ಅಥವಾ
(15) (5) (6) (2) (4) (1) (0) (0) (9) (0) (0) (12) (0) (0) ಅಂ (3) ಅಃ (3) (18) (1) (7) (2) (0) (1) (0) (4) (0) (0) (0) (0) (0) (0) (0) (6) (0) (4) (2) (10) (2) (0) (5) (6) (14) (0) (0) (0) (0) (8) (5) (0) (10) (17) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಸಿವಿನಲ್ಲಿ ವಿಷಯದಲ್ಲಿ ಭವಿಯ ಬೆರಸಿದೆನಾದಡೆ ಅವ ವಿಷಮಾಕ್ಷ! ನಿಮಗೆ ದೂರ. ದಶ ಶತಕೋಟಿ ವರುಷ ನರಕದೊಳಗಿಹ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಹೆಂಬೇಡಿಗೆ ಹಿಡಿಯಬಹುದೆ ಹೇಳಿಗೆಯೊಳಗಣ ಹಾವ? ತೊರೆಯಬಹುದೆ ಹೊನ್ನು ಹೆಣ್ಣು ಮಣ್ಣ ನಿನ್ನನರಿಯದ ನರಗುರಿಗಳಿಗೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ. ಇರುಳೆಲ್ಲಾ ನಡೆದನಾ ಸುಂಕಕಂಜಿ. ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು! ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ.
--------------
ಜೇಡರ ದಾಸಿಮಯ್ಯ
ಹೊಲಬನರಿಯದ ಗುರು ಸುಲಭನಲ್ಲದ ಶಿಷ್ಯ ಕೆಲಬಲನ ನೋಡದುಪದೇಶ ಅಂಧಕನ ಲಾಭ ಹೊಕ್ಕಂತೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹೇಳಿತ್ತ ಕೇಳುವನ ಕೀಳಿನೊಳಗಿರೆ ಲೇಸು! ಹೇಳಿತ್ತ ಕೇಳದ ಕಡುಮೂರ್ಖನ ಕೋಣೆಯಲ್ಲಿರಲಾಗದು! ರಾಮನಾಥ.
--------------
ಜೇಡರ ದಾಸಿಮಯ್ಯ
ಹೆಣ್ಣ ಕಂಡು ಹೆಚ್ಚಿ ಹೆಕ್ಕಳಬಡುವಂತೆ ಕಣ್ಣಿಟ್ಟು ನೋಡಿರೋ ಶಿವಲಿಂಗದೇವನ ಕರಣದಿಚ್ಛೆಗೆ ಹರಿದು, ನರಕದಲ್ಲಿ ನೆರದು ಬರುದೊರೆ ಹೋಗದೆ ಮರೆಯದೆ ಪೂಜಿಸಿ, ನಮ್ಮ ರಾಮನಾಥನ.
--------------
ಜೇಡರ ದಾಸಿಮಯ್ಯ
ಹರ ತನ್ನ ಭಕ್ತರ ತಿರಿವಂತೆ ಮಾಡುವ ಒರದು ನೋಡುವ ಮಿಸುನಿಯ ಚಿನ್ನದಂತೆ. ಅರದು ನೋಡುವ ಚಂದನದಂತೆ. ಅರಿದು ನೋಡುವ ಕಬ್ಬಿನ ಕೋಲಿನಂತೆ. ಬೆದರದೆ ಬೆಚ್ಚದೆ ಇರ್ದಡೆ ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥನು.
--------------
ಜೇಡರ ದಾಸಿಮಯ್ಯ
ಹಸಿವಿಲ್ಲದ ಬೊಂಬೆಗೆ ತೃಷೆಯಿಲ್ಲದ ನೀರೆರೆದು ಮಸಕವಿಲ್ಲದ ಮಾತ ಮನದಲ್ಲಿ ಹೇಳಿ ಹೆಸರಿಲ್ಲದೆ ಕರೆದಡೆ ಓ! ಎಂದವ ನೀನೊ ನಾನೋ!ರಾಮನಾಥ.
--------------
ಜೇಡರ ದಾಸಿಮಯ್ಯ
ಹೊಲೆಯರ ಬಾವಿಯಲೊಂದು ಎಲುನಟ್ಟಿದ್ದಡೆ ಹೊಲೆಯೆಂಬುದು ಲೋಕವೆಲ್ಲ. ಹಲವೆಲುವಿದ್ಧಬಾಯಿ ಒಲವರವ ನುಡಿದಡೆ ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಿರಿದಪ್ಪ (ಆ) ಹಾರವ ಕೊಂಡು ಸ್ವರವು ಬಿಂದುವಿನಿಚ್ಛೆಯಲ್ಲಿ ಹರಿದಾಡುವವರು ಯೋಗಿಗಳೆ? ಅಲ್ಲಲ್ಲ ನಿಲ್ಲು! ಸ್ವರವು ಸುಸ್ವರವಾಗಿ ಬಿಂದು ತರಹರವಾಗಿರಬಲ್ಲಾತನೆ ಯೋಗಿ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಹೇಳಬಲ್ಲಡೆ ಬೋಳು ಕೇಳಬಲ್ಲಡೆ ಬೋಳು ಹೇಳಲು ಕೇಳಲು ಅರಿಯದಿದ್ದಡೆ ಇವೆಲ್ಲ ಜಾಳು ಬೋಳು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಂದಿ ಶ್ರೀಗಂಧವನೆಂದೂ ಒಲ್ಲದು. ಕುಂದದೆ ಹರಿವುದು ಅಮೇಧ್ಯಕ್ಕೆ. ಶಿವಭಕ್ತನಾಗಿರ್ದು ಹಿಂದ ಬೆರಸಿದಡೆ ಆ ಹಂದಿಗಿಂದವು ಕರಕಷ್ಟ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಂದಿ ಶ್ರೀಗಂಧವ ಹೂಸಿದಡೇನು? ಗಂಧರಾಜನಾಗಬಲ್ಲುದೆ? ನವಿಲು ನಲಿಯಿತ್ತೆಂದಡೆ ಕಾಕೋಳಿ ಪುಕ್ಕವ ತರಕೊಂಡಂತೆ ಕರ್ಮಿಗಳ ಭಕ್ತಿ! ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು ತೆರನನರಿದು ಮರವೆಯ ಕಳದು ಮಾತಿನಂತೆ ನೀತಿಯುಳ್ಳಡೆ ಅವರ ಅಜಾತರೆಂಬೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಸ್ತಾಬ್ಜ ಮಥನದಿಂದೊತ್ತಿ ಭಸ್ಮವ ಮಾಡಿ ಮತ್ತೆ ಪಂಚಾಕ್ಷರಿಯ ಜಪಾವಳಿಯ ಚಿತ್ತ ಶ್ರೊತ್ರದೊಳು ಮತ್ತೆ ಧಾರೆಯನೆರೆಯೆ ಸತ್ಯವದು ನಿನ್ನಂತೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ. ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಾಸೇಕೆ ಹೊರಸೇಕೆ? ಲೇಸೇಕೆ ಹೊಲ್ಲೆಹವೇಕೆ? ನಿಮ್ಮ ಸಾತ್ವಿಕರಿದಿರಲ್ಲಿ ನಾನೇಕೆ? ಸರಿಹೊರಸು ನಿಮ್ಮ ಸರಿಪಂತಿಯೆಂಬ ಹೇಸಿಕೆಯುಂಟೆ?ರಾಮನಾಥ.
--------------
ಜೇಡರ ದಾಸಿಮಯ್ಯ
ಹೂವಿನೊಳಗಣ ಕಂಪ ಹೊರಸೊಸಿ ಸುಳಿವ ಅನಿಲನಂತೆ ಅಮೃತದೊಳಗಣ ರುಚಿಯ ನಾಲಿಗೆಯ ತುದಿಯಲ್ಲಿ ಅರಿವನ ಚೇತನದಂತೆ ನಿಲ್ಲವಿಲ್ಲದ ರೂಪ ಕಳೆಯಲ್ಲಿ ವೇದಿಸುವವನ ಪರಿ!ರಾಮನಾಥ.
--------------
ಜೇಡರ ದಾಸಿಮಯ್ಯ