ಅಥವಾ
(15) (5) (6) (2) (4) (1) (0) (0) (9) (0) (0) (12) (0) (0) ಅಂ (3) ಅಃ (3) (18) (1) (7) (2) (0) (1) (0) (4) (0) (0) (0) (0) (0) (0) (0) (6) (0) (4) (2) (10) (2) (0) (5) (6) (14) (0) (0) (0) (0) (8) (5) (0) (10) (17) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಣಿವಡೆ ಶಿವಭಕ್ತ ಮಣಿಯ ಕಟ್ಟಲೆ ಬೇಕು. ಮಣಿಯದಿರ್ದಡೇನು? ಶಬುದಗುಂಡಿಗೆ! ಫಣಾಮಣಿದೇವರ ಮಣಿಮಕುಟದಲ್ಲದೆ, ಅದು ಮಣಿಯಲ್ಲದೇನು? ಹೇಳು ರಾಮನಾಥ.
--------------
ಜೇಡರ ದಾಸಿಮಯ್ಯ
ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ? ಕೈಮುಟ್ಟಿ ಉಣ್ಣದನ್ನಕ್ಕರ! ತಾನು ವಚನಾಗಮದ ಪ್ರಸಂಗವ ಬಲ್ಲನೆಂದಡೆ ಬಲ್ಲವರಾರೂ ಇಲ್ಲವೆಂದಡೆ ಆತ ತನ್ನ ನುಡಿಗೆ ಸಿಲುಕುವನೆ? ಇಲ್ಲ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮಾಡಿದಲ್ಲದೆ ಮನೆಯೊಳಗಾಗದು ಬಯಲು ಕಣ್ಣು ಕಂಡಲ್ಲದೆ ಪರವಾಗದು ಮನ ಪರವೆಂದಲ್ಲದೆ ಪರವಾಗದು ಈ ಪರಿಯ ನರರೆತ್ತ ಬಲ್ಲರೈ? ರಾಮನಾಥ.
--------------
ಜೇಡರ ದಾಸಿಮಯ್ಯ
ಮಾಡಿದ ಕರ್ಮವನೂಡಯ್ಯ ಎನ್ನ ಮನದಣಿವನ್ನಕ್ಕ. ಬೇಡೆನ್ನೆನು, ಮಾರ್ಕೊಳ್ಳೆನು. ಎಲೆ ರೂಢಿಗೀಶ್ವರನ ಕೂಡುವೆನು ನೀರಡಸಿದಂತೆ,ರಾಮನಾಥ.
--------------
ಜೇಡರ ದಾಸಿಮಯ್ಯ
ಮಹಾಘನವಪ್ಪ ಬೋನವನು ಒಂದನುವಿನ ಪರಿಯಾಣದಲ್ಲಿ ಹಿಡಿದು ಗುರುಲಿಂಗವು ಒಳಗಾದ ಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದವೆ? ಅಲ್ಲಲ್ಲ. ಮಹಾಘನವಪ್ಪ ಲಿಂಗವ ಒಂದನುವಿನಲ್ಲಿ ತಂದಿರಿಸಿದ ಆತನ ಮನವೆ ಪ್ರಸಾದ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ!ರಾಮನಾಥ.
--------------
ಜೇಡರ ದಾಸಿಮಯ್ಯ
ಮುಂಡೆಗೆ ಮುಡಿಕಟ್ಟೇಕೊ? ಗುಂಡಂಗೇಕೊ ಗುರುಪದ ಭಕ್ತಿ? ಚಂಡಿಕೆಯ ತಲೆಯ ಚಾಂಡಾಲಂಗೆ ಅಖಂಡಿತ ಲಿಂಗದ ಅನುವೇಕೆ? ಹೇಳ! ರಾಮನಾಥ.
--------------
ಜೇಡರ ದಾಸಿಮಯ್ಯ
ಮೊಲೆ ಮುಡಿ ಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮೆಳೆಯ ಮೇಲಣ ಕಲ್ಲು ಜಗದೆರೆಯನಾಗಬಲ್ಲುದೆ? ಮೆಳೆ ಶಿವಭಕ್ತನಾಗಬಲ್ಲುದೆ? ನಿಮ್ಮ ತನುಮನಧನವನರಿಯದಿದ್ದಡೆ ಸದುಭಕ್ತರಹರೆ? ರಾಮನಾಥ.
--------------
ಜೇಡರ ದಾಸಿಮಯ್ಯ
ಮನಮುಟ್ಟಿ ನೆನವಲ್ಲಿ ತನು ನಿಮ್ಮದಾಯಿತ್ತು. ತನುಮುಟ್ಟಿ ಅಪ್ಪಿ, ಮನಮುಟ್ಟಿ ನೆರದು ವನಿತೆಯರ ಕೂಟಕ್ಕೆ ತೆರಪಿಲ್ಲವಾಯಿತ್ತು. ಜನನ ಮರಣದ ಬಾಧೆ ಹರಿಯಿತ್ತು. ಈಶ್ವರ! ನಿಮ್ಮ ಪಾದಸೇವೆಯಿಂದ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಮಣಿಗಣ ಸೂತ್ರದಂತೆ ತ್ರಿಣೆಯ ನೀನಿಪ್ಪೆಯಯ್ಯ. ಎಣಿಸುವಡೆ ತನ್ನ ಭಿನ್ನ ಆತ್ಮನೊಬ್ಬನೆ. ಅಣುರೇಣು ಮಧ್ಯದಲ್ಲಿ ಗುಣಭರಿತ ನೀನೆಂದು ಮಣಿಯುತಿರ್ಪೆನಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಮಾರಿಯ ಪೂಜಿಸಿ, ಮಸಣಕ್ಕೆ ಹೋಗಿ ಗೋರಿಗೊಳಿಸಿ ಕುರಿಯ ಕೊರಳನೆ ಕೊಯ್ದುಂಬ ಕ್ರೂರಕರ್ಮಿಗಳನವರ ಶಿವಭಕ್ತರೆನಬಹುದೆ? ಆರೈಯದೆ ಅವನ ಮನೆಯಲುಂಡ ಭಕ್ತ ಅಘೋರನರಕಕ್ಕಿಳಿವ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು? ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ ಭಂಡರನೊಲ್ಲನೆಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೆ? ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ? ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ? ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ ರಾಮನಾಥ.
--------------
ಜೇಡರ ದಾಸಿಮಯ್ಯ