ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಣ್ಣವನರಿಯದ ಬಯಲಿನಂತೆ, ಬ್ಥಿನ್ನ ಅಬ್ಥಿನ್ನವನರಿಯದ ಬೆಳಗಿನಂತೆ, ಛಿನ್ನ ವಿಚ್ಫಿನ್ನವನರಿಯದ ಪರಿಪೂರ್ಣದಂತೆ, ಅವದ್ಥಿಗೊಡಲಿಲ್ಲದ ಭಾವವಿರಹಿತನಾದೆಯಲ್ಲಾ. ಸುಳುಹುಗೆಟ್ಟು ಸೂಕ್ಷ್ಮವರತು, ಬೆಳಗೆಂಬ ಕಳೆನಾಮ ನಷ್ಟವಾಗಿ, ಅದೆಂತೆಯಿದ್ದಿತ್ತು, ಅಂತೆ ಆದೆಯಲ್ಲಾ ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಬಸವಣ್ಣನ ಡಿಂಗರಿಗನಯ್ಯಾ, ಚನ್ನಬಸವಣ್ಣನ ಹಳೆಯನಯ್ಯಾ, ಪ್ರಭುದೇವರ ಬಂಟನಯ್ಯಾ, ಮಡಿವಾಳಯ್ಯನ ಲೆಂಕನಯ್ಯಾ, ಸಿದ್ಭರಾಮಯ್ಯನ ಭೃತ್ಯನಯ್ಯಾ. ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು, ಬದುಕಿದೆನಯ್ಯಾ. ಕಾಮಧೂಮ ಧೂಳೇಶ್ವರಾ. ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ, ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಬಯಲು ಬಯಕೆಗೆ ಒಳಗಾದಲ್ಲಿ ಇಕ್ಕುವರಿನ್ನಾರೊ ? ಅರಿವ ಆತ್ಮ ಪ್ರಕೃತಿ ರೂಪಾದಲ್ಲಿ ಬೇಡಾ ಎಂದು ಬಿಡಿಸುವರಾರೊ ? ದೀಪವೊಂದರಲ್ಲಿ ಉದಿಸಿ, ಹಲವು ಜ್ಯೋತಿಯ ಕುರುಹಿಟ್ಟಂತೆ, ಆತ್ಮವೊಂದರಲ್ಲಿ [ಉದಿಸಿ] ಹಲವು ಇಂದ್ರಿಯಂಗಳಾದ ಸಂದನರಿಯದೆ, ಅವ ಬಂದಬಂದಂತೆ ಆಡುವ ಸಂದೇಹಿಗಳಿಗುಂಟೆ, ನಿಜಾಂಗದ ನಿಜ ? ಈ ದ್ವಂದ್ವವನಳಿದು ಒಂದೆಂದಲ್ಲಿ, ಅದು ನಿಜದ ಸಂಗ. ಆ ಸಂಗವ ಹಿಂಗಿದಲ್ಲಿ, ಕಾಮಧೂಮ ಧೂಳೇಶ್ವರನು ಒಂದರವನೂ ಅಲ್ಲ.
--------------
ಮಾದಾರ ಧೂಳಯ್ಯ
ಬೇರು ಮೇಲಾದ ವೃಕ್ಷದ ತುದಿಯಲ್ಲಿ, ನಾದ ಬಿಂದು ಕಳೆಯಿಲ್ಲದ ಹಣ್ಣು ತಲೆದೋರಿತ್ತು. ವಿಭೇದವಿಲ್ಲದ ಪಕ್ಷಿ ಸುನಾದವಿಲ್ಲದೆ ಎರಗಿತ್ತು. ಎರಗಿ ಮುಟ್ಟುವುದಕ್ಕೆ ಮುನ್ನವೆ, ಹಣ್ಣು ತೊಟ್ಟಬಿಟ್ಟು ಬಟ್ಟಬಯಲಾಯಿತ್ತು, ಕಾಮಧೂಮ ಧೂಳೇಶ್ವರ ಭಾವವಿಲ್ಲದವನಾಗಿ.
--------------
ಮಾದಾರ ಧೂಳಯ್ಯ
ಬತ್ತೀಸ ಆಯುಧದಲ್ಲಿ ಕಾದಿ ಕೊಂದಡೂ ಪ್ರಾಣಕ್ಕೆ ಕೈದುವಿನ ಹೆಚ್ಚುಗೆ ತಗ್ಗುಂಟೆ ? ನಿಶ್ಚಯಿಸಿ ನಿಜತತ್ವವನರಿದವಂಗೆ ಮತ್ತೆ ಹತ್ತುವ ಹಾವಸೆಯುಂಟೆ ? ಉಂಟೆಂಬ ಭಾವ, ಇಲ್ಲಾ ಎಂಬ ಶಂಕೆ ನಿಶ್ಶಂಕೆಯಾದಲ್ಲಿ, ಅರಿದೆ, ಮರೆದೆನೆಂಬ ಆ ತೆರದ ಸೂತಕವಿಲ್ಲ. ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಬಯಲೊಳಗಣ ಬಣ್ಣದಂತೆ, ನೀರಿನೊಳಗಣ ಸಾರದಂತೆ, ಅನಲ ಅನಿಲನ ಸಂಗದಿಂದ ಲಯವಾದ ಸಾಕಾರದಂತೆಯಿಪ್ಪಾತನಿರವು ಎಂತಿದ್ದಿತ್ತು, ಅಂತೆ ಇರಬಲ್ಲಡೆ ಆತ್ಮಯೋಗಸಂಬಂಧ. ಈ ಸಂಬಂಧದ ಸಮೂಹ ನಿಂದಲ್ಲಿ, ಕಂಡೆಹೆ, ಕಾಣಿಸಿಕೊಂಡೆಹೆನೆಂಬ ದಂದುಗ ನಿಂದಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಬಲ್ಲವ ತಾನಾದೆನೆಂಬಲ್ಲಿ, ಮಿಕ್ಕಾದವರಲ್ಲಿ ಗೆಲ್ಲ ಸೋಲಕ್ಕೆ ಹೋರಿಹೆನೆಂಬಲ್ಲಿ, ಆ ಬಲ್ಲತನವಲ್ಲಿಯೆ ನಿಂದಿತ್ತು. ಈ ಉಭಯದಲ್ಲಿ ಎಲ್ಲಿಯೂ ತಾನಿಲ್ಲದೆ, ಆ ಭಾವದ ಸೊಲ್ಲಿಗೆ ಸಿಕ್ಕದೆ, ನಿಜವರಿತವರೆಲ್ಲರಲ್ಲಿ ಪರಿಪೂರ್ಣನಲ್ಲಿಯೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಬ್ರಹ್ಮ ಪ್ರಳಯವಾದಲ್ಲಿ, ವಿಷ್ಣು ಪ್ರಳಯವಾದಲ್ಲಿ, ರುದ್ರ ಅರ್ಧನಾರೀಶ್ವರನಾಗಿ, ದೇವಕಾಂತಿ ಕಾಂತೆಯರಲ್ಲಿ ಉಳಿಯಿತ್ತು. ತ್ರಿವಿಧಮೂರ್ತಿ ತ್ರಿವಿಧದಿಂದ ಕೆಟ್ಟ ಮತ್ತೆ ಅರಿವಲ್ಲಿ, ಆದಿಶೂನ್ಯ ಬ್ರಹ್ಮಪದವಾಯಿತ್ತು, ಭೇದಶೂನ್ಯ ವಿಷ್ಣುಪದವಾಯಿತ್ತು. ಅನಾದಿಶೂನ್ಯ ರುದ್ರಪದವಾಗಿ ಭೇದಿಸಿ ತಿರುಗುವಲ್ಲಿ, ಸ್ಥೂಲದಲ್ಲಿ ತೋರುವ ಶೂನ್ಯ ಅಂಧಕಾರವಾಗಿಪ್ಪುದು. ಸೂಕ್ಷ್ಮದಲ್ಲಿ ತೋರುವ ಶೂನ್ಯ, ದಿವಾರಾತ್ರೆಯಂತೆ ಉಭಯವ ಕೂಡಿಕೊಂಡಿಪ್ಪುದು. ಕಾರಣದಲ್ಲಿ ತೋರುವ ಶೂನ್ಯ, ಘಟಪಟವ ಗರ್ಭೀಕರಿಸಿಕೊಂಡಿಪ್ಪುದು. ಇಂತೀ ಶೂನ್ಯ ನಾಮರೂಪ ನಿಃಶೂನ್ಯ ನಿರಾಲಂಬ ಕುಂದದ ಬೆಳಗು ನುಂಗಿತ್ತು. ನುಂಗಿದ ಘನಲಿಂಗವೆಂದು ಪ್ರಮಾಣಿಸಲಿಲ್ಲ, ಕಾಮಧೂಮ ಧೂಳೇಶ್ವರವೆಂದೆನಲಿಲ್ಲ.
--------------
ಮಾದಾರ ಧೂಳಯ್ಯ
ಬೆಳಗೆಂದಡೂ ಒಂದರಲ್ಲಿ ಪ್ರಜ್ವಲಿಸಿ ತೋರುವುದಕ್ಕೆ ಒಡಲಾಯಿತ್ತು, ಆರಿವೆಂದಡೂ ಒಂದ ಕುರಿತು ಒಂದಿಲ್ಲ ಎಂಬುದಕ್ಕೆ ಬುಡವಾಯಿತ್ತು. ಇಂತೀ ನಿಶ್ಚಯವ ತಿಳಿದು ನಿಬಿಡನಾದವಂಗೆ ಗಜಬಜೆ, ಕೂಜನ ಒಂದೂ ಇಲ್ಲವೆಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಬಂದ ಮಣಿಹ ಹಿಂಗಿತ್ತು. ಎದೆಯಲ್ಲಿದ್ದ ಲಿಂಗದ ಕುರುಹೇಕೆ ಅಡಗದು ? ಸಂದಣಿಸಿ ಸಂಶಯವ ಮಾಡುವ ನಿರಂಗದ ನಿಜವೇಕೆ ಉಡುಗದು ? ಹಾಗೆಂಬುದಕ್ಕೆ ಮುನ್ನವೆ ಕಾಯದ ಕುರುಹು ಶೂನ್ಯವಾಗಿ, ಭಾವ ಭಾವಿಸುವುದಕ್ಕೆ ಇಂಬಿಲ್ಲದೆ, ಉಭಯ ನಿರ್ಮಾಣ ನಿರಾಳವಾಯಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ