗಕ್ಕೆ ಕಾಲಿಲ್ಲದ ಕೋಣನ ಹೂಡಿ, ಹಾರಿ ಇಲ್ಲದೆ ಕಲ್ಲನೆಬ್ಬಿಸಿ, ಕೈಯಿಲ್ಲದೆ ಕಲ್ಲಪಿಡಿದು, ಬಂಡಿಯ ಮೇಲೆ ಹೇರಿ ಊರೆಲ್ಲಾ ಮಾರಿ ಹಾಗದ ರೊಕ್ಕವ ಕೊಂಡು ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಳಮ್ಮನ ಪೂಜಿಸದೆ, ಕಾಳಿಶಾಲಿಯನುಡದೆ ಕಾವಿಶಾಲಿಯನುಟ್ಟು ಹೆಂಡಗಾರರ ಗುಂಡವ ಪೂಜಿಸಿ, ನುಂಗಿ ಉಗುಳದೆ ಹಿಂಗಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...