ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಕಾಶದ ನೀರಿಂಗೆ, ಮತ್ತೇತರಲ್ಲಿಯೂ ತಿಳಿದಿಹೆನೆಂಬ ಸೂತಕವುಂಟೆ ? ಪೃಥ್ವಿಯ ಸಂಗವ ಕೂಡಿದ ಅಪ್ಪುವಿಂಗಲ್ಲದೆ ನಿಶ್ಚಯದ ಸುಜಲಕ್ಕುಂಟೆ ? ಕರ್ಮದ ಕಪಟ, ನಿಶ್ಚಯವಾದ ನಿಜತತ್ವಭಾವಿಗೆ ಮೇಲೊಂದು ಹತ್ತುವ ಹಾವಸೆ ಒಂದೂ ಇಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಆವಾವ ವಾದ್ಯ ಘಟಭೇದಂಗಳಲ್ಲಿಯೂ ಭಾವಶುದ್ಧವಾಗಿಪ್ಪುದು ನಾದ. ಆರಾರ ವಿಶ್ವಾಸದ ಭಾವದಲ್ಲಿಯೂ ದೈವಶುದ್ಧವಾಗಿಪ್ಪುದು ವಸ್ತು. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ತನ್ಮಯವಾಗಿ, ವರುಣನ ಕಿರಣದಂತೆ, ತನಗೆ ಮರೆಯಾದಲ್ಲಿ ನಿಂದು, ಮರೆಗೆ ಹೊರಗಾದಲ್ಲಿ ತನ್ನಿರವು ಎಲ್ಲಾ ಎಡೆಯಲ್ಲಿ ಪರಿಪೂರ್ಣವಾದಂತೆ. ನೆನೆವರ ಮನದ ಕೊನೆಯಲ್ಲಿ, ಮರೆದವರ ಮರೆಯಲ್ಲಿ, ಎಡೆದೆರಪಿಲ್ಲದ ವಸ್ತು ನೀನೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಆಧ್ಯಾತ್ಮಿಕದಿಂದಾವ ದೇಹವ, ವ್ಯಾಧಿ ಬಾಧಿಸುವದಕ್ಕೆ ಮುನ್ನವೆ ಬೇಗ ಬೇಗ ಶಿವನ ಭಜಿಸಿರೊ. ದೇಹಧರ್ಮವು ಆರ ವಶವಲ್ಲ. ದೇವ ದಾನವ ಮಾನವಾದಿಗಳಾದಡೂ ಆವುದಾನೊಂದು ವ್ಯಾಧಿ ಬಿಡವು. 'ತೇನ ವಿನಾ ತೃಣಾಗ್ರಮಪಿ ನ ಚಲತಿ' ಎಂದುದಾಗಿ, ಅಂದಂದಿಗೆ ದಿನ ತುಂಬಿದಂತೆ ನಿಶ್ಚೈಸಿ, ಕಾಮಧೂಮ ಧೂಳೇಶ್ವರನನೊಲಿಸಲೋಸುಗ ಬಂದ ಬಳಿಕ ಮರೆಯದಿರಿರೊ.
--------------
ಮಾದಾರ ಧೂಳಯ್ಯ
ಆತ್ಮಕ್ಕೂ ಇಂದ್ರಿಯಕ್ಕೂ ಭಿನ್ನ ಉಂಟು, ಇಲ್ಲಾ ಎಂಬಲ್ಲಿ ಆ ಆತ್ಮಂಗೆ ಇಂದ್ರಿಯಂಗಳು ತುಷಕಂಬು ತಂಡುಲದಂತೆ. ಆತ್ಮದ ಇಂದ್ರಿಯದಲ್ಲಿ, ಹೊರೆ ಹೊರೆಯಲ್ಲಿ, ನಿಂದು ನೋಡಲಿಕ್ಕೆ ಆತ್ಮ ಎಂದಿನ ನಿಜ ? ತಾ ಬಂದ ಸ್ವಯದಂತೆ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಆಕಾಶ ಆಕಾರವಾಗಿ ತೋರಿಯಡಗುವನ್ನಬರ, ಬಯಲು ಬೆಳಗ ನುಂಗಿ, ಒಳಗಾಗಹನ್ನಬರ, ವಾಯು ಗಂಧವ ಕೂಡುವನ್ನಬರ, ಕಾಯದ ಇಷ್ಟವ ಜೀವವರಿವನ್ನಬರ, ಆವ ಭಾವವನೂ ಆಡಿ ಭಾವಜ್ಞರೆನಿಸಿಕೊಂಬರಲ್ಲದೆ ಭಾವದ ಸೂತಕವುಳ್ಳನ್ನಕ್ಕ, ಜೀವ ಆವಾವ ಭಾವಂಗಳಲ್ಲಿ ಬಹುದು ತಪ್ಪದು. ಇದಕ್ಕೆ ಎನಗಿನ್ನಾವುದು ಬಟ್ಟೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಆವುದ ಹಿಡಿದು ಬೀಸಿದಲ್ಲಿಯೂ ಗಾಳಿ ತಪ್ಪದು. ಏನ ಹಿಡಿದು ನುಡಿದಿಹೆನೆಂಬನ್ನಕ್ಕ ಮನದ ಸೂತಕ ಮೊದಲು. ಒಂದು ಕಂಡು ಒಂದರಲ್ಲಿ ಕೂಡಿಹೆನೆಂಬನ್ನಬರ, ಅರಿವಿನ ಸೂತಕ ಬಿಡದು. ದೀಪವ ಕೆಡಿಸಿದ ಸೆರಗಿನಂತೆ, ಅನಲನಾಹುತಿಗೊಂಡ ಸಾರದಂತೆ, ಬಯಲು ಬಯಲ ಕೂಡಿದ ನಿರಾಳಕ್ಕೆ ಲಕ್ಷವುಂಟೆ ? ಅರಿವುದಕ್ಕೆ ಮುನ್ನವೆ ಅರಿದ ಅರಿವನು, ಕರಿಗೊಂಡಲ್ಲಿಯೆ ಲೋಪ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಆತ್ಮನ ಅರಿವು ಜೀವ ಭಾವವೆಂಬುದು ಅದೇತರ ಕೂಟಸ್ಥ ? ಕಾಯದ ಸಂಸರ್ಗವೆಂದಡೆ, ಅದು ವಿಭೇದರೂಪು. ಕರಣಂಗಳ ಸಂಸರ್ಗದಿಂದ ಎಂದಡೆ, ಆ ಇಂದ್ರಿಯಂಗಳು ಸ್ವತಂತ್ರಗಳಲ್ಲ. ಜೀವಾತ್ಮ ಭಾವಾತ್ಮ ಪರಮಾತ್ಮನೆಂದಲ್ಲಿ, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಕಂಡು ಕೂಡಿ ಅರಿದು ಮರೆದುದೇನೊ ? ಎಂಬ ತ್ರಿವಿಧವ ತಿಳಿದು ಸಂಧಿಸಿ, ಕಂಡೆಹೆನೆಂಬ ಸಂದನಳಿದು, ಅಳಿದೆನೆಂಬ ಸಂದೇಹ ನಿಂದಲ್ಲಿ, ಅದಾವ ಬೆಂಬಳಿಯ ಹೊಲಬು ? ಅದು ನಾಮ ರೂಪು ಭಾವ ಬಯಲು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ