ಅಥವಾ
(15) (5) (6) (2) (4) (1) (0) (0) (9) (0) (0) (12) (0) (0) ಅಂ (3) ಅಃ (3) (18) (1) (7) (2) (0) (1) (0) (4) (0) (0) (0) (0) (0) (0) (0) (6) (0) (4) (2) (10) (2) (0) (5) (6) (14) (0) (0) (0) (0) (8) (5) (0) (10) (17) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಳಗರಿದ ಭಕ್ತನ ಒಳಗಾದ ಲಿಂಗವು ಒಳಗಾದ ಲಿಂಗದೊಳಗಾದ ಭಕ್ತನ ಹೊರಗಾದ ಲಿಂಗವ ಒಳಗೆ ತಂದಿರಿಸಿ ಆ ಭಕ್ತನ ತನುವಿನ ವಳೆಯವನಿನ್ನೇನ ಹೇಳುವೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲುಗೊಂಡೆನಾಗಿ ಮೃಡ! ನಿಮಗೆ ಹಗೆಯಾದೆನಯ್ಯ. ಆನು ಒಡಲುಗೊಂಡಡೇನು? ಕಡಲೊಳಗಣ ಬೊಬ್ಬಳಿಕೆ ಕಡಲೊಳಗೆ ಆಳಿವಂತೆ ಎನ್ನ ಒಡಲಳಿದು ಹೋದಡೇನು? ಪ್ರಾಣ ನಿಮ್ಮ ಎಡೆಯಲಡಗುವದಯ್ಯಾ,ರಾಮನಾಥ.
--------------
ಜೇಡರ ದಾಸಿಮಯ್ಯ
ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು? ಅರವಟಿಗೆ ಛತ್ರವು ತಮ್ಮದೆಂಬರು! ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಸದಿದ್ದಡೆ, ಅವರೇತರಲ್ಲಿ ನೀಡುವರಯ್ಯಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಂದರಿವು ಒಂದು ನಡೆ ಒಂದು ಸ್ಥಾನದೊಳಗೆ ಒಂದು ಮುಂದೆ ಪ್ರಸಾದದಂತುವನರಿದಡೆ ನಿಶ್ಚಿಂತ ಪರಶಿವನು, ರಾಮನಾಥ.
--------------
ಜೇಡರ ದಾಸಿಮಯ್ಯ
ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ. ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ. ತರ್ಕೈಸಿ ನಿಮ್ಮವನಪ್ಪಿಕೊಂಡಡೆ ಅದು ನಿಶ್ಚಯಪ್ರಸಾದ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲಿಚ್ಛೆಗೆ ಭವಿಯ ಒಡಗೂಡಿಕೊಂಡು ಉಂಡು ಹಡಿಕೆಯ ತಿಂದ ನಾಯಿ ಮುಂದುಡೆ ಬಗುಳುವಂತೆ ಮೃಡನಿಲ್ಲದವನ ಮನೆಯ ಕೂಳು ಹೊಲೆಯರ ಮನೆಯ ಅಡಗಿಂದ ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಡೆಯರನೊಡಗೊಂಡು ಬಂದು ಕೈಗಡಿಗೆಯ ನೀರ ಕಯ್ಯಲ್ಲಿ ಕೊಟ್ಟು `ಒಡೆಯರೆ! ಕಾಲ ತೊಳಕೋ!' ಎಂಬುವನ ಮನೆಗೆ ಅಡಿಯಿಡಲಾಗದಯ್ಯಾ ಮೃಡಶರಣರು. ಒಡಲಿಚ್ಛೆಗೆ ಬಡಮನವ ಮಾಡಿ ಹೊಕ್ಕುಂಬವರ ಎನ್ನೆಡೆಗೆ ತೋರದಿರಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲುಗೊಂಡವ ನಾನು; ಪ್ರಾಣವಿಡಿದವ ನೀನು. ಎನ್ನೊಡಲು ಸಂಚುವ ನೀ ಬಲ್ಲೆ! ನಿನ್ನ ಪ್ರಾಣದ ಸಂಚುವ ನಾ ಬಲ್ಲೆ! ಇದು ಕಾರಣ, ಇದು ಎನ್ನೊಡಲಲ್ಲ ನಿನ್ನೊಡಲು. ನಿನ್ನ ಪ್ರಾಣವೆನ್ನಲ್ಲಿ ಅಡಗಿದ ಭೇದವ ನೀ ಬಲ್ಲೆ, ನಾ ಬಲ್ಲೆನೈ, ರಾಮನಾಥ.
--------------
ಜೇಡರ ದಾಸಿಮಯ್ಯ
ಒಲವಸವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ, ಸಲೆ ನಿಮ್ಮ ನಂಬಿಯೂ ನಂಬದವನ ಬಾಳುವೆ, ಹೊಲೆಯರ ನಾಯ ಹುಲುಸರವಿಯಿಂದ ಕರಕಷ್ಟಕಾಣ! ರಾಮನಾಥ.
--------------
ಜೇಡರ ದಾಸಿಮಯ್ಯ
ಒಂದಾಗಿಹವೈದು ಭೂತ ಚಂದ್ರ ಸೂರ್ಯರು ನಂದಿವಾಹನ ನಿಮ್ಮ ತನುವಲ್ಲವೆ? ನಿಂದು ನೋಡಲು ಜಗವಂದ್ಯನಾಗಿಪ್ಪೆ, ಇನ್ನು ನಿಂದಿಸುವೆನಾರನಯ್ಯ? ರಾಮನಾಥ.
--------------
ಜೇಡರ ದಾಸಿಮಯ್ಯ
ಒಡಲೊಳಗಣ ಕಿಚ್ಚು ಒಡಲ ಸುಡದ ಭೇದವ ಕುಡಿದ ಉದಕದಲ್ಲಿ ಆ ಕಿಚ್ಚು ನಂದದ ಭೇದವ ಮೃಢ! ನೀ ಪ್ರಾಣ ಪ್ರಕೃತಿಯೊಳಗೆ ಅಡಗಿದ ಭೇದವ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ