ಅಥವಾ
(15) (5) (6) (2) (4) (1) (0) (0) (9) (0) (0) (12) (0) (0) ಅಂ (3) ಅಃ (3) (18) (1) (7) (2) (0) (1) (0) (4) (0) (0) (0) (0) (0) (0) (0) (6) (0) (4) (2) (10) (2) (0) (5) (6) (14) (0) (0) (0) (0) (8) (5) (0) (10) (17) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಭಕ್ತನಾದಲ್ಲಿ ಘಟಧರ್ಮವಳಿದು ಲಿಂಗಭಕ್ತನಾದಲ್ಲಿ ಮನಸಂಚಲ ನಿಂದು ಜಂಗಮಭಕ್ತಿಯಲ್ಲಿ ಧನದಾಸೆಯಳಿದು ತ್ರಿವಿಧಾಂಗ ಸಲೆ ಸಂದು ತ್ರಿಕರಣ ಶುದ್ಧನಾಗಿದ್ದವಂಗೆ ಮತ್ರ್ಯ ಕೈಲಾಸವೆಂಬ ಕಾಳುಮಾತಿಲ್ಲ ಆತ ನಿಶ್ಚಿಂತ ನಿಜಮುಕ್ತನಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಗಂಡನುಳ್ಳಮ್ಮನ ಗೌರಿಯೆಂದು ಕಂಡಡೆ ಭೂಮಂಡಳಕ್ಕೆ ಅರಸಾಗಿ ಹುಟ್ಟುವನಾತನು. ಗಂಡನುಳ್ಳಮ್ಮನ ಕಂಡು ಒಡವೆರದಾತ ನರಕದಲ್ಲಿ ದಿಂಡುಗೆಡದಿಪ್ಪನೈ, ರಾಮಾನಾಥ.
--------------
ಜೇಡರ ದಾಸಿಮಯ್ಯ
ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ? ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ? ಸರಿಯಿಲ್ಲ ನೋಡಾ ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ! ಪರುಷಕ್ಕೆ ಪಾಷಾಣ ಸರಿಯೆ? ಮರುಜವಣಿಗೆ ಔಷಧ ಸರಿಯೇ? ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆ ನರಕ ತಪ್ಪದಯ್ಯಾ, ರಾಮಾನಾಥ.
--------------
ಜೇಡರ ದಾಸಿಮಯ್ಯ
ಗುರು ಲಿಂಗ ಒಂದೆಂಬರು. ಗುರು ಲಿಂಗ ಒಂದಾದ ಠಾವ ತಿಳಿದು ನೋಡಿರೆ. ಗುರು ಕಾರುಣ್ಯವಾದ ಬಳಿಕ ಅಂಗದ ಮೇಲೆ ಲಿಂಗವಿರಬೇಕು. ಲಿಂಗವಿಲ್ಲದ ಗುರುಕಾರುಣ್ಯವು ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಗುರು ನಿರೂಪವ ಮರದು ಪರವಧುವ ನೆರವರು; ಪರವಧುವನಳುಪುವರು. ಗುರುವಿಲ್ಲವವರಿಗೆ! ಪರವಿಲ್ಲವವರಿಗೆ! ಇಂತಪ್ಪ ನರಕಿಗಳನೆನೆಗೊಮ್ಮೆ ತೋರದಿರಾ,ರಾಮನಾಥ.
--------------
ಜೇಡರ ದಾಸಿಮಯ್ಯ
ಗಂಡ ಭಕ್ತನಾಗಿ, ಹೆಂಡತಿ ಭವಿಯಾದಡೆ ಉಂಡ ಊಟ ಇಬ್ಬರಿಗೂ ಸರಿಭಾಗ! ಸತ್ತ ನಾಯ ತಂದು ಅಟ್ಟದ ಮೇಲಿಳುಹಿ ಒಬ್ಬರೊಪ್ಪಚ್ಚಿಯ ಹಂಚಿಕೊಂಡು ತಿಂಬಂತೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು. ಮಾಯಾ ಪ್ರಪಂಚು ಬಿಟ್ಟಿತ್ತು. ಮುಂದಣ ಹುಟ್ಟರತು ಹೋಯಿತ್ತು. ನೆಟ್ಟಗೆ ಗುರುಪಾದವ ಮುಟ್ಟಿ ಭವಗೆಟ್ಟೆನು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ